Monday, February 25, 2008

Nempu Credit Union

ನೆಂಪು ಕ್ರೆಡಿಟ್ ಯೂನಿಯನ್

ಸಂಬಂಧಗಳ ಬೆಸುಗೆ

ನಾವೊಂದಿಷ್ಟು ಜನ ನೆಂಪಿನ ಹುಡುಗರು 2002ರ ಜನವರಿಯಲ್ಲಿ ಹುಟ್ಟುಹಾಕಿದ "ನೆಂಪು ಕ್ರೆಡಿಟ್ ಯೂನಿಯನ್" ಈಗ 6 ಯಶಸ್ವೀ ವರ್ಷಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಆರಂಭದಲ್ಲಿ ನಮ್ಮಲ್ಲೇ ಕೆಲವರಿಗೆ ಬರಿಯ ಮಕ್ಕಳಾಟದಂತೆ ಕಂಡರೂ, ಸಂಸ್ಥೆಯ ಪ್ರಗತಿಯನ್ನು ಕಂಡು ಅವರೂ ಸದಸ್ಯರಾಗಿದ್ದಾರೆ. ಈ ಯಶಸ್ಸಿನ ಹಿಂದೆ ನಮ್ಮ ಕೆಲವು ಸದಸ್ಯರ ಅಪಾರ, ಅವಿರತ ಪರಿಶ್ರಮವಿದೆ.

ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಸಲಹೆ-ಸೂಚನೆ-ಮಾರ್ಗದರ್ಶನ ನೀಡಿ, ಇಂದಿಗೂ ಸಂಸ್ಥೆಯ ಏಳಿಗೆಗೆ ಎಲೆಮರೆಯ ಕಾಯಿಯಂತೆ ದಣಿವಿಲ್ಲದೆ ದುಡಿಯುತ್ತಿರುವ ನೆಂಪು ಕೃಷ್ಣ ಭಟ್ಟರು "ನೆಂಪು ಕ್ರೆಡಿಟ್ ಯೂನಿಯನ್" ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಘು ನನ್ನ ಹತ್ತಿರ ಒಂದು ವಿಷಯ ಪ್ರಸ್ತಾಪಿಸಿದ. "ನಾವು ನಾಲ್ಕೈದು ಜನ ಅಣ್ಣ-ತಮ್ಮ ಸೇರಿ ಒಂದು ’ಉಳಿತಾಯ ಯೋಜನೆ’ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೇವೆ. ನೀನೂ ಸೇರುವುದಾದರೆ ನಿನ್ನನ್ನು ಅದರ "ಚೇರ್ಮನ್" (ನನ್ನ ಬೋಳು ಮಂಡೆಗೆ ಅನ್ವರ್ಥ!?) ಮಾಡುತ್ತೇವೆ" ಎಂದಾಗ, ಅಧ್ಯಕ್ಷ ಪದವಿಯ ಆಸೆಯೂ ಮೊಳಕೆಯೊಡೆದು ಸರಿ ಎಂದೆ. ಸಮಾನಮನಸ್ಕ ಬಂಧುಗಳು-ಗೆಳೆಯರು ಸೇರಿ ಆ ಯೋಜನೆಗೊಂದು ರೂಪುರೇಷೆ ನೀಡಲು ಮುಂದಾದೆವು. ನಮ್ಮ ಮೊದಲ ಷರತ್ತು ಏನೆಂದರೆ ಈ ಯೋಜನೆ ಯಾವುದೇ ಲಾಭದ ದೃಷ್ಟಿ ಹೊಂದಿರಬಾರದು, ಇಲ್ಲಿ ಉಳಿತಾಯ ಹಾಗೂ ಆಪತ್ಕಾಲಕ್ಕೆ ಅನುಕೂಲವಾಗುವಂತಹ ನಿಯಮಾವಳಿಗಳು ಮಾತ್ರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ.

ಆ ದಿನಗಳಲ್ಲಿ ದಿನಕ್ಕೊಂದು ಸ್ವಸಹಾಯ ಗುಂಪು ಉದಯವಾಗುತ್ತಿದ್ದವು. "ಸ್ವಸಹಾಯ ಗುಂಪು" ಬಹಳ ಚಾಲ್ತಿಯಲ್ಲಿದ್ದ ಹೆಸರು. ನಾವೂ ಕೂಡ ಅದನ್ನೇ ಆಶ್ರಯಿಸಿ "ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" (Bhat Brothers Self Help Group) ಎಂದು ನಮ್ಮ ಯೋಜನೆಗೆ ನಾಮಕರಣ ಮಾಡಿದೆವು. ಯಾವುದೇ ಲಾಭದ ದೃಷ್ಟಿಕೋನ ಇಲ್ಲದಿದ್ದರೂ ಮೊದಲ ವರ್ಷವೇ ನಮ್ಮ ಯೋಜನೆಗೆ 16 ಮಂದಿ ನಾಮುಂದು ತಾಮುಂದು ಎಂದು ಸದಸ್ಯರಾದರು! (ಇಷ್ಟೊಂದು ಜನರನ್ನು ನಾವು ಖಂಡಿತಾ ನಿರೀಕ್ಷಿಸಿರಲಿಲ್ಲ).

ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ವಿನಿಯೋಗಿಸುವುದು, ಪ್ರತೀ ತಿಂಗಳು ಹಣ ಸಂಗ್ರಹಣೆ ಇತ್ಯಾದಿ ಕೆಲಸಗಳಿಗಾಗಿ ಒಂದು ಕಾರ್ಯಕಾರೀ ಸಮಿತಿಯನ್ನು ಕೂಡ ಮಾಡಿಕೊಂಡೆವು. ಸಂದರ್ಭ ಸಿಕ್ಕಾಗಲೆಲ್ಲ ಈ ಕಾರ್ಯಕಾರೀ ಸಮಿತಿಯವರು ಒಟ್ಟುಕುಳಿತು ಈ ಯೋಜನೆಯ ಅಭಿವೃದ್ಧಿಗೆ ಏನೇನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾರಂಭಿಸಿದರು. ಇದರರ್ಥ, ನಮ್ಮ ಬಂಧುಬಾಂಧವರ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಬಹುದು, ಅವರ ಸಂಕಷ್ಟಗಳಲ್ಲಿ ಹೇಗೆ ಭಾಗಿಯಾಗಬಹುದು ಎಂಬೆಲ್ಲ ವಿಷಯಗಳು ನಿಧಾನವಾಗಿ ಪ್ರಸ್ತಾವನೆಗೆ ಬಂತು.

"ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" ಹೆಸರು ಸೀಮಿತ ಅರ್ಥವನ್ನು ನೀಡಬಹುದೆಂದು 2004 ರಲ್ಲಿ ನಮ್ಮ ಸಂಸ್ಥೆಗೆ "ನೆಂಪು ಕ್ರೆಡಿಟ್ ಯೂನಿಯನ್" ಎಂದು ಮರುನಾಮಕರಣ ಮಾಡಲಾಯಿತು. ಆರಂಭಿಕ ಎಡರು-ತೊಡರುಗಳನ್ನು ದಾಟಿ, ಪ್ರಗತಿಪಥದಲ್ಲಿ ಆಗಲೇ ದಾಪುಗಾಲು ಹಾಕುತ್ತಿದ್ದ ನೆಂಪು ಕ್ರೆಡಿಟ್ ಯೂನಿಯನ್ ಎಲ್ಲರ ಆಕರ್ಷಣೆಯಾಗಿತ್ತು. ಇಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಗಳೇ ಆಧಾರಸ್ತಂಭವಾಗಿದೆ. ಸದಸ್ಯರು ಕ್ಲಪ್ತಕಾಲದಲ್ಲಿ ತಮ್ಮ ತಿಂಗಳ ಉಳಿತಾಯ ಹಣವನ್ನು ನೀಡಿ ಸಹಕರಿಸುತ್ತಿದ್ದಾರೆ.

ಸದಸ್ಯತನಕ್ಕಾಗಿ ನಾವು ಯಾರನ್ನೂ ವಿನಂತಿಸಿಕೊಳ್ಳಲಿಲ್ಲ, ಸದಸ್ಯತ್ವ ಅಭಿಯಾನವನ್ನೂ ಕೈಗೊಳ್ಳಲಿಲ್ಲ. ಆದರೂ ನಮ್ಮ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ, ಅಂತೆಯೇ ಠೇವಣಿ ಸಂಗ್ರಹಣೆಯೂ ಏರಿಕೆಯಾಗುತ್ತಿದೆ. ಸ್ವಯಂಪ್ರೇರಿತರಾಗಿ ಬರುತ್ತಿರುವ ನಮ್ಮ ಬಂಧು-ಬಾಂಧವರಿಗೆ ಇಲ್ಲ ಎನ್ನಲಾಗುತ್ತಿಲ್ಲ.

ನಮ್ಮ ಈ ಸಂಸ್ಥೆಯ ಇನ್ನೊಂದು ಯೋಜನೆ ಎಂದರೆ ನಮ್ಮ ಸದಸ್ಯರ ಅಗತ್ಯಗಳನ್ನು ಪೂರೈಸುವುದು. ಯಾವುದೇ ಸದಸ್ಯರಿಗೆ ಹಣದ ಅಡಚಣೆ ಉಂಟಾದರೆ, ಮದುವೆ-ಮುಂಜಿಗಳಿಗೆ, ಮನೆ ಕಟ್ಟಲು, ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅಗತ್ಯಗಳಿಗೆ ನಮ್ಮ ಉಳಿತಾಯದ ಹಣವನ್ನು ಸಾಲರೂಪದಲ್ಲಿ ನೀಡುವುದು. ಇದಕ್ಕೆ ನಾವು ವಿಧಿಸುವ ಬಡ್ಡಿ ಅತೀ ಕನಿಷ್ಠ ದರದ್ದಾಗಿದೆ. ಈ ಸಾಲಕ್ಕೆ ವಸ್ತುರೂಪದ "ಆಧಾರ" (security) ಗಳು ಏನೂ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನಂಬಿಕೆ, ವಿಶ್ವಾಸ ಎಂಬೆರಡು "ಆಧಾರ"ಗಳಷ್ಟೆ ಬೇಕು. ಹಾಗಾಗಿ ಇವತ್ತಿಗೂ ನಮ್ಮ ಸಾಲಮರುಪಾವತಿ ಯಾವುದೇ ವಿತ್ತ ಸಂಸ್ಥೆಗಿಂತ ಚೆನ್ನಾಗಿ ನಡೆಯುತ್ತಿದೆ. ರಾತ್ರಿ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆಯಿಟ್ಟರೆ ಮರುದಿನ ಬೆಳಿಗ್ಗೆ ಆ ಸದಸ್ಯರ ಕೈಯಲ್ಲಿ ಹಣ ಇರಿಸುವಂತಹ ವ್ಯವಸ್ಥೆ ನಮ್ಮದಾಗಿದೆ. ಇಂತಹ ವ್ಯವಸ್ಥೆ ಇರುವಾಗ ಯಾರಿಗೆ ತಾನೇ ನಮ್ಮ ಸಂಸ್ಥೆ ಬಗ್ಗೆ ವಿಶ್ವಾಸ ಬಾರದು ಹೇಳಿ?

"ನೆಂಪು ಕ್ರೆಡಿಟ್ ಯೂನಿಯನ್" ಎಂದರೆ ಹಣಕಾಸಿನ ವ್ಯವಹಾರದ ಒಂದು ಸಂಸ್ಥೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಹಣಕಾಸಿನ ವ್ಯವಹಾರ ಒಂದು ನೆಪವಷ್ಟೆ. ಇದು ನಮ್ಮ ಬಂಧು-ಬಾಂಧವರನ್ನು ಬೆಸೆಯುವ ಕೊಂಡಿ. ಹೂವಿನ ಮೊಗ್ಗುಗಳು ಹೇಗೆ ದಾರಕ್ಕೆ ಪೋಣಿಸಿಕೊಂಡಿರುತ್ತವೆಯೋ ಅಂತೆಯೇ ನೆಂಪು ಕ್ರೆಡಿಟ್ ಯೂನಿಯನ್ ಎಂಬ ’ದಾರ’ಕ್ಕೆ ನಮ್ಮೆಲ್ಲ ಸದಸ್ಯರು ಹೂವಿನೋಪರಿಯಾಗಿ ಬೆಸೆದುಕೊಂಡಿದ್ದಾರೆ. ಹಾಗಾದಾಗಲೇ ಹೂವಿನ ಮಾಲೆ ಪರಿಮಳ ಸೂಸಿ, ಸುಂದರವಾಗಿ ಕಾಣಿಸಿಕೊಳ್ಳುವುದು ಅಲ್ಲವೆ? ಅಂತೆಯೇ ನಮ್ಮೆಲ್ಲರ ಸಂಬಂಧಗಳು ಮಧುರವಾಗಿ ಹೆಣೆದುಕೊಂಡು ಕಂಗೊಳಿಸುತ್ತಿದೆ.

ಈ ಹಿಂದೆ, ವರ್ಷಕ್ಕೊಂದೆರಡು ಸಾರಿ ಮದುವೆ-ಮುಂಜಿಗಳಾದಲ್ಲಿ ಮಾತ್ರ ಒಟ್ಟು ಸೇರುತ್ತಿದ್ದ ನಮ್ಮ ಬಂಧುಗಳು, ಇಂದು ಕ್ರೆಡಿಟ್ ಯೂನಿಯನ್ ಮೀಟಿಂಗ್ ಎಂಬ ನೆಪದಲ್ಲಿ ತಿಂಗಳಿಗೊಮ್ಮೆ ಒಟ್ಟು ಸೇರುತ್ತಾರೆ. ಪರಸ್ಪರರ ಕುರಿತು ಹೆಚ್ಚು ಆಳವಾಗಿ ತಿಳಿದುಕೊಳ್ಳುವ ಅವಕಾಶ ಲಭಿಸುತ್ತಿದೆ. ಹೀಗೆ ಹೆಚ್ಚು ತಿಳಿದಂತೆ ಆತ್ಮೀಯತೆ, ಸಂಬಂಧಗಳೂ ಗಾಢವಾಗುತ್ತವೆ, ಹಾಗೂ ಗಟ್ಟಿಯಾಗುತ್ತವೆ. ಅದಕ್ಕೇ ಹೇಳುತ್ತಿದ್ದೇನೆ "ನೆಂಪು ಕ್ರೆಡಿಟ್ ಯೂನಿಯನ್" ಅರ್ಥಾತ್ "ಸಂಬಂಧಗಳ ಬೆಸುಗೆ" ಅಂತ... ನಮ್ಮ ಯಾವುದೇ ಬಂಧುಗಳ ಮನೆಯಲ್ಲಿ ಶುಭ ಅಥವಾ ಅಶುಭ ಘಟನೆಗಳು ನಡೆದಲ್ಲಿ ನಾವೆಲ್ಲ ಸ್ವಯಂಪ್ರೇರಿತರಾಗಿ ನಮ್ಮೆಲ್ಲ "ತಾಪತ್ರಯ"ಗಳನ್ನು ಅಲ್ಲೇ ಬಿಟ್ಟು ಧಾವಿಸುವಷ್ಟು ನಮ್ಮ ಸಂಬಂಧಗಳು ಬೆಸೆದುಕೊಂಡಿವೆ. ಇದೇ ಅಲ್ಲವೇ "ಸಂಘ ಜೀವನ"!

ಆರು ವರ್ಷಗಳ ಹಿಂದೆ ನಮ್ಮ ಪೂಜ್ಯರಾದ, ಸಂಸ್ಕೃತ-ಕನ್ನಡ ಪಂಡಿತರೂ ಆದ ನೆಂಪು ಶಿವರಾಮ ಭಟ್ಟರ ದಿವ್ಯಹಸ್ತದಿಂದ ಚಾಲನೆಗೊಂಡ "ನೆಂಪು ಕ್ರೆಡಿಟ್ ಯೂನಿಯನ್" ಯಾವುದೇ ಅಡೆತಡೆ ಇಲ್ಲದೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ. ಅಂದು "ಸಂಹತಿಃ ಕಾರ್ಯಸಾಧಿಕಾ" ಎಂಬ ಧ್ಯೇಯವಾಕ್ಯವನ್ನು ನೀಡಿ, ಮನಸಾರೆ ನಮ್ಮನ್ನು ಹರಸಿದ ಪೂಜ್ಯರು ಈಗಿಲ್ಲವಾದರೂ ಅವರ ಕಾಣದ ಕೈ ನಮ್ಮೆಲ್ಲರನ್ನು ಮುನ್ನಡೆಸುತ್ತಿದೆ.

ವಿಸ್ತಾರವಾಗಿ ಬೆಳೆದಿರುವ ನಮ್ಮ ಸಂಸ್ಥೆ ಹಲವರಿಗೆ ನೆರಳು ನೀಡಿದೆ. ಇಂತಹ ಸಂಸ್ಥೆಯನ್ನು ಮುನ್ನಡೆಸುವಲ್ಲಿ ನಮ್ಮ ಸದಸ್ಯರ ಸಹಕಾರ ಮರೆಯುವಂತಿಲ್ಲ. ಎಲೆಮರೆಯ ಕಾಯಿಗಳಂತೆ ಕೆಲವು ಸದಸ್ಯರು ಈ ಸಂಸ್ಥೆ ಹಳಿಬಿಟ್ಟು ಕದಲದಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆ ಯಾವುದೇ ಕಚೇರಿ ಹೊಂದಿಲ್ಲ, ಕೆಲಸ ಕಾರ್ಯಗಳಿಗಾಗಿ ಯಾರನ್ನೂ ನೇಮಿಸಿಕೊಂಡಿಲ್ಲ. ಬದಲಿಗೆ ತಮ್ಮ ವೃತ್ತಿ ಜೀವನದ ಒತ್ತಡಗಳ ಮಧ್ಯೆಯೇ ಅಷ್ಟೇ ಪ್ರಾಮುಖ್ಯತೆ ನೀಡಿ ನಮ್ಮ ಸಂಸ್ಥೆಗಾಗಿಯೂ ದುಡಿಯುವ ಛಲ ಹೊಂದಿದ್ದಾರೆ ನಮ್ಮ ಕೆಲ ಸದಸ್ಯರು. ಇವರಿಗೆ ಪ್ರತಿಫಲ ಏನೂ ನೀಡುವುದಿಲ್ಲ, "ಇದು ನಮ್ಮ ಸಂಸ್ಥೆ" ಎಂಬ ಹೆಗ್ಗಳಿಕೆಯಿಂದ ದುಡಿಯುತ್ತಾರೆ!

ವರ್ಷಕ್ಕೆ ಸುಮಾರು ಹತ್ತು ಲಕ್ಷದಷ್ಟು ವ್ಯವಹಾರ ನಡೆಸುವ ನಮ್ಮ ಸಂಸ್ಥೆಯ ವಾರ್ಷಿಕ ಖರ್ಚು ಹೆಚ್ಚೆಂದರೆ ರೂ. 400/- (ನಂಬಿದರೆ ನಂಬಿ, ಬಿಟ್ಟರೆ ಬಿಡಿ!). ಖಂಡಿತಾ ಇದಕ್ಕಿಂತ ಸ್ವಲ್ಪವಾದರೂ ಹೆಚ್ಚಿಗೆ ಖರ್ಚಾಗಿರುತ್ತದೆ. ಆದರೆ ಅದನ್ನೆಲ್ಲ ನಮ್ಮ ಸದಸ್ಯರೇ ಸ್ವಯಂ ಪ್ರೇರಿತರಾಗಿ ಭರಿಸುತ್ತಿದ್ದಾರೆ (ಇಂತಹ ವ್ಯವಸ್ಥೆ ಎಲ್ಲಾದರೂ ಉಂಟೆ?). ನಮ್ಮ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು ಕೂಡ "ಆಡಿಟ್" (audit) ಮಾಡಿಯೇ ಪ್ರಕಟಿಸುತ್ತಿದ್ದೇವೆ. ನಮ್ಮ ಹಣಕಾಸು ವ್ಯವಹಾರ ಪಾರದರ್ಶಕವಾಗಿರಬೇಕೆಂಬುದು ನಮ್ಮ ಉದ್ದೇಶ.

ಇಂದು ನಮ್ಮ ಸಂಸ್ಥೆ 62 ಸದಸ್ಯಬಲವನ್ನು ಹೊಂದಿದ್ದು, ವಾರ್ಷಿಕ ರೂ. 10 ಲಕ್ಷ ವಹಿವಾಟು ನಡೆಸುವ ಅಂದಾಜಿದೆ. ಕ್ರಮೇಣ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಯೋಚಿಸುತ್ತಿದ್ದೇವೆ. ಕಳೆದ ವರ್ಷ ನೆಂಪಿನ ಶ್ರೀ ಗಣಪತಿ ದೇವಳದ ಮಾರ್ಗದಲ್ಲಿ ಎರಡು ಮಾರ್ಗಸೂಚಿ ಫಲಕಗಳನ್ನು ಕೊಡುಗೆಯಾಗಿ ನೀಡಿದೆ ಈ ಸಂಸ್ಥೆ. ಕೆಲವು ಸದಸ್ಯರು ಸೇರಿ ಪ್ರತಿವರ್ಷ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಪ್ರೋತ್ಸಾಹ ನೀಡುತ್ತಿದ್ದೇವೆ.

ಹೀಗೆ ನಮ್ಮ ಸದಸ್ಯರೇನಕರು ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಉತ್ತಮ ಹಿನ್ನೆಲೆ, ಚಾರಿತ್ರ್ಯ ಹೊಂದಿದ ಸದಸ್ಯರಿರುವುದರಿಂದಲೇ "ನೆಂಪು ಕ್ರೆಡಿಟ್ ಯೂನಿಯನ್" ಭರದಿಂದ ಯಶಸ್ಸು ಕಾಣುತ್ತಿದೆ. ಮುಂದೊಮ್ಮೆ ಬಹುದೊಡ್ಡ ಸಾಧನೆ ಮಾಡಲಿರುವ ಈ ಸಂಸ್ಥೆ ಶತಮಾನಗಳ ಕಾಲ ನಡೆಯಲಿ ಎಂಬುದೇ ನನ್ನ ಆಶಯ.

-- ನೆಂಪು ಕೃಷ್ಣ ಭಟ್

5 comments:

Shubhada said...

tumba chennagide...:)

sambandhada besuge andare enu anta yaradaru namma nempu credit union na sadasyarannu nodi kalibeku enanti?...

ನಾವಡ said...

ನಮಸ್ಕಾರ,
ಚೆನ್ನಾಗಿದೆ ಐಡಿಯಾ ಮತ್ತು ಸಾಧನೆ. ನಮಗೂ ಸದಸ್ಯತ್ವ ಕೊಟ್ಟು ಬಿಡಿ.
ಒಂದು ಸಂಸ್ಥೆಯಾಗಿ ಬೆಳೆಯುವುದು ಕಷ್ಟ. ಅದನ್ನು ಸಾಧ್ಯವಾಗಿಸಿದ್ದಕ್ಕೆ ಅಭಿನಂದನೆ
ನಾವಡ

Nempu Guru said...

ನಾವಡರೆ, ಅಭಿನಂದನೆಗೆ ಧನ್ಯವಾದಗಳು.

ಕೂಡು ಕುಟುಂಬಗಳು ನಶಿಸುತ್ತಿರುವ ಈ ಕಾಲದಲ್ಲಿ, ಕೆಲಸದ ನಿಮಿತ್ತ ದೂರದೂರಲ್ಲಿ ನೆಲೆಸಿರುವ ನಮ್ಮೆಲ್ಲಾ ಬಂಧುಗಳನ್ನು ಇನ್ನಷ್ಟು ಹತ್ತಿರ ಬೆಸೆಯುವ ಉದ್ದೇಶದಿಂದ ಇಂತದ್ದೊಂದು ಯೋಜನೆ ನಾವು ಕೈಗೊಂಡೆವು.

ನಮ್ಮ ಕರಾವಳಿ ಕರ್ನಾಟಕದಲ್ಲಿ ಒಂದೊಮ್ಮೆ ಸಾಕಷ್ಟು ಕಾಣಸಿಗುತ್ತಿದ್ದ, ಈಗ ಸೊರಗುತ್ತಿರುವ ಕೂಡು ಕುಟುಂಬಗಳ ಪುನಃಶ್ಚೇತನಕ್ಕೆ ಇಂತಹ ಯೋಜನೆಗಳು ಪ್ರೇರಣೆಯಾಗಬಹುದು ಎಂಬ ಹಾರೈಕೆ ನಮ್ಮದು.

--
ಗುರು

Unknown said...

ದೇವರ ಕೃಪೆ, ಹಿರಿಯರ ಆಶೀರ್ವಾದ, ಹಾಗೂ ಜನರ ಒಗ್ಗಟ್ಟು, ಸ್ನೇಹ, ಹೊಂದಾಣಿಕೆಯಿಂದ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಒಂದು ಒಳ್ಳೆಯ ಉದಾಹರಣೆ ಆಗಿ ಬೆಳೆದು ಬಂದಿದೆ ನಮ್ಮ ಈ ನೆಂಪು ಗ್ರೂಪ್. ಹಾಗೆ ಅದರ ಗರಿಮೆಯನ್ನು ಓದಿದವರಲೆಲ್ಲಾ ತಾವೂ ಭಾಗವಹಿಸಬಹುದೆನೋ ಅಥವಾ ತಮ್ಮಲ್ಲೂ ಇಂಥ ಒಂದು ವ್ಯವಸ್ಥೆ ಪ್ರಾರಂಭಿಸಬಹುದೇನೋ ಎನ್ನುವ ಭಾವನೆ ಹುಟ್ಟಿಸುವಂತೆ ಇದೆ ನಿಮ್ಮ ಈ ಲೇಖನ. ಇದೆ ರೀತಿ ನೆಂಪು ಗ್ರೂಪಿನ ಸಾಧನೆಗಳು ಮತ್ತು ನಿಮ್ಮ ಬರವಣಿಗೆ ಆಕಾಶದೆತ್ತರಕ್ಕೆ ಬೆಳೆಯಲಿ ಎಂಬುದೇ ನಮ್ಮೆಲ್ಲರ ಹಾರೈಕೆ.
ಹರಿಪೂಜ.

Nempu Guru said...

ಹಿತನುಡಿಗಳಿಗೆ ಧನ್ಯವಾದಗಳು... :)