Monday, December 31, 2007

Happy New Year - 2008



New year Wallpaper for you...

Friday, December 21, 2007

Mareyalagada "Nempina Vaibhava"

ಮರೆಯಲಾಗದ "ನೆಂಪಿನ ವೈಭವ"

ಅಂಕ ೧:
3 ಮನೆಗಳ ಮಧ್ಯೆ ಬಹುದೊಡ್ಡ ಅಂಗಳ. ಮಳೆಗಾಲ ಮುಗಿಯಿತೆಂದರೆ ಇಡೀ ಅಂಗಳಕ್ಕೆ ಚಪ್ಪರ ಹಾಕಿ 3 ಸೇರಿ ಒಂದೇ ಮನೆಯೆಂಬ ನೋಟ. ಮಣ್ಣು ಹಾಕಿ ಒರೆದು ನುಣುಪು ಮಾಡಿದ ಅಂಗಳದ ನವಿರಾದ, ಹಿತವಾದ ಮಣ್ಣಿನ ಕಂಪು, ಅಲ್ಲಲ್ಲಿ ಸಗಣಿ ಸಾರಿಸಿದ ತಂಪು. 3 ಮನೆಗಳಲ್ಲೂ ಮನೆತುಂಬ ಮಕ್ಕಳ ಕಲರವ, ಇಂಪಾದ ನುಡಿ ಹಬ್ಬ. ಅಬ್ಬಾ ಎಂಥಾ ಸುಂದರ ಅನುಭವ ಅದು! ಈಗ ನೆನಸಿಕೊಂಡರೆ ಕನಸು ಅನಿಸುತ್ತದೆ.

ಅಂಕ ೨:
3ರಲ್ಲಿ ಎರಡಿಲ್ಲ, ಇದ್ದ ಒಂದರಲ್ಲಿ ಜನ ಇಲ್ಲ! ಎಲ್ಲೆಲ್ಲೂ ಧೂಳು ಘಾಟು, ಮಣ್ಣಿನ ಕಂಪಿಲ್ಲ. ಹಿಂದೆ ಕಾಡು ಬೆಳೆಯುತ್ತಿದೆ. ಆಚೀಚೆ ಮನೆ ಜಾಗದಲ್ಲಿ ಮಣ್ಣ ರಾಶಿ ಕಣ್ಣಿಗೆ ರಾಚುತ್ತಿದೆ. ಮಧ್ಯದ ಬಹು ದೊಡ್ಡ ಅಂಗಳ ಅನಾಥ ಪ್ರೇತವಾಗಿ ಕಾಣುತ್ತಿದೆ. ಚಪ್ಪರದ ಅಬ್ಬರ ಮರೆಯಾಗಿದೆ. ಎಲ್ಲೆಲ್ಲೂ ಸ್ಮಶಾನ ಮೌನ. ಮಕ್ಕಳ ನುಡಿ ಮರೆಯಾಗಿದೆ, ನಕ್ಸಲರ ಪಿಸುಮಾತು ಎಲ್ಲಿ ಕೇಳುತ್ತದೋ ಎಂಬ ಅಳುಕು! ಹೀಗೇ ಸಾಗಿದೆ.....!

ಬಹುಶಃ ನೆಂಪಿನ ಗತ ವೈಭವ ವರ್ಣಿಸಲು ಇವೆರಡೇ ’ಅಂಕ’ಗಳು ಸಾಕಾಗಬಹುದೇನೋ. ಆದರೂ ಕಂಡಿದ್ದು ಕಂಡಷ್ಟು ಹೇಳಲಿಚ್ಚಿಸುವೆ. ಆ ವೈಭವದ ದಿನಗಳು ಬಹಳ ಹಿಂದಿನವುಗಳೇನಲ್ಲ. ಇದೇ ಆರೇಳು ವರ್ಷಗಳ ಹಿಂದಿನವರೆಗೂ ನಡಕೊಂಡು ಬಂದಿದ್ದ ದಿನಗಳು. ನೆನೆದರೆ ಇಂದೂ ಮೈ ಪುಳಕಗೊಳ್ಳುತ್ತದಾದರೂ, ’ಅಂಕ ೨’ನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ. ಬರೆಯಲು ಕೈ ನಡಗುತ್ತದೆ. ಆ ದಿನಗಳನ್ನು ಅನುಭವಿಸದ ನೆಂಪಿನ ಪ್ರತಿಯೊಬ್ಬನ ಬದುಕು ಖಂಡಿತಾ ಅಪೂರ್ಣವಾಗಿರುತ್ತದೆ ಎನ್ನಲಡ್ಡಿಯಿಲ್ಲ.

ಆ ದಿನಗಳಲ್ಲಿ ನಮ್ಮ ಪ್ರತಿಯೊಬ್ಬರ ಮನೆಯಲ್ಲೂ, ನಮಗೆ ಮಾರ್ಗದರ್ಶಕರಾಗಿ ನಮ್ಮ ಹಿರಿಯರು ಉಪಸ್ಥಿತರಿದ್ದರು. ನಮಗೆ ಜವಾಬ್ದಾರಿಗಳಿಲ್ಲದೆ ಹಾಯಾಗಿ ಹಿರಿಯರು ಹೇಳಿದಂತೆ ನಡೆಯುತ್ತಿದ್ದೆವು. ಇಂದು ಅವರೆಲ್ಲರ ಅನುಪಸ್ಥಿತಿಯಿಂದಾಗಿ ಪ್ರತಿ ಮನೆಯೂ ಅನಾಥವಾಗಿದೆ; ಮನೆಯವರು ಗೂಟಕಿತ್ತ ಕರುಗಳಂತೆ ತಬ್ಬಿಬ್ಬಾಗಿದ್ದಾರೆ.

ಹಾಗೆಯೇ, ಮನೆಯ ಹೆಂಗಸರೂ ಕೂಡ, ಎಲ್ಲೇ ತಿರುಗಾಟಗಳಿಗೆ ಹೋಗುವುದಿದ್ದರೂ ಆಚೀಚೆ ಮನೆಯ ಹೆಂಗಸರನ್ನು ಕೇಳಿ ಒಟ್ಟಿಗೆ ಹೋಗುತ್ತಿದ್ದುದು ರೂಢಿ. ಒಬ್ಬರಿಗೆ ಬರಲು ಸಾಧ್ಯವಿಲ್ಲದಿದ್ದರೂ ಉಳಿದವರು ಕೂಡ ತಮ್ಮ ತಿರುಗಾಟ ರದ್ದು ಮಾಡುತ್ತಿದ್ದರು! ಎಂಥಾ ಒಗ್ಗಟ್ಟು! ಇಂದು ತಿರುಗಾಟಕ್ಕೆ ಹೋಗಲು ಜನರೇ ಇಲ್ಲ!

ನಾನಂತೂ ಪಕ್ಕದ ಮನೆಯ "ಜಗಲಿ"ಯಲ್ಲೇ ರಾತ್ರಿ ಕಳೆದದ್ದು ಜಾಸ್ತಿ. ನಾವೆಲ್ಲ ಉದ್ದಕ್ಕೆ, ಮೇಳದವರಂತೆ ಜಗಲಿಯಲ್ಲಿ ಮಲಗಿ, ಹರಟೆ ಹೊಡೆಯುತ್ತಾ ನಿದ್ರಿಸಿದರೆ ಆ ಗಮ್ಮತ್ತೇ ಬೇರ್‍ಎ. ಎಲ್ಲಾ ಮಲಗಿದಾಗ "ಜಾನಿ" ಪ್ರತಿಯೊಬ್ಬರ ಹಣೆಗೆ ಕುಂಕುಮ ಪ್ರಸಾದ ಹಚ್ಚುತ್ತಾ ಬರುವುದು ಕೂಡಾ ಮರೆಯಲಾಗದ್ದು. ಎಂಥಾ ಸುಂದರ ವಾತಾವರಣ ಅದು! ಮೂರ್ತಿಯ ’ಗೊರಕೆ’ಗೆ ಬೆದರಿ ಇಡೀ ರಾತ್ರಿ ನಾನು ಕುಳಿತೇ ಕಳೆದುದು ಕೂಡಾ ಮರೆಯಲಾಗದ ಘಟನೆ! ಈಗ ಜಗಲಿಯೂ ಇಲ್ಲ, ಚಾವಡಿಯೂ ಇಲ್ಲ, ಹೆಬ್ಬಾಗಿಲೂ ಇಲ್ಲ, ಅಸಲಿಗೇ ಮನೆಯೇ ಇಲ್ಲ!!!

ನೆಂಪಿನ ಚರಿತ್ರೆಯಲ್ಲಿ ದಾಖಲಾದ ಇನ್ನೊಂದು ವಿಚಾರ ಎಂದರೆ ೧೫ ದಿನಗಳ ಅಂತರದಲ್ಲಿ ನಡೆದ ನಾಲ್ಕು ಮದುವೆಗಳ ಸಂಭ್ರಮ. 3 ಮನೆಗಳ ನಾಲ್ಕು ಮದುವೆಗೆ ಒಂದೇ ವಿಶಾಲ ಅಂಗಳಕ್ಕೆ ಚಪ್ಪರ. ಬೇರೆ ಬೇರೆ ಊರಲ್ಲಿರುವ ನೆಂಪಿನ ಬಂಧು-ಬಳಗವೆಲ್ಲ ೧೫ ದಿನ ನೆಂಪಿನಲ್ಲೇ ’ಕ್ಯಾಂಪ್’ ಹಾಕಿದ್ದು ನಿಜಕ್ಕೂ ಅಭೂತಪೂರ್ವ ಸಂಗತಿ. ನಮ್ಮೊಳಗಿನ ಒಗ್ಗಟ್ಟಿನಿಂದಾಗಿ ಯಾವುದೇ ಕಾರ್ಯಕ್ರಮಕ್ಕೂ ಸ್ವಯಂಸೇವಕರ ಕೊರತೆ ಕಾಣಿಸುವುದಿಲ್ಲ. ನಮ್ಮ ಹೆಗ್ಗಳಿಕೆ ಎಂದರೆ ಇವತ್ತಿಗೂ ಅದು ಮುಂದುವರಿದುಕೊಂಡು ಬಂದಿದೆ. ಯಾರ ಮನೆಯಲ್ಲಿ ಕಾರ್ಯಕ್ರಮ ನಡೆದರೂ ಅದರ ಜವಾಬ್ದಾರಿ ನಮ್ಮದೆಂಬ ಭಾವನೆ ನಮ್ಮ ಸೋದರ ಸಂಬಂಧಿಗಳದ್ದು. ಹಾಗಾಗಿ ಯಾವುದೇ ಅಡೆತಡೆ ಇಲ್ಲದೆ ನಾಲ್ಕು ವಿವಾಹ ಕಾರ್ಯಗಳು ಕನಸಲ್ಲಿ ಜರುಗಿದಂತೆ ಸಾಂಗವಾಗಿ ನಡೆದಿದ್ದವು.

ನಮ್ಮೊಳಗಿನ ಒಗ್ಗಟ್ಟಿಗೆ ಇನ್ನೊಂದು ನಿದರ್ಶನ ಕೊಡಬಹುದು. ಈ ಹಿಂದೆ ನಮ್ಮೆಲ್ಲರ ಮನೆಗಳು ಹುಲ್ಲುಮಾಡಿನದ್ದಾಗಿದ್ದವು. ಕೆಲವು ವರ್ಷಗಳ ಹಿಂದೆ ಅವುಗಳಿಗೆ "ಹಂಚಿನ ಮಾಡು" ಮಾಡುವಾಗ (ಅದು ಆಚಾರಿಗಳ ಕೆಲಸವಾಗಿದ್ದರೂ ಕೂಡಾ) ಹೆಂಚು ಹೊದಿಸುವ ದಿನ ನಾವೆಲ್ಲ ಕೈಯಿಂದ ಕೈಗೆ ಹೆಂಚು ನೀಡಿ, ಕೆಲಸವನ್ನು ಶೀಘ್ರವಾಗಿ ಮುಗಿಯುವಂತೆ ಮಾಡಿದ್ದೆವು. ಅಂತೆಯೇ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಕೂಡು ರಸ್ತೆಯೂ ನಮ್ಮ ಒಗ್ಗಟ್ಟಿನಿಂದ, ಶ್ರಮದಿಂದಲೇ ಆದದ್ದು. ಇಂತಹ ನಿದರ್ಶನಗಳು ನಮ್ಮ ನೆಂಪಿನಲ್ಲಿ ಮಾತ್ರ ಕಾಣಸಿಗಬಹುದು. ಒಂದು ಮಾತು ಈಗಲೂ ಚಾಲ್ತಿಯಲ್ಲಿದೆ. "ಒಗ್ಗಟ್ಟು ಅಂದರೆ ನೆಂಪಿನೂರಿನವರದ್ದಪ್ಪ" ಅನ್ನುವುದು ಅತಿಶಯೋಕ್ತಿಯೇನಲ್ಲ.

ಆದರೆ, "ಗೊರಗೊರ ಗುಂಡಿ"ಯಲ್ಲಿ ಬಹಳಷ್ಟು ನೀರು ಹರಿದು ಹೋಗಿದೆ.... ಹಾಗೆಯೇ ನೆಂಪಿನೂರಿನಲ್ಲೂ ಬದಲಾವಣೆಗಳಾಗಿವೆ. ಹಿರಿಯರೆಲ್ಲ ಒಬ್ಬೊಬ್ಬರೇ ಇಹಲೋಕ ತ್ಯಜಿಸಲಾರಂಭಿಸಿದರು, ಉಳಿದವರು ಮನೆಗಳನ್ನೇ ತ್ಯಜಿಸಿದರು! ಅದರಿಂದಾಗಿ ಇಂದು ಹಿರಿಯರಾಳಿದ ಮನೆಯ ಸ್ಥಳಗಳಲ್ಲಿ ಮಣ್ಣುರಾಶಿ ಅನಾಥವಾಗಿ ಬಿದ್ದುಕೊಂಡಿದೆ. ಹಿರಿಯರ ಮಂತ್ರಘೋಷಗಳಿಂದ ಆವೃತವಾಗಿರುತ್ತಿದ್ದ ಪ್ರದೇಶ ಇಂದು ಸ್ಮಶಾನ ಮೌನ ತಾಳಿದೆ. ಅಲ್ಲಿಯ ಮರಗಳು ಮರುಗುತ್ತಿವೆ, ನೀರಿಲ್ಲದೆ ಬಣಗುಡುತ್ತಿವೆ. ನೋಡಿದರೆ ಹೊಟ್ಟೆಯಲ್ಲಿ ಸಂಕಟವಾಗುತ್ತದೆ.

ಆದರೆ ಸಮಾಧಾನದ ವಿಷಯವೆಂದರೆ ನಾವೆಲ್ಲ ಎಲ್ಲೇ ಇರಲಿ, ಹೇಗೇ ಇರಲಿ ಇಂದಿಗೂ ಒಗ್ಗಟ್ಟಾಗಿಯೇ ಇದ್ದೇವೆ. ಹಿರಿಯರ ಆಶೀರ್ವಾದದಿಂದಾಗಿ ಮನೆಯ ಪ್ರತೀ ಸದಸ್ಯರು ಅವರವರ ಕಾಲಮೇಲೆ ನಿಂತಿದ್ದಾರೆ. ಪ್ರತಿಯೊಂದು ಸಮಾರಂಭಗಳಲ್ಲಿ ಒಟ್ಟುಗೂಡಿ ಕೆಲಸ ಮಾಡುತ್ತಿದ್ದೇವೆ. ಹಿಂದಿನ ವೈಭವದ ದಿನಗಳನ್ನು ಮತ್ತೆ ಸಾಕ್ಷಾತ್ಕರಿಸಲು ಪ್ರಯತ್ನಿಸೋಣ, ಬನ್ನಿ ಎಲ್ಲರೂ ಒಟ್ಟಿಗೆ ಕೈ ಹಿಡಿದು ನಡೆಯೋಣ...

--ನೆಂಪು ಕೃಷ್ಣ ಭಟ್

Nenapina Buttiyinda: Krishna Bhattara lekhanagalu 01

ನೆಂಪು ಕೃಷ್ಣ ಭಟ್ಟರ ನೆನಪಿನ ಬುತ್ತಿಯಿಂದ ಬಂದ ಲೇಖನಗಳು...

ಮರೆತೇನಂದ್ರ ಮರೆಯಲಿ ಹ್ಯಾಂಗಾ...?
  • ವಂಡ್ಸೆ ಶಾಲೆಗೆ ಹೋಗುವಾಗ ಒಂದು ದಾರಿಗೆ ನಾವೇ ಇಟ್ಟ ಹೆಸರು "ಮಾಕಿಶಾಮೂರ" ದಾರಿ! ಗದ್ದೆ ಮಧ್ಯೆ ನಾವೇ ನಡೆದು ಮಾಡಿಕೊಂಡ ದಾರಿ ಅದು. ಅಂದು ವಂಡ್ಸೆ ಶಾಲೆಗೆ ಹೋಗುತ್ತಿದ್ದ ಮಾಧವಿ, ಕಿಟ್ಟು, ಶಾರದ, ಮೂರ್ತಿ, ರಮೇಶ ಎಲ್ಲರ ಹೆಸರಿನ ಒಂದೊಂದು ಅಕ್ಷರ ಸೇರಿಸಿ ಮಾಡಿದ ಹೆಸರು! ಅಷ್ಟು ಚಿಕ್ಕ ವಯಸ್ಸಿಗೇ ಎಂತಾ ಕ್ರಿಯೆಟಿವ್ ಐಡಿಯಾ ಅಲ್ದಾ!
  • ಕಾಲೇಜು ದಿನಗಳಲ್ಲಿ ಪರೀಕ್ಷೆಗೆ ಓದಲು ನಾನು ಆರಿಸಿಕೊಂಡ ಜಾಗ ನಮ್ಮ ಪ್ರಶಾಂತಪರಿಸರದಲ್ಲಿರುವ ಗಣಪತಿ ದೇವಸ್ಥಾನ ಹಾಗೂ ಅಲ್ಲೇ ಹಿಂದಿನ ’ಹಾಡಿ’. ಅಲ್ಲಿ ಸಿಗುವ ಏಕಾಗ್ರತೆ, ಮನಸ್ಸಿಗೆ ಸಿಗುವ ಮುದ ಬೇರೆಲ್ಲೂ ಸಿಗುತ್ತಿರಲಿಲ್ಲ.
  • ಮನೆ ಎದುರಿನ ಗದ್ದೆಗೆ ತುಂಟಾಟದಿಂದ ನಾನು ಮೂರ್ತಿ ಬೆಂಕಿ ತಾಗಿಸಿದ್ದು, ಅದು ಗದ್ದೆಯಲ್ಲಿದ್ದ ’ದರಲೆ’ ರಾಶಿಗೆ ಹಿಡಿದು ಇಡೀ ಗದ್ದೆ ವ್ಯಾಪಿಸಿದಾಗ "ನಾವಲ್ಲ, ಅದು ಶೇಕು ಗಂಡಿನ ಕಿತಾಪತಿ" ಅಂತ ಜಾರಿದ್ದು... ಸುಳ್ಳಲ್ಲ...!
  • ೧ ರಿಂದ ೪ನೇ ತರಗತಿ ವರೆಗೆ ನನಗೆ ಹಾಗೂ murthyಗೆ ಬರೆಯಲು ಒಂದೇ ಸ್ಲೇಟು! ಒಂದು ಕಡೆ ಅವ ಬರೆದರೆ, ಇನ್ನೊಂದು ಕಡೆ ನಾನು ಬರೆಯುವುದು. ಇಂತಹ ಹೊಂದಾಣಿಕೆ ಇಂದು ಎಲ್ಲಾದರು ಕಾಣಲು ಸಾಧ್ಯವೇ?
  • ನಾನು, ಮೂರ್ತಿ, ರಮೇಶ ಒಟ್ಟಿಗೆ ಜಗಲಿಯಲ್ಲಿ ಹಾಸಿಕೊಂಡು, ಮಧ್ಯೆ ಚಿಮಣಿ ದೀಪ ಇಟ್ಟುಕೊಂಡು ಪರೀಕ್ಷೆಗೆ ಓದ್ತಾ ಇದ್ದೆವು. ಅಲ್ಲೇ "ಆಫೀಸ್ ಕೋಣೆ"ಯಲ್ಲಿ ಮಲಗಿದ್ದ ಕಿಟ್ಟಣ್ಣಯ್ಯ-ಅತ್ತಿಗೆಯ "ರಾತ್ರಿ ಶಬ್ದ"ಕ್ಕೆ ಕಿವಿ ಆಲಿಸಿದ್ದು, ನಂತರ ಕಿಟ್ಟಣ್ಣಯ್ಯ "ಏನು ಮಕ್ಳೇ" ಅಂತ ಗದರಿಸಿದ್ದು!!!........ ಮರೀಲಾರದ್ದು!

--ಕಿಟ್ಟು