Sunday, January 27, 2008

Sanchara:: Hampi - Hospet ~ part 02

ವರ್ಲ್ಡ್ ಹೆರಿಟೇಜ್ ಸೈಟ್ - ಹಂಪಿ


ಗಣಿಗಾರಿಕೆಗೆ ಪ್ರಸಿದ್ಧವಾಗಿರುವ ಹೊಸಪೇಟೆಯಿಂದ ಹಂಪಿಗೆ 13 ಕಿಮೀ ದೂರ. ದಾರಿಯುದ್ದಕ್ಕೂ ಪಾಳುಬಿದ್ದ ದೇಗುಲಗಳು, ಮಂಟಪಗಳು, ಶಿಲಾಕೃತಿಗಳು, ವಿಜಯನಗರದ ಅಳಿದುಳಿದ ಅವಶೇಷಗಳು ಕಾಣಿಸಲಾರಂಭಿಸುತ್ತವೆ. 15 ನಿಮಿಷದ ಪಯಣದ ನಂತರ ನಾವು ಯುನೆಸ್ಕೋ ದಿಂದ "World Heritage Site" ಎಂದು ಮನ್ನಣೆ ಪಡೆದಿರುವ "ಹಂಪಿ"ಯಲ್ಲಿ ಕಾಲಿಡಲು ಸಿದ್ಧರಾದೆವು. ವಿರೂಪಾಕ್ಷ ದೇಗುಲದ ಬಳಿ ಮೊದಲೇ ನಿಗದಿಯಾಗಿದ್ದ ’ಗೈಡ್’ ನಮ್ಮನ್ನು ಸೇರಿಕೊಂಡ. ಮೊದಲಬಾರಿ ಹಂಪಿಗೆ ಹೋಗುವವರಿಗೆ ಗೈಡ್ ನೆರವು ಬೇಕಾಗುತ್ತದೆ. ಹಂಪಿಯ ಅವಶೇಷ 26 ಚದರ ಕಿಮೀ ವರೆಗೂ ಹರಡಿಕೊಂಡಿದೆ. ಪೂರ್ವ ಮಾಹಿತಿಯಿಲ್ಲದೆ, ಗೈಡ್ ನೆರವಿಲ್ಲದೆ ಇಷ್ಟು ಜಾಗಗಳನ್ನು ನೋಡುವುದು, ಸ್ಥಳಗಳ ಮಹತ್ವವನ್ನು ತಿಳಿಯುವುದು ಕಷ್ಟ. ನಮ್ಮ ಗೈಡ್ ಹೋಗಬೇಕಾದ ಸ್ಥಳಗಳ ಬಗ್ಗೆ, ಅವುಗಳ ವಿಶೇಷತೆಯ ಬಗ್ಗೆ ವಿವರಣೆ ಕೊಡಲಾರಂಭಿಸಿದ. ಮಧ್ಯಾಹ್ನದ ವರೆಗೂ ನಮ್ಮೊಂದಿಗಿದ್ದು ಆದಷ್ಟು ಪ್ರಮುಖ ಸ್ಥಳಗಳನ್ನು ತೋರಿಸಿ, ಅವುಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ.


ಮೊದಲು ನಾವು ಭೇಟಿಕೊಟ್ಟದ್ದು ಶ್ರೀ ವಿರೂಪಾಕ್ಷ ದೇವಸ್ಥಾನಕ್ಕೆ. ಹಂಪಿಯಲ್ಲಿ ಇರುವ ನೂರಾರು ದೇಗುಲಗಳಲ್ಲಿ ಕೇವಲ ಬೆರಳೆಣಿಕೆಯಷ್ಟರಲ್ಲಿ ಮಾತ್ರ ನಿತ್ಯಪೂಜೆ ನೆರವೇರುತ್ತದೆ. ಅದರಲ್ಲಿ ವಿರೂಪಾಕ್ಷ ದೇಗುಲ ಪ್ರಮುಖವಾದದ್ದು. 120 ಅಡಿ ಎತ್ತರದ ಬೃಹತ್ ಗೋಪುರ ನಮ್ಮನ್ನು ದೇಗುಲಕ್ಕೆ ಬರಮಾಡಿಕೊಳ್ಳುತ್ತದೆ. ಸುತ್ತಮುತ್ತಲೂ ಕಂಡುಬರುವ ಸಹಸ್ರಾರು ಶಿಲಾಕೃತಿಗಳು, ವರ್ಣ ಚಿತ್ರಗಳು, ರಂಗಮಂಟಪ, ಭಗ್ನಗೊಂಡಿರುವ ಮೂರು ಮುಖದ ನಂದಿಯ ವಿಗ್ರಹ ಹೀಗೆ ಹಲವಾರು ವಿಶೇಷತೆಗಳು ಇಲ್ಲಿ ಕಾಣಸಿಗುತ್ತವೆ. ವಿಜಯನಗರದ ಲಾಂಛನ "ವರಾಹ"ವೂ ಇಲ್ಲಿ ಕಾಣಸಿಗುತ್ತದೆ. ಪ್ರತಿಯೊಂದು ಕಲ್ಲುಗಳು ದೃಶ್ಯಕಾವ್ಯಗಳಾಗಿ ಕಥೆ ಹೇಳಲು ಶುರುಮಾಡುತ್ತವೆ. ಗೋಡೆಗಳ ಮೇಲೆ, ಕಂಬಗಳಲ್ಲಿ, ಮೇಲ್ಛಾವಣಿಗಳಲ್ಲಿ ವಿಜಯನಗರದ ಅಂದಿನ ಸ್ಥಿತಿಗತಿಗಳ ಬಗ್ಗೆ, ನಡೆಯುತ್ತಿದ್ದ ಸಭೆ-ಸಮಾರಂಭ-ಉತ್ಸವಗಳ ಬಗ್ಗೆ, ಬಲಿಷ್ಠ ಸೈನ್ಯದ ಬಗ್ಗೆ, ಇತರ ವಿಶೇಷತೆಗಳ ಬಗ್ಗೆ ಕೆತ್ತನೆಗಳು, ಕಲಾಕೃತಿಗಳು ವಿಶಾಲ ದೇಗುಲದಲ್ಲಿವೆ. "ಶ್ರೀ ವಿರೂಪಾಕ್ಷ, ಪಂಪ-ಭುವನೇಶ್ವರಿ ದೇವಿ" ನಿತ್ಯ ಪೂಜಿಸಲ್ಪಡುವ ಈ ದೇಗುಲ ವಿಜಯನಗರ ಸಂಸ್ಥಾನಕ್ಕೂ ಮೊದಲು ಅಸ್ಥಿತ್ವದಲ್ಲಿತ್ತು, 11-12ನೇ ಶತಮಾನದಲ್ಲಿ ನಿರ್ಮಾಣಗೊಂಡು, ವಿಜಯನಗರದರಸರ ಕಾಲದಲ್ಲಿ ಅಭಿವೃದ್ಧಿ ಹೊಂದಿತು ಎಂಬ ಮಾಹಿತಿ ಗೈಡ್ ನಿಂದ ತಿಳಿಯಿತು.



ಶ್ರೀ ವಿರೂಪಾಕ್ಷ ಹಾಗೂ ದೇವಿಯರಿಗೆ ವಂದಿಸಿ, ಕತ್ತಲೆಕೋಣೆಯೊಂದರಿಂದ ಕೆಳಗಿಳಿದು "ಶ್ರೀ ಪಾತಾಳೇಶ್ವರ ಗುಡಿ"ಗೂ ಭೇಟಿ ನೀಡಿದೆವು. ಇನ್ನೊಂದು ಕತ್ತಲೆಕೋಣೆಯ ಗೋಡೆಯ ಮೇಲೆ ಸಣ್ಣ ಬಿರುಕೊಂದರಿಂದ ಬಂದ ಸೂರ್ಯಕಿರಣಗಳು ಬೃಹತ್ ಗೋಪುರದ ಬಿಂಬವನ್ನು ತಲೆಕೆಳಗಾಗಿ ಬಿತ್ತರಿಸಿದ್ದವು (pinhole effect), ಈ ಚಮತ್ಕಾರವನ್ನೂ ನೋಡುವ ಅವಕಾಶ ಸಿಕ್ಕಿತು. ದೇವಸ್ಥಾನದ ಹಿಂಬದಿಯಲ್ಲೇ ವಿಜಯನಗರ ನಿರ್ಮಾತೃ ವಿದ್ಯಾರಣ್ಯರು ಪೂಜೆಗೊಳ್ಳುವ ಗುಡಿಯಿದೆ, ಅವರಿಗೂ ವಂದಿಸಿ, ಅವರ ಸಾಧನೆಯನ್ನು ನೆನೆದೆವು. ಮುಖ್ಯ ಗೋಪುರದಿಂದ ಹೊರಬಂದರೆ ಸಿಗುವುದೇ "ಹಂಪಿ ಬಝಾರ್". ಒಂದು ಕಾಲ ಇಲ್ಲಿ ಚಿನ್ನಾಭರಣಗಳು, ವಜ್ರವೈಢೂರ್ಯಗಳು "ಸೇರು"ಗಳಲ್ಲಿ ಮಾರಲ್ಪಡುತ್ತಿತ್ತು. ಆಗಿದ್ದ ಅಂಗಡಿಗಳ ಕುರುಹುಗಳು ಈಗಲೂ ಇಲ್ಲಿ ಕಾಣುತ್ತವೆ. ಆದರೆ ಹೆಚ್ಚಿನವು ಒತ್ತುವರಿಗೊಂಡು 'modern ಬಝಾರ್'ಗಳಾಗಿ ವಜ್ರವೈಢೂರ್ಯಗಳ ಬದಲು ಕರಕುಶಲ ವಸ್ತುಗಳು, ಪೆಪ್ಸಿ-ಕೋಲಾ ಇತ್ಯಾದಿಗಳು ಇಲ್ಲಿ ಕೊಳ್ಳಲು ಸಿಗುತ್ತದೆ.



ಮುಂದೆಸಾಗುತ್ತಾ, ನಾವು ವೀಕ್ಷಿಸಿದ್ದು ಹೇಮಕುಟ ಗುಡ್ಡದ ಬುಡದಲ್ಲಿರುವ "ಕಡಲೆಕಾಳು ಗಣೇಶ" ಗುಡಿಯನ್ನು. ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿರುವ ಹಲವಾರು ಆಳೆತ್ತರದ ಕಂಬಗಳಿಂದ ಸಂಪೂರ್ಣ ಶಿಲಾಮಯ ಗುಡಿ ನಿರ್ಮಿಸಲಾಗಿದೆ. ಇಲ್ಲೂ ಅಷ್ಟೇ ಎಲ್ಲೆಡೆ ಸುಂದರ ಕಲಾಕೃತಿಗಳು! ಇಲ್ಲಿರುವ ಗಣೇಶನ ವಿಗ್ರಹ 15 ಅಡಿ ಎತ್ತರವಾಗಿದೆ, ಒಂದೇ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಗಣಪತಿಯ ಹೊಟ್ಟೆಯು ಕಡಲೆಕಾಳಿನಾಕೃತಿಯಲ್ಲಿರುವುದರಿಂದ "ಕಡಲೆಕಾಳು ಗಣೇಶ" ಎಂದು ಪ್ರಸಿದ್ಧಿಗೆ ಬಂತು. ವಿಗ್ರಹವು ಅಲ್ಲಲ್ಲಿ ಭಗ್ನಗೊಂಡಿರುವುದರಿಂದ ಇಲ್ಲಿ ಪೂಜಾವಿಧಿಗಳು ನಡೆಯುವುದಿಲ್ಲ. ಇಲ್ಲಿಂದ ಹೊರಬಂದರೆ ಸನಿಹದಲ್ಲೇ "ಸಾಸಿವೆಕಾಳು ಗಣೇಶ"ನ ಗುಡಿಯಿದೆ. 8 ಅಡಿ ಎತ್ತರದ, ಒಂದೇ ಕಲ್ಲಲ್ಲಿ ನಿರ್ಮಿಸಿರುವ ವಿಗ್ರಹ ಸುಂದರವಾಗಿದೆ, ಇಲ್ಲೂ ಪೂಜೆ ನಡೆಯುವುದಿಲ್ಲ. ಹತ್ತಿರದಲ್ಲೇ ವಿಷ್ಣುಪಾದ ದೇವಸ್ಥಾನವಿದೆ. ಇಲ್ಲಿನ ವಿಶೇಷ ಕಲ್ಲಿನ ಮೇಲೆ ಕೆತ್ತಲ್ಪಟ್ಟಿರುವ ವಿಷ್ಣುಪಾದ ಮತ್ತು ಅದನ್ನು ಸುತ್ತುವರಿದಿರುವ ನಾಗದೇವರು.



ಹತ್ತಿರದಲ್ಲೇ ಹೇಮಕುಟ ಗುಡ್ಡವಿದೆ. ಇಲ್ಲಿ ಹೇಮಕುಟ ಗುಡಿಗಳ ಸಮೂಹವಿದೆ. ಜೈನ ಬಸದಿಯನ್ನು ಹೋಲುವ, ತ್ರಿಕುಟಾಚಲ ಶೈಲಿಯಲ್ಲಿ ನಿರ್ಮಿಸಿರುವ ಈ ಗುಡಿಗಳಲ್ಲಿ ಶಿವ, ಮತ್ತಿತರ ದೇವರನ್ನು ಆರಾಧಿಸಲಾಗುತ್ತದೆ. ಈ ಗುಡಿಗಳ ಮೇಲ್ಛಾವಣಿಗಳು ಪಿರಮಿಡ್ ಆಕೃತಿಯಲ್ಲಿದೆ, ನೋಡಲು ವಿಶಿಷ್ಟವಾಗಿ, ಸುಂದರವಾಗಿದೆ. ಇಂತಹ 15-20 ಗುಡಿಗಳ ಸಮೂಹ ಇಲ್ಲಿನ ವೈಶಿಷ್ಟ್ಯ. ತಿಳಿನೀರ ಕೊಳವೂ ಇಲ್ಲಿದೆ. ಈ ಗುಡಿಗಳನ್ನು ಯಾರು, ಯಾವಾಗ ನಿರ್ಮಿಸಿದರು ಎಂಬ ಬಗ್ಗೆ ತಿಳಿಯದಿದ್ದರೂ, ಇವು ವಿಜಯನಗರ ಸಂಸ್ಥಾನ ಅಸ್ತಿತ್ವಕ್ಕೆ ಬರುವ ಮೊದಲೇ ಇತ್ತು ಎಂಬ ಮಾಹಿತಿ ಮಾತ್ರ ಸಿಕ್ಕಿತು... ಇಲ್ಲಿಂದ ಸ್ವಲ್ಪ ಮುಂದೆ ನಡೆದರೆ ಎರಡಂತಸ್ತಿನ ಕಲ್ಲುಕಂಬಗಳಿಂದ ನಿರ್ಮಿಸಿರುವ ವಿಶಿಷ್ಟವಾದ ವಿಜಯನಗರದ ದಕ್ಷಿಣ ಹೆಬ್ಬಾಗಿಲು ಸಿಗುತ್ತದೆ. ಎತ್ತರದಲ್ಲಿರುವ ಈ ಪ್ರದೇಶದಿಂದ ಸೂರ್ಯಾಸ್ತಮಾನದ ದೃಶ್ಯ ವಿಹಂಗಮ ಎಂದು ಗೈಡ್ ತಿಳಿಸಿದ. ಹೀಗೆ ಹಲವಾರು ವಿಶೇಷತೆಗಳನ್ನು ಹೊಂದಿರುವ ಹೇಮಕುಟ ಗುಡ್ದದ ಶಾಂತ ಪರಿಸರ, ಬೀಸುವ ಶುದ್ಧ ಗಾಳಿ ಮನಸ್ಸಿಗೆ ನೆಮ್ಮದಿ, ಆಹ್ಲಾದವನ್ನೂ ನೀಡುತ್ತದೆ.


1-2 ಕಿ.ಮೀ. ಮುಂದೆ ಸಾಗಿದರೆ ಸಿಗುವುದೇ "ಲಕ್ಷ್ಮೀನರಸಿಂಹ" ಸನ್ನಿಧಿ. ಶೇಷಾಸನದ ಮೇಲೆ ಯೋಗ ಭಂಗಿಯಲ್ಲಿ ಆರೂಢನಾಗಿರುವ ಲಕ್ಷ್ಮೀನರಸಿಂಹನ ಆಳೆತ್ತರದ ಭವ್ಯ ಮೂರ್ತಿ ಇಲ್ಲಿನ ವಿಶೇಷ. ಅತ್ಯಂತ ಸೂಕ್ಷ್ಮ ಕೆತ್ತನೆಗಳನ್ನು ಒಳಗೊಂಡಿರುವ ಕಲಾಕೃತಿ ಆಗಿನ ಕುಶಲಕರ್ಮಿಗಳ ನೈಪುಣ್ಯತೆಯನ್ನ, ಕ್ರಿಯಾಶೀಲತೆಯನ್ನ, ತಾಳ್ಮೆಯನ್ನ ಸ್ಮರಿಸುವಂತೆ ಮಾಡುತ್ತದೆ. ಶ್ರೀ ವಿಷ್ಣು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಹಿರಣ್ಯಕಶಿಪುವನ್ನು ವಧಿಸಲು ನರಸಿಂಹಾವತಾರದಲ್ಲಿ ಕಂಬದಿಂದ ಪ್ರತ್ಯಕ್ಷವಾದಾಗಿನ ಮುಖಭಾವ ಈ "ಉಗ್ರನರಸಿಂಹ" ವಿಗ್ರಹದಲ್ಲಿ ಮೂಡಿದೆ. ಅತ್ಯಧ್ಬುತವಾದ ಕೈಚಳಕ!! ಆದರೆ, ವಿಗ್ರಹಭಂಜಕರು ತಮ್ಮ ಖಡ್ಗವನ್ನು ಇಲ್ಲೂ ಝಳಪಿಸಿದ್ದಾರೆ. ವಿಗ್ರಹ ತುಂಬಾ ಭಗ್ನಗೊಂಡಿದೆ. ಲಕ್ಷ್ಮೀ ಕುಳಿತಿದ್ದ ಭಾಗ ಛೇದಗೊಂಡು ವಿಗ್ರಹದಿಂದ ಬೇರ್ಪಟ್ಟು ನಾಶ ಹೊಂದಿದೆ. ಸೂಕ್ಷ್ಮವಾಗಿ ಗಮನಿಸಿದರೆ ಕೈಬೆರಳು, ಉಗುರು ಕಾಣಲು ಸಿಗುತ್ತದೆ. ಯಾಕೋ, ದೇವಳದ ಕೆಲಸ ಅರ್ಧಕ್ಕೆ ನಿಂತಂತೆ ಭಾಸವಾಗುತ್ತದೆ!!...



ಸನಿಹದಲ್ಲೇ "ಬಡವಿ ಲಿಂಗ" ಗುಡಿಯಿದೆ. ದೊಡ್ಡದಾದ ಶಿವಲಿಂಗ ಇಲ್ಲಿನ ವಿಶೇಷ. ಮುಕ್ಕಣ್ಣನ ಮೂರು ಕಣ್ಣುಗಳೂ ಲಿಂಗದಲ್ಲಿ ಮೂಡಿವೆ. ಜಟಾಧರನ ಮುಡಿಯೇರಿದ ಗಂಗೆಯ ದ್ಯೋತಕವಾಗಿ ಶಿವಲಿಂಗ ಸದಾ ನೀರಿನಿಂದ ಆವೃತವಾಗಿರುತ್ತದೆ. ಬಡ ಮಹಿಳೆಯೊಬ್ಬಳು ನಿತ್ಯ ಪೂಜಿಸುತ್ತಿದ್ದುದರಿಂದ "ಬಡವಿ ಲಿಂಗ" ಎಂಬ ಹೆಸರು ಬಂತು.



ನಂತರ ನಾವು ವೀಕ್ಷಿಸಿದ್ದು ಕೆಳ ಅಂತಸ್ತಿನ ಶಿವನ ದೇವಸ್ಥಾನ. ಹೆಸರೇ ಹೇಳುವಂತೆ ನೆಲಮಟ್ಟದಿಂದ ಕೆಲವು ಮೀಟರ್ ಕೆಳಗಿದೆ ಈ ಶಿಲಾಮಯ ದೇವಸ್ಥಾನ. ಗರ್ಭಗುಡಿಯ ಸುತ್ತಲೂ ನೀರಿನಿಂದಾವೃತವಾಗಿದೆ. ಶಿಥಿಲಾವಸ್ಥೆಯಲ್ಲಿರುವ ಈ ಗುಡಿಯಲ್ಲೂ ಪೂಜಾಕೈಂಕರ್ಯಗಳು ನಡೆಯುವುದಿಲ್ಲ. ಸಮೀಪದಲ್ಲೇ ಸಾಮಂತರಸರು ವಾಸಿಸುತ್ತಿದ್ದ ಮನೆಗಳ ಅವಶೇಷಗಳಿವೆ. ಈ ಭಾಗದಲ್ಲಿ ಉತ್ಖನನದ ಕೆಲಸ ಭರದಿಂದ ನಡೆಯುತ್ತಿತ್ತು, ಸದ್ಯದಲ್ಲೇ ಇನ್ನಷ್ಟು ರಹಸ್ಯಗಳು ಹೊರಬೀಳಬಹುದು!



ಮತ್ತೆ 2 ಕಿ.ಮೀ ಮುಂದೆ ಹೋದರೆ ಸಿಗುವುದು ಕಮಲ ಮಹಲ್, ರಾಣಿಯ ಅರಮನೆ, ಸ್ನಾನ ಘಟ್ಟ ಇತ್ಯಾದಿ ಇರುವ "ಝೆನಾನ ಸಂಕೀರ್ಣ" ಎಂದು ಕರೆಯಲ್ಪಡುವ ಸ್ಥಳ. ಸುತ್ತಲೂ ಎತ್ತರದ ಕಲ್ಲಿನ ಕೋಟೆ, ವಾಚ್ ಟವರ್ ರಕ್ಷಣೆಗೆ ಇದೆ. ಇಲ್ಲಿ ವೀಕ್ಷಕರು ಒಳಹೋಗಲು ಟಿಕೆಟ್ ತೆಗೆದುಕೊಳ್ಳಬೇಕು. ಒಳ ಪ್ರವೇಶಿಸಿದರೆ ಲಾನ್ ಹಾಸಿರುವ ಸುಂದರ ಬಯಲು, ತಿರುಗು ತಿರುಗಿ ದಣಿದಿದ್ದರೆ ಕೊಂಚ ದಣಿವಾರಿಸಿಕೊಳ್ಳಲು ನೆರವಾಗುತ್ತದೆ, ದೊಡ್ಡ ಮರಗಳು ನೆರಳೊದಗಿಸುತ್ತವೆ. ಬಯಲ ಮಧ್ಯದಲ್ಲಿ ಕಾಣಿಸುವುದೇ ಇಂಡೊ-ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಿರುವ ಕಮಲ ಮಹಲ್. ಇಟ್ಟಿಗೆ, ಸೀಮೆಸುಣ್ಣ ಇತ್ಯಾದಿ ಬಳಸಿ ಕಟ್ಟಿದ ಎರಡು ಮಹಡಿಯ ’ಮಹಲ್’ ಅರಳಿದ ಕಮಲದ ಹೂವಿನಾಕಾರವನ್ನು ಹೋಲುವುದರಿಂದ ಈ ಹೆಸರು. ಇದು ರಾಣಿಯರು ಬೇಸಿಗೆಯ ಧಗೆಯಿಂದ ತಪ್ಪಿಸಿಕೊಳ್ಳಲು ನಿರ್ಮಿಸಿದ ಬೇಸಿಗೆ ಅರಮನೆ. ಇದರ ಎದುರುಗಡೆ ರಾಣಿಯರು ವಾಸಿಸುತ್ತಿದ್ದ ಅರಮನೆಯ ಅವಶೇಷ ಕಾಣುತ್ತದೆ. ನೀರಿನ ಕೊಳ, ಕಾಲುವೆಗಳೂ ಇಲ್ಲಿವೆ. ಪಕ್ಕದಲ್ಲೇ ರಾಜ, ರಾಣಿಯರು ಬಳಸುತ್ತಿದ್ದ ಸ್ನಾನಘಟ್ಟವಿದೆ. ಹೊರಗಿನಿಂದ ನೋಡಿದರೆ ಸಾಧಾರಣ ಕಟ್ಟಡದಂತೆ ಕಂಡರೂ, ಒಳಗೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಕಮಲ ಮಹಲ್ ನಂತೆ ಇದು ಕೂಡಾ ಇಂಡೊ-ಸಾರ್ಸನಿಕ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ರಾಜ-ರಾಣಿಯರ ಬಚ್ಚಲುಮನೆಯೂ ಇಷ್ಟು ಸ್ಪೆಶಲ್ ಆಗಿರಬೇಕಾದರೆ, ಆಗಿನವರ ದರ್ಬಾರನ್ನು ನೀವೇ ಊಹಿಸಿ?...



ಸಂಕೀರ್ಣದ ಇತರ ವಿಶೇಷತೆಗಳೆಂದರೆ ರಾಜ-ರಾಣಿಯರನ್ನು ಕಾವಲುಕಾಯಲು ಸುತ್ತಲೂ ನಿರ್ಮಿಸಿದ ಮೂರು ಮಹಡಿಗಳ "ವಾಚ್ ಟವರ್"... ಆನೆಗಳು ವಾಸಿಸಲು ನಿರ್ಮಿಸಿದ ಎತ್ತರದ ಕಲ್ಲಿನ ಗೂಡುಗಳು. ಇಲ್ಲೊಂದು ಸಾಧಾರಣವಾಗಿ ಕಾಣುವ ಕಲ್ಲಿನ ಕಟ್ಟಡವೂ ಇದೆ, ಇದರ ವಿಶೇಷತೆಯೇನು ಎಂದು ಸರಿಯಾಗಿ ಗೊತ್ತಾಗಲಿಲ್ಲ. ಒಳಗಡೆ ಆರ್ಕಿಯಾಲಜಿ ಡಿಪಾರ್ಟಮೆಂಟ್ ನವರು ಉತ್ಖನನದಲ್ಲಿ ದೊರೆತ ನೂರಾರು ವಿಗ್ರಹಗಳನ್ನು, ಶಿಲಾಕೃತಿಗಳನ್ನು ಜೋಡಿಸಿಟ್ಟಿದ್ದಾರೆ. ಹೆಚ್ಚಿನವು ಕೈ-ಕಾಲು ಇತ್ಯಾದಿ ಕಳಕೊಂಡಿವೆ. ನನಗೆ ತುಂಬಾ ವಿಶಿಷ್ಟವಾಗಿ ಕಂಡದ್ದು ಕೋರೆ ಹಲ್ಲು ಇರುವ ಆಂಜನೇಯನ ದೊಡ್ಡ ವಿಗ್ರಹ.


ಕೊಂಚ ವಿರಾಮದ ನಂತರ ನಾವು ಮುಂದುವರಿದದ್ದು "ಮಹಾ ನವಮಿ" ದಿಬ್ಬಕ್ಕೆ. ದಾರಿಯಲ್ಲಿ ಕಣ್ಮನ ಸೆಳೆಯುವುದು ದೊಡ್ಡ ಕಲ್ಲಿನ ಬಾಗಿಲು. ಇದರ ಕೆತ್ತನೆಯಂತೂ ಬೆರಗು ಹುಟ್ಟಿಸುತ್ತದೆ. ಯಾವ ಮರದ ಬಾಗಿಲಿಗೂ ಕಮ್ಮಿಇಲ್ಲದಂತೆ ಇದನ್ನು ಕೆತ್ತಲಾಗಿದೆ. ಕೀಲು, ಬೋಲ್ಟ್, ಚಿಲಕ ಎಲ್ಲವೂ ಕಲ್ಲಿನದ್ದು!! ಈ ಬಾಗಿಲು ಯಾವ ದಿಕ್ಕನ್ನು ರಕ್ಷಿಸಲು ನಿರ್ಮಿಸಲಾಯಿತು ಎಂದು ಗೊತ್ತಾಗಲಿಲ್ಲ. ಇಲ್ಲಿನ ಕ್ಯುರೇಟರ್ ಗಳು ಬಾಗಿಲನ್ನು ಎಲ್ಲಾ ಕೋನಗಳಿಂದಲೂ ನೋಡಲು ಅನುಕೂಲವಾಗಲು ಕಲ್ಲಿನ ದಂಡೆಯೊಂದನ್ನು ಆಧಾರವಾಗಿ ನಿರ್ಮಿಸಿ ಇದನ್ನು ಸಂರಕ್ಷಿಸಿದ್ದಾರೆ.


ಮುಂದೆಸಾಗುತ್ತಾ "ಮಹಾ ನವಮಿ ದಿಬ್ಬ" ಇರುವ ದೊಡ್ಡ ಬಯಲು ಹೊಕ್ಕಾಗ ಒಂದು ಕ್ಷಣ ಬೆರಗಾದೆವು. ಈ ಜಾಗವಂತೂ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಅದರಲ್ಲಿ ಮುಖ್ಯವಾದದ್ದು "ಮಹಾ ನವಮಿ ದಿಬ್ಬ". ರಾಜ ನವರಾತ್ರಿಯ ಸಂದರ್ಭದಲ್ಲಿ ತನ್ನ ಸಾಮ್ರಾಜ್ಯದ ಔನ್ನತ್ಯವನ್ನು ಜಗತ್ತಿಗೆ ಸಾರಲು, ವಿಜಯೋತ್ಸವವನ್ನು ಆಚರಿಸಲು, ನವರಾತ್ರಿಯ ಬೃಹತ್ ದರ್ಬಾರು ನಡೆಸಲು ಬಳಸುತ್ತಿದ್ದ ಜಾಗ. ಈ ಎತ್ತರದ ಕಲ್ಲಿನ ದಿಬ್ಬದ ಇಂಚು ಇಂಚು ಜಾಗವನ್ನೂ ಕೆತ್ತನೆಗಳಿಂದ ಸಿಂಗರಿಸಲಾಗಿದೆ. ಚೌಕಾಕಾರದ, ಮೂರು ಹಂತಗಳಿರುವ ಈ ದಿಬ್ಬದ ತುದಿ ತಲಪಲು ಕಲ್ಲಿನ ಮೆಟ್ಟಿಲುಗಳಿವೆ. ದಿಬ್ಬದ ಮೇಲಿನಿಂದ ವಿಶಾಲ ಬಯಲಿನ ದರ್ಶನವಾಗುತ್ತದೆ. ರಾಜ ಯಾವ ಗಾಂಭೀರ್ಯದಿಂದ ಇಲ್ಲಿ ದರ್ಬಾರು ನಡೆಸುತ್ತಿದ್ದಿರಬಹುದು, ಎಷ್ಟು ಸಹಸ್ರ ಜನರು ಇಲ್ಲಿ ನೆರೆದಿರಬಹುದು, ಯಾವ ಬಗೆಯಲ್ಲಿ ವಿಶಾಲ ಬಯಲನ್ನು ಸಿಂಗರಿಸಿರಬಹುದು ಎಂಬುದರ ಬಗ್ಗೆ ಸ್ವಲ್ಪಕಾಲ ಯೋಚಿಸಿದೆ. ಯಾಕೋ ನನ್ನ ಊಹೆಗೆ ನಿಲುಕಲಿಲ್ಲ!



ಇಲ್ಲಿನ ದೃಶ್ಯಕಾವ್ಯಗಳು, ಕುಸುರಿ-ಕೆತ್ತನೆಗಳ ಬಗ್ಗೆ ಹೇಳಲೇಬೇಕು. ವಿಜಯನಗರ ಸಾಮ್ರಾಜ್ಯಕ್ಕೆ ಪೋರ್ಚುಗೀಸ್, ಅರಬ್, ಚೀನಾ ದೇಶಗಳೊಂದಿಗೂ ಸಂಪರ್ಕವಿತ್ತು ಎಂಬುದರ ದ್ಯೋತಕವಾಗಿ ಅಲ್ಲಿನ ರಾಯಭಾರಿಗಳ ಚಿತ್ರವನ್ನು ಇಲ್ಲಿ ಕೆತ್ತಲಾಗಿದೆ. ಇದರೊಂದಿಗೆ ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳ, ಹಬ್ಬಹರಿದಿನಗಳ ಸಡಗರವನ್ನು ಇಲ್ಲಿ ಕಾಣಬಹುದು. ರಾಜ ನಡೆಸುತ್ತಿದ್ದ ಸಭೆ, ದರ್ಬಾರುಗಳ ಚಿತ್ರಣವೂ ಇದೆ. ಸೈನ್ಯ ಸಾಮರ್ಥ್ಯವನ್ನು ಪ್ರದರ್ಶಿಸುವ ಸಾಲು ಸಾಲು ಆನೆಗಳು, ಒಂಟೆಗಳು, ಕುದುರೆಗಳು, ಪದಾತಿ ದಳವನ್ನೂ ಇಲ್ಲಿ ಸುಂದರವಾಗಿ ಬಿಂಬಿಸಲಾಗಿದೆ. ಒಂದು ರೀತಿಯಲ್ಲಿ ಇದು ಫೋಟೊ ಗ್ಯಾಲರಿಯನ್ನು ಹೋಲುತ್ತದೆ ಎಂದರೆ ತಪ್ಪಾಗಲಾರದು. ಆದರೆ ಎಲ್ಲವೂ ಕಲಾವಿದನ ಕೈಚಳಕದಿಂದ ಕಲ್ಲಿನಲ್ಲಿ ಮೂಡಿದ್ದು!!! ರಾಜ ಈ ದಿಬ್ಬದ ಮೇಲೆ ಕುಳಿತು ನವರಾತ್ರಿಯ ಸಂದರ್ಭದಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಸೈನಿಕರ ಪಥಸಂಚಲನ, ಕುಸ್ತಿ-ಕಾಳಗ, ಕತ್ತಿವರಸೆ, ಜಲಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದನಂತೆ. ಸಾಮಂತ ರಾಜರು ತಮ್ಮ ಕಪ್ಪಕಾಣಿಕೆಯನ್ನು ಈ ಸಂದರ್ಭದಲ್ಲೇ ತಂದೊಪ್ಪಿಸುತ್ತಿದ್ದರು ಎಂಬ ಮಾಹಿತಿಯೂ ತಿಳಿಯಿತು.



ಈ ಪರಿಸರದ ಇನ್ನೊಂದು ವಿಶೇಷತೆ ಮೆಟ್ಟಿಲುಗಳಿಂದಲೇ ಅಲಂಕೃತಗೊಂಡಿರುವ ಸುಂದರ ಕೆರೆ ಮತ್ತು ಒಲಂಪಿಕ್ ಈಜುಕೊಳಕ್ಕಿಂತಲೂ ದೊಡ್ಡದಾದ ಈಜುಕೊಳ. ಈಗ ನೀರಿರದಿದ್ದರೂ ಅದರ ಗಾತ್ರ, ವಿಸ್ತೀರ್ಣ ನೋಡಿ ಬೆರಗಾಗಲೇಬೇಕು. ಕೆರೆಗೆ ನೀರುಹಾಯಿಸಲು ಕಲ್ಲಿನ ಕಾಲುವೆಯೂ ಇಲ್ಲಿ ಕಾಣಬಹುದು. ಎಲ್ಲವೂ ಯೋಜನಾಬದ್ಧವಾಗಿ, ಅಚ್ಚುಕಟ್ಟಾಗಿ ಕಲ್ಲಿನಲ್ಲೇ ನಿರ್ಮಾಣಗೊಂಡಿವೆ. ಇಲ್ಲಿಂದ ಹೊರಬರುವಾಗ ನಮಗೆ ಕಂಡದ್ದು ದೊಡ್ಡ ಕಲ್ಲಿನ ಬಟ್ಟಲುಗಳು, "ಸೈನಿಕರು ಊಟ ಮಾಡಲು ಬಳಸುತ್ತಿದ್ದ ಬಟ್ಟಲು ಇದು" ಎಂದ ನಮ್ಮ ಗೈಡ್!!!

(ಮುಂದುವರಿಯುವುದು...)

No comments: