ನಿರ್ದೇಶಕರೇ ಇಲ್ಲದ ನಾಟಕ!
ನಾವು ನೆಂಪಿನ ಗೆಳೆಯರೆಲ್ಲ ಕೂಡಿ ನಮ್ಮ ಸರಕಾರಿ ಪ್ರೌಢ ಶಾಲೆಯಲ್ಲಿ (ಹಳೆ ವಿದ್ಯಾರ್ಥಿ ಸಂಘದ ವತಿಯಿಂದ) ನಾಟಕ ಆಡಿದ್ದು ಅಪೂರ್ವ ಕ್ಷಣಗಳಲ್ಲೊಂದು. ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ಮಾಡುತ್ತಾರೆಂದಕೂಡಲೇ ನಮ್ಮೆಲ್ಲರ ಮಂಡೆಯೊಳಗೊಂದು ಭೂತ ಹೊಕ್ಕಿತು. ನಾವೊಂದು "ಹಳೆ ವಿದ್ಯಾರ್ಥಿ ಸಂಘ" ಮಾಡಿ ಅದರ ಮೂಲಕ ಮಾತೃಸಂಸ್ಥೆಗೊಂದು ರಂಗಮಂದಿರ ಕಟ್ಟಿಸಿಕೊಡೋಣ ಎಂಬ ಆಲೋಚನೆ ನಮ್ಮೆಲ್ಲರದ್ದು. ಕೂಡಲೇ ಕಾರ್ಯಪ್ರವೃತ್ತರಾದೆವು. ಪತ್ರಿಕೆ ಮೂಲಕ "ಸಂಘ" ಸ್ಥಾಪಿಸುವ ಕುರಿತು ಪ್ರಕಟಣೆ ನೀಡಿ, ಹಳೆ ವಿದ್ಯಾರ್ಥಿಗಳು ಎಲ್ಲಿದ್ದರೂ ನಮ್ಮನ್ನು ಸಂಪರ್ಕಿಸುವಂತೆ ಕೋರಲಾಯಿತು.
ನಾನು, ಶಾಲೆಯ ದಾಖಲೆಗಳನ್ನೆಲ್ಲ ತಿರುವಿಹಾಕಿ ಈ ವರೆಗೆ ಆ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳ ಪಟ್ಟಿ ಸಿದ್ಧಪಡಿಸಿದೆ ಹಾಗೂ ಅವರೆಲ್ಲರಿಗೆ ಪತ್ರ ರವಾನಿಸಲಾಯಿತು. ಎಲ್ಲ ಪ್ರಯತ್ನಗಳ ಫಲದಿಂದ ಕೆಲವು ಸಾವಿರ (ಸರಿಯಾಗಿ ನೆನಪಿಲ್ಲ) ಹಣ ಒಟ್ಟುಗೂಡಿತು.
ಸಂಘ ಏನೋ ಸ್ಥಾಪನೆಯಾಯಿತು. ಅದರ ಪ್ರಯುಕ್ತ ಮನೋರಂಜನಾ ಕಾರ್ಯಕ್ರಮ ಬೇಡವೇ? ಅಂತೆಯೇ ವಾರ್ಷಿಕೋತ್ಸವದ ಮರುದಿನ ರಾತ್ರಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮ ಎಂದಾಯಿತು. ನಾವೆಲ್ಲ ಸೇರಿ ಒಂದು ಹಾಸ್ಯ ನಾಟಕ ಮಾಡಲು ತೀರ್ಮಾನಿಸಿದೆವು. ಪ್ರಸಂಗ "ರಂಗಣ್ಣನ ರಾದ್ಧಾಂತ". ನಾವೇ ನೆಂಪಿನ ಭಟ್ಟರ ಮನೆಯ ಹುಡುಗರೆಲ್ಲ ಪಾತ್ರ ಹಂಚಿಕೊಂಡೆವು. ಆದರೆ ಸ್ತ್ರೀ ವೇಷಕ್ಕೆ ಯಾರು ಎಂಬುದು ’ಮಿಲಿಯನ್ ಡಾಲರ್’ ಪ್ರಶ್ನೆಯಾಗಿತ್ತು. ಹುಡುಗಿ ವೇಷವೆಂದರೆ ನಾಚುವ ಕಾಲ ಅದಾಗಿತ್ತು. ಯಾರನ್ನು ಕೇಳಿದರೂ ಇಲ್ಲ ಎನ್ನುವವರು! ಮೀಸೆ ಬೇರೆ ತೆಗೀಬೇಕಲ್ಲ! ಕೊನೆಗೆ ಬೇರೆ ಉಪಾಯವಿಲ್ಲದೇ ನಾನೇ ’ಗೀತಾ’ಳಾಗಬೇಕಾಯ್ತು!
ಎಲ್ಲರಿಗೂ ಸಂಭಾಷಣೆ ನಾನೇ ಬರೆದು ಹಂಚಿದೆ. ರಿಹರ್ಸಲ್ ಮಾಡಲು ನಮ್ಮ ಗಣಪತಿ ದೇಗುಲದ ಪರಿಸರವನ್ನೇ ಆರಿಸಿಕೊಂಡೆವು. ಕರೆಂಟು ಇಲ್ಲದ ಆ ದಿನಗಳಲ್ಲಿ ದೇವರ ಮಂದದೀಪದೆದುರು ಕಷ್ಟಪಟ್ಟು ಸಂಭಾಷಣೆ ಓದಿಕೊಂಡು ರಿಹರ್ಸಲ್ ಮಾಡಿದೆವು. ನಮ್ಮೊಳಗಿನ ತಪ್ಪುಗಳನ್ನು ನಾವೇ ತಿದ್ದಿಕೊಳ್ಳುತ್ತಾ ನಿರ್ದೇಶಕನ ಸ್ಥಾನವನ್ನು ಶ್ರೀ ಗಣಪತಿ ದೇವರಿಗೇ ಬಿಟ್ಟುಕೊಟ್ಟೆವು.
ಮೊದಲ ಪ್ರಯತ್ನ, ಹೇಗೂ ಏನೋ ಎಂಬ ಅಳುಕಿನಿಂದಲೇ ನಾಟಕ ಪ್ರಾರಂಭಿಸಿದೆವು. ಆದರೆ ನಮ್ಮ ನಿರೀಕ್ಷೆಗೂ ಮೀರಿ ನೆರೆದ ಜನಸಾಗರದೆದುರು ನಮ್ಮ ನಾಟಕ ಗೆದ್ದಿತ್ತು! ಯಾವುದೇ ರಂಗ ನಿರ್ದೇಶಕನ ತಾಲೀಮು ಇಲ್ಲದೇ ಇಷ್ಟೊಂದು ಅದ್ಭುತವಾಗಿ ನಾಟಕ ಮೂಡಿಬಂದುದು ಎಲ್ಲರಿಗೂ ಅಚ್ಚರಿಯ ಸಂಗತಿಯಾಗಿತ್ತು. ಆ ದಿನದ ಆನಂದ, ತೃಪ್ತಿ ಎಣಿಕೆಗೆ ನಿಲುಕದ್ದು. ನಮ್ಮಿಂದ ಇದೂ ಸಾಧ್ಯವೆಂದು ತೋರಿಸಿಕೊಟ್ಟ ದಿನವದು.
ಆದರೆ ರಂಗಮಂದಿರದ ಕನಸು ಕನಸಾಗಿಯೇ ಉಳಿಯಿತು. ಒಟ್ಟುಗೂಡಿದ ಹಣ ನಮ್ಮ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ರಮಗಳ ವೆಚ್ಚಕ್ಕೆ ಸರಿಹೊಂದಿತ್ತು!
-- ನೆಂಪು ಕೃಷ್ಣ ಭಟ್
No comments:
Post a Comment