Monday, January 31, 2011

ಚಿತ್ರಸಂತೆ 2011 - ತುಣುಕುಗಳು

ನಿನ್ನೆ, 30 ಜನವರಿ ರವಿವಾರ ನಗರದ ಪ್ರತಿಷ್ಠಿತ ರಸ್ತೆಗಳಲ್ಲೊಂದಾದ ಕುಮಾರಕೃಪಾ ರಸ್ತೆ ಅಕ್ಷರಶ: ಸಂತೆಯಾಗಿತ್ತು. ಎಲ್ಲಿ ನೋಡಿದರೂ ಜನ ಜನ! ಅದು ಅಂತಿಂಥಾ ಸಂತೆಯಲ್ಲ. ದೇಶದ ಹಲವೆಡೆಯಿಂದ ಬಂದಿದ್ದ ಕಲಾವಿದರು, ಕಲಾಪ್ರೇಮಿಗಳು, ಕಲಾರಸಿಕರು, ವಿದೇಶೀಯರು ಒಂದೆಡೆ ಕಲೆತಿದ್ದ ಚಿತ್ರಸಂತೆ! 

ಮುಖ್ಯಮಂತ್ರಿಗಳ ಅಧಿಕೃತ ನಿವಾಸ, ಪ್ರತಿಷ್ಠಿತ ಅಶೋಕಾ ಹೋಟೆಲ್, ಕುಮಾರಕೃಪಾ ಗೆಸ್ಟ್ ಹೌಸ್, ಚಿತ್ರಕಲಾ ಪರಿಷತ್, ಇನ್ನಿತರ ಕಟ್ಟಡಗಳ ಆವರಣದ ಗೋಡೆಗಳ ಮೇಲೆ, ಬಸ್ ನಿಲ್ದಾಣ, ಗಾಲ್ಫ್ ಕೋರ್ಸ್ ಆವರಣ, ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಗೆಲ್ಲುಗಳಿಗೆಲ್ಲಾ ಬಗೆ ಬಗೆಯ ಕಲಾಕೃತಿಗಳನ್ನು ತೂಗುಹಾಕಲಾಗಿತ್ತು. ಶಿವಾನಂದ ಸರ್ಕಲ್ಲಿನಿಂದ ವಿಂಡ್ಸರ್ ಮ್ಯಾನರ್ ಸರ್ಕಲ್ಲಿನ ವರೆಗೂ ನಾನಾ ಕಲಾವಿದರ, ವಿಭಿನ್ನ ಪ್ರಕಾರಗಳ ಚಿತ್ರಗಳು, ಮ್ಯೂರಲ್, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.

ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ನಡೆದ ೮ನೇ ಚಿತ್ರಸಂತೆಗೆ ಜನ ಸಾಗರೋಪಾದಿಯಲ್ಲಿ ಬಂದುಹೋದರು. ಪತ್ರಿಕಾ ವರದಿಯ ಪ್ರಕಾರ ಅಂದಾಜು
3 ಲಕ್ಷ! ಚಿತ್ರಗಳು, ಕರಕುಶಲ ವಸ್ತುಗಳು, ಆರ್ಟ್ ಮೆಟೀರಿಯಲ್ ಗಳ ವ್ಯಾಪಾರವೂ ಭರ್ಜರಿಯಾಗಿಯೇ ನಡೆಯಿತು. ಯುವಕಲಾವಿದರಿಗೆ ಸಿಕ್ಕಿದ ಪ್ರೋತ್ಸಾಹ ಪ್ರಶಂಸನೀಯ. ನಮ್ಮ ಬ್ಯುಸಿ ಬೆಂಗಳೂರಿನಲ್ಲಿ ಕಲೆಗೆ ಈ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

ಇಂತಹ ಬೃಹತ್ ಚಿತ್ರಮೇಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಚಿತ್ರಕಲಾ ಪರಿಷತ್ತಿಗೆ, ಚಿತ್ರಸಂತೆಯ ಸಂಘಟಕರಿಗೆ, ಪ್ರಾಯೋಜಕರಿಗೆ, ಯಶಸ್ಸಿಗಾಗಿ ಹಗಲಿರುಳು ಶ್ರಮವಹಿಸಿದ ಕಾರ್ಯಕರ್ತರಿಗೆ ಹ್ಯಾಟ್ಸಾಫ್!

ಕೆಲ ಚಿತ್ರಗಳು...





















-o-
ನೆಂಪು ಗುರು

Friday, January 7, 2011

ಹೊಸ ವರ್ಷದ ವಿಶಿಷ್ಟ ಆಚರಣೆ

ವರ್ಷದ ಕೊನೆಯ ದಿನ, ಹೊಸ ವರ್ಷವನ್ನು ಬರಮಾಡಿಕೊಳ್ಳುವುದೆಂದರೆ ಮೋಜು-ಮಸ್ತಿ ಮಾಡಿಕೊಂಡು, ಕುಡಿದು ಪಾಶ್ಚಾತ್ಯ ಸಂಗೀತಕ್ಕೋ, ಹಿಂದಿ ಫಾಸ್ಟ್ ಟ್ರ್ಯಾಕ್ ಗಳಿಗೆ ಹೆಜ್ಜೆ ಹಾಕುವುದೋ, ಮುದುಕನ ಹೋಲುವ ಗೊಂಬೆ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಸಂಭ್ರಮಿಸುವುದೋ... ಹೀಗೆ ಒಂತರ ಪಾಶ್ಚಾತ್ಯ ರೀತಿಯಲ್ಲಿ ಸಂಭ್ರಮಿಸುವುದು ಈಗೀಗ ಮಾಮೂಲಿಯಾಗಿದೆ. 

ಆದರೆ, ಉಡುಪಿ ಸುವರ್ಣಾ ನದಿ ತಟದಲ್ಲಿರುವ ಹೆರ್ಗ - ಗೋಳಿಕಟ್ಟೆಯ ಸ್ವರ್ಣಾ ಗೆಳೆಯರ ಬಳಗ ಕಳೆದ 15 ವರ್ಷಗಳಿಂದ ಹೊಸ ವರ್ಷಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದವರೆಲ್ಲಾ ಒಟ್ಟಾಗಿ ವರ್ಷದ ಕೊನೆಯ ಸೂರ್ಯಾಸ್ತದಿಂದ ಹೊಸ ವರ್ಷದ ಶುಭ ಸೂರ್ಯೋದಯದವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಅದರಲ್ಲಿ ಪ್ರಮುಖವಾದದ್ದು ಶಾಸ್ತ್ರೀಯ ಸಂಗೀತ ಗೋಷ್ಠಿ, ಪ್ರವಚನ, ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಊರ ಪ್ರಮುಖರು - ಜಿಲ್ಲಾ ನಾಯಕರು ಒಗ್ಗೂಡುವ ಸಭಾ ಕಾರ್ಯಕ್ರಮ, ನಾನಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೆ ಸನ್ಮಾನ ಇತ್ಯಾದಿ. ಇದೆಲ್ಲಕ್ಕೂ ಕಲಶಪ್ರಾಯವಾದದ್ದು ಸಾರ್ವಜನಿಕ ಸತ್ಯನಾರಾಯಣ ಪೂಜೆ ಹಾಗೂ ನಂತರ ನಡೆಯುವ ಸಹ ಭೋಜನ.

ಅಶ್ವತ್ಥ ಕಟ್ಟೆಯ ಮೇಲೆ ಸುಂದರವಾಗಿ ಸಿಂಗರಿಸಿದ ಮಂಟಪದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯುತ್ತದೆ. ಊರವರೆಲ್ಲಾ ಸೇವೆ ಕೊಟ್ಟಿರುತ್ತಾರೆ. ಪೂಜಾ ಕಾರ್ಯಕ್ರಮ ನಡೆಯುತ್ತಿರುವಂತೆ ಸನಿಹದಲ್ಲೇ ಇರುವ ವೇದಿಕೆಯಲ್ಲಿ ಇತರ ಗೋಷ್ಠಿಗಳು, ಸಭಾ ಕಾರ್ಯಕ್ರಮಗಳು ಜರಗುತ್ತವೆ. ಮಹಾಮಂಗಳಾರತಿಯ ಸಮಯದಲ್ಲಿ ಎಲ್ಲರೂ ಸೇರಿ ಶ್ರೀ ದೇವರಿಗೆ ನಮಿಸಿ, ಪ್ರಸಾದ ಸ್ವೀಕರಿಸುತ್ತಾರೆ. ನಂತರ ಎಲ್ಲರಿಗೂ ಸಹಭೋಜನದ ವ್ಯವಸ್ಥೆ ಇರುತ್ತದೆ. ಶುದ್ಧ, ಶಾಖಾಹಾರಿ ಪಾಯಸದೂಟದ ನಂತರ ಯಕ್ಷಗಾನ ಬಯಲಾಟ ಶುರುವಾಗುತ್ತದೆ. ಹೆಚ್ಚಾಗಿ ಬಡಗುತಿಟ್ಟಿನ ಪ್ರಸಂಗಗಳು. ಬೆಳಗಾಗುವವರೆಗೆ ಮಾಗಿಯ ಚಳಿಯಲ್ಲಿ, ಮಂಜು ಮುಸುಕಿದ ವಾತಾವರಣದಲ್ಲಿ ಯಕ್ಷಗಾನ ಬಯಲಾಟ ನೋಡುವ ಗಮ್ಮತ್ತೇ ಬೇರೆ! ಸಮಯ ಮಧ್ಯರಾತ್ರಿ 12 ಕಳೆಯುತ್ತಿದ್ದಂತೆ ಯಕ್ಷಗಾನಕ್ಕೆ ಸ್ವಲ್ಪ ಹೊತ್ತು ಬ್ರೇಕ್. ನೆರದಿರುವವರಿಗೆಲ್ಲಾ ಉತ್ತಮ ಸಂದೇಶವನ್ನು ಸಾರಿ, ಹೊಸ ವರ್ಷದ ಶುಭಾಶಯ ಹೇಳುತ್ತಾರೆ ಸಂಘಟಕರು. ಸ್ವಲ್ಪ ಹೊತ್ತು ಸುಡುಮದ್ದುಗಳು ಘರ್ಜಿಸುತ್ತವೆ. ಯಕ್ಷಗಾನ ಮುಂದುವರೆಯುತ್ತದೆ.

ಹೊಸ ವರ್ಷ ಆಚರಣೆಯೊಂದೇ ಅಲ್ಲ, ಹಲವಾರು ಜನಪರ ಕಾರ್ಯಕ್ರಮಗಳನ್ನು ಸ್ವರ್ಣ ಗೆಳೆಯರ ಬಳಗ ವರ್ಷವಿಡೀ ಹಮ್ಮಿಕೊಳ್ಳುತ್ತಾರೆ. ಹೆರ್ಗ ಗ್ರಾಮವನ್ನು ಮಾದರಿ ಗ್ರಾಮವಾಗಿ ಪರಿವರ್ತಿಸುವಲ್ಲಿ ಸದಾ ತೊಡಗಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಸ್ಥಾಪಿತವಾಗಿರುವ ಲೈಬ್ರೆರಿಯಲ್ಲಿ ಸಾಕಷ್ಟು ಉಪಯುಕ್ತ ಪುಸ್ತಕಗಳ ಸಂಗ್ರಹವಿದೆ. ಎಲ್ಲರಿಗೂ ಮಾದರಿಯಂತಿರುವ ಇಂಥಾ ಸಂಘಟನೆಗಳು ಎಲ್ಲೆಡೆ ಇದ್ದರೆ ಗ್ರಾಮ - ಗ್ರಾಮಗಳ ಉದ್ಧಾರ ಸಾಧ್ಯ!

2011 ರ ಸಂಭ್ರಮಾಚರಣೆಯಲ್ಲಿ ನಾನೂ ಪಾಲ್ಗೊಂಡಿದ್ದೆ. ತಡವಾಗಿ ಹೋದುದರಿಂದ ಸಹಭೋಜನ ಮಿಸ್ ಮಾಡಿಕೊಂಡೆ. ಉದಯೋನ್ಮುಖ ಕಲಾವಿದರನ್ನೊಳಗೊಂಡ ನೀಲಾವರ ಮೇಳದವರ ಸತ್ಯಹರಿಶ್ಚಂದ್ರ ಯಕ್ಷಗಾನ ಬಯಲಾಟ ನೋಡಿಬಂದೆ. ಕೆಲ ಚಿತ್ರಗಳು...








-o-
ನೆಂಪು ಗುರು