Friday, August 22, 2008

ಮುಂಗಾರು ಮಳೆ ಸ್ಪೆಶಲ್!!!

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ... ...!!!






Tuesday, April 8, 2008

ನಮ್ಮ ದೊಡ್ಡಮ್ಮ:

ನೆಂಪು ಕಾಮಾಕ್ಷಿ ಅಮ್ಮ


ನನಗೆ ಬ್ರಹ್ಮೋಪದೇಶವಾದ ನಂತರ ಬೇಸಿಗೆ ರಜೆ, ಇನ್ನಿತರ ರಜೆಗಳನ್ನು ನಾನು ಉಡುಪಿ ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ನನ್ನ ದೊಡ್ಡಪ್ಪನ (ನೆಂಪು ಶ್ರೀಧರ ಭಟ್ಟರು) ಮನೆಯಲ್ಲಿ ಕಳೆಯುತ್ತಿದ್ದೆ. ಅವರ ಜೊತೆ ಪೌರೋಹಿತ್ಯಕ್ಕೆ ಸಹಾಯಕನಾಗಿ ಹೋಗುವುದು, ದೇವರ ಪೂಜೆ, ಮಂತ್ರ ಇತ್ಯಾದಿ ಕಲಿಯುವುದು ಹೀಗೆ ನನ್ನ ಖರ್ಚಿಗೆ ಒಂದಿಷ್ಟು ಹಣವೂ ಒಟ್ಟಾಗುತ್ತಿತ್ತು. ಅದು 7ನೇ ತರಗತಿ ಮುಗಿಸಿ ಹೈಸ್ಕೂಲ್ ಮೆಟ್ಟಿಲು ಹತ್ತಲು ಅಣಿಯಾಗುತ್ತಿದ್ದ ಕಾಲ. ಹೊಸ ಹೊಸ ಕನಸು ಚಿಗುರೊಡೆಯುತ್ತಿದ್ದ ಕಾಲ!

ಪಡುಕುದ್ರು ಪರಿಸರದ ಬಗ್ಗೆ ಹೇಳಲೇಬೇಕು. ಹೆಸರೇ ಹೇಳುವಂತೆ ಸುವರ್ಣಾ ನದಿ ಸುತ್ತಲೂ ಹರಿದು ಪ್ರಕೃತಿ ನಿರ್ಮಿತ ದ್ವೀಪಸದೃಶವಾದ ಸುಂದರ, ಪ್ರಶಾಂತ ಪ್ರದೇಶವೇ ಈ ಪಡುಕುದ್ರು. ಇಂತಹ ಹಲವಾರು ಕುದ್ರುಗಳ ಸಮೂಹವೇ ಇಲ್ಲಿದೆ, ತಿಮ್ಮಣ್ಣಕುದ್ರು, ಹೊನ್ನಪ್ಪ ಕುದ್ರು, ಮೂಡುಕುದ್ರು ಇತ್ಯಾದಿ... ಒಂದೊಂದರಲ್ಲೂ ಹೆಚ್ಚೆಂದರೆ ಹತ್ತು ಮನೆಗಳು, ಸುತ್ತಲೂ ರಾಶಿ ರಾಶಿ ತೆಂಗಿನ ಮರಗಳು. ಅತ್ಯಂತ ಶಾಂತ ಪರಿಸರ. ಸುವರ್ಣಾ ನದಿ ಬೆಂಗ್ರೆಯಲ್ಲಿ ಸಮುದ್ರ ಸೇರುವ ಮೊದಲು ಹಲವಾರು ಕವಲೊಡೆದು ನಿರ್ಮಿತವಾದ ಈ ದ್ವೀಪ ಸಮೂಹ ಕೇರಳದ ಅಲೆಪ್ಪಿ ಬ್ಯಾಕ್ ವಾಟರ್ ಗೆ ಯಾವ ದೃಷ್ಟಿಯಲ್ಲೂ ಕಮ್ಮಿಯಿಲ್ಲ. ಆದರೆ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶ ಹೆಚ್ಚು ಮನೆಮಾತಾಗಿಲ್ಲ.


ನನಗಿಲ್ಲಿ ಬಿಡುವಿನ ವೇಳೆಯಲ್ಲಿ ಸಮಯ ಕಳೆಯಲು ಜೊತೆಗಾರರಾಗಿರುತ್ತಿದ್ದುದು ನನ್ನ ದೊಡ್ಡಮ್ಮ ಶ್ರೀಮತಿ ಕಾಮಾಕ್ಷಿ ಅಮ್ಮ (ನನ್ನ ಅಪ್ಪನ ಅಮ್ಮ). ಈಗ ಇವರಿಗೆ 93ರ ಹರೆಯ. ನೀಲಿ ಮಡಿ ಸೀರೆಯನ್ನ ತಮ್ಮ ಕೂದಲಿಲ್ಲದ ತಲೆ ಇತರರಿಗೆ ಕಾಣದಂತೆ ಉಟ್ಟು, ಬೆನ್ನು ಬಗ್ಗಿಸಿ ನಡೆಯುತ್ತಾ, ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗುತ್ತಾ, ದೇವರನಾಮ ಪಠಿಸುತ್ತಾ, ಸುಮ್ಮನೆ ಕುಳಿತಾಗ ರಾಮಾಯಣ, ಭಾರತ, ದಿನಪತ್ರಿಕೆ ಇನ್ನಿತರ ಗ್ರಂಥಗಳನ್ನು ಶಾಲೆಯ ಮೆಟ್ಟಿಲು ಹತ್ತದಿದ್ದರೂ ಓದುತ್ತಾ ಸಮಯ ಕಳೆಯುವ ನಮ್ಮ ದೊಡ್ಡಮ್ಮ ಉತ್ಸಾಹದ ಚಿಲುಮೆ. ಜೀವನ ಪ್ರೀತಿ, ಜೀವನೋತ್ಸಾಹ ಅಂದರೆ ಏನು ಎಂಬುದನ್ನ ಇವರಿಂದ ಕಲಿಯಬೇಕು. 9೦ ಸಂವತ್ಸರಗಳ ಕಾಲ ಸಾಕಷ್ಟು ನೋವು-ನಲಿವುಗಳನ್ನು ಕಂಡಿರುವ ಇವರು ಇಂದಿಗೂ ಹುಡುಗರು-ಮಕ್ಕಳು ನಾಚುವಷ್ಟು ಕೆಲಸ ಮಾಡುತ್ತಾರೆ.

ನನಗೆ ನಮ್ಮ ನೆಂಪಿನ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿ, ಒಲವು ಮೂಡುವಂತೆ ಮಾಡಿದ್ದು ದೊಡ್ಡಮ್ಮ ಹೇಳುತ್ತಿದ್ದ ನೆಂಪಿನ ಅನುಭವಗಳು, ನೆನಪುಗಳು ಹಾಗೂ ಕಥೆಗಳು. ಇದರಿಂದ ಪ್ರೇರಿತನಾಗಿ ನಾನು ನೆಂಪಿಗೆ ಮಾನಸಿಕವಾಗಿ ಮತ್ತಷ್ಟು ಹತ್ತಿರನಾದೆ. ಪಡುಕುದ್ರು ಗಣಪತಿ ಮಠದ ಹೊರ ಜಗುಲಿಯಲ್ಲಿ ನಾವಿಬ್ಬರು ಕುಳಿತಾಗ ದೊಡ್ಡಮ್ಮ ತಮ್ಮ ನೆನಪುಗಳ ಸುರುಳಿಯನ್ನ ಬಿಚ್ಚಿಡುತ್ತಿದ್ದರು. ಅವರಿಗೆ ತಮ್ಮ ನೆನಪುಗಳನ್ನ ಹೇಳಿಕೊಳ್ಳಲು, ಕೇಳಲು ಯಾರಾದರೂ ಬೇಕಿತ್ತು, ನನಗೂ ಅಷ್ಟೆ ಅವರ ಅನುಭವಗಳನ್ನ, ನೆನಪುಗಳನ್ನ ಕೇಳಿ ತಿಳಿದುಕೊಳ್ಳುವ ಕುತೂಹಲ. ಅಜ್ಜಿ-ಮೊಮ್ಮಗ ಜೋಡಿಯ ಸಂಭಾಷಣೆಗೆ ಜಗುಲಿಯ ಶಾಂತ ಪರಿಸರ ವೇದಿಕೆ, ಹೂಡೆ ಸಮುದ್ರದ ಅಲೆಗಳ ಭೋರ್ಗರೆತ ಹಿನ್ನೆಲೆ ಸಂಗೀತ! ಸಮಯ ಕಳೆದದ್ದೇ ತಿಳಿಯುತ್ತಿರಲಿಲ್ಲ. ದೊಡ್ಡಮ್ಮ ಅದೆಷ್ಟೋ ನೆನಪುಗಳನ್ನ, ಅನುಭವಗಳನ್ನ, ಘಟನೆಗಳನ್ನ, ಸ್ವಾರಸ್ಯಕರ-ರೋಚಕ ಕಥೆಗಳನ್ನ ನನ್ನೊಂದಿಗೆ ಹಂಚಿಕೊಂಡಿದ್ದರು. ಇದರೊಂದಿಗೆ ಹಲವಾರು ಪುರಾಣದ ಕಥೆಗಳನ್ನೂ ಹೇಳುತ್ತಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ ನಾನು ಅವರಿಂದ ಕಲಿತ ಪಾಠ ಜೀವನೋತ್ಸಾಹ ಹಾಗೂ ಸದಾ ಚಟುವಟಿಕೆಯಿಂದಿರುವುದು.

ಮೊದಲೇ ಹೇಳಿದಂತೆ, 92 ಸಂವತ್ಸರಗಳನ್ನು ಕಳೆದು 93ರ ಹೊಸ್ತಿಲಲ್ಲಿರುವ ಶ್ರೀಮತಿ ಕಾಮಾಕ್ಷಿ ಅಮ್ಮ ಹುಟ್ಟಿದ್ದು ಕೊಲ್ಲೂರು ಸಮೀಪದ ಗುಂಡೂರು ಎಂಬ ಕುಗ್ರಾಮದಲ್ಲಿ. 7ರ ಹರೆಯದಲ್ಲೆ ನೆಂಪು ಸುಬ್ಬಣ್ಣ ಭಟ್ಟರ (ನನ್ನ ಅಜ್ಜ, ಅಪ್ಪನ ತಂದೆ) ಕೈ ಹಿಡಿದು ನೆಂಪಿನವರಾದರು.

Wednesday, March 12, 2008

ನೆಂಪಿನ ಬಾನಂಗಳದ ಚಿತ್ತಾರ


ಸೂರ್ಯನಿಗೇ ಕಿರೀಟ...!



ಬೆಳ್ಳಿಮೋಡಗಳಿಗೆ ಸವಾಲೆಸೆಯುತ್ತಿರುವ ತಳಿರ ತೋರಣ!



ನಿರ್ಬಂಧಿ...!



ಚಕ್ರಾ ನದಿಯಲ್ಲಿ ಸೂರ್ಯಬಿಂಬ...!


ನೆರಳು ಬೆಳಕಿನ ಸಂಯೋಜನೆ

Friday, February 29, 2008

Sanchara:: Delhi - Agra - Mathura

ದೆಹಲಿಯ ವಿಜ್ಞಾನ ಭವನದಲ್ಲೊಂದು ದಿನ...

ನಮ್ಮ ನ.ಭ.ನೆಂಪು ರವರು 2003ರಲ್ಲಿ "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯ ಮನ್ನಣೆಗೆ ಭಾಜನರಾಗಿ, ಆಗಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರಿಂದ ರಾಜಧಾನಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ನೆಂಪು ಬಳಗಕ್ಕೆ ಒಂದು ಹೆಮ್ಮೆಯ ವಿಷಯ.


ಆ ಅಪೂರ್ವ ಕ್ಷಣಗಳನ್ನು ಮೆಲುಕು ಹಾಕುತ್ತಾ, ಪ್ರವಾಸದ ಸವಿನೆನಪುಗಳನ್ನು ನ.ಭ.ನೆಂಪು ರವರ ಜೊತೆಯಲ್ಲಿ ದೆಹಲಿಗೆ ತೆರಳಿದ್ದ ಅವರ ಸಹೋದರ ಶ್ರೀ ಗಜಾನನ ಭಟ್ಟರು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ರಾಷ್ಟ್ರದ ಉತ್ತಮ ಶಿಕ್ಷಕರಲ್ಲೊಬ್ಬರೆಂಬ ಪ್ರಶಸ್ತಿ ಪಡೆದು ಅದನ್ನು ಸ್ವೀಕರಿಸಲು ನರಸಿಂಹಣ್ಣ ದಂಪತಿಗಳು ದೆಹಲಿಗೆ ಹೊರಟಾಗ ಅವರೊಂದಿಗೆ ನನಗೂ ದೆಹಲಿ ಪಯಣದ ಆಸೆ ಮೂಡಿತ್ತು. ಇಂತಹ ಒಂದು ಸಂದರ್ಭ ಸಿಕ್ಕುವುದೇ ದುರ್ಲಭ. ಅಲ್ಲದೆ ಅಂತಹ ಒಂದು ಸಮಾರಂಭದಲ್ಲಿ ಭಾಗವಹಿಸುವುದೂ ಕೂಡ ಒಂದು ಭಾಗ್ಯ ಎಂದು ನಾನೂ ಅವರೊಂದಿಗೆ ಪಯಣ ಬೆಳೆಸಿದೆ, ದೆಹಲಿಗೆ.

ಪ್ರಶಸ್ತಿ ಪಡೆಯಲು ದೂರದೂರಿನಿಂದ ಬರುವ ಶಿಕ್ಷಕರಿಗಾಗಿ 2 ದಿನ ಮುಂಚಿತವಾಗಿಯೇ ಅಶೋಕ ಹೋಟೆಲ್ ಜನಪಥದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು. ಮಾರ್ಗದರ್ಶನಕ್ಕಾಗಿ ಅವರಿಗೆ ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯವರು ತಾತ್ಕಾಲಿಕ ಕಚೇರಿಯನ್ನೂ ತೆರೆದಿದ್ದರು. ನಾವು ಅಲ್ಲಿ ತಲುಪಿದಾಗ ದೇಶದ ನಾನಾ ಭಾಗದಿಂದ ಬಂದಿದ್ದ ಶಿಕ್ಷಕರು, ಅವರ ಆಪ್ತರಿಂದ ಇಡೀ ಮೊಗಸಾಲೆ ತುಂಬಿಹೋಗಿತ್ತು. ನಮ್ಮನ್ನೂ ಆತ್ಮೀಯವಾಗಿ ಸ್ವಾಗತಿಸಿದ ಆಗಿನ ಮಾಹಿತಿ ಸಂಪನ್ಮೂಲ ಸಚಿವರ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹಾಗೂ ತಂಡದವರ ಸೌಜನ್ಯ, ನಮಗೆ ತೋರುವ ಗೌರವಾದರಗಳನ್ನು ನೋಡಿದಾಗ ಇಂತಹ ಆತಿಥ್ಯ ನಮ್ಮ ಕರ್ನಾಟಕದ ಅಧಿಕಾರಿಗಳಲ್ಲಿ ಲಭ್ಯವಿರಲಾರದು ಎಂದೆನಿಸಿತು. ಸಹಜವಾಗಿಯೇ ಕೇಂದ್ರ ಸರಕಾರದ ಘನ ಇಲಾಖೆಯ ಕುರಿತು ಗೌರವ ಮೂಡಿತು.

ತಾ. 5-9-2003 ರಂದು ಶಿಕ್ಷಕ ದಿನಾಚರಣೆಯ ಕಾರ್ಯಕ್ರಮಗಳು ಬೆಳಿಗ್ಗೆ 10.30ಕ್ಕೆ ಭವ್ಯ ವಿಜ್ಞಾನ ಭವನದಲ್ಲಿ ಆಯೋಜಿತವಾಗಿದ್ದವು. ನಾವೆಲ್ಲ ಅಂದು ನರಸಿಂಹಣ್ಣನೊಂದಿಗೆ ಅಲ್ಲಿಗೆ ತಲುಪಿ ಭದ್ರತಾ ತಪಾಸಣೆಗಳನ್ನು ದಾಟಿ ಹವಾನಿಯಂತ್ರಿತ ವಿಶಾಲ ಸಭಾಭವನವನ್ನು ಪ್ರವೇಶಿಸಿದೆವು. ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಸುಮಾರು 300 ಶಿಕ್ಷಕ ಹಾಗೂ ಸಾವಿರಕ್ಕೂ ಮಿಕ್ಕಿ ಅವರ ಸಂಗಡಿಗರಿಂದ ತುಂಬಿತ್ತು ಆ ಸಭಾಭವನ. ದೇಶದ ಮುಂದಿನ ಸಭ್ಯ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳ ತಂಡವೇ ಅಲ್ಲಿ ನೆರೆದಂತಿತ್ತು. ಸಭಾಭವನದ ಆಸನದ ವ್ಯವಸ್ಥೆ, ಸುಮಧುರ ಧ್ವನಿವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿದ್ದು ದೇಶದ ರಾಜಧಾನಿಯ ಪ್ರತಿಷ್ಠೆಗೆ ತಕ್ಕಂತಿತ್ತು.


ಶಿಕ್ಷಕರ ಸ್ಥಾನಮಾನ ಹಾಗೂ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು "ಉತ್ತಮ ಶಿಕ್ಷಕರೇ ದೇಶದ ಆಸ್ತಿ" ಎಂದು ಶ್ಲೋಕಗಳನ್ನಾಧರಿಸಿ ಮಾಡಿದ ಭಾಷಣ ಅವರ ಪಾಂಡಿತ್ಯವನ್ನು ಸಾರುತ್ತಿತ್ತು. ನಂತರ ಮಾತನಾಡಿ, "ಶಿಕ್ಷಕರು ಸಾಮಾಜಿಕ ಅಭಿವೃದ್ಧಿಯ ಅವಿಭಾಜ್ಯ ಅಂಗ; ಅವರ ಶ್ರೇಷ್ಠತೆ ಅವರಲ್ಲೇ ಉಳಿಯದೇ ಶಿಕ್ಷಣದ ಮೂಲಕ ದೇಶದೆಲ್ಲೆಡೆ ಪ್ರಸಾರವಾಗಬೇಕು" ಎಂದು ಸಾರಿದ ಆಗಿನ ನಮ್ಮ ಹೆಮ್ಮೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಎಲ್ಲ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭದ್ರತಾ ಸಿಬ್ಬಂದಿಗಳ ಸೂಚನೆಯ ಹೊರತಾಗಿಯೂ ಎಲ್ಲ ಶಿಕ್ಷಕರಿಗೆ ಹಸ್ತಲಾಘವ ನೀಡಿ, ಆದರದಿಂದ ಮಾತನಾಡಿಸಿದ ಅವರ ಸೌಜನ್ಯ, ಸರಳತೆ ಎಲ್ಲರ ಮನ ಮುಟ್ಟುವಂತಿತ್ತು.

ದೂರದರ್ಶನದ ನಿರೂಪಕಿ ಶ್ರೀಮತಿ ಸರಳಾ ಮಹೇಶ್ವರಿಯವರಿಂದ ಕಾರ್ಯಕ್ರಮ ನಿರೂಪಣೆ ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತ್ತು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಇದಲ್ಲದೆ ಹಿಂದಿನ ದಿನ ಸಂಜೆ, ಶಿಕ್ಷಕರಿಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಸತ್ಕಾರ ಕೂಟವನ್ನು ಏರ್ಪಡಿಸಲಾಗಿತ್ತು. ಪ್ರಧಾನ ಮಂತ್ರಿಗಳ ಮನೆಯ ಆವರಣದಲ್ಲಿ ನಡೆದ ಈ ಕೂಟದಲ್ಲಿ ಕವಿ ವಾಜಪೇಯಿ ಅವರು ತಮ್ಮ ಕವನವೊಂದನ್ನು ವಾಚಿಸಿ ಎಲ್ಲರ ಮನರಂಜಿಸಿದರು.

ಈ ಶ್ರೇಷ್ಠ ಪ್ರಶಸ್ತಿಯ ಹಿಂದೆ ನರಸಿಂಹಣ್ಣನ ಕಠಿಣ ಪರಿಶ್ರಮ, ಅಪಾರ ಸಾಧನೆ, ಕರ್ತವ್ಯಪರತೆ ಇತ್ತು. ಪ್ರಶಸ್ತಿ ಸತ್ಪಾತ್ರರಿಗೆ ದೊರಕಿದೆ ಎನಿಸಿತು. ಇಂತಹ ಸಾಧಕರನ್ನು ಅಣ್ಣನಾಗಿ ಪಡೆದ ನನಗೆ, ನಮ್ಮೂರಿಗೆ ಇದು ಹೆಮ್ಮೆಯ ವಿಷಯ.


ನಮ್ಮ ಈ ದೆಹಲಿ ಭೇಟಿಯ ಸಂದರ್ಭದಲ್ಲಿ ನಾವು ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಉತ್ತರಾಂಚಲ ರಾಜ್ಯದ ಹೃಷಿಕೇಶ ಮತ್ತು ಹರಿದ್ವಾರಗಳಿಗೆ ಭೇಟಿಯಿತ್ತು, ಗಂಗಾನದಿಯಲ್ಲಿ ಮಿಂದು, ರಾಮಜುಲಾ - ಲಕ್ಷ್ಮಣಜುಲಾ ಹಾಗೂ ಮಾನಸಾದೇವಿ ದೇವಸ್ಥಾನಗಳಿಗೆ ಭೇಟಿಯಿತ್ತೆವು. ನಂತರ, ಆಗ್ರಾ ಮತ್ತು ಮಥುರಾಗಳಿಗೆ ಭೇಟಿಯಿತ್ತು, ಆಗ್ರಾದ ತಾಜಮಹಲ್ ಹಾಗೂ ಮಥುರಾದ ಕೃಷ್ಣಜನ್ಮಸ್ಥಾನವನ್ನು ನೋಡಿದೆವು. ಇವುಗಳಲ್ಲದೆ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತುಬ್ ಮಿನಾರ್, ಬಿರ್ಲಾ ಮಂದಿರ, ಕಮಲ ಮಂದಿರ, ಕೆಂಪುಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಸಂಸತ್ ಭವನ, ತ್ರಿಮೂರ್ತಿ ಭವನ, ರಾಜ್ ಘಾಟ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ವೀಕ್ಷಿಸಿದೆವು.


ನಮಗೆ ದೆಹಲಿಯಲ್ಲಿ ಉಳಿದುಕೊಳ್ಳಲು, ಮಹರ್ಷಿ ಅರಬಿಂದೋ ಆಶ್ರಮದ ಅತಿಥಿಗೃಹದಲ್ಲಿ, ಅಲ್ಲಿ ಆಗ ಉದ್ಯೋಗದಲ್ಲಿದ್ದ ಉಡುಪಿಯ ಹೆರ್ಗದ ಶ್ರೀ ವಿವೇಕ್ ತಂತ್ರಿ ವ್ಯವಸ್ಥೆ ಮಾಡಿದ್ದರು. ಷಟ್ಕೋನಾಕೃತಿಯ ನವೀನ ಮಾದರಿಯಲ್ಲಿ ನಿರ್ಮಿತವಾದ ಆಶ್ರಮ ಸಕಲ ಸೌಲಭ್ಯಗಳನ್ನೂ ಹೊಂದಿ ಸುಂದರವಾಗಿದೆ. ಆರ್ಥಿಕವಾಗಿ, ಬೌದ್ಧಿಕವಾಗಿ ಹಿಂದುಳಿದು ಅಶಕ್ತರಾದವರಿಗೆ ಆಶ್ರಯ ನೀಡಿ ಅವರಿಗೆ ಹಲವು ವಿಷಯಗಳಲ್ಲಿ ಪರಿಣತಿ ನೀಡಿ, ವೃತ್ತಿಪರರನ್ನಾಗಿ ಮಾಡುವ ಶ್ಲಾಘನೀಯ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಇದಲ್ಲದೆ ಯಾಂತ್ರಿಕ ಜೀವನದ ಜಂಜಾಟದಿಂದ ಬಳಲಿ, ಮನಃಶಾಂತಿಗಾಗಿ ಹಾತೊರೆದು ಬರುವವರಿಗೆ ಆಧ್ಯಾತ್ಮಿಕ ಬೋಧನೆಗಳ ಜೊತೆಗೆ ಯೋಗ ಶಿಕ್ಷಣವೂ ಇಲ್ಲಿ ಲಭ್ಯ. ಇಲ್ಲಿನ ಶಾಂತ ಪರಿಸರ, ಬೇವಿನ ಮರಗಳಿಂದ ಸುತ್ತುವರೆದಿರುವ ಆವರಣ ಅದಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ವಿನಯವೂ ಪ್ರಶಂಸನೀಯ.


ಹೀಗೆ ನಮ್ಮ ದೆಹಲಿ ಭೇಟಿಯು ನರಸಿಂಹಣ್ಣ ಪ್ರಶಸ್ತಿ ಪಡೆಯುವುದನ್ನು ನೋಡುವ ಭಾಗ್ಯವನ್ನು ಹಾಗೂ ಉತ್ತರ ಭಾರತದ ಪುಣ್ಯಕ್ಷೇತ್ರ ದರ್ಶನ ಭಾಗ್ಯವನ್ನೂ ಒದಗಿಸಿಕೊಟ್ಟಿತ್ತು.

-- ನೆಂಪು ಗಜಾನನ ಭಟ್

Monday, February 25, 2008

Nempu Credit Union

ನೆಂಪು ಕ್ರೆಡಿಟ್ ಯೂನಿಯನ್

ಸಂಬಂಧಗಳ ಬೆಸುಗೆ

ನಾವೊಂದಿಷ್ಟು ಜನ ನೆಂಪಿನ ಹುಡುಗರು 2002ರ ಜನವರಿಯಲ್ಲಿ ಹುಟ್ಟುಹಾಕಿದ "ನೆಂಪು ಕ್ರೆಡಿಟ್ ಯೂನಿಯನ್" ಈಗ 6 ಯಶಸ್ವೀ ವರ್ಷಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಆರಂಭದಲ್ಲಿ ನಮ್ಮಲ್ಲೇ ಕೆಲವರಿಗೆ ಬರಿಯ ಮಕ್ಕಳಾಟದಂತೆ ಕಂಡರೂ, ಸಂಸ್ಥೆಯ ಪ್ರಗತಿಯನ್ನು ಕಂಡು ಅವರೂ ಸದಸ್ಯರಾಗಿದ್ದಾರೆ. ಈ ಯಶಸ್ಸಿನ ಹಿಂದೆ ನಮ್ಮ ಕೆಲವು ಸದಸ್ಯರ ಅಪಾರ, ಅವಿರತ ಪರಿಶ್ರಮವಿದೆ.

ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಸಲಹೆ-ಸೂಚನೆ-ಮಾರ್ಗದರ್ಶನ ನೀಡಿ, ಇಂದಿಗೂ ಸಂಸ್ಥೆಯ ಏಳಿಗೆಗೆ ಎಲೆಮರೆಯ ಕಾಯಿಯಂತೆ ದಣಿವಿಲ್ಲದೆ ದುಡಿಯುತ್ತಿರುವ ನೆಂಪು ಕೃಷ್ಣ ಭಟ್ಟರು "ನೆಂಪು ಕ್ರೆಡಿಟ್ ಯೂನಿಯನ್" ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಘು ನನ್ನ ಹತ್ತಿರ ಒಂದು ವಿಷಯ ಪ್ರಸ್ತಾಪಿಸಿದ. "ನಾವು ನಾಲ್ಕೈದು ಜನ ಅಣ್ಣ-ತಮ್ಮ ಸೇರಿ ಒಂದು ’ಉಳಿತಾಯ ಯೋಜನೆ’ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೇವೆ. ನೀನೂ ಸೇರುವುದಾದರೆ ನಿನ್ನನ್ನು ಅದರ "ಚೇರ್ಮನ್" (ನನ್ನ ಬೋಳು ಮಂಡೆಗೆ ಅನ್ವರ್ಥ!?) ಮಾಡುತ್ತೇವೆ" ಎಂದಾಗ, ಅಧ್ಯಕ್ಷ ಪದವಿಯ ಆಸೆಯೂ ಮೊಳಕೆಯೊಡೆದು ಸರಿ ಎಂದೆ. ಸಮಾನಮನಸ್ಕ ಬಂಧುಗಳು-ಗೆಳೆಯರು ಸೇರಿ ಆ ಯೋಜನೆಗೊಂದು ರೂಪುರೇಷೆ ನೀಡಲು ಮುಂದಾದೆವು. ನಮ್ಮ ಮೊದಲ ಷರತ್ತು ಏನೆಂದರೆ ಈ ಯೋಜನೆ ಯಾವುದೇ ಲಾಭದ ದೃಷ್ಟಿ ಹೊಂದಿರಬಾರದು, ಇಲ್ಲಿ ಉಳಿತಾಯ ಹಾಗೂ ಆಪತ್ಕಾಲಕ್ಕೆ ಅನುಕೂಲವಾಗುವಂತಹ ನಿಯಮಾವಳಿಗಳು ಮಾತ್ರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ.

ಆ ದಿನಗಳಲ್ಲಿ ದಿನಕ್ಕೊಂದು ಸ್ವಸಹಾಯ ಗುಂಪು ಉದಯವಾಗುತ್ತಿದ್ದವು. "ಸ್ವಸಹಾಯ ಗುಂಪು" ಬಹಳ ಚಾಲ್ತಿಯಲ್ಲಿದ್ದ ಹೆಸರು. ನಾವೂ ಕೂಡ ಅದನ್ನೇ ಆಶ್ರಯಿಸಿ "ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" (Bhat Brothers Self Help Group) ಎಂದು ನಮ್ಮ ಯೋಜನೆಗೆ ನಾಮಕರಣ ಮಾಡಿದೆವು. ಯಾವುದೇ ಲಾಭದ ದೃಷ್ಟಿಕೋನ ಇಲ್ಲದಿದ್ದರೂ ಮೊದಲ ವರ್ಷವೇ ನಮ್ಮ ಯೋಜನೆಗೆ 16 ಮಂದಿ ನಾಮುಂದು ತಾಮುಂದು ಎಂದು ಸದಸ್ಯರಾದರು! (ಇಷ್ಟೊಂದು ಜನರನ್ನು ನಾವು ಖಂಡಿತಾ ನಿರೀಕ್ಷಿಸಿರಲಿಲ್ಲ).

ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ವಿನಿಯೋಗಿಸುವುದು, ಪ್ರತೀ ತಿಂಗಳು ಹಣ ಸಂಗ್ರಹಣೆ ಇತ್ಯಾದಿ ಕೆಲಸಗಳಿಗಾಗಿ ಒಂದು ಕಾರ್ಯಕಾರೀ ಸಮಿತಿಯನ್ನು ಕೂಡ ಮಾಡಿಕೊಂಡೆವು. ಸಂದರ್ಭ ಸಿಕ್ಕಾಗಲೆಲ್ಲ ಈ ಕಾರ್ಯಕಾರೀ ಸಮಿತಿಯವರು ಒಟ್ಟುಕುಳಿತು ಈ ಯೋಜನೆಯ ಅಭಿವೃದ್ಧಿಗೆ ಏನೇನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾರಂಭಿಸಿದರು. ಇದರರ್ಥ, ನಮ್ಮ ಬಂಧುಬಾಂಧವರ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಬಹುದು, ಅವರ ಸಂಕಷ್ಟಗಳಲ್ಲಿ ಹೇಗೆ ಭಾಗಿಯಾಗಬಹುದು ಎಂಬೆಲ್ಲ ವಿಷಯಗಳು ನಿಧಾನವಾಗಿ ಪ್ರಸ್ತಾವನೆಗೆ ಬಂತು.

"ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" ಹೆಸರು ಸೀಮಿತ ಅರ್ಥವನ್ನು ನೀಡಬಹುದೆಂದು 2004 ರಲ್ಲಿ ನಮ್ಮ ಸಂಸ್ಥೆಗೆ "ನೆಂಪು ಕ್ರೆಡಿಟ್ ಯೂನಿಯನ್" ಎಂದು ಮರುನಾಮಕರಣ ಮಾಡಲಾಯಿತು. ಆರಂಭಿಕ ಎಡರು-ತೊಡರುಗಳನ್ನು ದಾಟಿ, ಪ್ರಗತಿಪಥದಲ್ಲಿ ಆಗಲೇ ದಾಪುಗಾಲು ಹಾಕುತ್ತಿದ್ದ ನೆಂಪು ಕ್ರೆಡಿಟ್ ಯೂನಿಯನ್ ಎಲ್ಲರ ಆಕರ್ಷಣೆಯಾಗಿತ್ತು. ಇಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಗಳೇ ಆಧಾರಸ್ತಂಭವಾಗಿದೆ. ಸದಸ್ಯರು ಕ್ಲಪ್ತಕಾಲದಲ್ಲಿ ತಮ್ಮ ತಿಂಗಳ ಉಳಿತಾಯ ಹಣವನ್ನು ನೀಡಿ ಸಹಕರಿಸುತ್ತಿದ್ದಾರೆ.

ಸದಸ್ಯತನಕ್ಕಾಗಿ ನಾವು ಯಾರನ್ನೂ ವಿನಂತಿಸಿಕೊಳ್ಳಲಿಲ್ಲ, ಸದಸ್ಯತ್ವ ಅಭಿಯಾನವನ್ನೂ ಕೈಗೊಳ್ಳಲಿಲ್ಲ. ಆದರೂ ನಮ್ಮ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ, ಅಂತೆಯೇ ಠೇವಣಿ ಸಂಗ್ರಹಣೆಯೂ ಏರಿಕೆಯಾಗುತ್ತಿದೆ. ಸ್ವಯಂಪ್ರೇರಿತರಾಗಿ ಬರುತ್ತಿರುವ ನಮ್ಮ ಬಂಧು-ಬಾಂಧವರಿಗೆ ಇಲ್ಲ ಎನ್ನಲಾಗುತ್ತಿಲ್ಲ.

ನಮ್ಮ ಈ ಸಂಸ್ಥೆಯ ಇನ್ನೊಂದು ಯೋಜನೆ ಎಂದರೆ ನಮ್ಮ ಸದಸ್ಯರ ಅಗತ್ಯಗಳನ್ನು ಪೂರೈಸುವುದು. ಯಾವುದೇ ಸದಸ್ಯರಿಗೆ ಹಣದ ಅಡಚಣೆ ಉಂಟಾದರೆ, ಮದುವೆ-ಮುಂಜಿಗಳಿಗೆ, ಮನೆ ಕಟ್ಟಲು, ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅಗತ್ಯಗಳಿಗೆ ನಮ್ಮ ಉಳಿತಾಯದ ಹಣವನ್ನು ಸಾಲರೂಪದಲ್ಲಿ ನೀಡುವುದು. ಇದಕ್ಕೆ ನಾವು ವಿಧಿಸುವ ಬಡ್ಡಿ ಅತೀ ಕನಿಷ್ಠ ದರದ್ದಾಗಿದೆ. ಈ ಸಾಲಕ್ಕೆ ವಸ್ತುರೂಪದ "ಆಧಾರ" (security) ಗಳು ಏನೂ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನಂಬಿಕೆ, ವಿಶ್ವಾಸ ಎಂಬೆರಡು "ಆಧಾರ"ಗಳಷ್ಟೆ ಬೇಕು. ಹಾಗಾಗಿ ಇವತ್ತಿಗೂ ನಮ್ಮ ಸಾಲಮರುಪಾವತಿ ಯಾವುದೇ ವಿತ್ತ ಸಂಸ್ಥೆಗಿಂತ ಚೆನ್ನಾಗಿ ನಡೆಯುತ್ತಿದೆ. ರಾತ್ರಿ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆಯಿಟ್ಟರೆ ಮರುದಿನ ಬೆಳಿಗ್ಗೆ ಆ ಸದಸ್ಯರ ಕೈಯಲ್ಲಿ ಹಣ ಇರಿಸುವಂತಹ ವ್ಯವಸ್ಥೆ ನಮ್ಮದಾಗಿದೆ. ಇಂತಹ ವ್ಯವಸ್ಥೆ ಇರುವಾಗ ಯಾರಿಗೆ ತಾನೇ ನಮ್ಮ ಸಂಸ್ಥೆ ಬಗ್ಗೆ ವಿಶ್ವಾಸ ಬಾರದು ಹೇಳಿ?

"ನೆಂಪು ಕ್ರೆಡಿಟ್ ಯೂನಿಯನ್" ಎಂದರೆ ಹಣಕಾಸಿನ ವ್ಯವಹಾರದ ಒಂದು ಸಂಸ್ಥೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಹಣಕಾಸಿನ ವ್ಯವಹಾರ ಒಂದು ನೆಪವಷ್ಟೆ. ಇದು ನಮ್ಮ ಬಂಧು-ಬಾಂಧವರನ್ನು ಬೆಸೆಯುವ ಕೊಂಡಿ. ಹೂವಿನ ಮೊಗ್ಗುಗಳು ಹೇಗೆ ದಾರಕ್ಕೆ ಪೋಣಿಸಿಕೊಂಡಿರುತ್ತವೆಯೋ ಅಂತೆಯೇ ನೆಂಪು ಕ್ರೆಡಿಟ್ ಯೂನಿಯನ್ ಎಂಬ ’ದಾರ’ಕ್ಕೆ ನಮ್ಮೆಲ್ಲ ಸದಸ್ಯರು ಹೂವಿನೋಪರಿಯಾಗಿ ಬೆಸೆದುಕೊಂಡಿದ್ದಾರೆ. ಹಾಗಾದಾಗಲೇ ಹೂವಿನ ಮಾಲೆ ಪರಿಮಳ ಸೂಸಿ, ಸುಂದರವಾಗಿ ಕಾಣಿಸಿಕೊಳ್ಳುವುದು ಅಲ್ಲವೆ? ಅಂತೆಯೇ ನಮ್ಮೆಲ್ಲರ ಸಂಬಂಧಗಳು ಮಧುರವಾಗಿ ಹೆಣೆದುಕೊಂಡು ಕಂಗೊಳಿಸುತ್ತಿದೆ.

ಈ ಹಿಂದೆ, ವರ್ಷಕ್ಕೊಂದೆರಡು ಸಾರಿ ಮದುವೆ-ಮುಂಜಿಗಳಾದಲ್ಲಿ ಮಾತ್ರ ಒಟ್ಟು ಸೇರುತ್ತಿದ್ದ ನಮ್ಮ ಬಂಧುಗಳು, ಇಂದು ಕ್ರೆಡಿಟ್ ಯೂನಿಯನ್ ಮೀಟಿಂಗ್ ಎಂಬ ನೆಪದಲ್ಲಿ ತಿಂಗಳಿಗೊಮ್ಮೆ ಒಟ್ಟು ಸೇರುತ್ತಾರೆ. ಪರಸ್ಪರರ ಕುರಿತು ಹೆಚ್ಚು ಆಳವಾಗಿ ತಿಳಿದುಕೊಳ್ಳುವ ಅವಕಾಶ ಲಭಿಸುತ್ತಿದೆ. ಹೀಗೆ ಹೆಚ್ಚು ತಿಳಿದಂತೆ ಆತ್ಮೀಯತೆ, ಸಂಬಂಧಗಳೂ ಗಾಢವಾಗುತ್ತವೆ, ಹಾಗೂ ಗಟ್ಟಿಯಾಗುತ್ತವೆ. ಅದಕ್ಕೇ ಹೇಳುತ್ತಿದ್ದೇನೆ "ನೆಂಪು ಕ್ರೆಡಿಟ್ ಯೂನಿಯನ್" ಅರ್ಥಾತ್ "ಸಂಬಂಧಗಳ ಬೆಸುಗೆ" ಅಂತ... ನಮ್ಮ ಯಾವುದೇ ಬಂಧುಗಳ ಮನೆಯಲ್ಲಿ ಶುಭ ಅಥವಾ ಅಶುಭ ಘಟನೆಗಳು ನಡೆದಲ್ಲಿ ನಾವೆಲ್ಲ ಸ್ವಯಂಪ್ರೇರಿತರಾಗಿ ನಮ್ಮೆಲ್ಲ "ತಾಪತ್ರಯ"ಗಳನ್ನು ಅಲ್ಲೇ ಬಿಟ್ಟು ಧಾವಿಸುವಷ್ಟು ನಮ್ಮ ಸಂಬಂಧಗಳು ಬೆಸೆದುಕೊಂಡಿವೆ. ಇದೇ ಅಲ್ಲವೇ "ಸಂಘ ಜೀವನ"!

ಆರು ವರ್ಷಗಳ ಹಿಂದೆ ನಮ್ಮ ಪೂಜ್ಯರಾದ, ಸಂಸ್ಕೃತ-ಕನ್ನಡ ಪಂಡಿತರೂ ಆದ ನೆಂಪು ಶಿವರಾಮ ಭಟ್ಟರ ದಿವ್ಯಹಸ್ತದಿಂದ ಚಾಲನೆಗೊಂಡ "ನೆಂಪು ಕ್ರೆಡಿಟ್ ಯೂನಿಯನ್" ಯಾವುದೇ ಅಡೆತಡೆ ಇಲ್ಲದೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ. ಅಂದು "ಸಂಹತಿಃ ಕಾರ್ಯಸಾಧಿಕಾ" ಎಂಬ ಧ್ಯೇಯವಾಕ್ಯವನ್ನು ನೀಡಿ, ಮನಸಾರೆ ನಮ್ಮನ್ನು ಹರಸಿದ ಪೂಜ್ಯರು ಈಗಿಲ್ಲವಾದರೂ ಅವರ ಕಾಣದ ಕೈ ನಮ್ಮೆಲ್ಲರನ್ನು ಮುನ್ನಡೆಸುತ್ತಿದೆ.

ವಿಸ್ತಾರವಾಗಿ ಬೆಳೆದಿರುವ ನಮ್ಮ ಸಂಸ್ಥೆ ಹಲವರಿಗೆ ನೆರಳು ನೀಡಿದೆ. ಇಂತಹ ಸಂಸ್ಥೆಯನ್ನು ಮುನ್ನಡೆಸುವಲ್ಲಿ ನಮ್ಮ ಸದಸ್ಯರ ಸಹಕಾರ ಮರೆಯುವಂತಿಲ್ಲ. ಎಲೆಮರೆಯ ಕಾಯಿಗಳಂತೆ ಕೆಲವು ಸದಸ್ಯರು ಈ ಸಂಸ್ಥೆ ಹಳಿಬಿಟ್ಟು ಕದಲದಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆ ಯಾವುದೇ ಕಚೇರಿ ಹೊಂದಿಲ್ಲ, ಕೆಲಸ ಕಾರ್ಯಗಳಿಗಾಗಿ ಯಾರನ್ನೂ ನೇಮಿಸಿಕೊಂಡಿಲ್ಲ. ಬದಲಿಗೆ ತಮ್ಮ ವೃತ್ತಿ ಜೀವನದ ಒತ್ತಡಗಳ ಮಧ್ಯೆಯೇ ಅಷ್ಟೇ ಪ್ರಾಮುಖ್ಯತೆ ನೀಡಿ ನಮ್ಮ ಸಂಸ್ಥೆಗಾಗಿಯೂ ದುಡಿಯುವ ಛಲ ಹೊಂದಿದ್ದಾರೆ ನಮ್ಮ ಕೆಲ ಸದಸ್ಯರು. ಇವರಿಗೆ ಪ್ರತಿಫಲ ಏನೂ ನೀಡುವುದಿಲ್ಲ, "ಇದು ನಮ್ಮ ಸಂಸ್ಥೆ" ಎಂಬ ಹೆಗ್ಗಳಿಕೆಯಿಂದ ದುಡಿಯುತ್ತಾರೆ!

ವರ್ಷಕ್ಕೆ ಸುಮಾರು ಹತ್ತು ಲಕ್ಷದಷ್ಟು ವ್ಯವಹಾರ ನಡೆಸುವ ನಮ್ಮ ಸಂಸ್ಥೆಯ ವಾರ್ಷಿಕ ಖರ್ಚು ಹೆಚ್ಚೆಂದರೆ ರೂ. 400/- (ನಂಬಿದರೆ ನಂಬಿ, ಬಿಟ್ಟರೆ ಬಿಡಿ!). ಖಂಡಿತಾ ಇದಕ್ಕಿಂತ ಸ್ವಲ್ಪವಾದರೂ ಹೆಚ್ಚಿಗೆ ಖರ್ಚಾಗಿರುತ್ತದೆ. ಆದರೆ ಅದನ್ನೆಲ್ಲ ನಮ್ಮ ಸದಸ್ಯರೇ ಸ್ವಯಂ ಪ್ರೇರಿತರಾಗಿ ಭರಿಸುತ್ತಿದ್ದಾರೆ (ಇಂತಹ ವ್ಯವಸ್ಥೆ ಎಲ್ಲಾದರೂ ಉಂಟೆ?). ನಮ್ಮ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು ಕೂಡ "ಆಡಿಟ್" (audit) ಮಾಡಿಯೇ ಪ್ರಕಟಿಸುತ್ತಿದ್ದೇವೆ. ನಮ್ಮ ಹಣಕಾಸು ವ್ಯವಹಾರ ಪಾರದರ್ಶಕವಾಗಿರಬೇಕೆಂಬುದು ನಮ್ಮ ಉದ್ದೇಶ.

ಇಂದು ನಮ್ಮ ಸಂಸ್ಥೆ 62 ಸದಸ್ಯಬಲವನ್ನು ಹೊಂದಿದ್ದು, ವಾರ್ಷಿಕ ರೂ. 10 ಲಕ್ಷ ವಹಿವಾಟು ನಡೆಸುವ ಅಂದಾಜಿದೆ. ಕ್ರಮೇಣ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಯೋಚಿಸುತ್ತಿದ್ದೇವೆ. ಕಳೆದ ವರ್ಷ ನೆಂಪಿನ ಶ್ರೀ ಗಣಪತಿ ದೇವಳದ ಮಾರ್ಗದಲ್ಲಿ ಎರಡು ಮಾರ್ಗಸೂಚಿ ಫಲಕಗಳನ್ನು ಕೊಡುಗೆಯಾಗಿ ನೀಡಿದೆ ಈ ಸಂಸ್ಥೆ. ಕೆಲವು ಸದಸ್ಯರು ಸೇರಿ ಪ್ರತಿವರ್ಷ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಪ್ರೋತ್ಸಾಹ ನೀಡುತ್ತಿದ್ದೇವೆ.

ಹೀಗೆ ನಮ್ಮ ಸದಸ್ಯರೇನಕರು ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಉತ್ತಮ ಹಿನ್ನೆಲೆ, ಚಾರಿತ್ರ್ಯ ಹೊಂದಿದ ಸದಸ್ಯರಿರುವುದರಿಂದಲೇ "ನೆಂಪು ಕ್ರೆಡಿಟ್ ಯೂನಿಯನ್" ಭರದಿಂದ ಯಶಸ್ಸು ಕಾಣುತ್ತಿದೆ. ಮುಂದೊಮ್ಮೆ ಬಹುದೊಡ್ಡ ಸಾಧನೆ ಮಾಡಲಿರುವ ಈ ಸಂಸ್ಥೆ ಶತಮಾನಗಳ ಕಾಲ ನಡೆಯಲಿ ಎಂಬುದೇ ನನ್ನ ಆಶಯ.

-- ನೆಂಪು ಕೃಷ್ಣ ಭಟ್

Friday, February 15, 2008

Sanchaara:: Kodachadri

ಕೊಡಚಾದ್ರಿಗೆ ಕಾಲ್ನಡಿಗೆ...

2003ರ ಡಿಸೆಂಬರ್ ತಿಂಗಳಲ್ಲಿ ನಾವೆಲ್ಲ ಒಟ್ಟಾಗಿ ನೆಂಪಿಗೆ ಸಮೀಪದಲ್ಲೇ ಇರುವ "ಕೊಡಚಾದ್ರಿ"ಗೆ ಚಾರಣ ಹೋಗಿತ್ತು. ನಾವೇನು ಟ್ರೆಕ್ಕಿಂಗ್ ಮಾಡಬೇಕು ಎಂಬ ಯೋಜನೆ ಹಾಕಿ ಹೊರಟಿರಲಿಲ್ಲ. ಟ್ರ್ಯಾಕ್ಸ್ ವಾಹನದಲ್ಲಿ ಕೊಡಚಾದ್ರಿಯ ಭಟ್ಟರ ಮನೆಯವರೆಗೆ ತಲುಪಿ, ಅಲ್ಲಿಂದ ನಡೆದುಕೊಂಡು ಮುಂದುವರಿಯುವ ಯೋಜನೆ ಹಾಕಿತ್ತು. ಆದರೆ ಮಳೆಯಿಂದ ಜರ್ಝರಿತಗೊಂಡಿದ್ದ ಕೊಡಚಾದ್ರಿಯ ಧೂಳು ತುಂಬಿದ ಕಲ್ಲು-ಮಣ್ಣಿನ ದಾರಿಯನ್ನು ಏರಲು ಆರಂಭದಲ್ಲೇ ವಿಫಲಗೊಂಡ ನಮ್ಮ ವಾಹನದ ದೆಸೆಯಿಂದ ಪ್ರವಾಸ ಚಾರಣವಾಗಿ ಮಾರ್ಪಟ್ಟಿತ್ತು

ನೆಂಪು ಕೃಷ್ಣ ಭಟ್ಟರು ತಿಳಿಹಾಸ್ಯ ಮಿಶ್ರಿತ ಶೈಲಿಯಲ್ಲಿ ನಮ್ಮ "ನೆನಪು" ಪತ್ರಿಕೆಗೆ ವರ್ಷಗಳ ಹಿಂದೆ ಬರೆದಿದ್ದ ಚಾರಣ ಪ್ರಸಂಗ ಈ ಸಂಚಾರ ಮಾಲಿಕೆಯಲ್ಲಿದೆ. ಬನ್ನಿ "ಕುಟಚಾದ್ರಿಗೆ.....!"


ಹಾಗೆಂದು ನಾವೇನೂ ನಡೆದೇ ಹೋದವರಲ್ಲ. ಹೆಸರಿಗೆ ವಾಹನವೊಂದಿತ್ತು. ಅದು ಮೇಲೆ ಹತ್ತಲು ಒಲ್ಲೆ ಅಂದದ್ದಕ್ಕೆ ನಾವು ಕಾಲಿಗೆ ಶರಣು ಹೇಳಿದೆವು. ಇಷ್ಟೊಂದು ಮಜಾ ಇರ್ತದೆ ಅಂತ ಮೊದಲೇ ತಿಳಿದಿದ್ದರೆ ಬಹುಶಃ ಇನ್ನೂ ಹಿಂದೆಯೇ ನಮ್ಮ ವಾಹನ ನಿಲ್ಲಿಸಬಹುದಿತ್ತು ಅಂತ ಅಂದ್ಕೊಂಡಿದ್ದು ಖಂಡಿತಾ ಸುಳ್ಳಲ್ಲ! ಇದು ನಡೆದದ್ದು 2003ರ ಕ್ರಿಸಮಸ್ ದಿನದಂದು.

ಅಂದು ಬೆಳಗಿನ ಜಾವದಲ್ಲೇ ಎದ್ದ ನಮ್ಮ ’ದಂಡು’ ಸ್ನಾನಾಹ್ನಿಕ ಮುಗಿಸಿ, ರಜಾಕನ ವಾಹನದಲ್ಲಿ ಸರ್ವಜ್ಞನ ಪೀಠ ನೋಡಲು ಕೊಡಚಾದ್ರಿಯತ್ತ ಹೊರಟಿತು. ಮೊದಲು ನಮ್ಮ ಭೇಟಿ ಕೊಡಚಾದ್ರಿ ಕಾಲ ಬುಡದಲ್ಲಿರುವ ಕೊಲ್ಲೂರಿಗೆ, ಅಲ್ಲೇ ಇದ್ದರು ನಮ್ಮ ಬಳಗದ ಪ್ರೆಸಿಡೆಂಟ್ರು......! ಐತಾಳರ ಮನೆಯಲ್ಲಿ ಬಿಸಿಬಿಸಿ ಚಪಾತಿ, ಮೊಸರನ್ನ ನಮ್ಮನ್ನೇ ಕಾದಿತ್ತು. ಅದನ್ನು ಹಾಗೂ ಅಧ್ಯಕ್ಷರನ್ನು ವಾಹನಕ್ಕೆ ಹಾಕಿಕೊಂಡು ಕೊಲ್ಲೂರು ಬಿಟ್ಟಾಗ ಗಂಟೆಯಾಗಿತ್ತು ಎಂಟು!

ಇನ್ನೇನು ನಿಟ್ಟೂರು ಬಂತು ಎನ್ನುವಾಗ ಕೆಲವರಿಗೆ ವಾಂತಿಯಾಗಬೇಕೆ! ಖಾಲಿ ಹೊಟ್ಟೆ ಪ್ರಭಾವ ಎಂದರು ನಮ್ಮ ಕೆಲವು ಪಂಡಿತರು! ಇರಬಹುದೇನೋ ಅಂದ್ರು ಉಳಿದವರು. ಒಟ್ಟಾರೆ ಈಗ ತಿಂಡಿ ಬೇಕು ಎಂಬ ಸೂಚನೆ ಎಲ್ಲರದು. ಯಾರಿಗೆ ಬೇಕಾದ್ರೂ ಇಲ್ಲ ಎನ್ನಬಹುದು, ಆದರೆ ಹೊಟ್ಟೆಗೆ ಮಾತ್ರ ಇಲ್ಲ ಎನ್ನಲು ಸಾಧ್ಯವಿಲ್ಲ ಅಲ್ಲವೆ? ಹಾಗೆಯೇ ನಿಟ್ಟೂರಿನ ಹೋಟೆಲೊಂದಕ್ಕೆ ನುಗ್ಗಿದೆವು. ಆ ಹೋಟೆಲಿನಲ್ಲಾದರೋ ಇದ್ದಿದ್ದೇ ಮೂರು ಮತ್ತೊಂದು ತಿಂಡಿ! ಪಾಲಿಗೆ ಬಂದದ್ದು ಪಂಚಾಮೃತ ಅಂತ ಗಬ ಗಬ ತಿಂದಾಗ ಹೋಟೆಲಿನ ಇಡ್ಲಿ, ಬನ್ಸ್ ಖಾಲಿಯಾಗಿದ್ದು ಮಾತ್ರ ನಿಜ ಎಂಬುದು ಎಲ್ಲರ ಅಂಬೋಣ. "ತಿಂದದ್ದು ಲೆಕ್ಕ ಇಡಬಾರದು" ಎಂಬ ಮಾತಿದ್ದರೂ ಕೂಡ ಆ ದಿನ ತಿಂದದ್ದನ್ನು ನಾವೇ ಲೆಕ್ಕಹಾಕಿ ಹಣಕೊಡಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ ಅಲ್ವೆ?

ನೋಡಿ, ಅಲ್ಲಿಯೇ ಮುಂದೆ ಇತ್ತು ಫಾರೆಸ್ಟ್ ಗೇಟು. ಇಲ್ಲೊಬ್ಬ ಸರಕಾರಿ ನೌಕರ ಕೂಡ ಇದ್ದ. ನಿಮ್ಮ ವಾಹನ ಮೇಲೆ ಹತ್ತೋದಿಲ್ಲ ಎಂದವನು "ಕೈ ಬೆಚ್ಚ"ಗಾದೊಡನೆ "ಹೋಗಿ ಹೋಗಿ" ಅಂದಿದ್ದು ನಮ್ಮ ಸರಕಾರೀ ಇಲಾಖೆಗಳ "ಕರ್ತವ್ಯ ಪರತೆ"ಗೆ ಸಾಕ್ಷಿಯಾಗಿತ್ತು. ಆದರೆ ನಮಗೆ ಬೇಕಾಗಿದ್ದೂ ಅದೇ. ಇಲ್ದೇ ಹೋಗಿದ್ರೆ ಅಲ್ಲೇ ತಿರುಗಿ ವಾಪಾಸು ಬರಬೇಕಿತ್ತು, ಮನೆಗೆ!


ಅಂಕು ಡೊಂಕು ರಸ್ತೆಯಲ್ಲಿ ಧೂಳು ರಾಶಿ ಮಧ್ಯದಲ್ಲಿ ಡಿಸ್ಕೋ ನಾಟ್ಯ ಮಾಡುತ್ತಾ ವಾಹನ ಸಾಗಿದಾಗ ಕೆಲವರ ಕೈ ಎದೆ ಮೇಲಿತ್ತು. ಹೀಗೆಯೇ ಪಯಣ ಸಾಗಿತ್ತು ಬಹಳ ದೂರ. ಹಲವಾರು ಅಪಾಯಕಾರೀ ತಿರುವುಗಳನ್ನು ದಾಟುವಾಗ ಮೈ ಜುಂ ಎಂದಿದ್ದು ನಿಜ ಅಂತ ಎಲ್ಲರೂ ಅನ್ನುತ್ತಿದ್ದರು. ಇದಕ್ಕಿಂತ ಕಾಲ್ನಡಿಗೆಯೇ ಒಳ್ಳೆದಿತ್ತೇನೋ ಅಂದ್ರು ಒಬ್ಬರು. ಅದಕ್ಕೆ ಕೂಡಲೇ ಎಲ್ಲರ ಒಪ್ಪಿಗೆಯೂ ಸಿಕ್ಕಿತು! ವಾಹನವನ್ನು ಅಲ್ಲೇ ರಸ್ತೆ(!?) ಬದಿಯಲ್ಲಿ ನಿಲ್ಲಿಸಿ ಎಲ್ಲರೂ ಕಾಲ್ನಡಿಗೆ ಆರಂಭಿಸಿದೆವು ಲಗ್ಗೇಜು (ಚಪಾತಿ, ಮೊಸರನ್ನ) ಹೊತ್ತು. ನಮ್ಮ ತಂಡದಲ್ಲಿ ಮೂವರು ಮಹಿಳಾಮಣಿಗಳು ಇದ್ದರೂ ಕೂಡ ನಡೆಯಲು ಹಿಂದೇಟು ಹಾಕಲಿಲ್ಲ. ಇನ್ನೇನು ಹತ್ತು ಹೆಜ್ಜೆ ನಡೆದಿಲ್ಲ, ಆಗಲೇ ಒಬ್ಬರು ಅಂದ್ರು "ಬಾಳೆಹಣ್ಣು ಕೊಡ್ರೋ, ಕಿತ್ತಳೆಹಣ್ಣು ಕೊಡ್ರೋ" ಅಂತ! "ಹೌದಪ್ಪಾ, ಲಗ್ಗೇಜಾದ್ರೂ ಕಡಿಮೆಯಾಗ್ತದೆ, ತಿಂದೇಬಿಡೋಣ" ಅಂದ್ರು ಇನ್ನುಳಿದವರು. ಆದ್ರೆ ಲಗ್ಗೇಜು ಎಲ್ಲಿ ಹೋಯ್ತು? ಚೀಲದಿಂದ ಹೊಟ್ಟೆಗೆ! ಚೀಲದ ಭಾರ ಹೋಗಿ ಹೊಟ್ಟೆ ಭಾರ ಆಯ್ತು ಅಷ್ಟೆ!

ಆಚೀಚೆ ಗುಡ್ಡ, ಕಾಡು, ತೊರೆಗಳ ಸೌಂದರ್ಯ ಸವಿಯುತ್ತಾ, ತಿಂಡಿ ತೀರ್ಥ ಹೀರುತ್ತಾ ಸರ್ವಜ್ಞ ಪೀಠ ತಲುಪಿದಾಗ ಗಂಟೆ ಹೊಡೆದಿತ್ತು ಹನ್ನೆರಡು. ಆಶ್ಚರ್ಯ ಅಂದ್ರೆ ಇಲ್ಲಿಯೂ ಮೊಬೈಲ್ ಮಾತನಾಡಿದ್ದು. ಆದ್ರೆ ನಮ್ಮ ಗುರಿ ಇದ್ದದ್ದು "ಚಿತ್ರಮೂಲ". ಸರ್ವಜ್ಞ ಪೀಠದಿಂದ ನೆಟ್ಟಗೆ ಕೆಳಗುರುಳಿದರೆ ಸಿಗುತ್ತದೆ ಚಿತ್ರಮೂಲ. ಹಾಗೆಂದು ಉರುಳುವ ಹಾಗಿಲ್ಲ! ಆ ಕಡೆ ನೋಡ್ತಾ ಇದ್ರೆ ಈ ಕಡೆ ಕಾಲು ಜಾರುತ್ತೆ. ಆಧಾರಕ್ಕೆ ಬಳ್ಳಿ ಹಿಡಿದಿರೋ, ಅದರಲ್ಲೆಲ್ಲ ಮುಳ್ಳುಗಳೇ ಇದ್ದವು. ಇಲ್ಲಿ ನಡೆದಿದ್ದೇ ಕಮ್ಮಿ, ಜಾರಿದ್ದೇ ಜಾಸ್ತಿ. ಜಾರುತ್ತ, ಹಾರುತ್ತಾ, ಸ್ವಲ್ಪ ಸ್ವಲ್ಪ ನಡೆಯುತ್ತಾ ಕೆಳಕೆಳಗೆ ಸರಿಯುತ್ತ ಕೊನೆಗೆ ತಲುಪಿದ್ದೇ ಚಿತ್ರಮೂಲ.


ಇಲ್ಲಿ ನಿಂತು ಸುತ್ತಮುತ್ತ ನೋಡಿದರೆ ದಿಗಿಲು ಹುಟ್ಟುತ್ತದೆ. ಕೆಳಗೆ ನೋಡಿದರೆ ತಲೆ ತಿರುಗುತ್ತದೆ. ಆದರೆ ಇಲ್ಲಿಯ ನೀರು ಮಾತ್ರ ಪ್ರಕೃತಿ ನಿರ್ಮಿತ ರೆಫ್ರಿಜರೇಟರಿನಲ್ಲಿಟ್ಟಂತಿತ್ತು. ಆಗಲೇ ಹೊಟ್ಟೆ ಚುರುಗುಟ್ಟುತ್ತಿತ್ತು. ಮೊಸರನ್ನದ ಪರಿಮಳವೂ ಎಚ್ಚರಿಸುತ್ತಿತ್ತು. ತಡವೇಕೆ ಇನ್ನು ಎಂದು ಸಾಲು ಹಿಡಿದು ಕುಳಿತೇ ಬಿಟ್ಟರು ನಮ್ಮ ತಂಡದ ಸದಸ್ಯರು. ನಾಲ್ಕು ದಿನಕ್ಕಾಗುವಷ್ಟು ತಿಂದರೋ ಏನೋ, ಯಾರಿಗೂ ಗೊತ್ತೇ ಆಗಲಿಲ್ಲ. ರುಚಿರುಚಿಯಾದ ಮೊಸರನ್ನ, ಚಪಾತಿ ಕೂರ್ಮ ವ್ಯವಸ್ಥೆಗೊಳಿಸಿದ ಕೊಲ್ಲೂರು ಶ್ರೀನಿವಾಸ ಭಟ್ಟರಿಗೂ, ಐತಾಳರಿಗೂ ಮನಸಾರೆ ವಂದಿಸಿದೆವು. ತಣ್ಣಗಿನ ನೀರಲ್ಲಿ ಲಿಂಬೆ ಶರಬತ್ತು ಮಾಡಿ ಕುಡಿದಾಗ ಅಮೃತಪಾನ ಸವಿದಂತಾಯ್ತು.

ಈಗ ಶುರುವಾಯ್ತು ನೋಡಿ ಗುಡ್ಡ ಹತ್ತುವ ಚಿಂತೆ! ಒಂದು ಕಡೆ ಹೊಟ್ಟೆ ಭಾರ, ಇನ್ನೊಂದು ಕಡೆ ಸುಸ್ತಾದ ಅನುಭವ. ಆದ್ರೆ ವಾಪಾಸ್ ಹೋಗ್ಲೇ ಬೇಕಲ್ಲ. ಹೊರಟೇ ಬಿಟ್ಟೆವು. ಅಂತೂ ವಾಪಾಸು ಸರ್ವಜ್ಞ ಪೀಠ ತಲುಪಿದಾಗ ಎಲ್ಲರಿಗೂ ಪುನರ್ಜನ್ಮ ಪಡೆದಂತಾಗಿತ್ತು. ಸೂರ್ಯನಿಗೂ ಸುಸ್ತಾಗಿದೆ... ಬಿಸಿಲ ಝಳ ತಗ್ಗಿದೆ... ತಣ್ಣನೆ ಗಾಳಿ ಹೊಂಚು ಹಾಕಿದೆ... ನಾವೆಲ್ಲ ಸರ್ವಜ್ಞ ಪೀಠದಲ್ಲಿ ಒಂಧ್ಹತ್ತು ನಿಮಿಷ ವಿಶ್ರಾಂತಿ ಬಯಸಿದೆವು. ವಿರಳ ಮೋಡಗಳ ಸಂಧಿಯಿಂದ ಸೂರ್ಯ ಕಿರಣ ಭೂಮಿಗೆ ಬರುವ ದೃಶ್ಯ ಮನೋಹರವಾಗಿತ್ತು. ನೆರಳು ಬೆಳಕಿನಾಟ ಮನಮೋಹಕವಾಗಿತ್ತು. ಕೆಲೆವೆಡೆ ಹಸಿರು, ಉಳಿದೆಡೆ ಬೋಳು ಗುಡ್ಡಗಳು ಭತ್ತದ ರಾಶಿಯಂತೆ ಕಂಗೊಳಿಸುತ್ತಿದ್ದವು. ಸಾಟಿಯುಂಟೇ ಪ್ರಕೃತಿ ಸೌಂದರ್ಯಕ್ಕೆ? ಮನಸಾರೇ ಸವಿದೆವು.

ಇಳಿಯುತ್ತಿಳಿಯುತ್ತಾ ತಲುಪಿದ್ದು "ಅಗಸ್ತ್ಯ ತೀರ್ಥ"ಕ್ಕೆ. ಅಂಜುತ್ತಂಜುತ್ತಲೇ ತಲೆಕೊಟ್ಟಾಗ ಮೈ ಜುಂ ಎಂದಿತು. ಅಷ್ಟೊಂದು ತಣ್ಣಗಿತ್ತು ಆ ನೀರು! ಒಬ್ಬೊಬ್ಬರಂತೆ ಎಲ್ಲರೂ ನೀರಲ್ಲಿ ಹೊರಳಾಡಿ ಎದ್ದಾಗ ನಡೆದ ಸುಸ್ತು ಕ್ಷಣಾರ್ಧದಲ್ಲಿ ಮಾಯವಾಗಿತ್ತು. ಹೊಸ ಹುರುಪಿನೊಂದಿಗೆ ಹೆಜ್ಜೆ ಹಾಕುತ್ತಾ ನಡೆದೆವು ನಮ್ಮ ವಾಹನವಿದ್ದಲ್ಲಿಗೆ (ಸುಮಾರು 4-5 ಕಿ.ಮೀ).

ಕೊಲ್ಲೂರಲ್ಲಿ ಐಸ್ ಕ್ರೀಂ ತಿಂದು ಪ್ರವಾಸಕ್ಕೆ ಮಂಗಳಹಾಡಿದಾಗ ರಾತ್ರಿ ಗಂಟೆ ಏಳಾಗಿತ್ತು. ಇಡೀ ಹನ್ನೆರಡು ಗಂಟೆ ಪ್ರವಾಸದಲ್ಲಿ ನಾವು ನೋಡಿದ್ದಾದ್ರೂ ಏನು? ಗುಡ್ಡ ಹತ್ತಿ-ಇಳಿದು ಸಾಧಿಸಿದ್ದಾದ್ರೂ ಏನು? ಸರ್ವಜ್ಞ ಪೀಠ, ಚಿತ್ರಮೂಲದಲ್ಲಿ ನೋಡುವಂಥಾದ್ದೇನಿದೆ? ಅಂತೆಲ್ಲ ಕೇಳಿದ್ರೆ ಖಂಡಿತಾ ಉತ್ತರ ನಮ್ಮ ಬಳಿ ಇಲ್ಲ. ಗಾಡಿ ಹಳೇದಾದಾಗ ’ಸರ್ವಿಸ್’ ಮಾಡಬೇಕು. ಹಾಗೇ ಜಡ ಮನಸ್ಸು ಉಲ್ಲಸಿತವಾಗಲು ಇಂತಹ ಪ್ರಕೃತಿ ಸೌಂದರ್ಯದ ಸವಿಯುಣ್ಣಬೇಕಾಗುತ್ತದೆ. ನಮ್ಮ ಯಾಂತ್ರಿಕ ಜೀವನದಲ್ಲಿನ ಬೇಸರ ನೀಗಿಸಲು, ಜೀವನೋತ್ಸಾಹ ಮೂಡಿಸಲು ಇಂಥದ್ದೆಲ್ಲ ಅಗತ್ಯ ಬೇಕಾಗುತ್ತದೆ.

-- ನೆಂಪು ಕೃಷ್ಣ ಭಟ್

Monday, February 11, 2008

Nenapina Buttiyinda:: Halasina happala

ಹಪ್ಪಳಪ್ಪಳಪ್ಪಳೋ... ...

ನಾನು ಚಿಕ್ಕವನಿದ್ದಾಗ ಅಪ್ಪಯ್ಯ ನನ್ನನ್ನುದ್ದೇಶಿಸಿ ತಾವೇ ರಚಿಸಿದ ಶಿಶುಗೀತೆಯನ್ನ ಯಾವತ್ತೂ ಹೇಳುತ್ತಿದ್ದರು (ತಿಂಡಿಪೋತನಾಗಿದ್ದ ನಾನು ಹಪ್ಪಳದ ಹಿಟ್ಟು, ಹಸಿ ಹಪ್ಪಳ ಕದ್ದು ತಿನ್ನುತ್ತಿದ್ದುದರಿಂದ ಇರಬೇಕು). ಕುಂದಾಪುರ ಕನ್ನಡದ ಸೊಗಡನ್ನು ಹೊಂದಿರುವ, ಅಲ್ಲಿನ ವಿಶೇಷವಾದ ಹಲಸಿನ ಕಾಯಿ ಹಪ್ಪಳಕ್ಕೆ ಸಂಬಂಧಿಸಿದ ಈ ಪದ್ಯ ಈಗಲೂ ನೆನಪಾಗಿ ಮುದ ನೀಡುತ್ತಿರುತ್ತದೆ. ಹಪ್ಪಳದ ರುಚಿ ಹೊತ್ತಿರುವ ಪದ್ಯದ ರುಚಿಯನ್ನ ನೀವೂ ಆಸ್ವಾದಿಸಿ!

ಹಪ್ಪಳಪ್ಪಳಪ್ಪಳೋ

ಹಲ್ಸಿನ್ ಕಾಯ್ ಹಪ್ಪಳೋ

ತಿಂದದ್ಯಾಕೆ ಹಪ್ಪಳೋ

ಪೆಟ್ ಕೊಡ್ತೀನ್ ತಾಳೋ...!

ಪ್ರಾಸಬದ್ಧವಾಗಿರುವ ಈ ಪದ್ಯ ವಿಶೇಷವಾದ ಅರ್ಥವನ್ನು ಹೊಂದಿರದಿದ್ದರೂ ಚಿಕ್ಕ ಮಕ್ಕಳ ತೊದಲ್ನುಡಿಯಲ್ಲಿ ಹೊರಬಂದಾಗ ಪದ್ಯದ ಎಫೆಕ್ಟೇ ಬೇರೆ! ಅಪ್ಪಯ್ಯ ಮಕ್ಕಳ ತೊದಲ್ನುಡಿಯ ಅನುಕರಣೆಯಲ್ಲಿ ಹೇಳಿಕೊಡುತ್ತಿದ್ದ ’ಹಪ್ಪಳಪ್ಪಳಪ್ಪಳೋ...’ ಈಗಲೂ ಕಿವಿಯಲ್ಲಿ ಗುನುಗುನಿಸುತ್ತಿರುತ್ತದೆ! ಫೆಬ್ರವರಿ - ಮಾರ್ಚ್ ತಿಂಗಳ ಅಂತ್ಯಕ್ಕೆ ನೆಂಪಿನಲ್ಲಿ ಆರಂಭವಾಗುತ್ತಿದ್ದ ಸೂರ್ಯ ಬಕ್ಕೆ, ಚಂದ್ರ ಬಕ್ಕೆ ಹಲಸಿನಕಾಯಿ ಹಪ್ಪಳ ತಯಾರಿಕೆಯ ಸಂಭ್ರಮದ ನೆನಪು ಕಾಡಲಾರಂಭಿಸುತ್ತದೆ!

Thursday, January 31, 2008

Sanchara:: Hampi - Hospet ~ part 3

ಹಂಪಿ - ಹೊಸಪೇಟೆ



ಮಹಾನವಮಿ ದಿಬ್ಬದಿಂದ ಹೊರಬಂದು, ದಾರಿಯಲ್ಲಿ ಹಜಾರ ರಾಮ ದೇವಸ್ಥಾನ, ಮತ್ತಷ್ಟು ದೇವಾಲಯಗಳು, ಅರಮನೆಗಳ ಅವಶೇಷಗಳನ್ನು ನೋಡಿಕೊಂಡು, ಕ್ಯಾಮರಾ ಕಣ್ಣಲ್ಲೂ ತುಂಬಿಕೊಂಡು ಕೊನೆಗೆ ಬಂದದ್ದು ಕಲ್ಲಿನ ರಥದಿಂದ ಪ್ರಸಿದ್ಧಿಗೆ ಬಂದ "ವಿಠ್ಠಲ ದೇವಸ್ಥಾನ"ಕ್ಕೆ. ಬಹುಶಃ ಶಿಲ್ಪಕಲೆಯ ಉಚ್ಛ್ರಾಯ ಕಾಲದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಯಿತು. ಹಂಪಿಯ ಎಲ್ಲಾ ಕಲಾಕೃತಿಗಳನ್ನು ಮೀರಿ ವಿಠ್ಠಲ ದೇವಸ್ಥಾನದ ಕೆತ್ತನೆಗಳು ನಿಲ್ಲುತ್ತವೆ. ಕಲಾಕಾರರ imaginationಗೆ ನಮೋ ಎನ್ನಲೇಬೇಕು. ಮಹಾವಿಷ್ಣುವನ್ನು ಪೂಜಿಸಲಾಗುತ್ತಿದ್ದ ಈ ದೇವಸ್ಥಾನದ ಪರಿಸರವು ದೊಡ್ಡ ಗೋಡೆಗಳಿಂದ ಸುತ್ತುವರಿದಿದೆ. ಹಲವಾರು ಮಂಟಪಗಳ, ದೇಗುಲಗಳ ಸಮೂಹವೇ ಈ ವಿಠ್ಠಲ ದೇವಸ್ಥಾನ. ವೀಕ್ಷಕರು ಒಳಪ್ರವೇಶಿಸಲು ಟಿಕೆಟ್ ಕರೀದಿಸಬೇಕು. ಛಿದ್ರಗೊಂಡಿರುವ ಹೆಬ್ಬಾಗಿಲ ಗೋಪುರ ನಮ್ಮನ್ನು ಸ್ವಾಗತಿಸುತ್ತದೆ. ಒಳಬಂದರೆ ಎದುರಿಗೆ ಸಿಗುವುದೇ ಪ್ರಸಿದ್ಧ "ಕಲ್ಲಿನ ರಥ". ನೈಜ ರಥಕ್ಕಿಂತಲೂ ಸುಂದರವಾಗಿದೆ ಈ ಕಲ್ಲಿನ ರಥ. ನಾಲ್ಕು ಕಡೆಗಳಲ್ಲೂ ಬಗೆಬಗೆಯ ಸೂಕ್ಷ್ಮ ಕೆತ್ತನೆಗಳಿಂದ ರಥ ಸಿಂಗಾರಗೊಂಡಿದೆ. ನಾಲ್ಕು ದೊಡ್ಡ ಕಲ್ಲಿನ ಚಕ್ರಗಳೂ ರಥಕ್ಕಿದೆ. ಅದೆಷ್ಟೋ ವರ್ಷಗಳಿಂದ ಬಿಸಿಲು-ಮಳೆಗೆ ತನ್ನ ಮೈಯೊಡ್ಡಿದ್ದರೂ ರಥದ ಸುಕ್ಷ್ಮಾತಿಸೂಕ್ಷ್ಮ ಕುಸುರಿ ಕೆಲಸಗಳು ಇನ್ನೂ ಸ್ಪಷ್ಟವಾಗಿವೆ.



ಇದರ ಎದುರಿಗೇ ಇರುವುದು ಮಹಾಮಂಟಪ. ಇಲ್ಲಿನ ಗೋಡೆ, ಕಂಬಗಳ ಮೇಲೆ ಪುರಾಣಕಥೆಗಳ ಚಿತ್ರಣವನ್ನು ಸುಂದರವಾಗಿ ಮೂಡಿಸಲಾಗಿದೆ. ಮಂಟಪದ ಸುತ್ತಲೂ ಇರುವ ಆಧಾರಸ್ತಂಭಗಳಲ್ಲಿ ಸಪ್ತಸ್ವರ ಹೊಮ್ಮಿಸುವ ಕಂಬಗಳನ್ನು ಕಾಣಬಹುದು. ಮಹಾಮಂಟಪದ ಪಕ್ಕದಲ್ಲೇ ಇರುವ ಮಂಟಪದಲ್ಲಿ ಸಂಗೀತ, ನಾಟ್ಯಕ್ಕೆ ಸಂಬಂಧಿಸಿದ ಕೆತ್ತನೆಗಳು ತುಂಬಿಕೊಂಡಿವೆ. ಹಿಂಬದಿಯ ಮಂಟಪದಲ್ಲಿ ಮಹಾವಿಷ್ಣುವು ನರಸಿಂಹಾವತಾರದಲ್ಲಿ ಹಿರಣ್ಯಕಶಿಪುವನ್ನು ವಧಿಸುತ್ತಿರುವ, ಪಕ್ಕದಲ್ಲೇ ಪ್ರಹ್ಲಾದ ವಿಷ್ಣುವಿಗೆ ನಮಿಸುತ್ತಿರುವ ಕೆತ್ತನೆ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ಮೇಲ್ಛಾವಣಿಯೂ ಅರಳಿದ ಕಮಲದ ಹೂವಿನ ಕಲ್ಪನೆ ಹುಟ್ಟಿಸುವಂತೆ ಸಿಂಗಾರಗೊಂಡಿದೆ. ಇಲ್ಲಿನ ಮತ್ತೊಂದು ವಿಶೇಷ 100ಕ್ಕೂ ಮಿಕ್ಕಿ ಕಂಬಗಳಿಂದ ರಚಿಸಲ್ಪಟ್ಟಿರುವ ಕಲ್ಯಾಣ ಮಂಟಪ. ಹೀಗೆ ಹಲವು ವೈಶಿಷ್ಟ್ಯಗಳ ಆಗರ ಈ ವಿಠ್ಠಲ ದೇವಸ್ಥಾನ. ಹಲವೆಡೆ ಭಗ್ನಗೊಂಡಿರುವ ದೇವಳ ಪರಿಸರದಲ್ಲಿ ಈಗ ಪೂಜಾವಿಧಿಗಳು ನಡೆಯುತ್ತಿಲ್ಲ...!



ಸಮಯ ಅದಾಗಲೇ ಅಪರಾಹ್ನ ಕಳೆದಿತ್ತು. ನಮ್ಮ ಗೈಡ್ ಹಂಪಿಯ ಮುಖ್ಯ ಸ್ಥಳಗಳನ್ನು ನಮಗೆ ತೋರಿಸಿ, ಅವುಗಳ ಬಗ್ಗೆ ಸಾಕಷ್ಟು ವಿವರಣೆ ನೀಡಿ, ನಮಗೆ bye ಹೇಳಿದ್ದ. ನಮ್ಮೆಲ್ಲರ ಹೊಟ್ಟೆ ಹಸಿಯುತ್ತಿತ್ತು, ಆದರೆ ಕ್ಯಾಮರಾ ಫೋಟೊಗಳಿಂದ ತುಂಬಿತುಳುಕುತ್ತಾ ತನ್ನ ಹಸಿವನ್ನು ನೀಗಿಸಿಕೊಂಡಿತ್ತು! ಹಂಪಿಯ ಊಟದ ಹೋಟೆಲುಗಳು ಸರಿಕಾಣದ್ದರಿಂದ ಪುನಃ ಹೊಸಪೇಟೆಗೆ ಬಂದು, ಊಟ ಮುಗಿಸಿ, ಮುಂದಿನ ಹಂತವಾಗಿ ಹಂಪಿ ಕನ್ನಡ ಯೂನಿವರ್ಸಿಟಿಯತ್ತ ನಮ್ಮ ಪ್ರಯಾಣ ಬೆಳೆಸಿದೆವು. ನಮ್ಮ ಹೆಗ್ಗೋಡು ಭಾವ (ಶ್ರೀ ವೆಂಕಟರಮಣ ಐತಾಳರು) ನಮಗೆ ಹಂಪಿಯ ಬಗ್ಗೆ ಹಲವಾರು ಮಾಹಿತಿಯೊದಗಿಸಿದರು, ಯೂನಿವರ್ಸಿಟಿಗೂ ಕರೆದೊಯ್ದರು.


ಹಂಪಿ ಕನ್ನಡ ವಿಶ್ವವಿದ್ಯಾಲಯ ಕಮಲಾಪುರ ಸಮೀಪ ಪ್ರಶಾಂತ ಪರಿಸರದಲ್ಲಿದೆ. ಶ್ರೀ ಚಂದ್ರಶೇಖರ ಕಂಬಾರರು ಇಲ್ಲಿಯ ನೇತೃತ್ವ ವಹಿಸಿದ್ದಾಗ ಸಾಕಷ್ಟು ಅಭಿವೃದ್ಧಿ ಹೊಂದಿತು. ಕನ್ನಡಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳು, ಹೊತ್ತಗೆಗಳು, ಜಾನಪದ ಸೊಗಡನ್ನು ಸಾರುವ ಕಲಾಕೃತಿಗಳು, ಕರಕುಶಲ ವಸ್ತುಗಳ ಸಂಗ್ರಹಾಲಯವೇ ಇಲ್ಲಿದೆ.


ಕೆರೆದಂಡೆಯಲ್ಲಿರುವ "ಅಂಫಿ ಥಿಯೇಟರ್" ಪರಿಸರ ತುಂಬಾ ಖುಶಿಕೊಡುತ್ತದೆ. ಸಂಜೆಯ ಹೊತ್ತನ್ನು ಶಾಂತವಾಗಿ ಕಳೆಯಲು ಹೇಳಿಮಾಡಿಸಿದ ಜಾಗ. ಆದರೆ ಈಗ ಯಾಕೋ ಅಬಿವೃದ್ಧಿ ಕಾಣದೆ ಮೂಲೆಗುಂಪಾದಂತೆ ಕಂಡಿತು! ವಿರಾಮದ ಬಳಿಕ, ಕ್ಯಾಂಪಸ್ ಗೆ ಒಂದು ಸುತ್ತು ಹೊಡೆದು ಪುನ: ನಾವು ಹೊರಟದ್ದು ಹಂಪೆಗೆ.

ಹೆಚ್ಚಿನವರು ಹಂಪಿ ಬಝಾರಿಗೆ ಶಾಪಿಂಗ್ ಹೊರಟರು. ನಾವೊಂದು 4-5 ಹುಡುಗರು ಹೇಮಕುಟ ಗುಡ್ಡ ಹತ್ತಿ ನಿರ್ಜನವಾದ ವಿಜಯನಗರದ ಹೆಬ್ಬಾಗಿಲಲ್ಲಿ ಸೂರ್ಯಾಸ್ತ ವೀಕ್ಷಿಸಲು ಕುಳಿತೆವು. ಆದರೆ ಬೆಳಿಗ್ಗೆಯಿಂದ ಬಿಸಿಲ ಧಗೆಯಿಂದ ನಮ್ಮನ್ನು ರಕ್ಷಿಸಿದ್ದ ಮೋಡಗಳು ಸೂರ್ಯಾಸ್ತಕ್ಕೆ ಅಡ್ಡಿಯಾದವು!! ಎತ್ತರದ ನಿರ್ಜನ ಜಾಗ, ಬೀಸುತ್ತಿದ್ದ ಗಾಳಿ, ತಂಪಾದ-ನಿಶ್ಶಬ್ಧ ವಾತಾವರಣ, ಆಕಾಶದಲ್ಲಿ ಮೋಡಗಳಿಂದಾದ ಚಿತ್ತಾರ... ಆ ಕ್ಷಣ ತುಂಬಾ ತುಂಬಾ ಹಿತವೆನಿಸಿತು, ಮನದ ಕ್ಲೇಷ-ದುಗುಡಗಳೆಲ್ಲ ಹೊರಬಂದು, ಮನಸ್ಸು ಹಗುರಾಗಿ, ಆಕಾಶದಲ್ಲಿ ಹಾರುತ್ತಿದ್ದ ಹಕ್ಕಿಗಳೊಂದಿಗೆ ನಾನೂ ಹಾರಬೇಕೆನಿಸಿತು! ವಾಸ್ತವಕ್ಕೆ ಬಂದು, ಹಂಪಿಯ ಬಗ್ಗೆ ನನಗೆ ನಾನೇ ಕೇಳಿಕೊಂಡಾಗ "ಕಾಡಲ್ಲಿ ಹುಟ್ಟಿದ ಒಂದು ಸಣ್ಣ ತೃಣವು ಬೆಳೆಯುತ್ತಾ ಬೆಳೆಯುತ್ತಾ ಗಿಡವಾಗಿ, ಮರವಾಗಿ ತನ್ನನ್ನು ತಾನೇ ಪೋಷಿಸಿಕೊಂಡು, ತನ್ನ ರೆಂಬೆ-ಕೊಂಬೆಗಳನ್ನು ಎಲ್ಲೆಡೆ ಚಾಚಿಕೊಂಡು ಬೃಹತ್ ವೃಕ್ಷವಾಗಿ ಹಲವಾರು ವರ್ಷ ತಲೆಯೆತ್ತಿ ನಿಂತು, ಬಳಿಕ ಕಾಲನ ಸೆರೆಗೆ ಸಿಕ್ಕು ತನ್ನೆಲ್ಲಾ ಅವಯವಗಳನ್ನು ಒಂದೊಂದಾಗಿ ಕಳೆದುಕೊಳ್ಳುತ್ತಾ ಕೊನೆಗೆ ಬರಿಯ ಅವಶೇಷವಾಗಿ ನಿಂತ ಒಣಮರದಂತೆ" ಕಂಡಿತು!

ಅದಾಗಲೇ ಶನಿವಾರದ ಸೂರ್ಯ ನಮಗೆ ಮೋಡದ ಮರೆಯಲ್ಲೇ ಗುಡ್ ಬೈ ಹೇಳಿದ್ದ. ಶಾಪಿಂಗ್ ಇತ್ಯಾದಿ ಮುಗಿಸಿ, ಹೊಸಪೇಟೆಗೆ ಬಂದು, ಗಿರೀಶ್ ರವರ ಮನೆಗೆ ಭೇಟಿ ಕೊಟ್ಟು, ಆತಿಥ್ಯ ಸ್ವೀಕರಿಸಿ ಪುನ: ನಮ್ಮ ಗೂಡು T.B. Dam ಸೇರಿದಾಗ ಗಂಟೆ 8.30 ತೋರಿಸುತ್ತಿತ್ತು. ಬಯಲುಸೀಮೆಯಿಂದ ಸೀದಾ ಕಡಲತಡಿಗೆ!... ಅಲೆಗಳ ಭೋರ್ಗರೆತ ಕಿವಿಗಪ್ಪಳಿಸುತ್ತಿತ್ತು. ಗಾಳಿಯೂ ತಾನೇನು ಕಮ್ಮಿಯಿಲ್ಲ ಎಂದು ತೆರೆಗಳೊಂದಿಗೆ ಪೈಪೋಟಿಗಿಳಿದಿತ್ತು. ಊಟ ಮುಗಿಸಿ Dam ದಂಡೆಯಲ್ಲಿ ಎಲ್ಲರ ಜೊತೆ ಒಂದು walk ಹೋದಾಗ ಏನೋ ಒಂದು ವರ್ಣನಾತೀತ ಆನಂದ, ಸಾರ್ಥಕ ದಿನವೆನಿಸಿತು! ಹಾಸಿಗೆಗೊರಗಿ ಕಣ್ಮುಚ್ಚಿದಾಗ ಅದೇ ಹಂಪಿಯ ಕಲ್ಲುಗಳು ಮನಃತುಂಬಾ, ಕಲ್ಲುಗಳು ನಿಜಕ್ಕೂ ಕಥೆ ಹೇಳುತ್ತವೆ ಎನಿಸಿತು!


ಮರುದಿನ, ಸೆ. 2 ಆದಿತ್ಯವಾರ... ಮತ್ತಷ್ಟು ವಿಶೇಷಗಳು ನಮಗೆ ಕಾದಿತ್ತು. ಹಂಪಿಯ ಮುಖ್ಯ ಸ್ಥಳಗಳನ್ನು ಅದಾಗಲೇ ಕಂಡಿದ್ದರಿಂದ, ಬೇರೇನೂ ಯೋಜನೆ ಹಾಕಿಕೊಳ್ಳದೇ ವಾಪಸ್ ಹೊರಡುವ ಯೋಜನೆ ಹಾಕುತ್ತಿತ್ತು. ಆದರೆ "T.B. Dam ಪರಿಸರವನ್ನೂ ನೋಡಿ ಬನ್ನಿ, ಖಂಡಿತಾ ನಿಮಗಿಷ್ಟವಾಗುತ್ತದೆ" ಎಂದ ಗಿರೀಶ್ ತಮ್ಮ ಸಹಾಯಕರೊಬ್ಬರನ್ನು ನಮ್ಮ ಜೊತೆ ಕಳುಹಿಸಿದರು. ಎಲ್ಲರೂ ಲಗುಬಗೆಯಿಂದ ಸಿದ್ಧಗೊಂಡು Dam ಗೊಂದು ಸುತ್ತು ಹೊಡೆಯಲು ಟ್ರಾವಲರ್ ಏರಿದೆವು. ಸಮೀಪದಲ್ಲೇ ಇರುವ ಡ್ಯಾಂ ನ ಮುಖ್ಯದ್ವಾರ ಪ್ರವೇಶಿಸಿದಾಗ ವರ್ಣಿಸಲಾಗದ ಆನಂದ. ತುಂಬಿತುಳುಕುತ್ತಿರುವ ತುಂಗಭದ್ರಾ ಅಣೆಕಟ್ಟಿನ ಎಲ್ಲಾ ಗೇಟ್ ಗಳಿಂದಲೂ ನೀರು ಹೊರಹೋಗುತ್ತಿತ್ತು. ಅದರಲ್ಲೂ 3 ಗೇಟ್ ಗಳನ್ನು ಸಂಪೂರ್ಣ ತೆರೆದಿದ್ದರಿಂದ ನೀರು ಭೋರ್ಗರೆಯುತ್ತಾ ಹೊರಹೋಗುತ್ತಿತ್ತು. ಗೇಟ್ ನ ತಲೆಯ ಮೇಲೆ ನಿಂತು ರಭಸದಲ್ಲಿ ಹೊರಹೋಗುತ್ತಿರುವ ನೀರನ್ನು ನೋಡಿದಾಗ ಒಂದು ಕ್ಷಣ ತಲೆಸುತ್ತು ಬಂದು, ಎಲ್ಲಿ ನಾವೂ ನೀರಲ್ಲಿ ಸೇರಿಬಿಡುತ್ತೇವೋ ಎಂಬ ಭಯ!

ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಡ್ಯಾಂ ನ ಮುಖ್ಯದ್ವಾರ ಪ್ರವೇಶಿಸಲು ಅನುಮತಿ ಇಲ್ಲ. ನಮಗೆ ಮೊದಲೇ ಅನುಮತಿ ದೊರೆತಿದ್ದರಿಂದ, T.B. Dam ಪ್ರವೇಶಿಸುವ, ಸೇತುವೆಯ ಮೇಲೆ ನಡೆದಾಡುವ, ನೀರು ಹೊರಹೊಗುತ್ತಿರುವುದನ್ನು ಸಮೀಪದಿಂದ ನೋಡುವ ಅವಕಾಶ ಸಿಕ್ಕಿತು. ಸ್ವಲ್ಪ ಸಮಯ ಅಲ್ಲೇ ಕಳೆದು, ಅಲ್ಲಿಂದ ಮುಂದುವರಿದು Dam ನ ಇನ್ನೊಂದು ತುದಿ ತಲುಪಿದೆವು. ನಾವಿದ್ದ ಗೆಸ್ಟ್ ಹೌಸ್ ಒಂದು ತುದಿಯಲ್ಲಿದ್ದರೆ, Dam ನ ನಿರ್ವಹಣಾ ಕಛೇರಿ, ಪಾರ್ಕ್, ವೀಕ್ಷಣಾ ಕೊಠಡಿ, ವೈಕುಂಠ ಬಂಗಲೆ ಇನ್ನೊಂದು ತುದಿಯಲ್ಲಿದೆ. ತುಂಗಭದ್ರಾ ನದಿಗೆ ಅಡ್ಡವಾಗಿ ಕಟ್ಟಿರುವ T.B. Dam, ಕರ್ನಾಟಕದ ದೊಡ್ಡ ಅಣೆಕಟ್ಟುಗಳಲ್ಲಿ ಪ್ರಮುಖವಾದದ್ದು. ವಿದ್ಯುಚ್ಛಕ್ತಿ ಮತ್ತು ನೀರಾವರಿಗಾಗಿ ಕಟ್ಟಿದ ಈ ಅಣೆಕಟ್ಟು ಸುಮಾರು 49 ಮೀ ಎತ್ತರ, 590 ಮೀ ಉದ್ದವಾಗಿದೆ, 33 ಗೇಟ್ ಗಳನ್ನು ಹೊಂದಿದೆ. ಕ್ಯಾಚ್ ಮೆಂಟ್ ಏರಿಯಾ 400 ಚ.ಕಿ.ಮೀ ವರೆಗೆ ಹರಡಿಕೊಂಡಿದೆ.


ನಂತರ ಮುಂದುವರಿದು, ಗುಡ್ಡವೊಂದರ ತುದಿಯಲ್ಲಿರುವ ವೈಕುಂಠ ಬಂಗಲೆ ತಲುಪಿದೆವು. ಇದು VVIPಗಳು ತಂಗಲು ನಿರ್ಮಿಸಿದ ಗೆಸ್ಟ್ ಹೌಸ್, ವಿಶಿಷ್ಟವಾದ ಶೈಲಿಯಲ್ಲಿ, ಸುಂದರ ಪರಿಸರದಲ್ಲಿ ನಿರ್ಮಿಸಲಾಗಿದೆ. ಇಲ್ಲಿಂದ T.B. Dam ನ ನಯನಮನೋಹರವಾದ ದೃಶ್ಯ ಕಾಣಬಹುದು. ಇಲ್ಲೊಂದು ವೀಕ್ಷಣಾ ಕೊಠಡಿಯೂ ಇದೆ. ಆ ಪರಿಸರದಲ್ಲಿ ಅಡ್ಡಾಡಿ, panoramic viewಗಳನ್ನು ನಮ್ಮ ಕಣ್ಣಲ್ಲು, ಕ್ಯಾಮರಾ ಕಣ್ಣಲ್ಲೂ ತುಂಬಿ ಕೊಂಡು, ಗೆಸ್ಟ್ ಹೌಸ್ ಗೂ ಭೇಟಿ ಕೊಟ್ಟು ಸ್ವಲ್ಪ ವಿರಮಿಸಿ ನಂತರ ನಮ್ಮ ಟೂರ್ ನ ಕೊನೆಯ ಹಂತವಾದ park ಗೆ ಭೇಟಿಕೊಟ್ಟೆವು. ಮೈಸೂರಿನ ಬೃಂದಾವನ ಬಿಟ್ಟರೆ ಕರ್ನಾಟಕದಲ್ಲಿ ಸಿಗುವ ಸುಂದರವಾದ, ಸುಸಜ್ಜಿತವಾದ ಪಾರ್ಕ್ ಎಂದರೆ ಟಿ.ಬಿ. ಡ್ಯಾಂ ಪಾರ್ಕ್. ಬಗೆಬಗೆಯ ಹೂ-ಗಿಡ-ಮರಗಳು, ಕಾರಂಜಿಗಳು, ಮೃಗಾಲಯ ಇನ್ನೂ ಹಲವಾರು ವಿಶೇಷತೆಗಳು ಇಲ್ಲಿವೆ. ಬೃಂದಾವನವನ್ನು ನೆನಪಿಸುವ ಸಂಗೀತ ಕಾರಂಜಿಯೂ ಇಲ್ಲಿದೆ. ಮೃಗಾಲಯದ concept ಇಷ್ಟವಿಲ್ಲದಿದ್ದರೂ, ಇಲ್ಲಿ ನಮಗೆ ಹಲವಾರು ಪ್ರಾಣಿ-ಪಕ್ಷಿಗಳು ನೋಡಲು ಸಿಕ್ಕವು. ಜಿಂಕೆಗಳು, ಸಾರಂಗ, ಮೊಲಗಳು, ನೀಲಗಿರಿ ಥಾರ್, ನವಿಲು, ಗಿಳಿಗಳು, ಬಾತುಕೋಳಿಗಳು ಇತ್ಯಾದಿ... ಮನಃಸೆಳೆದದ್ದು ಗರಿ ಬಿಚ್ಚಿ ನರ್ತಿಸುತ್ತಿದ್ದ ನವಿಲು! ಇಲ್ಲಿ ಮತ್ಸ್ಯ ಸಂಗ್ರಹಾರವೂ ಇದೆ, ನಾನಾ ವಿಧದ ಮೀನುಗಳನ್ನು ಅಕ್ವೇರಿಯಂಗಳಲ್ಲಿ ಹಿಡಿದಿಡಲಾಗಿದೆ! ಪಾರ್ಕಿನ ಉದ್ದಗಲ ಅಲೆದು, ಸ್ವಲ್ಪ ವಿರಮಿಸಿ, ನಮ್ಮ "ಗೈಡ್"ಗೆ ವಿದಾಯ ಹೇಳಿ, ಪೇಟೆಯ ಕಡೆ ಹೊರಟೆವು.



ಇಲ್ಲಿಗೆ ನಮ್ಮ "ಹಂಪಿ - ಹೊಸಪೇಟೆ" ಪ್ರವಾಸ ಮುಕ್ತಾಯದ ಹಂತಕ್ಕೆ ಬಂದಿತ್ತು. ಸರಿ ಸುಮಾರು ಎರಡು ದಿನ ಹಂಪಿ-ಹೊಸಪೇಟೆಯಲ್ಲಿ ನಮ್ಮ ಬಳಗದವರೊಂದಿಗೆ ಕಳೆದ ಆ ಕ್ಷಣಗಳು ಮನಸ್ಸಿಗೆ ನೆಮ್ಮದಿಯನ್ನ, ಹುರುಪನ್ನ, ಹೊಸ ಅನುಭವ-ನೆನಪನ್ನ ನಮಗೆಲ್ಲರಿಗೂ ನೀಡಿತ್ತು...! ಹೊಸಪೇಟೆಯಲ್ಲಿ ತಿಂಡಿ ತಿಂದು, 10 ಗಂಟೆಗೆ ಎಲ್ಲರೂ ನಮ್ಮ ನಮ್ಮ ಊರುಗಳಿಗೆ ವಾಪಸು ಹೊರಡಲು ಅಣಿಯಾಗಿದ್ದೆವು. ಕೇವಲ ಹಂಪಿಯ ಪ್ರಮುಖ ಸ್ಥಳಗಳನ್ನಷ್ಟೇ ನೋಡಿದ್ದ ನಾವು, ಇನ್ನುಳಿದ ಸ್ಥಳಗಳನ್ನು ಭವಿಷ್ಯದಲ್ಲಿ ನೋಡಲು ಪುನಃ ಬರಬೇಕು ಎಂಬ ದೃಢ ನಿರ್ಧಾರದೊಂದಿಗೆ ಹಂಪಿ-ಹೊಸಪೇಟೆಗೆ ವಿದಾಯ ಹೇಳಿದೆವು... ಉಡುಪಿ ಕಡೆ ಹೊರಟವರು ಟ್ರಾವಲರ್ ಏರಿದರು, ನಾವು ಬೆಂಗಳೂರು ಹುಡುಗರು "ಜಾನಿ ಅಕ್ಕ"ನನ್ನು ಸೇರಿಸಿಕೊಂಡು, ಬೆಂಗಳೂರು ಬಸ್ ಹಿಡಿಯಲು ಹೊಸಪೇಟೆ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದೆವು...!

--ಗುರು

Tuesday, January 29, 2008

Windows Update: Kannada font problem

You might have noticed in many of the kannada blogs and sites "mU" looking like "mA" (e.g: "nammuru" as "nammaru" or "mUkhambika" as "mAkhambika"). This bug is visible in Windows XP - Internet Explorer browser.

Windows guys successfully fixed this bug. Following link contains the "UPDATE".

http://www.microsoft.com/downloads/details.aspx?familyid=3fa7cdd1-506b-4ca0-bd47-b338e337a527&displaylang=en&displaylang=en#Overview

This update (approx 1.5 MB) contains new language locales for Microsoft Windows XP Service Pack 2 (SP2).

If you have original Windows XP SP2 operating system, then download this update for better "Online Kannada Experience"...

--
Guru

Sunday, January 27, 2008

Sanchara:: Hampi - Hospet ~ part 02

ವರ್ಲ್ಡ್ ಹೆರಿಟೇಜ್ ಸೈಟ್ - ಹಂಪಿ


ಗಣಿಗಾರಿಕೆಗೆ ಪ್ರಸಿದ್ಧವಾಗಿರುವ ಹೊಸಪೇಟೆಯಿಂದ ಹಂಪಿಗೆ 13 ಕಿಮೀ ದೂರ. ದಾರಿಯುದ್ದಕ್ಕೂ ಪಾಳುಬಿದ್ದ ದೇಗುಲಗಳು, ಮಂಟಪಗಳು, ಶಿಲಾಕೃತಿಗಳು, ವಿಜಯನಗರದ ಅಳಿದುಳಿದ ಅವಶೇಷಗಳು ಕಾಣಿಸಲಾರಂಭಿಸುತ್ತವೆ. 15 ನಿಮಿಷದ ಪಯಣದ ನಂತರ ನಾವು ಯುನೆಸ್ಕೋ ದಿಂದ "World Heritage Site" ಎಂದು ಮನ್ನಣೆ ಪಡೆದಿರುವ "ಹಂಪಿ"ಯಲ್ಲಿ ಕಾಲಿಡಲು ಸಿದ್ಧರಾದೆವು. ವಿರೂಪಾಕ್ಷ ದೇಗುಲದ ಬಳಿ ಮೊದಲೇ ನಿಗದಿಯಾಗಿದ್ದ ’ಗೈಡ್’ ನಮ್ಮನ್ನು ಸೇರಿಕೊಂಡ. ಮೊದಲಬಾರಿ ಹಂಪಿಗೆ ಹೋಗುವವರಿಗೆ ಗೈಡ್ ನೆರವು ಬೇಕಾಗುತ್ತದೆ. ಹಂಪಿಯ ಅವಶೇಷ 26 ಚದರ ಕಿಮೀ ವರೆಗೂ ಹರಡಿಕೊಂಡಿದೆ. ಪೂರ್ವ ಮಾಹಿತಿಯಿಲ್ಲದೆ, ಗೈಡ್ ನೆರವಿಲ್ಲದೆ ಇಷ್ಟು ಜಾಗಗಳನ್ನು ನೋಡುವುದು, ಸ್ಥಳಗಳ ಮಹತ್ವವನ್ನು ತಿಳಿಯುವುದು ಕಷ್ಟ. ನಮ್ಮ ಗೈಡ್ ಹೋಗಬೇಕಾದ ಸ್ಥಳಗಳ ಬಗ್ಗೆ, ಅವುಗಳ ವಿಶೇಷತೆಯ ಬಗ್ಗೆ ವಿವರಣೆ ಕೊಡಲಾರಂಭಿಸಿದ. ಮಧ್ಯಾಹ್ನದ ವರೆಗೂ ನಮ್ಮೊಂದಿಗಿದ್ದು ಆದಷ್ಟು ಪ್ರಮುಖ ಸ್ಥಳಗಳನ್ನು ತೋರಿಸಿ, ಅವುಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ.


ಮೊದಲು ನಾವು ಭೇಟಿಕೊಟ್ಟದ್ದು ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ. ಹಂಪಿಯಲ್ಲಿ ಇರುವ ನೂರಾರು ದೇಗುಲಗಳಲ್ಲಿ ಕೇವಲ ಬೆರಳೆಣಿಕೆಯಷ್ಟರಲ್ಲಿ ಮಾತ್ರ ನಿತ್ಯಪೂಜೆ ನೆರವೇರುತ್ತದೆ. ಅದರಲ್ಲಿ ವಿರೂಪಾಕ್ಷ ದೇಗುಲ ಪ್ರಮುಖವಾದದ್ದು. 120 ಅಡಿ ಎತ್ತರದ ಬೃಹತ್ ಗೋಪುರ ನಮ್ಮನ್ನು ದೇಗುಲಕ್ಕೆ ಬರಮಾಡಿಕೊಳ್ಳುತ್ತದೆ. ಸುತ್ತಮುತ್ತಲೂ ಕಂಡುಬರುವ ಸಹಸ್ರಾರು ಶಿಲಾಕೃತಿಗಳು, ವರ್ಣ ಚಿತ್ರಗಳು, ರಂಗಮಂಟಪ, ಭಗ್ನಗೊಂಡಿರುವ ಮೂರು ಮುಖದ ನಂದಿಯ ವಿಗ್ರಹ ಹೀಗೆ ಹಲವಾರು ವಿಶೇಷತೆಗಳು ಇಲ್ಲಿ ಕಾಣಸಿಗುತ್ತವೆ. ವಿಜಯನಗರದ ಲಾಂಛನ "ವರಾಹ"ವೂ ಇಲ್ಲಿ ಕಾಣಸಿಗುತ್ತದೆ. ಪ್ರತಿಯೊಂದು ಕಲ್ಲುಗಳು ದೃಶ್ಯಕಾವ್ಯಗಳಾಗಿ ಕಥೆ ಹೇಳಲು ಶುರುಮಾಡುತ್ತವೆ. ಗೋಡೆಗಳ ಮೇಲೆ, ಕಂಬಗಳಲ್ಲಿ, ಮೇಲ್ಛಾವಣಿಗಳಲ್ಲಿ ವಿಜಯನಗರದ ಅಂದಿನ ಸ್ಥಿತಿಗತಿಗಳ ಬಗ್ಗೆ, ನಡೆಯುತ್ತಿದ್ದ ಸಭೆ-ಸಮಾರಂಭ-ಉತ್ಸವಗಳ ಬಗ್ಗೆ, ಬಲಿಷ್ಠ ಸೈನ್ಯದ ಬಗ್ಗೆ, ಇತರ ವಿಶೇಷತೆಗಳ ಬಗ್ಗೆ ಕೆತ್ತನೆಗಳು, ಕಲಾಕೃತಿಗಳು ವಿಶಾಲ ದೇಗುಲದಲ್ಲಿವೆ. "ಶ್ರೀ ವಿರೂಪಾಕ್ಷ, ಪಂಪ-ಭುವನೇಶ್ವರಿ ದೇವಿ" ನಿತ್ಯ ಪೂಜಿಸಲ್ಪಡುವ ಈ ದೇಗುಲ ವಿಜಯನಗರ ಸಂಸ್ಥಾನಕ್ಕೂ ಮೊದಲು ಅಸ್ಥಿತ್ವದಲ್ಲಿತ್ತು, 11-12ನೇ ಶತಮಾನದಲ್ಲಿ ನಿರ್ಮಾಣಗೊಂಡು, ವಿಜಯನಗರದರಸರ ಕಾಲದಲ್ಲಿ ಅಭಿವೃದ್ಧಿ ಹೊಂದಿತು ಎಂಬ ಮಾಹಿತಿ ಗೈಡ್ ನಿಂದ ತಿಳಿಯಿತು.



ಶ್ರೀ ವಿರೂಪಾಕ್ಷ ಹಾಗೂ ದೇವಿಯರಿಗೆ ವಂದಿಸಿ, ಕತ್ತಲೆಕೋಣೆಯೊಂದರಿಂದ ಕೆಳಗಿಳಿದು "ಶ್ರೀ ಪಾತಾಳೇಶ್ವರ ಗುಡಿ"ಗೂ ಭೇಟಿ ನೀಡಿದೆವು. ಇನ್ನೊಂದು ಕತ್ತಲೆಕೋಣೆಯ ಗೋಡೆಯ ಮೇಲೆ ಸಣ್ಣ ಬಿರುಕೊಂದರಿಂದ ಬಂದ ಸೂರ್ಯಕಿರಣಗಳು ಬೃಹತ್ ಗೋಪುರದ ಬಿಂಬವನ್ನು ತಲೆಕೆಳಗಾಗಿ ಬಿತ್ತರಿಸಿದ್ದವು (pinhole effect), ಈ ಚಮತ್ಕಾರವನ್ನೂ ನೋಡುವ ಅವಕಾಶ ಸಿಕ್ಕಿತು. ದೇವಸ್ಥಾನದ ಹಿಂಬದಿಯಲ್ಲೇ ವಿಜಯನಗರ ನಿರ್ಮಾತೃ ವಿದ್ಯಾರಣ್ಯರು ಪೂಜೆಗೊಳ್ಳುವ ಗುಡಿಯಿದೆ, ಅವರಿಗೂ ವಂದಿಸಿ, ಅವರ ಸಾಧನೆಯನ್ನು ನೆನೆದೆವು. ಮುಖ್ಯ ಗೋಪುರದಿಂದ ಹೊರಬಂದರೆ ಸಿಗುವುದೇ "ಹಂಪಿ ಬಝಾರ್". ಒಂದು ಕಾಲ ಇಲ್ಲಿ ಚಿನ್ನಾಭರಣಗಳು, ವಜ್ರವೈಢೂರ್ಯಗಳು "ಸೇರು"ಗಳಲ್ಲಿ ಮಾರಲ್ಪಡುತ್ತಿತ್ತು. ಆಗಿದ್ದ ಅಂಗಡಿಗಳ ಕುರುಹುಗಳು ಈಗಲೂ ಇಲ್ಲಿ ಕಾಣುತ್ತವೆ. ಆದರೆ ಹೆಚ್ಚಿನವು ಒತ್ತುವರಿಗೊಂಡು 'modern ಬಝಾರ್'ಗಳಾಗಿ ವಜ್ರವೈಢೂರ್ಯಗಳ ಬದಲು ಕರಕುಶಲ ವಸ್ತುಗಳು, ಪೆಪ್ಸಿ-ಕೋಲಾ ಇತ್ಯಾದಿಗಳು ಇಲ್ಲಿ ಕೊಳ್ಳಲು ಸಿಗುತ್ತದೆ.



ಮುಂದೆಸಾಗುತ್ತಾ, ನಾವು ವೀಕ್ಷಿಸಿದ್ದು ಹೇಮಕುಟ ಗುಡ್ಡದ ಬುಡದಲ್ಲಿರುವ "ಕಡಲೆಕಾಳು ಗಣೇಶ" ಗುಡಿಯನ್ನು. ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಹಲವಾರು ಆಳೆತ್ತರದ ಕಂಬಗಳಿಂದ ಸಂಪೂರ್ಣ ಶಿಲಾಮಯ ಗುಡಿ ನಿರ್ಮಿಸಲಾಗಿದೆ. ಇಲ್ಲೂ ಅಷ್ಟೇ ಎಲ್ಲೆಡೆ ಸುಂದರ ಕಲಾಕೃತಿಗಳು! ಇಲ್ಲಿರುವ ಗಣೇಶನ ವಿಗ್ರಹ 15 ಅಡಿ ಎತ್ತರವಾಗಿದೆ, ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಗಣಪತಿಯ ಹೊಟ್ಟೆಯು ಕಡಲೆಕಾಳಿನಾಕೃತಿಯಲ್ಲಿರುವುದರಿಂದ "ಕಡಲೆಕಾಳು ಗಣೇಶ" ಎಂದು ಪ್ರಸಿದ್ಧಿಗೆ ಬಂತು. ವಿಗ್ರಹವು ಅಲ್ಲಲ್ಲಿ ಭಗ್ನಗೊಂಡಿರುವುದರಿಂದ ಇಲ್ಲಿ ಪೂಜಾವಿಧಿಗಳು ನಡೆಯುವುದಿಲ್ಲ. ಇಲ್ಲಿಂದ ಹೊರಬಂದರೆ ಸನಿಹದಲ್ಲೇ "ಸಾಸಿವೆಕಾಳು ಗಣೇಶ"ನ ಗುಡಿಯಿದೆ. 8 ಅಡಿ ಎತ್ತರದ, ಒಂದೇ ಕಲ್ಲಲ್ಲಿ ನಿರ್ಮಿಸಿರುವ ವಿಗ್ರಹ ಸುಂದರವಾಗಿದೆ, ಇಲ್ಲೂ ಪೂಜೆ ನಡೆಯುವುದಿಲ್ಲ. ಹತ್ತಿರದಲ್ಲೇ ವಿಷ್ಣುಪಾದ ದೇವಸ್ಥಾನವಿದೆ. ಇಲ್ಲಿನ ವಿಶೇಷ ಕಲ್ಲಿನ ಮೇಲೆ ಕೆತ್ತಲ್ಪಟ್ಟಿರುವ ವಿಷ್ಣುಪಾದ ಮತ್ತು ಅದನ್ನು ಸುತ್ತುವರಿದಿರುವ ನಾಗದೇವರು.



ಹತ್ತಿರದಲ್ಲೇ ಹೇಮಕುಟ ಗುಡ್ಡವಿದೆ. ಇಲ್ಲಿ ಹೇಮಕುಟ ಗುಡಿಗಳ ಸಮೂಹವಿದೆ. ಜೈನ ಬಸದಿಯನ್ನು ಹೋಲುವ, ತ್ರಿಕುಟಾಚಲ ಶೈಲಿಯಲ್ಲಿ ನಿರ್ಮಿಸಿರುವ ಈ ಗುಡಿಗಳಲ್ಲಿ ಶಿವ, ಮತ್ತಿತರ ದೇವರನ್ನು ಆರಾಧಿಸಲಾಗುತ್ತದೆ. ಈ ಗುಡಿಗಳ ಮೇಲ್ಛಾವಣಿಗಳು ಪಿರಮಿಡ್ ಆಕೃತಿಯಲ್ಲಿದೆ, ನೋಡಲು ವಿಶಿಷ್ಟವಾಗಿ, ಸುಂದರವಾಗಿದೆ. ಇಂತಹ 15-20 ಗುಡಿಗಳ ಸಮೂಹ ಇಲ್ಲಿನ ವೈಶಿಷ್ಟ್ಯ. ತಿಳಿನೀರ ಕೊಳವೂ ಇಲ್ಲಿದೆ. ಈ ಗುಡಿಗಳನ್ನು ಯಾರು, ಯಾವಾಗ ನಿರ್ಮಿಸಿದರು ಎಂಬ ಬಗ್ಗೆ ತಿಳಿಯದಿದ್ದರೂ, ಇವು ವಿಜಯನಗರ ಸಂಸ್ಥಾನ ಅಸ್ತಿತ್ವಕ್ಕೆ ಬರುವ ಮೊದಲೇ ಇತ್ತು ಎಂಬ ಮಾಹಿತಿ ಮಾತ್ರ ಸಿಕ್ಕಿತು... ಇಲ್ಲಿಂದ ಸ್ವಲ್ಪ ಮುಂದೆ ನಡೆದರೆ ಎರಡಂತಸ್ತಿನ ಕಲ್ಲುಕಂಬಗಳಿಂದ ನಿರ್ಮಿಸಿರುವ ವಿಶಿಷ್ಟವಾದ ವಿಜಯನಗರದ ದಕ್ಷಿಣ ಹೆಬ್ಬಾಗಿಲು ಸಿಗುತ್ತದೆ. ಎತ್ತರದಲ್ಲಿರುವ ಈ ಪ್ರದೇಶದಿಂದ ಸೂರ್ಯಾಸ್ತಮಾನದ ದೃಶ್ಯ ವಿಹಂಗಮ ಎಂದು ಗೈಡ್ ತಿಳಿಸಿದ. ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಹೇಮಕುಟ ಗುಡ್ದದ ಶಾಂತ ಪರಿಸರ, ಬೀಸುವ ಶುದ್ಧ ಗಾಳಿ ಮನಸ್ಸಿಗೆ ನೆಮ್ಮದಿ, ಆಹ್ಲಾದವನ್ನೂ ನೀಡುತ್ತದೆ.


1-2 ಕಿ.ಮೀ. ಮುಂದೆ ಸಾಗಿದರೆ ಸಿಗುವುದೇ "ಲಕ್ಷ್ಮೀನರಸಿಂಹ" ಸನ್ನಿಧಿ. ಶೇಷಾಸನದ ಮೇಲೆ ಯೋಗ ಭಂಗಿಯಲ್ಲಿ ಆರೂಢನಾಗಿರುವ ಲಕ್ಷ್ಮೀನರಸಿಂಹನ ಆಳೆತ್ತರದ ಭವ್ಯ ಮೂರ್ತಿ ಇಲ್ಲಿನ ವಿಶೇಷ. ಅತ್ಯಂತ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿರುವ ಕಲಾಕೃತಿ ಆಗಿನ ಕುಶಲಕರ್ಮಿಗಳ ನೈಪುಣ್ಯತೆಯನ್ನ, ಕ್ರಿಯಾಶೀಲತೆಯನ್ನ, ತಾಳ್ಮೆಯನ್ನ ಸ್ಮರಿಸುವಂತೆ ಮಾಡುತ್ತದೆ. ಶ್ರೀ ವಿಷ್ಣು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಹಿರಣ್ಯಕಶಿಪುವನ್ನು ವಧಿಸಲು ನರಸಿಂಹಾವತಾರದಲ್ಲಿ ಕಂಬದಿಂದ ಪ್ರತ್ಯಕ್ಷವಾದಾಗಿನ ಮುಖಭಾವ ಈ "ಉಗ್ರನರಸಿಂಹ" ವಿಗ್ರಹದಲ್ಲಿ ಮೂಡಿದೆ. ಅತ್ಯಧ್ಬುತವಾದ ಕೈಚಳಕ!! ಆದರೆ, ವಿಗ್ರಹಭಂಜಕರು ತಮ್ಮ ಖಡ್ಗವನ್ನು ಇಲ್ಲೂ ಝಳಪಿಸಿದ್ದಾರೆ. ವಿಗ್ರಹ ತುಂಬಾ ಭಗ್ನಗೊಂಡಿದೆ. ಲಕ್ಷ್ಮೀ ಕುಳಿತಿದ್ದ ಭಾಗ ಛೇದಗೊಂಡು ವಿಗ್ರಹದಿಂದ ಬೇರ್ಪಟ್ಟು ನಾಶ ಹೊಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ ಕೈಬೆರಳು, ಉಗುರು ಕಾಣಲು ಸಿಗುತ್ತದೆ. ಯಾಕೋ, ದೇವಳದ ಕೆಲಸ ಅರ್ಧಕ್ಕೆ ನಿಂತಂತೆ ಭಾಸವಾಗುತ್ತದೆ!!...



ಸನಿಹದಲ್ಲೇ "ಬಡವಿ ಲಿಂಗ" ಗುಡಿಯಿದೆ. ದೊಡ್ಡದಾದ ಶಿವಲಿಂಗ ಇಲ್ಲಿನ ವಿಶೇಷ. ಮುಕ್ಕಣ್ಣನ ಮೂರು ಕಣ್ಣುಗಳೂ ಲಿಂಗದಲ್ಲಿ ಮೂಡಿವೆ. ಜಟಾಧರನ ಮುಡಿಯೇರಿದ ಗಂಗೆಯ ದ್ಯೋತಕವಾಗಿ ಶಿವಲಿಂಗ ಸದಾ ನೀರಿನಿಂದ ಆವೃತವಾಗಿರುತ್ತದೆ. ಬಡ ಮಹಿಳೆಯೊಬ್ಬಳು ನಿತ್ಯ ಪೂಜಿಸುತ್ತಿದ್ದುದರಿಂದ "ಬಡವಿ ಲಿಂಗ" ಎಂಬ ಹೆಸರು ಬಂತು.



ನಂತರ ನಾವು ವೀಕ್ಷಿಸಿದ್ದು ಕೆಳ ಅಂತಸ್ತಿನ ಶಿವನ ದೇವಸ್ಥಾನ. ಹೆಸರೇ ಹೇಳುವಂತೆ ನೆಲಮಟ್ಟದಿಂದ ಕೆಲವು ಮೀಟರ್ ಕೆಳಗಿದೆ ಈ ಶಿಲಾಮಯ ದೇವಸ್ಥಾನ. ಗರ್ಭಗುಡಿಯ ಸುತ್ತಲೂ ನೀರಿನಿಂದಾವೃತವಾಗಿದೆ. ಶಿಥಿಲಾವಸ್ಥೆಯಲ್ಲಿರುವ ಈ ಗುಡಿಯಲ್ಲೂ ಪೂಜಾಕೈಂಕರ್ಯಗಳು ನಡೆಯುವುದಿಲ್ಲ. ಸಮೀಪದಲ್ಲೇ ಸಾಮಂತರಸರು ವಾಸಿಸುತ್ತಿದ್ದ ಮನೆಗಳ ಅವಶೇಷಗಳಿವೆ. ಈ ಭಾಗದಲ್ಲಿ ಉತ್ಖನನದ ಕೆಲಸ ಭರದಿಂದ ನಡೆಯುತ್ತಿತ್ತು, ಸದ್ಯದಲ್ಲೇ ಇನ್ನಷ್ಟು ರಹಸ್ಯಗಳು ಹೊರಬೀಳಬಹುದು!



ಮತ್ತೆ 2 ಕಿ.ಮೀ ಮುಂದೆ ಹೋದರೆ ಸಿಗುವುದು ಕಮಲ ಮಹಲ್, ರಾಣಿಯ ಅರಮನೆ, ಸ್ನಾನ ಘಟ್ಟ ಇತ್ಯಾದಿ ಇರುವ "ಝೆನಾನ ಸಂಕೀರ್ಣ" ಎಂದು ಕರೆಯಲ್ಪಡುವ ಸ್ಥಳ. ಸುತ್ತಲೂ ಎತ್ತರದ ಕಲ್ಲಿನ ಕೋಟೆ, ವಾಚ್ ಟವರ್ ರಕ್ಷಣೆಗೆ ಇದೆ. ಇಲ್ಲಿ ವೀಕ್ಷಕರು ಒಳಹೋಗಲು ಟಿಕೆಟ್ ತೆಗೆದುಕೊಳ್ಳಬೇಕು. ಒಳ ಪ್ರವೇಶಿಸಿದರೆ ಲಾನ್ ಹಾಸಿರುವ ಸುಂದರ ಬಯಲು, ತಿರುಗು ತಿರುಗಿ ದಣಿದಿದ್ದರೆ ಕೊಂಚ ದಣಿವಾರಿಸಿಕೊಳ್ಳಲು ನೆರವಾಗುತ್ತದೆ, ದೊಡ್ಡ ಮರಗಳು ನೆರಳೊದಗಿಸುತ್ತವೆ. ಬಯಲ ಮಧ್ಯದಲ್ಲಿ ಕಾಣಿಸುವುದೇ ಇಂಡೊ-ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಿರುವ ಕಮಲ ಮಹಲ್. ಇಟ್ಟಿಗೆ, ಸೀಮೆಸುಣ್ಣ ಇತ್ಯಾದಿ ಬಳಸಿ ಕಟ್ಟಿದ ಎರಡು ಮಹಡಿಯ ’ಮಹಲ್’ ಅರಳಿದ ಕಮಲದ ಹೂವಿನಾಕಾರವನ್ನು ಹೋಲುವುದರಿಂದ ಈ ಹೆಸರು. ಇದು ರಾಣಿಯರು ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ ಬೇಸಿಗೆ ಅರಮನೆ. ಇದರ ಎದುರುಗಡೆ ರಾಣಿಯರು ವಾಸಿಸುತ್ತಿದ್ದ ಅರಮನೆಯ ಅವಶೇಷ ಕಾಣುತ್ತದೆ. ನೀರಿನ ಕೊಳ, ಕಾಲುವೆಗಳೂ ಇಲ್ಲಿವೆ. ಪಕ್ಕದಲ್ಲೇ ರಾಜ, ರಾಣಿಯರು ಬಳಸುತ್ತಿದ್ದ ಸ್ನಾನಘಟ್ಟವಿದೆ. ಹೊರಗಿನಿಂದ ನೋಡಿದರೆ ಸಾಧಾರಣ ಕಟ್ಟಡದಂತೆ ಕಂಡರೂ, ಒಳಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಕಮಲ ಮಹಲ್ ನಂತೆ ಇದು ಕೂಡಾ ಇಂಡೊ-ಸಾರ್ಸನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ರಾಜ-ರಾಣಿಯರ ಬಚ್ಚಲುಮನೆಯೂ ಇಷ್ಟು ಸ್ಪೆಶಲ್ ಆಗಿರಬೇಕಾದರೆ, ಆಗಿನವರ ದರ್ಬಾರನ್ನು ನೀವೇ ಊಹಿಸಿ?...



ಸಂಕೀರ್ಣದ ಇತರ ವಿಶೇಷತೆಗಳೆಂದರೆ ರಾಜ-ರಾಣಿಯರನ್ನು ಕಾವಲುಕಾಯಲು ಸುತ್ತಲೂ ನಿರ್ಮಿಸಿದ ಮೂರು ಮಹಡಿಗಳ "ವಾಚ್ ಟವರ್"... ಆನೆಗಳು ವಾಸಿಸಲು ನಿರ್ಮಿಸಿದ ಎತ್ತರದ ಕಲ್ಲಿನ ಗೂಡುಗಳು. ಇಲ್ಲೊಂದು ಸಾಧಾರಣವಾಗಿ ಕಾಣುವ ಕಲ್ಲಿನ ಕಟ್ಟಡವೂ ಇದೆ, ಇದರ ವಿಶೇಷತೆಯೇನು ಎಂದು ಸರಿಯಾಗಿ ಗೊತ್ತಾಗಲಿಲ್ಲ. ಒಳಗಡೆ ಆರ್ಕಿಯಾಲಜಿ ಡಿಪಾರ್ಟಮೆಂಟ್ ನವರು ಉತ್ಖನನದಲ್ಲಿ ದೊರೆತ ನೂರಾರು ವಿಗ್ರಹಗಳನ್ನು, ಶಿಲಾಕೃತಿಗಳನ್ನು ಜೋಡಿಸಿಟ್ಟಿದ್ದಾರೆ. ಹೆಚ್ಚಿನವು ಕೈ-ಕಾಲು ಇತ್ಯಾದಿ ಕಳಕೊಂಡಿವೆ. ನನಗೆ ತುಂಬಾ ವಿಶಿಷ್ಟವಾಗಿ ಕಂಡದ್ದು ಕೋರೆ ಹಲ್ಲು ಇರುವ ಆಂಜನೇಯನ ದೊಡ್ಡ ವಿಗ್ರಹ.


ಕೊಂಚ ವಿರಾಮದ ನಂತರ ನಾವು ಮುಂದುವರಿದದ್ದು "ಮಹಾ ನವಮಿ" ದಿಬ್ಬಕ್ಕೆ. ದಾರಿಯಲ್ಲಿ ಕಣ್ಮನ ಸೆಳೆಯುವುದು ದೊಡ್ಡ ಕಲ್ಲಿನ ಬಾಗಿಲು. ಇದರ ಕೆತ್ತನೆಯಂತೂ ಬೆರಗು ಹುಟ್ಟಿಸುತ್ತದೆ. ಯಾವ ಮರದ ಬಾಗಿಲಿಗೂ ಕಮ್ಮಿಇಲ್ಲದಂತೆ ಇದನ್ನು ಕೆತ್ತಲಾಗಿದೆ. ಕೀಲು, ಬೋಲ್ಟ್, ಚಿಲಕ ಎಲ್ಲವೂ ಕಲ್ಲಿನದ್ದು!! ಈ ಬಾಗಿಲು ಯಾವ ದಿಕ್ಕನ್ನು ರಕ್ಷಿಸಲು ನಿರ್ಮಿಸಲಾಯಿತು ಎಂದು ಗೊತ್ತಾಗಲಿಲ್ಲ. ಇಲ್ಲಿನ ಕ್ಯುರೇಟರ್ ಗಳು ಬಾಗಿಲನ್ನು ಎಲ್ಲಾ ಕೋನಗಳಿಂದಲೂ ನೋಡಲು ಅನುಕೂಲವಾಗಲು ಕಲ್ಲಿನ ದಂಡೆಯೊಂದನ್ನು ಆಧಾರವಾಗಿ ನಿರ್ಮಿಸಿ ಇದನ್ನು ಸಂರಕ್ಷಿಸಿದ್ದಾರೆ.


ಮುಂದೆಸಾಗುತ್ತಾ "ಮಹಾ ನವಮಿ ದಿಬ್ಬ" ಇರುವ ದೊಡ್ಡ ಬಯಲು ಹೊಕ್ಕಾಗ ಒಂದು ಕ್ಷಣ ಬೆರಗಾದೆವು. ಈ ಜಾಗವಂತೂ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಅದರಲ್ಲಿ ಮುಖ್ಯವಾದದ್ದು "ಮಹಾ ನವಮಿ ದಿಬ್ಬ". ರಾಜ ನವರಾತ್ರಿಯ ಸಂದರ್ಭದಲ್ಲಿ ತನ್ನ ಸಾಮ್ರಾಜ್ಯದ ಔನ್ನತ್ಯವನ್ನು ಜಗತ್ತಿಗೆ ಸಾರಲು, ವಿಜಯೋತ್ಸವವನ್ನು ಆಚರಿಸಲು, ನವರಾತ್ರಿಯ ಬೃಹತ್ ದರ್ಬಾರು ನಡೆಸಲು ಬಳಸುತ್ತಿದ್ದ ಜಾಗ. ಈ ಎತ್ತರದ ಕಲ್ಲಿನ ದಿಬ್ಬದ ಇಂಚು ಇಂಚು ಜಾಗವನ್ನೂ ಕೆತ್ತನೆಗಳಿಂದ ಸಿಂಗರಿಸಲಾಗಿದೆ. ಚೌಕಾಕಾರದ, ಮೂರು ಹಂತಗಳಿರುವ ಈ ದಿಬ್ಬದ ತುದಿ ತಲಪಲು ಕಲ್ಲಿನ ಮೆಟ್ಟಿಲುಗಳಿವೆ. ದಿಬ್ಬದ ಮೇಲಿನಿಂದ ವಿಶಾಲ ಬಯಲಿನ ದರ್ಶನವಾಗುತ್ತದೆ. ರಾಜ ಯಾವ ಗಾಂಭೀರ್ಯದಿಂದ ಇಲ್ಲಿ ದರ್ಬಾರು ನಡೆಸುತ್ತಿದ್ದಿರಬಹುದು, ಎಷ್ಟು ಸಹಸ್ರ ಜನರು ಇಲ್ಲಿ ನೆರೆದಿರಬಹುದು, ಯಾವ ಬಗೆಯಲ್ಲಿ ವಿಶಾಲ ಬಯಲನ್ನು ಸಿಂಗರಿಸಿರಬಹುದು ಎಂಬುದರ ಬಗ್ಗೆ ಸ್ವಲ್ಪಕಾಲ ಯೋಚಿಸಿದೆ. ಯಾಕೋ ನನ್ನ ಊಹೆಗೆ ನಿಲುಕಲಿಲ್ಲ!



ಇಲ್ಲಿನ ದೃಶ್ಯಕಾವ್ಯಗಳು, ಕುಸುರಿ-ಕೆತ್ತನೆಗಳ ಬಗ್ಗೆ ಹೇಳಲೇಬೇಕು. ವಿಜಯನಗರ ಸಾಮ್ರಾಜ್ಯಕ್ಕೆ ಪೋರ್ಚುಗೀಸ್, ಅರಬ್, ಚೀನಾ ದೇಶಗಳೊಂದಿಗೂ ಸಂಪರ್ಕವಿತ್ತು ಎಂಬುದರ ದ್ಯೋತಕವಾಗಿ ಅಲ್ಲಿನ ರಾಯಭಾರಿಗಳ ಚಿತ್ರವನ್ನು ಇಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳ, ಹಬ್ಬಹರಿದಿನಗಳ ಸಡಗರವನ್ನು ಇಲ್ಲಿ ಕಾಣಬಹುದು. ರಾಜ ನಡೆಸುತ್ತಿದ್ದ ಸಭೆ, ದರ್ಬಾರುಗಳ ಚಿತ್ರಣವೂ ಇದೆ. ಸೈನ್ಯ ಸಾಮರ್ಥ್ಯವನ್ನು ಪ್ರದರ್ಶಿಸುವ ಸಾಲು ಸಾಲು ಆನೆಗಳು, ಒಂಟೆಗಳು, ಕುದುರೆಗಳು, ಪದಾತಿ ದಳವನ್ನೂ ಇಲ್ಲಿ ಸುಂದರವಾಗಿ ಬಿಂಬಿಸಲಾಗಿದೆ. ಒಂದು ರೀತಿಯಲ್ಲಿ ಇದು ಫೋಟೊ ಗ್ಯಾಲರಿಯನ್ನು ಹೋಲುತ್ತದೆ ಎಂದರೆ ತಪ್ಪಾಗಲಾರದು. ಆದರೆ ಎಲ್ಲವೂ ಕಲಾವಿದನ ಕೈಚಳಕದಿಂದ ಕಲ್ಲಿನಲ್ಲಿ ಮೂಡಿದ್ದು!!! ರಾಜ ಈ ದಿಬ್ಬದ ಮೇಲೆ ಕುಳಿತು ನವರಾತ್ರಿಯ ಸಂದರ್ಭದಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಸೈನಿಕರ ಪಥಸಂಚಲನ, ಕುಸ್ತಿ-ಕಾಳಗ, ಕತ್ತಿವರಸೆ, ಜಲಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದನಂತೆ. ಸಾಮಂತ ರಾಜರು ತಮ್ಮ ಕಪ್ಪಕಾಣಿಕೆಯನ್ನು ಈ ಸಂದರ್ಭದಲ್ಲೇ ತಂದೊಪ್ಪಿಸುತ್ತಿದ್ದರು ಎಂಬ ಮಾಹಿತಿಯೂ ತಿಳಿಯಿತು.



ಈ ಪರಿಸರದ ಇನ್ನೊಂದು ವಿಶೇಷತೆ ಮೆಟ್ಟಿಲುಗಳಿಂದಲೇ ಅಲಂಕೃತಗೊಂಡಿರುವ ಸುಂದರ ಕೆರೆ ಮತ್ತು ಒಲಂಪಿಕ್ ಈಜುಕೊಳಕ್ಕಿಂತಲೂ ದೊಡ್ಡದಾದ ಈಜುಕೊಳ. ಈಗ ನೀರಿರದಿದ್ದರೂ ಅದರ ಗಾತ್ರ, ವಿಸ್ತೀರ್ಣ ನೋಡಿ ಬೆರಗಾಗಲೇಬೇಕು. ಕೆರೆಗೆ ನೀರುಹಾಯಿಸಲು ಕಲ್ಲಿನ ಕಾಲುವೆಯೂ ಇಲ್ಲಿ ಕಾಣಬಹುದು. ಎಲ್ಲವೂ ಯೋಜನಾಬದ್ಧವಾಗಿ, ಅಚ್ಚುಕಟ್ಟಾಗಿ ಕಲ್ಲಿನಲ್ಲೇ ನಿರ್ಮಾಣಗೊಂಡಿವೆ. ಇಲ್ಲಿಂದ ಹೊರಬರುವಾಗ ನಮಗೆ ಕಂಡದ್ದು ದೊಡ್ಡ ಕಲ್ಲಿನ ಬಟ್ಟಲುಗಳು, "ಸೈನಿಕರು ಊಟ ಮಾಡಲು ಬಳಸುತ್ತಿದ್ದ ಬಟ್ಟಲು ಇದು" ಎಂದ ನಮ್ಮ ಗೈಡ್!!!

(ಮುಂದುವರಿಯುವುದು...)

Thursday, January 24, 2008

Sanchara:: Hampi - Hospet ~ part 01

ಹಂಪಿ

ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ.

ಹಂಪಿಯ ಬಗ್ಗೆ ತಿಳಿದಿರದವರು ಬಹುಶಃ ಬಹು ವಿರಳ. ಚಿಕ್ಕಂದಿನಿಂದಲೇ ಇತಿಹಾಸದ ಪಾಠಗಳಲ್ಲಿ ಹಂಪಿಯ ಬಗ್ಗೆ ಎಲ್ಲರೂ ಓದಿರುತ್ತಾರೆ. ಆದರೆ, ಹಂಪಿಗೆ ಭೇಟಿ ನೀಡಿ, ಅಲ್ಲಿನ ಕಲ್ಲು ಕಲ್ಲಿಗೂ ಕಿವಿ ಆಲಿಸಿ, ಅದರ ಕಥೆ ಕೇಳಿ, ಅಲ್ಲಿರುವ ಅವಶೇಷಗಳನ್ನು ನೋಡಿ, ವಿಜಯನಗರದ ವೈಭವವನ್ನು ಊಹಿಸಿಕೊಂಡು, ಇಂದಿನ ಹಾಳುಹಂಪೆಯ ಸ್ಥಿತಿಗತಿಗಳನ್ನು ನೋಡಿ ಮರುಕಪಟ್ಟವರು... ತುಂಬಾ ಮಂದಿ ಇರಲಿಕ್ಕಿಲ್ಲ?


ನಾನು ಹಂಪೆಯ ಬಗ್ಗೆ ತುಂಬಾ ಕೇಳಿದ್ದೆ, ಓದಿದ್ದೆ. ಅಲ್ಲಿನ ಅವಶೇಷಗಳನ್ನು ಕಣ್ಣಾರೆ ನೋಡಬೇಕು ಎಂಬುದು ಬಹುದಿನದ ಕನಸಾಗಿತ್ತು. ಅದರಲ್ಲೂ ಖ್ಯಾತ ಸಾಹಿತಿಯೊಬ್ಬರ "ವಿಜಯನಗರದ ಉಚ್ಛ್ರಾಯ ದಿನಗಳ ವೈಭವವನ್ನು ಊಹಿಸಿಕೊಂಡು ಹಂಪಿಯ ಅವಶೇಷಗಳನ್ನು ಹೃದಯದಿಂದ ನೋಡಬೇಕು" ಎಂಬ ಮಾತುಗಳನ್ನು ಕೇಳಿದಮೇಲಂತೂ ಹಂಪಿಗೆ ಹೋಗಲೇಬೇಕು ಎಂದು ನಿರ್ಧರಿಸಿದ್ದೆ. ಅಂತೆಯೇ ನಮ್ಮ ಬಳಗದವರ ಮುಂದೆ ಪ್ರಸ್ತಾಪಿಸಿದ್ದೆ. ಎಲ್ಲರೂ ದನಿಗೂಡಿಸಿದ್ದರಿಂದ "ಹಂಪಿ-ಹೊಸಪೇಟೆ" ಪ್ರವಾಸದ ಕನಸು ಶ್ರೀ ಕೊಲ್ಲೂರು ಗಿರೀಶ್ ಭಟ್ ರ ಸಂಪೂರ್ಣ ನೆರವಿನಿಂದಾಗಿ ಕಳೆದ ಸೆಪ್ಟೆಂಬರ್ ನಲ್ಲಿ ನನಸಾಯಿತು. ನಮ್ಮ ಪ್ರವಾಸದ ನೆನಪುಗಳನ್ನು ಮೆಲಕುಹಾಕುತ್ತಾ, ಹಂಪಿಯ ಬಗ್ಗೆ internetನಲ್ಲಿ ಸಂಗ್ರಹಿಸಿದ ಮಾಹಿತಿಗಳನ್ನು ಸೇರಿಸಿ ಬರೆದ ಪ್ರವಾಸಕಥನ ಈ "ಸಂಚಾರ" ಮಾಲಿಕೆಯಲ್ಲಿದೆ.


ಶ್ರೀ ವಿದ್ಯಾರಣ್ಯ ಸ್ವಾಮಿಗಳು ಹಕ್ಕ-ಬುಕ್ಕರ ನೆರವಿನಿಂದ ೧೩೩೬ ರಲ್ಲಿ ನಿರ್ಮಿಸಲ್ಪಟ್ಟ ಸಾಮ್ರಾಜ್ಯ "ವಿಜಯನಗರ". ಇವರುಗಳು ಹಾಕಿದ ಭದ್ರ ಅಡಿಪಾಯದಿಂದಾಗಿ "ವಿಜಯನಗರ" ಸಾಮ್ರಾಜ್ಯವು ವಿಸ್ತರಿಸುತ್ತಾ ವಿಸ್ತರಿಸುತ್ತಾ ಶ್ರೀ ಕೃಷ್ಣದೇವರಾಯರ ಕಾಲದಲ್ಲಿ ಇಡೀ ದಕ್ಷಿಣ ಭಾರತವನ್ನೇ ಆವರಿಸಿಕೊಂಡಿತು. ಹಿಂದೂ ಮೌಲ್ಯಗಳನ್ನು ಎತ್ತಿಹಿಡಿಯುತ್ತಾ ಕಲೆ, ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಾ, ದಕ್ಷ ಆಡಳಿತವನ್ನು ನೀಡಿದ್ದು ವಿಜಯನಗರದ ಉನ್ನತಿಗೆ ಕಾರಣವಾಯಿತು. ಅಲ್ಲಲ್ಲಿ ಹರಿದುಹಂಚಿಹೋಗಿದ್ದ, ತಮ್ಮತಮ್ಮಲ್ಲೇ ಹೊಡೆದಾಡುತ್ತಾ ಸಣ್ಣ ಸಣ್ಣ ಸಂಸ್ಥಾನಗಳನ್ನು ನಿರ್ಮಿಸಿಕೊಂಡು ರಾಜ್ಯಾವಾಳುತ್ತಿದ್ದ ಅದೆಷ್ಟೋ ತುಂಡರಸರುಗಳನ್ನು ತಮ್ಮ ಸಾಮಂತರನ್ನಾಗಿಸಿಕೊಂಡು ಒಗ್ಗಟ್ಟಾಗಿ ಬೃಹತ್ ಸಾಮ್ರಾಜ್ಯ ನಿರ್ಮಿಸಿದ್ದು ಭಾರತದ ಇತಿಹಾಸದ ಪುಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಒಂದು ಅಧ್ಭುತ ಯಶೋಗಾಥೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಅತ್ಯಂತ ಸಂಪಧ್ಬರಿತವಾಗಿತ್ತು ವಿಜಯನಗರ. ವಜ್ರವೈಢೂರ್ಯಾದಿಯಾಗಿ ಚಿನ್ನಾಭರಣಗಳನ್ನು ಸೇರುಗಟ್ಟಲೆ, ವಿಜಯನಗರದ ಬೀದಿ ಬೀದಿಗಳಲ್ಲಿ ಮಾರುತ್ತಿದ್ದ ಕಾಲವದು. ತುಂಗಭದ್ರಾ ನದಿ ದಂಡೆಯಲ್ಲಿ ತಲೆಯೆತ್ತಿ ನಿಂತ ವಿಜಯನಗರದ ಕೀರ್ತಿಪತಾಕೆಯು ಬರೀ ಭಾರತದಲ್ಲಷ್ಟೇ ಅಲ್ಲದೆ ವಿಶ್ವದಾದ್ಯಂತ ಹರಡಿತ್ತು. ಕಲ್ಲುಬಂಡೆಗಳನ್ನು ತಿದ್ದಿತೀಡಿ ನಿರ್ಮಿಸಿರುವ, ಶಿಲ್ಪಕಲಾ ವೈಭವನ್ನೂ ಸಾರುವ, ಸುಂದರ ದೃಶ್ಯಕಾವ್ಯಗಳು ವಿಜಯನಗರದ ಔನ್ನತ್ಯಕ್ಕೆ ಸಾಕ್ಷಿಯಾಗಿ ಇಂದಿಗೂ ಅಚ್ಚಳಿಯದೆ ನಿಂತಿವೆ.

ಇಂಥಾ ವಿಜಯನಗರವು ಮೊಗಲರ ನಿರಂತರ ದಾಳಿಗೆ ತುತ್ತಾಗಿ, ಕಾಲನ ಸೆರೆಗೆ ಸಿಕ್ಕಿ ಛಿದ್ರ ಛಿದ್ರವಾಗಿ ಹಾಳು ಹಂಪೆಯಾದದ್ದು ಮಾತ್ರ ಒಂದು ದುರಂತ ಕಥೆ. ೧೫೫೬ ಹೊತ್ತಿಗೆ ವಿಜಯನಗರ ಸಾಮ್ರಾಜ್ಯವು ಸಂಪೂರ್ಣ ಅವನತಿ ಹೊಂದಿ ಭಗ್ನಾವಶೇಷಗಳನ್ನು ತುಂಬಿಕೊಂಡು ಇತಿಹಾಸದ ಪುಟಗಳಲ್ಲಿ ಸೇರಿ ಹೋಯಿತು.


ಈ ಹಂಪೆ ಪರಿಸರಕ್ಕೆ ಇನ್ನೊಂದು ಇತಿಹ್ಯವೂ ಇದೆ. ರಾಮಾಯಣ ಮಹಾಕಾವ್ಯದಲ್ಲಿ ಬರುವ "ಕಿಷ್ಕಿಂಧಾ" ನೆನಪಿದೆಯೇ? ವಾನರ ಸೈನ್ಯದ ಸಾಮ್ರಾಜ್ಯವಾಗಿತ್ತು ಕಿಷ್ಕಿಂಧಾ. ಶ್ರೀರಾಮ ಸೀತೆಯನ್ನರಸುತ್ತಾ ಇಲ್ಲಿಗೆ ಬಂದದ್ದು, ಹನುಮಂತ-ಸುಗ್ರೀವರನ್ನು ಸಂದಿಸಿದ್ದು, ವಾಲಿ-ಸುಗ್ರೀವರ ಕಾಳಗ, ಶ್ರೀರಾಮನ ನೆರವಿನಿಂದ ಸುಗ್ರೀವ ವಾಲಿಯನ್ನು ಸೋಲಿಸಿ ವಾನರಾಧಿಪತಿಯಾಗಿದ್ದು, ವಾನರ ಸೈನ್ಯದ ನೆರವಿನಿಂದ ಲಂಕೆ ಸೇರಿದ್ದು.... ಹೀಗೆ ರಾಮಾಯಣದಲ್ಲಿ "ಕಿಷ್ಕಿಂಧಾ ಕಾಂಡ"ವೇ ಇದೆ. ಈಗಿನ ಹಂಪೆಯೇ ರಾಮಾಯಣದ ಕಿಷ್ಕಿಂಧಾ ಎಂಬುದಕ್ಕೆ ಪುರಾವೆಯೋ ಎಂಬಂತೆ ಕಿಷ್ಕಿಂಧಾ ಗುಡ್ಡ, ಸುಗ್ರೀವ ಗುಹೆ, ಆಂಜನೇಯ ಗುಡಿ, ಆಂಜನೇಯ ಗುಡ್ಡ ಇನ್ನೂ ಅನೇಕ ಸ್ಥಳಗಳು ಇಲ್ಲಿವೆ. ಹೀಗೆ ಹಂಪೆ ಅದೆಷ್ಟೋ ರಹಸ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ. ಅದಕ್ಕೆ "ಇಲ್ಲಿನ ಒಂದೊಂದು ಕಲ್ಲು ಒಂದೊಂದು ಕಥೆ ಹೇಳುತ್ತದೆ" ಎಂದು ನನ್ನ ಲೇಖನ ಆರಂಭಿಸಿದ್ದು.

ಇದಿಷ್ಟು ಪೀಠಿಕೆಯಾಯಿತು. ಇನ್ನು ಪ್ರವಾಸ ಹೊರಡೋಣ!

ಕಳೆದ ಜುಲೈ ತಿಂಗಳಿಂದಲೇ ನಾವೊಂದಿಷ್ಟು ಜನ ಹಂಪಿ, ಹಂಪಿ ಎಂದು ಜಪಿಸುತ್ತಾ ಟೂರ್ ಬಗ್ಗೆ ಸಿದ್ಧತೆಗಳನ್ನು ಮಾಡಲಾರಂಭಿಸಿದ್ದೆವು. ಪ್ರತೀ ವಾರಾಂತ್ಯವೂ ಒಂದಿಲ್ಲೊಂದು ತಾಪತ್ರಯದಿಂದ ಹೊರಡುವ ದಿನ ಮುಂದೆ ಹೋಗುತ್ತಾ ಹೋಗುತ್ತಾ ಕೊನೆಗೂ ಸೆಪ್ಟೆಂಬರ್ ಮೊದಲವಾರಾಂತ್ಯಕ್ಕೆ (ಸೆ. 1-2) ನಿಗದಿಯಾಯಿತು. ಎಂದಿನಂತೆ ರಾಘು ಅಣ್ಣ ನಮ್ಮ tour manager, ನಾನವನ assistant. ನಾನಾಗಲೇ ’ಗೂಗಲಿಸಿ’ ಹಂಪಿ ಬಗ್ಗೆ ದೊಡ್ಡ ಪಟ್ಟಿಯನ್ನೇ ಸಿದ್ಧಪಡಿಸಿದ್ದೆ (ಹಿಂದೊಮ್ಮೆ ಹೀಗೆ ಒಟ್ಟಿಗೆ ಬೇಕಲಕೋಟೆ, ಮಧೂರಿಗೆ ಹೋಗಿದ್ದಾಗ ನನ್ನ online ಪಟ್ಟಿಯಲ್ಲಿ ಕಾಣುತ್ತಿದ್ದ ’ಮೈಪಾಡಿ ಅರಮನೆ’ ಹುಡುಕಿ ಹೊರಟು, ಕೊನೆಗೆ ಅದು ಯಾರಿಗೋ ಸೇರಿದ್ದ ಮನೆಯಾಗಿದ್ದು, ಒಳ ಹೊಕ್ಕಾಗ ಭೂತಾಕಾರಾದ ನಾಯಿಗಳು ನಮ್ಮನ್ನಟ್ಟಿಸಿಕೊಂಡು ಬಂದು ನಾವು ಪೇಚಿಗೆ ಸಿಲುಕಿತ್ತು. ನಂತರದ ಪ್ರವಾಸಗಳಲ್ಲಿ ಈ ತರಹದ ಪಟ್ಟಿ ತಯಾರಿಸುವಾಗ ನಾನು ಹೆಚ್ಚು ಜಾಗ್ರತನಾಗಿರುತ್ತಿದ್ದುದು ಸುಳ್ಳಲ್ಲ). ಎಲ್ಲಾ ಸಿದ್ಧತೆಗಳು ಶುರುವಾಯಿತು.

ಒಂದಿಷ್ಟು ಜನ ಶುಕ್ರವಾರ (ಆ. 31) ಮಧ್ಯಾಹ್ನ ನಮ್ಮ ಎಂದಿನ ’ಟೆಂಪೊ ಟ್ರಾವಲರ್"ನಲ್ಲಿ ಉಡುಪಿಯಿಂದ ಹೊರಟು ಕುಂದಾಪುರ, ಹುಲಿಕಲ್ ಘಾಟಿ, ಹೊಸನಗರ ಮಾರ್ಗವಾಗಿ ಹೆಗ್ಗೋಡಿನಲ್ಲಿ "ಅಕ್ಕ-ಭಾವ-ವಿಭಾ"ರನ್ನೂ ಸೇರಿಸಿಕೊಂಡು ಹೊನ್ನಾಳಿ, ಹರಿಹರ ಮಾರ್ಗವಾಗಿ ರಾತ್ರಿ 11 ಗಂಟೆಯೊಳಗೆ ಹೊಸಪೇಟೆ ತಲಪುವುದೆಂದು ನಿಗದಿಯಾಯಿತು. ನಾವೊಂದಿಷ್ಟು ಜನ ’ಬೆಂಗಳೂರು ಹುಡುಗರು’ ಮೆಜಸ್ಟಿಕ್ನಿಂದ ರಾತ್ರಿ ಹೊರಡುವ ’ರಾಜಹಂಸ’ ಹಿಡಿದು ಶನಿವಾರ (ಸೆ. 1) ಬೆಳಿಗ್ಗೆ ಹೊಸಪೇಟೆ ತಲಪುವ ಪ್ಲಾನ್ ಹಾಕಿ ಮುಂಗಡ ಟಿಕೆಟ್ ಕಾಯ್ದಿರಿಸಿದೆವು. ಬೆಂಗಳೂರಿಂದ ಹೊಸಪೇಟೆಗೆ "ಹಂಪಿ ಎಕ್ಸಪ್ರೆಸ್" ಟ್ರೈನ್ ಇದೆ. ಆದರೆ ಅದು ತಳಕುತ್ತಾ, ಬಳಕುತ್ತಾ ವೈಯಾರದಿಂದ ಹೊಸಪೇಟೆ ತಲಪುವಾಗ ಮಧ್ಯಾಹ್ನವಾಗಬಹುದು ಎಂಬ ಭಯದಿಂದ ’ರಾಜಹಂಸ’ವನ್ನು ಆಯ್ದುಕೊಂಡೆವು.


ಶುಕ್ರವಾರ (ಆ. 31) ಬಂತು. ಎಲ್ಲಾ ಸಿದ್ಧತೆಗಳು ಮುಗಿದಿದ್ದವು. ಆದರೆ ನಮ್ಮ tour manager ರಾಘು ಅಣ್ಣ ತೀವ್ರ ಜ್ವರದಿಂದ ಬಳಲುತ್ತಿರುವ ಸುದ್ದಿ ನಮ್ಮೆಲ್ಲರ ಉತ್ಸಾಹಕ್ಕೂ ತಣ್ಣೀರೆರಚಿತ್ತು. ’ನಿರು’ ಕೂಡಾ ರಜೆ ಸಿಗದ ಕಾರಣ ಹಿಂದೆ ಸರಿದುಬಿಟ್ಟ. ಟೂರ್ ಮುಂದೂಡುವ ಹಂತಕ್ಕೆ ಬಂದಿತ್ತು. ಕೊನೆಗೆ ರಾಘು ಅಣ್ಣನೇ ನಮ್ಮೆಲ್ಲರಿಗೂ ಧೈರ್ಯ ತುಂಬಿ, ನೀವೆಲ್ಲಾ ಹೋಗಿ ಬನ್ನಿ, ಪುನಃ ಮುಂದೂಡುವುದು ಬೇಡ ಎಂದಾಗ ಎಲ್ಲರೂ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿದ್ದೆವು. ಮಧ್ಯಾಹ್ನ ೩ ಗಂಟೆಗೆ ’ದಿನು ಅಣ್ಣ’ನಿಂದ "ಟೆಂಪೊಟ್ರಾವಲರ್ ಹಿಡಿದು ಹೊರಟಿದ್ದೇವೆ" ಎಂಬ ಸುದ್ದಿ ಬಂದಾಗಲೇ ಹಂಪಿಗೆ ಹೋಗುವುದು ಖಾತ್ರಿಯಾದದ್ದು. ನಾವು ಬೆಂಗಳೂರು ಹುಡುಗರೂ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಮೆಜಸ್ಟಿಕ್ ತಲುಪಿ ’ರಾಜಹಂಸ’ದ ಮಳೆನೀರಿಂದ ತೊಯ್ದ ಆಸನದ ಮೇಲೆ ಪ್ಲಾಸ್ಟಿಕ್ ಹಾಸಿ ಕೂತು ನಮ್ಮ ಪ್ರಯಾಣ ಬೆಳೆಸಿ, ಮಾರ್ಗ ಮಧ್ಯೆ ಬಸ್ ಕೆಟ್ಟು ಬೇರೆ ಬಸ್ ಹಿಡಿದು, ಮರುದಿನ ಬೆಳಿಗ್ಗೆ ಹೊಸಪೇಟೆ ತಲಪಿದೆವು. ಊರಿಂದ ಹೊರಟವರು ಘಟ್ಟದ ಜಡಿಮಳೆಗೆ ಸಿಲುಕಿದರೂ ಯಾವುದೇ ತೊಂದರೆ ಇಲ್ಲದೆ ಮಧ್ಯರಾತ್ರಿ ಹೊಸಪೇಟೆ ತಲಪಿದರು. ಒಟ್ಟು ೧೫ ಜನ (ಪುಟ್ಟ ಅಮೋಘ, ವಿಭಾ ಸೇರಿ).

ನಮ್ಮ "ಹೊಸಪೇಟೆ-ಹಂಪಿ" ಪ್ರವಾಸದ ಮುಂದಿನ ಎಲ್ಲಾ ಸಿದ್ಧತೆಗಳನ್ನು ಮಾಡಿಸಿಕೊಟ್ಟವರು ನಮ್ಮ ಬಂಧುಗಳಾದ ಶ್ರೀ ಕೊಲ್ಲೂರು ಗಿರೀಶ್ ಭಟ್. ಇವರು ಹೊಸಪೇಟೆಯ ಸೆಷನ್ಸ್ ಕೋರ್ಟ್ ನಲ್ಲಿ ಜಡ್ಜ್. ಇವರಿಂದಾಗಿ ನಮಗೆ ತುಂಗಭದ್ರಾ ಜಲಾಶಯ (T.B. Dam) ಗೆಸ್ಟ್ ಹೌಸ್ ನಲ್ಲಿ ಒಂದು ಕೊಠಡಿ ಲಭ್ಯವಾಯಿತು, ಇನ್ನೊಂದು ಕೊಠಡಿ ಹೊಟೆಲ್ ಮೈಯೂರದಲ್ಲಿ ಸಿಕ್ಕಿತು. ಹಂಪಿ ಸುತ್ತಿಸಲು ಗೈಡ್, T.B. Dam ಒಳಹೋಗಲು ಅನುಮತಿ... ಎಲ್ಲಾ ವ್ಯವಸ್ಥೆಗಳು ಗಿರೀಶ್ ಅವರು ಮೊದಲೇ ಮಾಡಿಸಿಟ್ಟಿದ್ದರು. ಒಂಥರಾ VIP treatment! ನಮ್ಮ ಉತ್ಸಾಹವನ್ನು ಇಮ್ಮಡಿಯಾಗಿಸಿತ್ತು.


ಬೇರೆಡೆ ಬಿದ್ದ ವಿಪರೀತ ಮಳೆಯಿಂದಾಗಿ ತುಂಗಭದ್ರಾ ನದಿ ಭರ್ತಿಯಾಗಿ T.B. Dam ತುಂಬಿ ತುಳುಕುತ್ತಿತ್ತು. ಡ್ಯಾಂ ದಂಡೆಯಲ್ಲೆ ನಮ್ಮ ಕೊಠಡಿ. ಎದುರಿಗೆ ಕಣ್ಣು ಹಾಯಿಸಿದಷ್ಟೂ ಬರೀ ನೀರು, ವಿಪರೀತ ಗಾಳಿ, ಅಲೆಗಳು ದಂಡೆಗಪ್ಪಳಿಸಿ ಉಂಟಾಗುವ ’ರಪ್ ರಪ್’ ಸದ್ದು. ನಮಗೆ ಬಯಲುಸೀಮೆಯಲ್ಲೂ ಸಮುದ್ರದ ದಂಡೆ ಮೇಲೆ ನಿಂತಂತಾಗಿತ್ತು!!! ಸ್ವಲ್ಪ ದೂರದಲ್ಲೇ ಡ್ಯಾಂನ ಮುಖ್ಯ ಗೇಟ್. ನಾನಾಗಲೇ ಕ್ಯಾಮರಾ ಹಿಡಿದು ಓಡಾಡಲು ಶುರುಮಾಡಿದ್ದೆ.

ಬೆಳಿಗ್ಗೆ 8.30ಕ್ಕೆ ಎಲ್ಲರೂ ಸಿದ್ಧರಾಗಿ ಹಂಪಿಗೆ ಹೊರಡಲು ಟ್ರಾವಲರ್ ಹತ್ತಿದೆವು. ನಮ್ಮ ಬಳಗ ಒಂದಾಗಿತ್ತು, ನಮ್ಮ ಟೂರ್ ಶುಭಾರಂಭವಾಗಿತ್ತು.

(ಮುಂದುವರಿಯುವುದು...)

Tuesday, January 22, 2008

Sanchara:: Tour experience

ಸಂಚಾರ

ಕನ್ನಡದಲ್ಲಿ "ದೇಶ ನೋಡು, ಕೋಶ ಓದು" ಎಂಬ ಒಂದು ನಾಣ್ಣುಡಿ ಇದೆ. ನಮ್ಮ ಬಿಡುವಿನಲ್ಲಿ ಗ್ರಂಥಗಳನ್ನು ಓದಿ ಜ್ಞಾನ ವರ್ಧಿಸಿಕೊಳ್ಳುವಂತೆ, ದೇಶಸಂಚಾರ ಹೋಗುವುದರಿಂದಲೂ ನಮ್ಮ ಜ್ಞಾನ ವರ್ಧಿಸಿಕೊಳ್ಳಬಹುದು ಎಂಬ ಸಂದೇಶವನ್ನು ಈ ನಾಣ್ಣುಡಿ ತಿಳಿಸುತ್ತದೆ. ಎಷ್ಟು ಅರ್ಥಗರ್ಭಿತವಾಗಿದೆಯಲ್ಲಾ? ನಮ್ಮ ಸುತ್ತಲ ಪ್ರದೇಶಗಳಿಗೆ ಆಗಾಗ ಭೇಟಿನೀಡುವುದರಿಂದ ಆ ಪ್ರದೇಶದ ಜನಜೀವನದ ಬಗ್ಗೆ, ಭೌಗೋಳಿಕ-ಸಾಮಾಜಿಕ-ಸಾಂಸ್ಕೃತಿಕ ವಿಶೇಷತೆಯ ಬಗ್ಗೆ, ಅಲ್ಲಿರುವ ಗಿಡ-ಮರ-ಪ್ರಾಣಿ-ಪಕ್ಷಿಗಳ ಬಗ್ಗೆ, ಹೀಗೆ ಅದೆಷ್ಟೊ ಬಗೆಯ ವಿಷಯಗಳು ನಮ್ಮರಿವಿಗೆ ಬರುತ್ತದೆ. ಅಷ್ಟೇ ಅಲ್ಲ, ನಮ್ಮ ದಿನಗೆಲಸದ ಏಕತಾನತೆಯಿಂದ ಹೊರಬರಲು ಅತಿಮುಖ್ಯವಾದ break ದೊರೆಯುತ್ತದೆ. ಅದರಲ್ಲೂ ಕರ್ತವ್ಯ ನಿಮಿತ್ತ ದೂರದೂರಲ್ಲಿ ನೆಲೆಸಿರುವ ನಮ್ಮ ಪ್ರೀತಿಪಾತ್ರರೆಲ್ಲಾ ಒಟ್ಟಾಗಿ tour, picnic ಹಮ್ಮಿಕೊಂಡರೆ? ಅದರ ಗಮ್ಮತ್ತೇ ಬೇರೆ!


ಕೇರಳದ "ಮುನ್ನಾರ್"ಗೊಂದು ಭೇಟಿ...

ನಮ್ಮ ನೆಂಪು ಬಳಗದವರೆಲ್ಲಾ ಜತೆಗೂಡಿ ವರ್ಷಕ್ಕೊಂದು ಅಥವಾ ಎರಡು ಬಾರಿ ಪ್ರೇಕ್ಷಣೀಯ ಸ್ಥಳಗಳಿಗೆ ಪಿಕ್ನಿಕ್, ಟೂರ್ ಹಮ್ಮಿಕೊಳ್ಳುವುದು ಹಲವು ವರ್ಷಗಳಿಂದ ಸಂಪ್ರದಾಯದಂತೆ ನಡಕೊಂಡು ಬಂದಿದೆ. ಈಗಾಗಲೇ ನಾವು ಕೊಡಚಾದ್ರಿ ಶಿಖರ; ಬೈಂದೂರು ಸಮೀಪದ ಕೂಸಳ್ಳಿ ಜಲಪಾತ, ಮುರ್ಡೇಶ್ವರ, ಮರವಂತೆ; ಜೋಗ ಜಲಪಾತ, ಸಾಗರ ಸಮೀಪದ ಇಕ್ಕೇರಿ, ಹೆಗ್ಗೋಡು, ಮಾಸ್ತಿಕಟ್ಟೆ; ಒಂದೇ ಹೆಬ್ಬಂಡೆಯನ್ನು ಕೊರೆದು ನಿರ್ಮಿಸಿರುವ "ವಾರಾಹಿ ಜಲವಿದ್ಯುದಾಗರ"; ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ರಂಗನತಿಟ್ಟು ಪಕ್ಷಿಧಾಮ; ತಿರುಪತಿ, ಶ್ರೀಕಾಳಹಸ್ತಿ; ಕೇರಳದ ಮುನ್ನಾರ್, ಗುರುವಾಯೂರು, ಬೇಕಲಕೋಟೆ, ಮಧೂರು, ಅನಂತಪುರ; world heritage site ಪಟ್ಟಿಯಲ್ಲಿ ಮನ್ನಣೆ ಪಡೆದಿರುವ "ಹಂಪಿ", ಹೊಸಪೇಟೆಯ ತುಂಗಭದ್ರಾ ಜಲಾಶಯ ಮುಂತಾದ ಸ್ಥಳಗಳಿಗೆ ಯಶಸ್ವಿಯಾಗಿ ಟೂರ್ ಹೋಗಿಬಂದಿದ್ದೇವೆ.

ಇಷ್ಟೇ ಅಲ್ಲ... ನಮ್ಮಲ್ಲಿ ಕೆಲವರು ಸೂರತ್, ಹೈದರಾಬಾದ್, ಮುಂಬೈ, ದೆಹಲಿ, ಆಗ್ರಾ, ಜೈಪುರ, ಹರಿದ್ವಾರಗಳಿಗೂ ಹೋಗಿಬಂದಿದ್ದಾರೆ. ನಮ್ಮ "ವಿಶು ಅಣ್ಣ" ಅಮೇರಿಕಾ, ಕೆನಡಾ, ತೈವಾನ್, ಜಪಾನ್, ಕೊರಿಯಾ, ಸಿಂಗಾಪುರ ಇತ್ಯಾದಿ ದೇಶಗಳನ್ನು ಕೆಲಸದ ಸಲುವಾಗಿ ಸುತ್ತುತ್ತಲೇ ಇರುತ್ತಾರೆ. "ಹರೀಶ ಅಣ್ಣ ದಂಪತಿ"ಗಳೂ ಉತ್ತರ ಅಮೇರಿಕಾದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ. ನಮ್ಮ "ನ.ಭ.ನೆಂಪು"ರವರು "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯನ್ನು ರಾಷ್ಟ್ರಪತಿಯವರಿಂದ ಪಡೆಯಲು ದೆಹಲಿಯ ರಾಷ್ಟ್ರಪತಿ ಭವನ, ಕೆಂಪುಕೋಟೆಗೂ ಭೇಟಿ ನೀಡಿದ್ದಾರೆ. ನನಗೂ ನನ್ನ ಸ್ನೇಹಿತರಿಂದಾಗಿ ಉಡುಪಿ ಆಸುಪಾಸಿನ ಕೂಡ್ಲುತೀರ್ಥ, ಜೋಮ್ಲುತೀರ್ಥ, ಕೊಲ್ಲೂರು ಸಮೀಪದ "ಅರಸಿನ ಗುಂಡಿ" ಜಲಪಾತ, ಬೆಳ್ತಂಗಡಿ ದಿಡುಪೆಯ "ಅರ್ಬಿ", ಚಾರ್ಮಾಡಿ ಘಾಟಿಯಲ್ಲಿರುವ "ಅಲೇಕಾನ್" ಜಲಪಾತ, ಹನುಮನಗುಂಡಿ... ಸಕಲೇಶಪುರ ಸಮೀಪದ "ಎಡಕುಮೇರಿ" railway track ಮೇಲೆ 25 ಕಿ.ಮಿ. ಟ್ರೆಕ್ಕಿಂಗ್... ಜೋಗದ ಗುಂಡಿ ಇಳಿಯುವ, ಜೋಗ ಫಾಲ್ಸ್ "ರಾಜ"ನ ತಲೆಯಿಂದ ಕಣಿವೆ ವೀಕ್ಷಿಸುವ... ಮಾಸ್ತಿಕಟ್ಟೆಯ ಮಾಣಿ ಡ್ಯಾಂ, ಕುದುರೆಮುಖದ ಲಕ್ಯಾ ಡ್ಯಾಂ, ಕೊಡಗಿನ ಹಾರಂಗಿ ಡ್ಯಾಂ, ಮೈಸೂರಿನ KRS ಡ್ಯಾಂ, ಶಿಂಸಾ ಡ್ಯಾಂ, ಹೊಸಪೇಟೆಯ ತುಂಗಭದ್ರಾ ಡ್ಯಾಂ... ಗೋಕರ್ಣದ ಓಮ್ ಬೀಚ್, ಹೊನ್ನಾವರ ಬೀಚ್, ಮರವಂತೆ, ಮಲ್ಪೆ, ಕಾಪು, ಬೆಂಗ್ರೆ ಬೀಚ್... ಶಿರಸಿ ಸಮೀಪದ ಪ್ರಸಿದ್ಧ "ಯಾಣ", ಕುದುರೆಮುಖ, ಬೆಳ್ತಂಗಡಿ ಸಮೀಪದ "ಗಡಾಯಿ ಕಲ್ಲು (ಜಮಾಲಾಬಾದ್ ಕೋಟೆ)"... ಕೊಡಗಿನ ಮಡಿಕೇರಿ, ಅಬ್ಬಿ, ಕುಶಾಲನಗರ, ಟಿಬೆಟ್ ಕ್ಯಾಂಪ್, ದುಬಾರೆ ರೆಸಾರ್ಟ್, ನಿಸರ್ಗ ಧಾಮ, ತಲಕಾವೇರಿ... ಕಾರ್ಕಳ-ಮೂಡಬಿದ್ರೆಯ ಹಲವಾರು ಸ್ಥಳಗಳು... ಚಾಮರಾಜನಗರ ಸಮೀಪದ "ಬಿಳಿಗಿರಿ ರಂಗನ ಬೆಟ್ಟ (BR Hills)" ಅಲ್ಲಿನ ಕಾಡಿನಲ್ಲಿರುವ "ಸೋಲಿಗರು", ಅವರ ಗುಡಿಸಲು, ಅವರ ಹಾಡಿ... ಬಂಡೀಪುರ ಸಮೀಪದ "ಗೋಪಾಲ ಸ್ವಾಮಿ ಬೆಟ್ಟ", ಅಲ್ಲಿನ reserve forest trekking... ಶಿವನಸಮುದ್ರ, ಭರಚುಕ್ಕಿ ಜಲಪಾತ, ತಲಕಾಡು... ತಮಿಳುನಾಡಿನ ಊಟಿ, ಕೂನೂರು, ಅಲ್ಲಿಯ ಚಹಾ ಎಸ್ಟೇಟ್, ಪ್ರಸಿದ್ಧ "toy train" ಸವಾರಿ... ಹೀಗೆ ಹಲವು ಸ್ಥಳಗಳನ್ನು ನೋಡುವ ಸುವರ್ಣಾವಕಾಶ ಲಭಿಸಿದೆ. ಚಿಕ್ಕಂದಿನಲ್ಲಿ ಅಪ್ಪ-ಅಮ್ಮ ಜೊತೆ ರಾಮೇಶ್ವರ, ಧನುಷ್ಕೋಡಿ, ಮಧುರೈ, ಶಿವಕಾಶಿ, ಕನ್ಯಾಕುಮಾರಿ, ತಿರುವನಂತಪುರ ದರ್ಶನವೂ ಆಗಿದೆ. ಒಂದೊಂದು ಪ್ರವಾಸವು ಮರೆಯಲಾರದ ಸಂತೋಷವನ್ನ, ಅನುಭವಗಳನ್ನ, ನೆನಪುಗಳ ಮೂಟೆಯನ್ನ ನೀಡುತ್ತಿರುತ್ತದೆ.

ಹೀಗೆ ಜೊತೆಗೂಡಿ ಟೂರ್ ಹೋಗುವುದು ಅಷ್ಟು ಸುಲಭದ ಮಾತೇನಲ್ಲ. ಬಿಡುವಿಲ್ಲದ ಕೆಲಸದಲ್ಲಿ ಮುಳುಗಿರುವ, ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಎಲ್ಲರನ್ನು ಒಟ್ಟಾಗಿಸುವುದೇ ದೊಡ್ಡ ಕೆಲಸ. ಎಲ್ಲರಿಗೂ ರಜೆಯ ಹೊಂದಾಣಿಕೆಯಾಗಬೇಕು, 2-3 ದಿನ ಮನೆಬಿಟ್ಟಿರಲು ಅನುಕೂಲವಾಗಿರಬೇಕು, ಬೇರೆ ಬೇರೆ ಅಡೆತಡೆಗಳು. ಕೊನೆಗೆ ಹಲವು "tele conference"ಗಳಾದ ಬಳಿಕ ದಿನ ನಿಗದಿಗೊಳಿಸುವುದು, ಯಾವ ಸ್ಥಳವೆಂದು ಆರಿಸಿಕೊಳ್ಳುವುದು. ರಜೆಗೆ ತಕ್ಕಂತೆ ಸ್ಥಳಗಳ ಆಯ್ಕೆ. 1-2 ದಿನವಾದರೆ ಹತ್ತಿರದಲ್ಲೇ ಯಾವುದಾದರೂ ಸ್ಥಳಗಳು, 3-4 ದಿನಗಳಾದರೆ ದೂರದ ಊರುಗಳು... ಟೂರ್ ನಿಗದಿಯಾದ ನಂತರ ಹೊರಡುವ ಹುಮ್ಮಸ್ಸಿನಲ್ಲಿ ಉಳಿದ ವ್ಯವಸ್ಥೆಗಳು ಲಗುಬಗನೆ ಸಿದ್ಧಗೊಳ್ಳುತ್ತದೆ. ಪ್ರಯಾಣಕ್ಕೆ ವಾಹನದ ವ್ಯವಸ್ಥೆ, ಉಳಿದುಕೊಳ್ಳಲು ರೂಂ, ನೋಡಬೇಕಾದ ಸ್ಥಳಗಳ ಪಟ್ಟಿ, ದಾರಿಖರ್ಚಿಕೆ ಬೇಕಾಗುವ "ಕುರುಂ ಕುರುಂ" ತಿಂಡಿಗಳು, ಪ್ರವಾಸೀ ಸ್ಥಳದ ಹವಾಗುಣದ ಬಗ್ಗೆ, ಅಲ್ಲಿರುವ ಸಸ್ಯಹಾರಿ ಹೊಟೆಲ್ ಬಗ್ಗೆ ಮಾಹಿತಿ ಇತ್ಯಾದಿ... ಎಲ್ಲಾ ಸಿದ್ಧತೆಗಳ ನಂತರ ನಮ್ಮ ಬಳಗದ ಪ್ರಯಾಣ ಆರಂಭವಾಗುವುದು.


ಹಂಪಿ "ಕಡಲೆಕಾಳು ಗಣೇಶ"ನ ಮುಂದೆ ನಮ್ಮ ಬಳಗ

ಟೂರ್ ಮುಗಿಸಿ ಬಂದಾಗ ಎಲ್ಲರಿಗೂ ನವಚೈತನ್ಯದ ಟಾನಿಕ್ ಸಿಕ್ಕಂತಾಗಿರುತ್ತದೆ. ಮುಂದಿನ ಹಲವು ದಿನಗಳ ವರೆಗೆ "busy schedule" ಎದುರಿಸಲು ಹೊಸ ಹುರುಪು ಬಂದಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ತಮ್ಮ ಆಪ್ತರೊಂದಿಗೆ ಸುಂದರ ತಾಣಗಳಲ್ಲಿ ಒಂದೆರಡು ದಿನಗಳನ್ನು ಸಂತೋಷದಿಂದ ಕಳೆದ ನೆಮ್ಮದಿ ಸಿಕ್ಕಿರುತ್ತದೆ.

-- ~೦~ --

ಮುಂದಿನ ಕಂತುಗಳಲ್ಲಿ ನಾವು ಟೂರ್ ಹಮ್ಮಿಕೊಂಡ ಸ್ಥಳಗಳ ಬಗ್ಗೆ, ಅಲ್ಲಿನ ಅನುಭವಗಳ ಬಗ್ಗೆ, ಉಪಯುಕ್ತ ಮಾಹಿತಿಗಳೊಂದಿಗೆ, ಚಿತ್ರಸಹಿತ ಲೇಖನವನ್ನು ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ "ಸಂಚಾರ" ಮಾಲಿಕೆಯಲ್ಲಿ... ಓದಿ ಪ್ರೋತ್ಸಾಹಿಸುತ್ತೀರಲ್ಲ?...

--
ಗುರು

Nempu Balaga:: Our Motto

"ಸಂಹತಿಃ ಕಾರ್ಯಸಾಧಿಕಾ"

ನಮ್ಮ "ನೆಂಪು ಬಳಗ"ದ ಧ್ಯೇಯವಾಕ್ಯ "ಸಂಹತಿ: ಕಾರ್ಯಸಾಧಿಕಾ". ದಿ. ನೆಂಪು ಶಿವರಾಮ ಭಟ್ಟರು ನಮ್ಮ ಬಳಗಕ್ಕೆ ಈ ಧ್ಯೇಯವಾಕ್ಯವನ್ನಿತ್ತು ಹರಸಿದ್ದಾರೆ. ಅವರು ನಮಗೆ ಬೋಧಿಸಿದ ಹಿತನುಡಿಗಳ ಸಾರಾಂಶ ಇಲ್ಲಿದೆ:

ಹುಲ್ಲೆಳೆಯಿಂದ ಏನೂ ಮಾಡಲಾಗದು, ಆದರೆ ಅವು ಸೇರಿ ಮಡೆ ಹಗ್ಗವಾದಾಗ ಮುಡಿಕಟ್ಟುವ, ತಿರಿಕಟ್ಟುವ ಹಗ್ಗವಾಗುವುದು. ಒಂದು ಹುರಿಯಿಂದ ಏನೂ ಆಗದು, ಆದರೆ ಅದೇ ಹುರಿ ಎಲ್ಲ ಸೇರಿ ಕೂಡಿದರೆ ಹಗ್ಗವಾಗಿ ರಥ ಎಳೆಯಲು ಸಾಧ್ಯವಾಗುತ್ತದೆ. ಒಂದು ಬೆರಳಿನಿಂದ ಏನೂ ಮಾಡಲು ಕಷ್ಟ, ಆದರೆ ಐದು ಬೆರಳು ಕೂಡಿದ ಕೈಯಿಂದ ಯಾವ ಕೆಲಸ ಬೇಕಾದರೂ ಮಾಡಲು ಸಾಧ್ಯವಿದೆ. ಹಾಗೆಯೇ 10 ಬೆರಳು ಸೇರಿ ಎರಡೂ ಕೈಗಳಿಂದ ಇನ್ನೂ ಹೆಚ್ಚಿನ ಕಾರ್ಯಸಾಧನೆ ಸಾಧ್ಯ.

ಜೇನು ನೊಣಗಳು ಮಧು ಸಂಗ್ರಹಿಸುತ್ತದೆ. ಹಾಗೆಯೇ ಒಂದು ಒಕ್ಕೂಟ ವ್ಯವಸ್ಥೆಯಿಂದ, ಸಮಾನ ಸ್ಕಂಧರು ಹಾಗೂ ಸಹೃದಯವಂತರು ಪರಸ್ಪರ ಗುಂಪುಗೂಡಿ ದುಡಿಯುವ ಮನಸ್ಸಿನಿಂದ ಯಾವ ಸಾಧನೆಯನ್ನು ಬೇಕಾದರೂ ಮಾಡಿ ಗುರಿ ತಲಪಬಹುದು.

ಋಗ್ವೇದದ ಕೊನೆಯ ಮಾತಿನಲ್ಲಿ "ಸಮಾನೀವ ಆಕೂತಿಃ" - ನಮ್ಮೆಲ್ಲರ ಅಂತರಂಗದ ಅಭಿಪ್ರಾಯ ಒಂದೇ ಆಗಿರಲಿ; "ಸಮಾನಾ ಹೃದಯಾನಿ" - ಎಲ್ಲರ ಮನಸ್ಸು ಒಂದೇ ಆಗಿರಲಿ ಎಂಬ ಸಂದೇಶವಿದೆ. ಅದನ್ನೇ "ಸಂಹತಿ:" ಎಂಬ ಅರ್ಥದಲ್ಲಿ "ಒಕ್ಕಟ್ಟಿನಲ್ಲಿ ಬಲವಿದೆ" ಎಂದುದು. ಉತ್ತಮ ಗುರಿ ಇದ್ದು ಪರಸ್ಪರ ಹೊಂದಿಕೊಂಡು ಮಾಡಿದ ಕೆಲಸ ಸುಲಭ ಸಾಧ್ಯವಾಗಿ ಕಾರ್ಯಸಾಧಕವಾಗುತ್ತದೆ ಎಂಬುದನ್ನು "ಸಂಹತಿ: ಕಾರ್ಯಸಾಧಿಕಾ" ಉಕ್ತಿ ತಿಳಿಸುತ್ತದೆ.

ದಿ. ನೆಂಪು ಶಿವರಾಮ ಭಟ್ಟರು

Wednesday, January 16, 2008

Nenapina Buttiyinda: NK Bhat 03

ನಿರ್ದೇಶಕರೇ ಇಲ್ಲದ ನಾಟಕ!

ನಾವು ನೆಂಪಿನ ಗೆಳೆಯರೆಲ್ಲ ಕೂಡಿ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ (ಹಳೆ ವಿದ್ಯಾರ್ಥಿ ಸಂಘದ ವತಿಯಿಂದ) ನಾಟಕ ಆಡಿದ್ದು ಅಪೂರ್ವ ಕ್ಷಣಗಳಲ್ಲೊಂದು. ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ಮಾಡುತ್ತಾರೆಂದಕೂಡಲೇ ನಮ್ಮೆಲ್ಲರ ಮಂಡೆಯೊಳಗೊಂದು ಭೂತ ಹೊಕ್ಕಿತು. ನಾವೊಂದು "ಹಳೆ ವಿದ್ಯಾರ್ಥಿ ಸಂಘ" ಮಾಡಿ ಅದರ ಮೂಲಕ ಮಾತೃಸಂಸ್ಥೆಗೊಂದು ರಂಗಮಂದಿರ ಕಟ್ಟಿಸಿಕೊಡೋಣ ಎಂಬ ಆಲೋಚನೆ ನಮ್ಮೆಲ್ಲರದ್ದು. ಕೂಡಲೇ ಕಾರ್ಯಪ್ರವೃತ್ತರಾದೆವು. ಪತ್ರಿಕೆ ಮೂಲಕ "ಸಂಘ" ಸ್ಥಾಪಿಸುವ ಕುರಿತು ಪ್ರಕಟಣೆ ನೀಡಿ, ಹಳೆ ವಿದ್ಯಾರ್ಥಿಗಳು ಎಲ್ಲಿದ್ದರೂ ನಮ್ಮನ್ನು ಸಂಪರ್ಕಿಸುವಂತೆ ಕೋರಲಾಯಿತು.

ನಾನು, ಶಾಲೆಯ ದಾಖಲೆಗಳನ್ನೆಲ್ಲ ತಿರುವಿಹಾಕಿ ಈ ವರೆಗೆ ಆ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿದೆ ಹಾಗೂ ಅವರೆಲ್ಲರಿಗೆ ಪತ್ರ ರವಾನಿಸಲಾಯಿತು. ಎಲ್ಲ ಪ್ರಯತ್ನಗಳ ಫಲದಿಂದ ಕೆಲವು ಸಾವಿರ (ಸರಿಯಾಗಿ ನೆನಪಿಲ್ಲ) ಹಣ ಒಟ್ಟುಗೂಡಿತು.

ಸಂಘ ಏನೋ ಸ್ಥಾಪನೆಯಾಯಿತು. ಅದರ ಪ್ರಯುಕ್ತ ಮನೋರಂಜನಾ ಕಾರ್ಯಕ್ರಮ ಬೇಡವೇ? ಅಂತೆಯೇ ವಾರ್ಷಿಕೋತ್ಸವದ ಮರುದಿನ ರಾತ್ರಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಎಂದಾಯಿತು. ನಾವೆಲ್ಲ ಸೇರಿ ಒಂದು ಹಾಸ್ಯ ನಾಟಕ ಮಾಡಲು ತೀರ್ಮಾನಿಸಿದೆವು. ಪ್ರಸಂಗ "ರಂಗಣ್ಣನ ರಾದ್ಧಾಂತ". ನಾವೇ ನೆಂಪಿನ ಭಟ್ಟರ ಮನೆಯ ಹುಡುಗರೆಲ್ಲ ಪಾತ್ರ ಹಂಚಿಕೊಂಡೆವು. ಆದರೆ ಸ್ತ್ರೀ ವೇಷಕ್ಕೆ ಯಾರು ಎಂಬುದು ’ಮಿಲಿಯನ್ ಡಾಲರ್’ ಪ್ರಶ್ನೆಯಾಗಿತ್ತು. ಹುಡುಗಿ ವೇಷವೆಂದರೆ ನಾಚುವ ಕಾಲ ಅದಾಗಿತ್ತು. ಯಾರನ್ನು ಕೇಳಿದರೂ ಇಲ್ಲ ಎನ್ನುವವರು! ಮೀಸೆ ಬೇರೆ ತೆಗೀಬೇಕಲ್ಲ! ಕೊನೆಗೆ ಬೇರೆ ಉಪಾಯವಿಲ್ಲದೇ ನಾನೇ ’ಗೀತಾ’ಳಾಗಬೇಕಾಯ್ತು!

ಎಲ್ಲರಿಗೂ ಸಂಭಾಷಣೆ ನಾನೇ ಬರೆದು ಹಂಚಿದೆ. ರಿಹರ್ಸಲ್ ಮಾಡಲು ನಮ್ಮ ಗಣಪತಿ ದೇಗುಲದ ಪರಿಸರವನ್ನೇ ಆರಿಸಿಕೊಂಡೆವು. ಕರೆಂಟು ಇಲ್ಲದ ಆ ದಿನಗಳಲ್ಲಿ ದೇವರ ಮಂದದೀಪದೆದುರು ಕಷ್ಟಪಟ್ಟು ಸಂಭಾಷಣೆ ಓದಿಕೊಂಡು ರಿಹರ್ಸಲ್ ಮಾಡಿದೆವು. ನಮ್ಮೊಳಗಿನ ತಪ್ಪುಗಳನ್ನು ನಾವೇ ತಿದ್ದಿಕೊಳ್ಳುತ್ತಾ ನಿರ್ದೇಶಕನ ಸ್ಥಾನವನ್ನು ಶ್ರೀ ಗಣಪತಿ ದೇವರಿಗೇ ಬಿಟ್ಟುಕೊಟ್ಟೆವು.

ಮೊದಲ ಪ್ರಯತ್ನ, ಹೇಗೂ ಏನೋ ಎಂಬ ಅಳುಕಿನಿಂದಲೇ ನಾಟಕ ಪ್ರಾರಂಭಿಸಿದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ನೆರೆದ ಜನಸಾಗರದೆದುರು ನಮ್ಮ ನಾಟಕ ಗೆದ್ದಿತ್ತು! ಯಾವುದೇ ರಂಗ ನಿರ್ದೇಶಕನ ತಾಲೀಮು ಇಲ್ಲದೇ ಇಷ್ಟೊಂದು ಅದ್ಭುತವಾಗಿ ನಾಟಕ ಮೂಡಿಬಂದುದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿತ್ತು. ಆ ದಿನದ ಆನಂದ, ತೃಪ್ತಿ ಎಣಿಕೆಗೆ ನಿಲುಕದ್ದು. ನಮ್ಮಿಂದ ಇದೂ ಸಾಧ್ಯವೆಂದು ತೋರಿಸಿಕೊಟ್ಟ ದಿನವದು.

ಆದರೆ ರಂಗಮಂದಿರದ ಕನಸು ಕನಸಾಗಿಯೇ ಉಳಿಯಿತು. ಒಟ್ಟುಗೂಡಿದ ಹಣ ನಮ್ಮ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳ ವೆಚ್ಚಕ್ಕೆ ಸರಿಹೊಂದಿತ್ತು!

-- ನೆಂಪು ಕೃಷ್ಣ ಭಟ್

Monday, January 14, 2008

Nenapina Buttiyinda: NK Bhat 02

ದೇವರಿಗೆ "mutraಭಿಷೇಕ"!

ಬಾಲ್ಯದಲ್ಲಿ ನಾನು ಹಾಗೂ murthy "ಗಳಸ್ಯ-ಕಂಠಸ್ಯ" ಸ್ನೇಹಿತರು. ೧ರಿಂದ ೪ನೇ ತರಗತಿವರೆಗೆ ಗುಡ್ರಿ ಶಾಲೆಗೆ ಸುಮಾರು ೧ ಕಿ.ಮೀ. ದೂರ ’ಹಾಡಿ ಬದಿ’ ನಡಕೊಂಡು ಹೋಗಬೇಕಿತ್ತು. ಎಷ್ಟೆಂದರೂ ಮಕ್ಕಳು, ಅದೂ ಇಬ್ಬರು ’ಪೋಕರಿ’ಗಳು ಒಟ್ಟಾದಾಗ ಅದರ ಮಜವೇ ಬೇರೆ. ಬೆಳಿಗ್ಗೆದ್ದು ಶಾಲೆಗೆ ಹೊರಟ ನಾವು ದಾರಿ ಮಧ್ಯೆ ಅದೂ ಇದೂ ಆಟ ಆಡುತ್ತಾ ಸಾಗುತ್ತಿದ್ದೆವು. ಆಟದೊಳಗೆ ಇಷ್ಟವಾದದ್ದು ಸಹಜವಾಗಿಯೇ "ದೇವರ ಆಟ"!

ಒಂದು ಪುಟ್ಟ ಕಲ್ಲನ್ನು ನಿಲ್ಲಿಸಿ ಅದಕ್ಕೆ ಪೂಜೆ ಮಾಡಿ ನಂತರ ಶಾಲೆ ಕಡೆ ಓಡುವುದು ನಮ್ಮ ದಿನಚರಿಯಾಗಿತ್ತು. ಆ ಕಲ್ಲಿಗೆ ಹೂವಾದರೋ "ಕಿಸ್ಕಾರ", ಬೇಕಾದಷ್ಟು ಸಿಗುತ್ತಿತ್ತು. ಆದರೆ ದೇವರಿಗೆ ಸ್ನಾನ ಆಗಬೇಕಲ್ಲ! ನೀರಿಗೆ ಎಲ್ಲಿ ಹೋಗುವುದು? ತಟ್ಟನೇ ನಮ್ಮ ಪುಟ್ಟ ತಲೆಗೆ ಹೊಳೆದದ್ದು "mutra!" ಇಬ್ಬರೂ ದೇವರ ಮಂಡೆಗೆ mutraಭಿಷೇಕ ಮಾಡಿಯೇಬಿಟ್ಟೆವು! ಅಂತೂ ದೇವರ ಸ್ನಾನ ಗಡದ್ದಾಗಿಯೇ ನಡೆಯುತ್ತಿತ್ತು.

ಈ ಮಧ್ಯೆ ನಮ್ಮ ನೆಂಪು ಹೈಸ್ಕೂಲಿನ ಶಂಕರ ಮಾಷ್ಟ್ರು ಅದೇ ದಾರಿಯಲ್ಲಿ ಬರುತ್ತಿದ್ದರು. ದಿನವೂ ಅವರು "ಹ್ವಾ! ದೇವ್ರಿಗೆ ಸ್ನಾನ ಆಯ್ತನಾ?" ಅಂತ ಕೇಳುತ್ತಿದ್ದರು. ನಾವೂ ಗತ್ತಿನಲ್ಲೇ "ಹ್ಹ್! ಮಾಡ್ತಾ ಇತ್ತ್ ಗುರುಗಳೇ!" ಎನ್ನುತ್ತಿದ್ದೆವು. (ಕೆಲವು ವರ್ಷಗಳ ನಂತರ ನಾವೂ ಹೈಸ್ಕೂಲು ಮೆಟ್ಟಿಲು ಹತ್ತಿದಾಗ, ಅದೇ ಮೇಷ್ಟ್ರ ಮುಖ ನೋಡಿದಾಗ "mutraಭಿಷೇಕ" ನೆನಪಾದದ್ದು ಸುಳ್ಳಲ್ಲ).

ಮಕ್ಕಳ ಪೂಜೆ ಹೇಗಿದ್ದರೇನು, ಅಲ್ಲಿ ಮುಗ್ಧ ಭಕ್ತಿಯೊಂದೇ ಪ್ರಧಾನ, ಅಲ್ದಾ? ನಮ್ಮ ಶುದ್ಧ ಮನಸ್ಸಿನ ನಿಸ್ವಾರ್ಥ ಭಕ್ತಿಗೆ ಮೆಚ್ಚಿದ ನಮ್ಮ "(ಕಲ್ಲು) ದೇವರು" ಅಂದಿನ "mutraಭಿಷೇಕ"ವನ್ನು ಪಂಚಾಮೃತಾಭಿಷೇಕದಂತೆ ಸ್ವೀಕರಿಸಿರಲೇಬೇಕು. ಏಕೆಂದರೆ ಅಂದಿನಿಂದ ಇಂದಿನವರೆಗೂ ನಮ್ಮೀರ್ವರನ್ನೂ ಕೈಹಿಡಿದು ನಡೆಸುತ್ತಿದ್ದಾರೆ.

-- ನೆಂಪು ಕೃಷ್ಣ ಭಟ್