Friday, February 15, 2008

Sanchaara:: Kodachadri

ಕೊಡಚಾದ್ರಿಗೆ ಕಾಲ್ನಡಿಗೆ...

2003ರ ಡಿಸೆಂಬರ್ ತಿಂಗಳಲ್ಲಿ ನಾವೆಲ್ಲ ಒಟ್ಟಾಗಿ ನೆಂಪಿಗೆ ಸಮೀಪದಲ್ಲೇ ಇರುವ "ಕೊಡಚಾದ್ರಿ"ಗೆ ಚಾರಣ ಹೋಗಿತ್ತು. ನಾವೇನು ಟ್ರೆಕ್ಕಿಂಗ್ ಮಾಡಬೇಕು ಎಂಬ ಯೋಜನೆ ಹಾಕಿ ಹೊರಟಿರಲಿಲ್ಲ. ಟ್ರ್ಯಾಕ್ಸ್ ವಾಹನದಲ್ಲಿ ಕೊಡಚಾದ್ರಿಯ ಭಟ್ಟರ ಮನೆಯವರೆಗೆ ತಲುಪಿ, ಅಲ್ಲಿಂದ ನಡೆದುಕೊಂಡು ಮುಂದುವರಿಯುವ ಯೋಜನೆ ಹಾಕಿತ್ತು. ಆದರೆ ಮಳೆಯಿಂದ ಜರ್ಝರಿತಗೊಂಡಿದ್ದ ಕೊಡಚಾದ್ರಿಯ ಧೂಳು ತುಂಬಿದ ಕಲ್ಲು-ಮಣ್ಣಿನ ದಾರಿಯನ್ನು ಏರಲು ಆರಂಭದಲ್ಲೇ ವಿಫಲಗೊಂಡ ನಮ್ಮ ವಾಹನದ ದೆಸೆಯಿಂದ ಪ್ರವಾಸ ಚಾರಣವಾಗಿ ಮಾರ್ಪಟ್ಟಿತ್ತು

ನೆಂಪು ಕೃಷ್ಣ ಭಟ್ಟರು ತಿಳಿಹಾಸ್ಯ ಮಿಶ್ರಿತ ಶೈಲಿಯಲ್ಲಿ ನಮ್ಮ "ನೆನಪು" ಪತ್ರಿಕೆಗೆ ವರ್ಷಗಳ ಹಿಂದೆ ಬರೆದಿದ್ದ ಚಾರಣ ಪ್ರಸಂಗ ಈ ಸಂಚಾರ ಮಾಲಿಕೆಯಲ್ಲಿದೆ. ಬನ್ನಿ "ಕುಟಚಾದ್ರಿಗೆ.....!"


ಹಾಗೆಂದು ನಾವೇನೂ ನಡೆದೇ ಹೋದವರಲ್ಲ. ಹೆಸರಿಗೆ ವಾಹನವೊಂದಿತ್ತು. ಅದು ಮೇಲೆ ಹತ್ತಲು ಒಲ್ಲೆ ಅಂದದ್ದಕ್ಕೆ ನಾವು ಕಾಲಿಗೆ ಶರಣು ಹೇಳಿದೆವು. ಇಷ್ಟೊಂದು ಮಜಾ ಇರ್ತದೆ ಅಂತ ಮೊದಲೇ ತಿಳಿದಿದ್ದರೆ ಬಹುಶಃ ಇನ್ನೂ ಹಿಂದೆಯೇ ನಮ್ಮ ವಾಹನ ನಿಲ್ಲಿಸಬಹುದಿತ್ತು ಅಂತ ಅಂದ್ಕೊಂಡಿದ್ದು ಖಂಡಿತಾ ಸುಳ್ಳಲ್ಲ! ಇದು ನಡೆದದ್ದು 2003ರ ಕ್ರಿಸಮಸ್ ದಿನದಂದು.

ಅಂದು ಬೆಳಗಿನ ಜಾವದಲ್ಲೇ ಎದ್ದ ನಮ್ಮ ’ದಂಡು’ ಸ್ನಾನಾಹ್ನಿಕ ಮುಗಿಸಿ, ರಜಾಕನ ವಾಹನದಲ್ಲಿ ಸರ್ವಜ್ಞನ ಪೀಠ ನೋಡಲು ಕೊಡಚಾದ್ರಿಯತ್ತ ಹೊರಟಿತು. ಮೊದಲು ನಮ್ಮ ಭೇಟಿ ಕೊಡಚಾದ್ರಿ ಕಾಲ ಬುಡದಲ್ಲಿರುವ ಕೊಲ್ಲೂರಿಗೆ, ಅಲ್ಲೇ ಇದ್ದರು ನಮ್ಮ ಬಳಗದ ಪ್ರೆಸಿಡೆಂಟ್ರು......! ಐತಾಳರ ಮನೆಯಲ್ಲಿ ಬಿಸಿಬಿಸಿ ಚಪಾತಿ, ಮೊಸರನ್ನ ನಮ್ಮನ್ನೇ ಕಾದಿತ್ತು. ಅದನ್ನು ಹಾಗೂ ಅಧ್ಯಕ್ಷರನ್ನು ವಾಹನಕ್ಕೆ ಹಾಕಿಕೊಂಡು ಕೊಲ್ಲೂರು ಬಿಟ್ಟಾಗ ಗಂಟೆಯಾಗಿತ್ತು ಎಂಟು!

ಇನ್ನೇನು ನಿಟ್ಟೂರು ಬಂತು ಎನ್ನುವಾಗ ಕೆಲವರಿಗೆ ವಾಂತಿಯಾಗಬೇಕೆ! ಖಾಲಿ ಹೊಟ್ಟೆ ಪ್ರಭಾವ ಎಂದರು ನಮ್ಮ ಕೆಲವು ಪಂಡಿತರು! ಇರಬಹುದೇನೋ ಅಂದ್ರು ಉಳಿದವರು. ಒಟ್ಟಾರೆ ಈಗ ತಿಂಡಿ ಬೇಕು ಎಂಬ ಸೂಚನೆ ಎಲ್ಲರದು. ಯಾರಿಗೆ ಬೇಕಾದ್ರೂ ಇಲ್ಲ ಎನ್ನಬಹುದು, ಆದರೆ ಹೊಟ್ಟೆಗೆ ಮಾತ್ರ ಇಲ್ಲ ಎನ್ನಲು ಸಾಧ್ಯವಿಲ್ಲ ಅಲ್ಲವೆ? ಹಾಗೆಯೇ ನಿಟ್ಟೂರಿನ ಹೋಟೆಲೊಂದಕ್ಕೆ ನುಗ್ಗಿದೆವು. ಆ ಹೋಟೆಲಿನಲ್ಲಾದರೋ ಇದ್ದಿದ್ದೇ ಮೂರು ಮತ್ತೊಂದು ತಿಂಡಿ! ಪಾಲಿಗೆ ಬಂದದ್ದು ಪಂಚಾಮೃತ ಅಂತ ಗಬ ಗಬ ತಿಂದಾಗ ಹೋಟೆಲಿನ ಇಡ್ಲಿ, ಬನ್ಸ್ ಖಾಲಿಯಾಗಿದ್ದು ಮಾತ್ರ ನಿಜ ಎಂಬುದು ಎಲ್ಲರ ಅಂಬೋಣ. "ತಿಂದದ್ದು ಲೆಕ್ಕ ಇಡಬಾರದು" ಎಂಬ ಮಾತಿದ್ದರೂ ಕೂಡ ಆ ದಿನ ತಿಂದದ್ದನ್ನು ನಾವೇ ಲೆಕ್ಕಹಾಕಿ ಹಣಕೊಡಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ ಅಲ್ವೆ?

ನೋಡಿ, ಅಲ್ಲಿಯೇ ಮುಂದೆ ಇತ್ತು ಫಾರೆಸ್ಟ್ ಗೇಟು. ಇಲ್ಲೊಬ್ಬ ಸರಕಾರಿ ನೌಕರ ಕೂಡ ಇದ್ದ. ನಿಮ್ಮ ವಾಹನ ಮೇಲೆ ಹತ್ತೋದಿಲ್ಲ ಎಂದವನು "ಕೈ ಬೆಚ್ಚ"ಗಾದೊಡನೆ "ಹೋಗಿ ಹೋಗಿ" ಅಂದಿದ್ದು ನಮ್ಮ ಸರಕಾರೀ ಇಲಾಖೆಗಳ "ಕರ್ತವ್ಯ ಪರತೆ"ಗೆ ಸಾಕ್ಷಿಯಾಗಿತ್ತು. ಆದರೆ ನಮಗೆ ಬೇಕಾಗಿದ್ದೂ ಅದೇ. ಇಲ್ದೇ ಹೋಗಿದ್ರೆ ಅಲ್ಲೇ ತಿರುಗಿ ವಾಪಾಸು ಬರಬೇಕಿತ್ತು, ಮನೆಗೆ!


ಅಂಕು ಡೊಂಕು ರಸ್ತೆಯಲ್ಲಿ ಧೂಳು ರಾಶಿ ಮಧ್ಯದಲ್ಲಿ ಡಿಸ್ಕೋ ನಾಟ್ಯ ಮಾಡುತ್ತಾ ವಾಹನ ಸಾಗಿದಾಗ ಕೆಲವರ ಕೈ ಎದೆ ಮೇಲಿತ್ತು. ಹೀಗೆಯೇ ಪಯಣ ಸಾಗಿತ್ತು ಬಹಳ ದೂರ. ಹಲವಾರು ಅಪಾಯಕಾರೀ ತಿರುವುಗಳನ್ನು ದಾಟುವಾಗ ಮೈ ಜುಂ ಎಂದಿದ್ದು ನಿಜ ಅಂತ ಎಲ್ಲರೂ ಅನ್ನುತ್ತಿದ್ದರು. ಇದಕ್ಕಿಂತ ಕಾಲ್ನಡಿಗೆಯೇ ಒಳ್ಳೆದಿತ್ತೇನೋ ಅಂದ್ರು ಒಬ್ಬರು. ಅದಕ್ಕೆ ಕೂಡಲೇ ಎಲ್ಲರ ಒಪ್ಪಿಗೆಯೂ ಸಿಕ್ಕಿತು! ವಾಹನವನ್ನು ಅಲ್ಲೇ ರಸ್ತೆ(!?) ಬದಿಯಲ್ಲಿ ನಿಲ್ಲಿಸಿ ಎಲ್ಲರೂ ಕಾಲ್ನಡಿಗೆ ಆರಂಭಿಸಿದೆವು ಲಗ್ಗೇಜು (ಚಪಾತಿ, ಮೊಸರನ್ನ) ಹೊತ್ತು. ನಮ್ಮ ತಂಡದಲ್ಲಿ ಮೂವರು ಮಹಿಳಾಮಣಿಗಳು ಇದ್ದರೂ ಕೂಡ ನಡೆಯಲು ಹಿಂದೇಟು ಹಾಕಲಿಲ್ಲ. ಇನ್ನೇನು ಹತ್ತು ಹೆಜ್ಜೆ ನಡೆದಿಲ್ಲ, ಆಗಲೇ ಒಬ್ಬರು ಅಂದ್ರು "ಬಾಳೆಹಣ್ಣು ಕೊಡ್ರೋ, ಕಿತ್ತಳೆಹಣ್ಣು ಕೊಡ್ರೋ" ಅಂತ! "ಹೌದಪ್ಪಾ, ಲಗ್ಗೇಜಾದ್ರೂ ಕಡಿಮೆಯಾಗ್ತದೆ, ತಿಂದೇಬಿಡೋಣ" ಅಂದ್ರು ಇನ್ನುಳಿದವರು. ಆದ್ರೆ ಲಗ್ಗೇಜು ಎಲ್ಲಿ ಹೋಯ್ತು? ಚೀಲದಿಂದ ಹೊಟ್ಟೆಗೆ! ಚೀಲದ ಭಾರ ಹೋಗಿ ಹೊಟ್ಟೆ ಭಾರ ಆಯ್ತು ಅಷ್ಟೆ!

ಆಚೀಚೆ ಗುಡ್ಡ, ಕಾಡು, ತೊರೆಗಳ ಸೌಂದರ್ಯ ಸವಿಯುತ್ತಾ, ತಿಂಡಿ ತೀರ್ಥ ಹೀರುತ್ತಾ ಸರ್ವಜ್ಞ ಪೀಠ ತಲುಪಿದಾಗ ಗಂಟೆ ಹೊಡೆದಿತ್ತು ಹನ್ನೆರಡು. ಆಶ್ಚರ್ಯ ಅಂದ್ರೆ ಇಲ್ಲಿಯೂ ಮೊಬೈಲ್ ಮಾತನಾಡಿದ್ದು. ಆದ್ರೆ ನಮ್ಮ ಗುರಿ ಇದ್ದದ್ದು "ಚಿತ್ರಮೂಲ". ಸರ್ವಜ್ಞ ಪೀಠದಿಂದ ನೆಟ್ಟಗೆ ಕೆಳಗುರುಳಿದರೆ ಸಿಗುತ್ತದೆ ಚಿತ್ರಮೂಲ. ಹಾಗೆಂದು ಉರುಳುವ ಹಾಗಿಲ್ಲ! ಆ ಕಡೆ ನೋಡ್ತಾ ಇದ್ರೆ ಈ ಕಡೆ ಕಾಲು ಜಾರುತ್ತೆ. ಆಧಾರಕ್ಕೆ ಬಳ್ಳಿ ಹಿಡಿದಿರೋ, ಅದರಲ್ಲೆಲ್ಲ ಮುಳ್ಳುಗಳೇ ಇದ್ದವು. ಇಲ್ಲಿ ನಡೆದಿದ್ದೇ ಕಮ್ಮಿ, ಜಾರಿದ್ದೇ ಜಾಸ್ತಿ. ಜಾರುತ್ತ, ಹಾರುತ್ತಾ, ಸ್ವಲ್ಪ ಸ್ವಲ್ಪ ನಡೆಯುತ್ತಾ ಕೆಳಕೆಳಗೆ ಸರಿಯುತ್ತ ಕೊನೆಗೆ ತಲುಪಿದ್ದೇ ಚಿತ್ರಮೂಲ.


ಇಲ್ಲಿ ನಿಂತು ಸುತ್ತಮುತ್ತ ನೋಡಿದರೆ ದಿಗಿಲು ಹುಟ್ಟುತ್ತದೆ. ಕೆಳಗೆ ನೋಡಿದರೆ ತಲೆ ತಿರುಗುತ್ತದೆ. ಆದರೆ ಇಲ್ಲಿಯ ನೀರು ಮಾತ್ರ ಪ್ರಕೃತಿ ನಿರ್ಮಿತ ರೆಫ್ರಿಜರೇಟರಿನಲ್ಲಿಟ್ಟಂತಿತ್ತು. ಆಗಲೇ ಹೊಟ್ಟೆ ಚುರುಗುಟ್ಟುತ್ತಿತ್ತು. ಮೊಸರನ್ನದ ಪರಿಮಳವೂ ಎಚ್ಚರಿಸುತ್ತಿತ್ತು. ತಡವೇಕೆ ಇನ್ನು ಎಂದು ಸಾಲು ಹಿಡಿದು ಕುಳಿತೇ ಬಿಟ್ಟರು ನಮ್ಮ ತಂಡದ ಸದಸ್ಯರು. ನಾಲ್ಕು ದಿನಕ್ಕಾಗುವಷ್ಟು ತಿಂದರೋ ಏನೋ, ಯಾರಿಗೂ ಗೊತ್ತೇ ಆಗಲಿಲ್ಲ. ರುಚಿರುಚಿಯಾದ ಮೊಸರನ್ನ, ಚಪಾತಿ ಕೂರ್ಮ ವ್ಯವಸ್ಥೆಗೊಳಿಸಿದ ಕೊಲ್ಲೂರು ಶ್ರೀನಿವಾಸ ಭಟ್ಟರಿಗೂ, ಐತಾಳರಿಗೂ ಮನಸಾರೆ ವಂದಿಸಿದೆವು. ತಣ್ಣಗಿನ ನೀರಲ್ಲಿ ಲಿಂಬೆ ಶರಬತ್ತು ಮಾಡಿ ಕುಡಿದಾಗ ಅಮೃತಪಾನ ಸವಿದಂತಾಯ್ತು.

ಈಗ ಶುರುವಾಯ್ತು ನೋಡಿ ಗುಡ್ಡ ಹತ್ತುವ ಚಿಂತೆ! ಒಂದು ಕಡೆ ಹೊಟ್ಟೆ ಭಾರ, ಇನ್ನೊಂದು ಕಡೆ ಸುಸ್ತಾದ ಅನುಭವ. ಆದ್ರೆ ವಾಪಾಸ್ ಹೋಗ್ಲೇ ಬೇಕಲ್ಲ. ಹೊರಟೇ ಬಿಟ್ಟೆವು. ಅಂತೂ ವಾಪಾಸು ಸರ್ವಜ್ಞ ಪೀಠ ತಲುಪಿದಾಗ ಎಲ್ಲರಿಗೂ ಪುನರ್ಜನ್ಮ ಪಡೆದಂತಾಗಿತ್ತು. ಸೂರ್ಯನಿಗೂ ಸುಸ್ತಾಗಿದೆ... ಬಿಸಿಲ ಝಳ ತಗ್ಗಿದೆ... ತಣ್ಣನೆ ಗಾಳಿ ಹೊಂಚು ಹಾಕಿದೆ... ನಾವೆಲ್ಲ ಸರ್ವಜ್ಞ ಪೀಠದಲ್ಲಿ ಒಂಧ್ಹತ್ತು ನಿಮಿಷ ವಿಶ್ರಾಂತಿ ಬಯಸಿದೆವು. ವಿರಳ ಮೋಡಗಳ ಸಂಧಿಯಿಂದ ಸೂರ್ಯ ಕಿರಣ ಭೂಮಿಗೆ ಬರುವ ದೃಶ್ಯ ಮನೋಹರವಾಗಿತ್ತು. ನೆರಳು ಬೆಳಕಿನಾಟ ಮನಮೋಹಕವಾಗಿತ್ತು. ಕೆಲೆವೆಡೆ ಹಸಿರು, ಉಳಿದೆಡೆ ಬೋಳು ಗುಡ್ಡಗಳು ಭತ್ತದ ರಾಶಿಯಂತೆ ಕಂಗೊಳಿಸುತ್ತಿದ್ದವು. ಸಾಟಿಯುಂಟೇ ಪ್ರಕೃತಿ ಸೌಂದರ್ಯಕ್ಕೆ? ಮನಸಾರೇ ಸವಿದೆವು.

ಇಳಿಯುತ್ತಿಳಿಯುತ್ತಾ ತಲುಪಿದ್ದು "ಅಗಸ್ತ್ಯ ತೀರ್ಥ"ಕ್ಕೆ. ಅಂಜುತ್ತಂಜುತ್ತಲೇ ತಲೆಕೊಟ್ಟಾಗ ಮೈ ಜುಂ ಎಂದಿತು. ಅಷ್ಟೊಂದು ತಣ್ಣಗಿತ್ತು ಆ ನೀರು! ಒಬ್ಬೊಬ್ಬರಂತೆ ಎಲ್ಲರೂ ನೀರಲ್ಲಿ ಹೊರಳಾಡಿ ಎದ್ದಾಗ ನಡೆದ ಸುಸ್ತು ಕ್ಷಣಾರ್ಧದಲ್ಲಿ ಮಾಯವಾಗಿತ್ತು. ಹೊಸ ಹುರುಪಿನೊಂದಿಗೆ ಹೆಜ್ಜೆ ಹಾಕುತ್ತಾ ನಡೆದೆವು ನಮ್ಮ ವಾಹನವಿದ್ದಲ್ಲಿಗೆ (ಸುಮಾರು 4-5 ಕಿ.ಮೀ).

ಕೊಲ್ಲೂರಲ್ಲಿ ಐಸ್ ಕ್ರೀಂ ತಿಂದು ಪ್ರವಾಸಕ್ಕೆ ಮಂಗಳಹಾಡಿದಾಗ ರಾತ್ರಿ ಗಂಟೆ ಏಳಾಗಿತ್ತು. ಇಡೀ ಹನ್ನೆರಡು ಗಂಟೆ ಪ್ರವಾಸದಲ್ಲಿ ನಾವು ನೋಡಿದ್ದಾದ್ರೂ ಏನು? ಗುಡ್ಡ ಹತ್ತಿ-ಇಳಿದು ಸಾಧಿಸಿದ್ದಾದ್ರೂ ಏನು? ಸರ್ವಜ್ಞ ಪೀಠ, ಚಿತ್ರಮೂಲದಲ್ಲಿ ನೋಡುವಂಥಾದ್ದೇನಿದೆ? ಅಂತೆಲ್ಲ ಕೇಳಿದ್ರೆ ಖಂಡಿತಾ ಉತ್ತರ ನಮ್ಮ ಬಳಿ ಇಲ್ಲ. ಗಾಡಿ ಹಳೇದಾದಾಗ ’ಸರ್ವಿಸ್’ ಮಾಡಬೇಕು. ಹಾಗೇ ಜಡ ಮನಸ್ಸು ಉಲ್ಲಸಿತವಾಗಲು ಇಂತಹ ಪ್ರಕೃತಿ ಸೌಂದರ್ಯದ ಸವಿಯುಣ್ಣಬೇಕಾಗುತ್ತದೆ. ನಮ್ಮ ಯಾಂತ್ರಿಕ ಜೀವನದಲ್ಲಿನ ಬೇಸರ ನೀಗಿಸಲು, ಜೀವನೋತ್ಸಾಹ ಮೂಡಿಸಲು ಇಂಥದ್ದೆಲ್ಲ ಅಗತ್ಯ ಬೇಕಾಗುತ್ತದೆ.

-- ನೆಂಪು ಕೃಷ್ಣ ಭಟ್

No comments: