Tuesday, January 22, 2008

Nempu Balaga:: Our Motto

"ಸಂಹತಿಃ ಕಾರ್ಯಸಾಧಿಕಾ"

ನಮ್ಮ "ನೆಂಪು ಬಳಗ"ದ ಧ್ಯೇಯವಾಕ್ಯ "ಸಂಹತಿ: ಕಾರ್ಯಸಾಧಿಕಾ". ದಿ. ನೆಂಪು ಶಿವರಾಮ ಭಟ್ಟರು ನಮ್ಮ ಬಳಗಕ್ಕೆ ಈ ಧ್ಯೇಯವಾಕ್ಯವನ್ನಿತ್ತು ಹರಸಿದ್ದಾರೆ. ಅವರು ನಮಗೆ ಬೋಧಿಸಿದ ಹಿತನುಡಿಗಳ ಸಾರಾಂಶ ಇಲ್ಲಿದೆ:

ಹುಲ್ಲೆಳೆಯಿಂದ ಏನೂ ಮಾಡಲಾಗದು, ಆದರೆ ಅವು ಸೇರಿ ಮಡೆ ಹಗ್ಗವಾದಾಗ ಮುಡಿಕಟ್ಟುವ, ತಿರಿಕಟ್ಟುವ ಹಗ್ಗವಾಗುವುದು. ಒಂದು ಹುರಿಯಿಂದ ಏನೂ ಆಗದು, ಆದರೆ ಅದೇ ಹುರಿ ಎಲ್ಲ ಸೇರಿ ಕೂಡಿದರೆ ಹಗ್ಗವಾಗಿ ರಥ ಎಳೆಯಲು ಸಾಧ್ಯವಾಗುತ್ತದೆ. ಒಂದು ಬೆರಳಿನಿಂದ ಏನೂ ಮಾಡಲು ಕಷ್ಟ, ಆದರೆ ಐದು ಬೆರಳು ಕೂಡಿದ ಕೈಯಿಂದ ಯಾವ ಕೆಲಸ ಬೇಕಾದರೂ ಮಾಡಲು ಸಾಧ್ಯವಿದೆ. ಹಾಗೆಯೇ 10 ಬೆರಳು ಸೇರಿ ಎರಡೂ ಕೈಗಳಿಂದ ಇನ್ನೂ ಹೆಚ್ಚಿನ ಕಾರ್ಯಸಾಧನೆ ಸಾಧ್ಯ.

ಜೇನು ನೊಣಗಳು ಮಧು ಸಂಗ್ರಹಿಸುತ್ತದೆ. ಹಾಗೆಯೇ ಒಂದು ಒಕ್ಕೂಟ ವ್ಯವಸ್ಥೆಯಿಂದ, ಸಮಾನ ಸ್ಕಂಧರು ಹಾಗೂ ಸಹೃದಯವಂತರು ಪರಸ್ಪರ ಗುಂಪುಗೂಡಿ ದುಡಿಯುವ ಮನಸ್ಸಿನಿಂದ ಯಾವ ಸಾಧನೆಯನ್ನು ಬೇಕಾದರೂ ಮಾಡಿ ಗುರಿ ತಲಪಬಹುದು.

ಋಗ್ವೇದದ ಕೊನೆಯ ಮಾತಿನಲ್ಲಿ "ಸಮಾನೀವ ಆಕೂತಿಃ" - ನಮ್ಮೆಲ್ಲರ ಅಂತರಂಗದ ಅಭಿಪ್ರಾಯ ಒಂದೇ ಆಗಿರಲಿ; "ಸಮಾನಾ ಹೃದಯಾನಿ" - ಎಲ್ಲರ ಮನಸ್ಸು ಒಂದೇ ಆಗಿರಲಿ ಎಂಬ ಸಂದೇಶವಿದೆ. ಅದನ್ನೇ "ಸಂಹತಿ:" ಎಂಬ ಅರ್ಥದಲ್ಲಿ "ಒಕ್ಕಟ್ಟಿನಲ್ಲಿ ಬಲವಿದೆ" ಎಂದುದು. ಉತ್ತಮ ಗುರಿ ಇದ್ದು ಪರಸ್ಪರ ಹೊಂದಿಕೊಂಡು ಮಾಡಿದ ಕೆಲಸ ಸುಲಭ ಸಾಧ್ಯವಾಗಿ ಕಾರ್ಯಸಾಧಕವಾಗುತ್ತದೆ ಎಂಬುದನ್ನು "ಸಂಹತಿ: ಕಾರ್ಯಸಾಧಿಕಾ" ಉಕ್ತಿ ತಿಳಿಸುತ್ತದೆ.

ದಿ. ನೆಂಪು ಶಿವರಾಮ ಭಟ್ಟರು

1 comment:

ಸನ್ನಿವಾಸ said...

ಈ ಸುಭಾಷಿತದ ಮೂಲ(ಪೂರ್ತಿ)ರೂಪ ಹೀಗಿದೆ.

ಅಲ್ಪಾನಾಮಪಿ ವಸ್ತೂನಾಂ ಸಂಹತಿಃ ಕಾರ್ಯಸಾಧಿಕಾ|
ತೃಣೈರ್ಗುಣತ್ವಮಾಪನ್ನೇ ಬಧ್ಯಂತೇ
ಮತ್ತದಂತಿನಃ||