Thursday, April 1, 2010

ಸಂಚಾರ: ಪಟ್ಟದಕಲ್ಲು

ಯುನೆಸ್ಕೋ ’ವರ್ಲ್ಡ್ ಹೆರಿಟೇಜ್ ಸೈಟ್’ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪಟ್ಟದಕಲ್ಲು ಬಾಗಲಕೋಟೆ ಜಿಲ್ಲೆಯ, ಮಲಪ್ರಭಾ ನದಿಯ ದಂಡೆಯಲ್ಲಿರುವ ಪ್ರೇಕ್ಷಣೀಯ ಸ್ಥಳ. ೮ ನೇ ಶತಮಾನದಲ್ಲಿ ಚಾಲುಕ್ಯ ಸಂಸ್ಥಾನದ ರಾಜಧಾನಿಯಾಗಿತ್ತು ಪಟ್ಟದಕಲ್ಲು.

ದ್ರಾವಿಡ, ಚಾಲುಕ್ಯ ಹಾಗೂ ಉತ್ತರ ಭಾರತದ ಶೈಲಿಯ ಕೆತ್ತನೆಗಳಿಂದ ತುಂಬಿರುವ ದೇವಸ್ಥಾನಗಳ ಸಮೂಹ ಇಲ್ಲಿನ ಪ್ರಮುಖ ಆಕರ್ಷಣೆ.







ಯುದ್ಧದಲ್ಲಿ ವಿಜಯದ ನೆನಪಿಗಾಗಿ ನಿರ್ಮಿಸಿರುವ ಹಳೆಗನ್ನಡದ ಶಾಸನ ಇಲ್ಲಿನ ಇನ್ನೊಂದು ವಿಶೇಷ.






ಬದಾಮಿಯಿಂದ 22 ಕಿ.ಮೀ., ಐಹೊಳೆಯಿಂದ 10 ಕಿ.ಮೀ., ಬಾಗಲಕೋಟೆಯಿಂದ ಸುಮಾರು 35 ಕಿ.ಮೀ ದೂರದಲ್ಲಿದೆ ಪಟ್ಟದಕಲ್ಲು.

ದಾಳಿಕೋರರ ಲೂಟಿಯಿಂದ, ಬಿಸಿಲು-ಮಳೆಯಿಂದ ಇಲ್ಲಿನ ಹೆಚ್ಚಿನ ಕೆತ್ತನೆಗಳು ಘಾಸಿಗೊಂಡಿವೆ. ಈಗ ಆರ್ಕಿಯಾಲಜಿ ಸಂಸ್ಥೆಯ ಅಧೀನದಲ್ಲಿ ಇಲ್ಲಿನ ಮನಮೋಹಕ ದೇವಸ್ಥಾನಗಳ ಸಮೂಹ ಸಂರಕ್ಷಿಸಲ್ಪಟ್ಟಿದೆ.

ಚಿತ್ರಗಳು: ನೆಂಪು ಗುರು
-o-

Tuesday, March 23, 2010

ಸಂಚಾರ: ಬಿಜಾಪುರ (ವಿಜಾಪುರ, ವಿಜಯಪುರ)

ಜಗತ್ ಪ್ರಸಿದ್ಧ "ಗೋಲ್ ಗುಂಬಜ್".
ಮೊಹಮದ್ ಆದಿಲ್ ಶಾಹನ ಸಮಾಧಿ ಇರುವ ಸ್ಥಳ.

ಗುಂಬಜ್ ನ ಒಳಗಿರುವ ಸುಮಾರು 150 ಮೆಟ್ಟಿಲುಗಳನ್ನು ಬಳಸಿ ಮೇಲ್ಚಾವಣಿ ತಲುಪಿದರೆ ನಾವಾಡಿದ ಪ್ರತಿಯೊಂದು ಶಬ್ದವೂ ಏಳು ಬಾರಿ ಪ್ರತಿಧ್ವನಿಸುವುದನ್ನು ಇಲ್ಲಿ ಕೇಳಬಹುದು.

ಗುಂಬಜ್ ನ ಎದುರಿಗಿರುವ ಸುಂದರ ಕಟ್ಟಡವನ್ನು ಮ್ಯುಸಿಯಮ್ ಆಗಿ ಪರಿವರ್ತಿಸಿದ್ದಾರೆ. ಹಲವಾರು ಅಮೂಲ್ಯ ಶಾಸನಗಳು, ಕೆತ್ತನೆಗಳು, ಶಸ್ತ್ರಾಸ್ತ್ರಗಳ ಸಂಗ್ರಹವನ್ನ ಇಲ್ಲಿ ಕಾಣಬಹುದು.


ಇಬ್ರಾಹಿಮ್ ರೋಝಾ
ಇಬ್ರಾಹಿಮ್ ಆದಿಲ್ ಶಾಹ II ನ ಸಮಾಧಿ ಇರುವ ಸ್ಥಳ


ಮಲಿಕ್-ಇ-ಮೈದಾನ್
55 ಟನ್ ಭಾರ, 4 ಮೀ ಉದ್ದ, 1.5 ಮೀ ಸುತ್ತಳತೆಯ ಬೃಹತ್ ಫಿರಂಗಿ.
ಫಿರಂಗಿಯ ತುದಿಯಲ್ಲಿ ಮೂಡಿರುವ ಸಿಂಹವನ್ನು ಹೋಲುವ ಕಲಾಕೃತಿ ಮನಸೆಳೆಯುತ್ತದೆ.

ಬಾರಾ ಕಮಾನ್
ಅಲಿ ರೋಝಾ II ಸಮಾಧಿ ಇರುವ ಸ್ಥಳ
ಚಿತ್ರಗಳು: ನೆಂಪು ಗುರು
-o-

Wednesday, March 3, 2010

ಸಂಚಾರ: ಬದಾಮಿ, ಬದಾಮಿಯ ಮಂಗಗಳು...

ಬಾಗಲಕೋಟೆ ಜಿಲ್ಲೆಯಲ್ಲಿರುವ ಬದಾಮಿ ಪ್ರೇಕ್ಷಣೀಯ ಸ್ಥಳ. ದೇಶವಿದೇಶಗಳಿಂದ ಸಾವಿರಾರು ಪ್ರವಾಸಿಗರು ಇಲ್ಲಿನ ಕೆತ್ತನೆಗಳಿಂದ ತುಂಬಿರುವ ಕಲ್ಲಿನ ಗುಹೆಗಳನ್ನು ನೋಡಲು ಬರುತ್ತಾರೆ. ಬದಾಮಿಯ ಕಲ್ಲಿನ ಗುಹೆಗಳು ಯುನೆಸ್ಕೋ ದ ವರ್ಲ್ಡ್ ಹೆರಿಟೇಜ್ ಸೈಟ್ ಪಟ್ಟಿಯಲ್ಲೂ ಸ್ಥಾನ ಗಿಟ್ಟಿಸಿದೆ.





ಹಲವಾರು ವೈಶಿಷ್ಠ್ಯಗಳಿಂದ ಕೂಡಿರುವ ಬದಾಮಿ ಇಲ್ಲಿರುವ ಪುಂಡು ಮಂಗಗಳಿಂದಲೂ (ಕು)ಖ್ಯಾತವಾಗಿದೆ. ಪ್ರವಾಸಿಗರು ಕೊಂಚ ಎಚ್ಚರ ತಪ್ಪಿದರೂ ನಿರ್ಭೀತ ಮಂಗಗಳು ಅವರ ಹ್ಯಾಂಡ್ ಬ್ಯಾಗ್, ನೀರಿನ ಬಾಟಲ್, ತಿಂಡಿ ತಿನಿಸುಗಳನ್ನು ಲಪಟಾಯಿಸಿಬಿಡುತ್ತವೆ.

ಬದಾಮಿಯ ಮಂಗಗಳ ಕಪಿಚೇಷ್ಟೆಯ ತುಣುಕುಗಳು ಇಲ್ಲಿವೆ...


ನೀರಿನ ಬಾಟಲ್ ಕಸಿದುಕೊಂಡು ಮುಚ್ಚಳ ತೆಗೆದು ನೀರು ಕುಡಿಯುತ್ತಿರುವ ಕಪಿರಾಯ


ಮಧ್ಯಾಹ್ನದ ಹೊತ್ತು, ಹಸಿವಾಗುತ್ತಿದೆ... ಚಾಕ್ಲೇಟೇ ಬೆಸ್ಟ್...!




ಗುಹೆಗಳ ಫೋಟೊ ತೆಗೆದಿದ್ದು ಸಾಕು.... ಒಸಿ ನಮ್ ಫ್ಯಾಮಿಲಿ ಫೊಟೋನೂ ತೆಗಿಯಪ್ಪಾ...




ಯೇನೋ ಸ್ಕೆಚ್ ಹಾಕ್ತವ್ನೆ... ...!

ನಿದ್ದೆ ಮಾಡ್ತಾ ಇದೀನಿ... ಸುಮ್ಕಿರ್ಲೆ ಯಪಾ... ಡಿಸ್ಟರ್ಬ್ ಮಾಡ್ಬೇಡ..!

ನಾವು ಕೆಳಗಿಳಿದು ಬರುತ್ತಿರುವಾಗ ಒಂದು ಮಂಗ ಯಾರದೋ ಚಪ್ಪಲಿ ಹಿಡಿದುಕೊಂಡು ಓಡುತ್ತಿತ್ತು, ಚಪ್ಪಲಿಯ ಒಡತಿ ಮಂಗನ ಹಿಂದೆ ಓಡುತ್ತಿರುವುದೂ ಕಂಡು ಬಂತು. ಮತ್ತಷ್ಟು ಮುಂದೆ ಬಂದಾಗ ಹೂತೋಟದ ನಡುವೆ ಯುವತಿಯೊಬ್ಬಳು ಏನನ್ನೋ ಹುಡುಕುತ್ತಿದ್ದಳು. ಸೂಕ್ಷ್ಮವಾಗಿ ಗಮನಿಸಿದಾಗ ಮೊಬೈಲ್ ನ ಬ್ಯಾಟರಿ, ನಂತರ ಮೊಬೈಲ್ ನ ಕವಚ ಹೀಗೆ ಚದುರಿಹೋಗಿದ್ದ ಮೊಬೈಲ್ ನ ಭಾಗಗಳನ್ನು ಒಟ್ಟುಹಾಕುತ್ತಿದ್ದಳು. ಯಾವುದೋ ಹೈಟೆಕ್ ಮಂಗ ಅವಳ ಹ್ಯಾಂಡ್ ಬ್ಯಾಗ್ ಎಗರಿಸಿ ಅದರೊಳಗಿದ್ದ ಮೊಬೈಲ್ ನ ಮೇಲೆ ತನ್ನ ಜಾಣ್ಮೆಯನ್ನು ಪ್ರಯೋಗಿಸಿ ಎಲ್ಲೆಂದರಲ್ಲಿ ಎಸೆದಿತ್ತು. ಬ್ಯಾಗ್ ಹೊತ್ತೊಯ್ದು ಗುಡ್ಡದ ಮೇಲೆ ಕುಳಿತುಕೊಂಡಿತ್ತು. ಹೀಗೆ ಮಂಗಗಳ ಕಪಿಚೇಷ್ಟೆ ವಿವರಿಸಿದಷ್ಟೂ ಇದೆ.

ನೀವು ಬದಾಮಿಯ ಕಡೆ ಹೊರಟಿದ್ದೀರಾ? ಮಂಗಗಳ ಬಗ್ಗೆ ಸ್ವಲ್ಪ ಜಾಗ್ರತೆಯಿಂದಿರಿ...

ಚಿತ್ರಗಳು: ನೆಂಪು ಗುರು
-o-

Thursday, February 25, 2010

ಸಂಚಾರ: ಗಯಾ, ಬೋಧಗಯಾ

ಬಿಹಾರ ರಾಜ್ಯದಲ್ಲಿರುವ ಗಯಾ ಪುರಾಣ ಪ್ರಸಿದ್ಧ ಸ್ಥಳ. ಗಯಾಮಹಾತ್ಮೆ, ವಾಯುಪುರಾಣ, ಗರುಡ ಪುರಾಣಗಳಲ್ಲಿ ಗಯಾ ಕ್ಷೇತ್ರದ ಬಗ್ಗೆ ಉಲ್ಲೇಖವಿದೆ. ಇಲ್ಲಿರುವ ಶ್ರೀ ವಿಷ್ಣುಪಾದ ದೇವಸ್ಥಾನ ಪ್ರಸಿದ್ಧ ಪುಣ್ಯಕ್ಷೇತ್ರ.


ಶ್ರೀ ವಿಷ್ಣುಪಾದ ದೇವಸ್ಥಾನದ ಗೋಪುರ...

ಗಯಾದಿಂದ ೧೩ ಕಿ.ಮೀ ದೂರದಲ್ಲಿರುವ ಬೋಧಗಯಾ ಕೂಡಾ ಇತಿಹಾಸ ಪ್ರಸಿದ್ಧ ಸ್ಥಳ. ಬುದ್ಧನಿಗೆ ಜ್ಞಾನೋದಯವಾದ್ದು ಇಲ್ಲೇ ಕಾಣಸಿಗುವ ಬೋಧಿವೃಕ್ಷದ ಬುಡದಲ್ಲಿ.

ಮಹಾಬೋಧಿ ಮಹಾವಿಹಾರ ದೇವಸ್ಥಾನದ ಪರಿಸರದಲ್ಲಿ ಕಾಣಸಿಗುವ ಬೃಹತ್ ಗೋಪುರ, ಬೋಧಿ ಪಲ್ಲಂಕ (ಬೋದಿವೃಕ್ಷವಿರುವ ಜಾಗ), ಗುಡಿಯ ಒಳಗಿರುವ ಬುದ್ಧನ ವಿಗ್ರಹದ ಚಿತ್ರಗಳು ಇಲ್ಲಿವೆ...




ಕ್ರಿ.ಪೂ. ೬೨೩, ವೈಶಾಖ ಮಾಸದ ಹುಣ್ಣಿಮೆಯ ದಿನ ರಾಜಕುಮಾರ ಸಿದ್ಧಾರ್ಥ ಇಲ್ಲಿರುವ ಬೋಧಿವೃಕ್ಷದ ಕೆಳಗೆ ಕುಳಿತು ತಪಸ್ಸು ಮಾಡಿ ಬುದ್ಧನಾದ.

ಬೋಧಗಯಾ ಬೌದ್ಧಮತ ಅನುಯಾಯಿಗಳಿಗೆ ಬಹುದೊಡ್ಡ ಪುಣ್ಯಕ್ಷೇತ್ರ. ಇಲ್ಲಿ ಟಿಬೆಟ್, ಚೀನಾ, ಶ್ರೀಲಂಕಾ, ಜಪಾನ್ ಇನ್ನಿತರ ದೇಶಗಳ ಪ್ರಾರ್ಥನಾ ಮಂದಿರಗಳು ಸಾಕಷ್ಟು ಇವೆ. ಒಂದೊಂದು ಕಟ್ಟಡದ ವಿನ್ಯಾಸವು ವಿಶಿಷ್ಟ, ಮನಮೋಹಕ.

ಸಿದ್ಧಾರ್ಥನ ಮನಃಪರಿವರ್ತನೆಗೆ ಕಾರಣವಾದ ಘಟನೆಗಳ ಚಿತ್ರಗಳು, ಇನ್ನೂ ಹಲವಾರು ವರ್ಣಚಿತ್ರಗಳನ್ನು ಇಲ್ಲಿನ ಗೋಡೆಗಳಲ್ಲಿ ಸುಂದರವಾಗಿ ಬಿಂಬಿಸಲಾಗಿದೆ.






ಇಲ್ಲಿನ ಇನ್ನೊಂದು ವಿಶೇಷ ಕಲ್ಲಿನಲ್ಲಿ ನಿರ್ಮಿಸಿರುವ ಬುದ್ಧನ ಬೃಹತ್ ವಿಗ್ರಹ. ೧೯೮೯ ರಲ್ಲಿ ಇದನ್ನು ಪ್ರತಿಷ್ಠಾಪಿಸಲಾಯಿತು.


ಗಯಾದಿಂದ ಬೋಧಗಯಾಕ್ಕೆ ಸಾಗುವ ದಾರಿಯುದ್ದಕ್ಕೂ ಫಲ್ಗು ನದಿಯ ಬಯಲಿದೆ. ವರ್ಷದಲ್ಲಿ ಹೆಚ್ಚಿನ ಕಾಲ ಈ ನದಿಯಲ್ಲಿ ನೀರಿಲ್ಲದೆ ಬರಡಾಗಿರುತ್ತದೆ.


ಚಿತ್ರಗಳು: ನೆಂಪು ಗುರು
-o-

Tuesday, February 9, 2010

ನೆನಪಿನ ಬುತ್ತಿಯಿಂದ: ಬೋಟಿನಲ್ಲಿ ಸುದರ್ಶನ ಹೋಮ!

ಹೈಸ್ಕೂಲು ದಿನಗಳಲ್ಲಿ ಬಿಡುವಿನ ವೇಳೆಗಳನ್ನು ಹೆಚ್ಚಾಗಿ ನಾನು ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ದೊಡ್ಡಪ್ಪನ ಮನೆಯಲ್ಲಿ ಕಳೆಯುತ್ತಿದ್ದೆ. ಸಮುದ್ರ ತೀರಕ್ಕೆ ಸನಿಹ, ಸುವರ್ಣಾ ನದಿ ಸುತ್ತುವರಿದಿರುವ ದ್ವೀಪ ಸದೃಶ ಪಡುಕುದ್ರುವಿನ ನಡುವೆ ಇರುವ ಶ್ರೀ ಗಣಪತಿ ಮಠದ ಪರಿಸರ ನನಗೆ ತುಂಬಾ ಅಚ್ಚುಮೆಚ್ಚು.


ನನ್ನ ದೊಡ್ಡಪ್ಪ ನೆಂಪು ಶ್ರೀಧರ ಭಟ್ಟರು ಅರ್ಚಕರು, ಪುರೋಹಿತರು, ಜ್ಯೋತಿಷಿಗಳು. ಉಡುಪಿ ಸುತ್ತಮುತ್ತಲ ಪರಿಸರದಲ್ಲಿ ತಮ್ಮ ವಿದ್ವತ್ತಿನಿಂದಾಗಿ ಪ್ರಸಿದ್ಧರು, ಚಿರಪರಿಚಿತರು.

ನನಗೆ ಬ್ರಹ್ಮೋಪದೇಶವಾದನಂತರ ೩-೪ ವರ್ಷ ರಜಾ ದಿನಗಳಲ್ಲಿ ದೊಡ್ಡಪ್ಪನ ಸಹಾಯಕನಾಗಿ ಪೌರೋಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಸತ್ಯನಾರಾಯಣ ಪೂಜೆ, ಗಣಹೋಮ, ಗೃಹಪ್ರವೇಶ, ಅಂಗಡಿ ಪೂಜೆ, ಸುದರ್ಶನ ಹೋಮ, ವಾಸ್ತು ಹೋಮ, ನಾಗಪ್ರತಿಷ್ಠೆ, ಗಣೇಶೋತ್ಸವ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಾಯಕನಾಗಿರುವುದು ನನ್ನ ಕೆಲಸ. ಇದರಿಂದ ಚಿಕ್ಕಂದಿನಿಂದಲೇ ನಾಲ್ಕಾರು ಜನರ ಸಂಪರ್ಕ, ಹೊರಜಗತ್ತನ್ನು ಎದುರಿಸಲು ಧೈರ್ಯ, ಮಂತ್ರಗಳನ್ನು ಕಲಿಯಲು ಅವಕಾಶ ಸಿಗುತ್ತಿತ್ತು, ನನ್ನ ಖರ್ಚಿಗೆ ಬೇಕಾದ ದುಡ್ಡೂ ದೊರೆಯುತ್ತಿತ್ತು.

ರಾತ್ರಿ ನಿದ್ದೆ ಬಿಟ್ಟೊ, ಬೆಳಿಗ್ಗೆ ಬೇಗನೆ ಎದ್ದೊ, ಸೆಖೆಗಾಲದಲ್ಲಿ ಧಗ-ಧಗ ಉರಿಯುವ ಹೋಮ-ಹೊಗೆಯ ಮುಂದೆ ಕುಳಿತೊ ಭಾಗವಹಿಸಿದ ಕಾರ್ಯಕ್ರಮಗಳು ಹಲವಾರು. ಬರೆಯುತ್ತಾ ಹೋದರೆ ಅದೆಷ್ಟೋ ಸಿಹಿ-ಕಹಿ, ವಿನೋದ ಮಿಶ್ರಿತ ಪ್ರಸಂಗಗಳು ನೆನಪಾಗುತ್ತವೆ. ಆದರೆ ಎಲ್ಲದಕ್ಕಿಂತ ಭಿನ್ನವಾದ, ಖುಶಿಯಾದ ಅನುಭವ ಸಿಗುತ್ತಿದ್ದುದು ಮಲ್ಪೆ, ಬೆಂಗ್ರೆ ಅಳಿವೆಗಳಲ್ಲಿ ಬೋಟ್ ನಲ್ಲಿ ನಡೆಯುತ್ತಿದ್ದ ಸುದರ್ಶನ ಹೋಮ!


ಮಳೆಗಾಲದ ಬಿಡುವು ಕಳೆದು, ಆಳ ಸಮುದ್ರ ಮೀನುಗಾರಿಕೆ ತೆರಳುವ ಮುನ್ನ ಸಮುದ್ರ ತೀರದ ಅಳಿವೆಗಳಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳಿಗೆ ಅದರ ಮಾಲೀಕರು ಹೋಮ, ಪೂಜೆಗಳನ್ನು ಸಲ್ಲಿಸುವುದು ಸಂಪ್ರದಾಯ. ಮೀನುಗಾರಿಕೆಗೆ ತೆರಳಿದವರ ಸುರಕ್ಷತೆ, ಹೆಚ್ಚು ಹೆಚ್ಚು ಮೀನುಗಳು ದೊರೆಯುತ್ತವೆ ಎಂಬ ನಂಬಿಕೆಯಿಂದ ಈ ಪೂಜೆ-ಪುನಸ್ಕಾರ.

ಪೂಜೆಗೆ ಮುನ್ನ ಬೋಟನ್ನು ಚೆನ್ನಾಗಿ ತೊಳೆದು, ಅಲಂಕರಿಸಿ ಅಳಿವೆಯ ನೀರಿನ ಮಧ್ಯೆ ನಿಲ್ಲಿಸಿರುತ್ತಾರೆ. ಹೆಚ್ಚಾಗಿ ಪೂಜೆ ನಡೆಯುವುದು ರಾತ್ರಿ ೭ ಗಂಟೆಯ ನಂತರ. ನಾವೊಂದು ಐದಾರು ಜನ ಅಳಿವೆಯ ತೀರ ತಲುಪಿದ ನಂತರ ಪೂಜೆ ನಡೆಸುವ ಕಡೆಯವರು ನಮ್ಮನ್ನು ಇನ್ನೊಂದು ಬೋಟಿನಲ್ಲಿ ಕರೆದೊಯ್ಯುತ್ತಿದ್ದರು. ಜೋರಾಗಿ ಬೀಸುವ ಗಾಳಿ, ಸಮೀಪದಲ್ಲೇ ಭೋರ್ಗರೆಯುತ್ತಿರುವ ಸಮುದ್ರ, ಅಲೆಗಳ ಭಾರಿ ಸದ್ದು, ಆರಂಭದಲ್ಲಿ ಉಸಿರಾಡಲು ಪರದಾಡುವಂತೆ ಮಾಡುವ ಮೀನಿನ ವಾಸನೆ, ಅಳಿವೆಯ ಅಲೆಗಳ ಮಧ್ಯೆ ತೇಲುತ್ತಿರುವ ಬೋಟ್ ನಲ್ಲಿ ನಾವು ಮಡಿಯುಟ್ಟು ಪೂಜೆಗೆ ಸಿದ್ಧರಾಗುತ್ತಿದ್ದೆವು.

ಅಗಲಕಿರಿದಾದ ಬೋಟಿನಲ್ಲಿ ಸಿಕ್ಕಷ್ಟು ಜಾಗದಲ್ಲೇ ಸುದರ್ಶನ ಮಂಡಲ, ಹೋಮ ಕುಂಡದ ತಯಾರಿ. ಬತ್ತಿ ದೀಪ ಹಚ್ಚಿಡುವುದು ಒಂದು ಸಾಹಸವೇ. ಬೀಸುವ ಗಾಳಿಗೆ ದೀಪ ಆರಿ ಹೋಗುತ್ತಿತ್ತು. ಬೋಟಿನವರು ಟಾರ್ಪಾಲು ಕಟ್ಟಿ ಗಾಳಿಯ ರಭಸ ತಡೆಯಲು ಪ್ರಯತ್ನಿಸುತ್ತಿದ್ದರೂ ಗಾಳಿ ಬೇರೆ ಬೇರೆ ದಿಕ್ಕಿನಿಂದ ಬೀಸುತ್ತಿತ್ತು. ಕೊನೆಗೆ ಉದ್ದನೆಯ ಪಾತ್ರೆಯ ಒಳಗೆ ದೀಪದ ಸ್ಥಾಪನೆ! ಅಲೆಗಳ ಹೊಡೆತಕ್ಕೆ ಬೋಟ್ ಅತ್ತಿತ್ತ ಸರಿಯುವಾಗ ಪೂಜೆಗೆ ಇಟ್ಟ ತೆಂಗಿನಕಾಯಿ, ಸೇಬು, ಕಿತ್ತಳೆ, ನಿಂಬೆ ಇನ್ನಿತರ ಫಲ ವಸ್ತುಗಳು ಗುಡು ಗುಡು ಓಡಿಹೋಗುತ್ತಿತ್ತು. ಎಲ್ಲಾ ತಯಾರಿ ಮುಗಿದ ನಂತರ ದೊಡ್ಡಪ್ಪ ಹೋಮಕ್ಕೆ ಕುಳಿತುಕೊಳ್ಳುತ್ತಿದ್ದರು. ಇನ್ನೊಬ್ಬರು ಮಂಡಲ ಪೂಜೆಗೆ ಕುಳಿತುಕೊಳ್ಳುತ್ತಿದ್ದರು. ಮುರಳಿ ಅಣ್ಣ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದ. ನಾನು ಬೋಟಿನ ಹಿಂಬದಿಯ ಜಾಗದಲ್ಲಿ ಪಂಚಕಜ್ಜಾಯ, ಚೆರು (ಅನ್ನ, ಹೋಮಕ್ಕೆ ಆಹುತಿ ಹಾಕಲು), ಓಕುಳಿ-ಬಲಿಗೆ ಬೇಕಾಗುವ ಸಾಹಿತ್ಯಗಳ ಸಿದ್ಧತೆಯಲ್ಲಿ ತೊಡಗಿರುವ ಸೋಮಯಾಜಿಯವರ ಸಹಾಯಕ್ಕೆ ಹೋಗುತ್ತಿದ್ದೆ.

ಚಂದ್ರನ ಬೆಳಕಿನಲ್ಲಿ ಹೊಳೆಯುವ ಸಮುದ್ರದಲೆಗಳನ್ನು ನೋಡುವುದೇ ಒಂದು ಸೊಬಗು. ಆ ಕಾಲದಲ್ಲಿ ಕ್ಯಾಮರಾದ ಬಗ್ಗೆ ಕಲ್ಪನೆಯೇ ನನ್ನಲ್ಲಿ ಇರಲಿಲ್ಲ ಆ ಸುಂದರ ನೆನಪುಗಳನ್ನು ಸೆರೆಹಿಡಿದಿಟ್ಟುಕೊಳ್ಳಲು! ತಣ್ಣನೆ ಮೈಕೊರೆವ ಗಾಳಿ ಸೆಖೆಯನ್ನು ಹೊಡೆದೋಡಿಸುತ್ತಿತ್ತು. ಇಡೀ ಪರಿಸರದಲ್ಲಿ ದೊಡ್ಡಪ್ಪನ ಮಂತ್ರಘೋಷ, ಅಲೆಗಳ ಭೋರ್ಗರೆತದ ಸದ್ದು, ಉಳಿದಂತೆ ನೀರವ ಮೌನ. ಮೀನಿನ ವಾಸನೆ ಒಂದು ಬಿಟ್ಟರೆ ಉಳಿದಂತೆ ರೋಮಾಂಚಕ ಅನುಭವ.


ಹೋಮದ ಬಿಸಿ ಏರಿದಂತೆ ಚಳಿ ಓಡಿಹೋಗಿ ಮೈಬೆಚ್ಚಗಾಗುತ್ತಿತ್ತು. ತುಪ್ಪ ಮಿಶ್ರಿತ ಹೋಮದ ಹೊಗೆ ಮೀನಿನ ದುರ್ಗಂಧವನ್ನ ಹೊಡೆದೋಡಿಸುತ್ತಿತ್ತು. ದೊಡ್ಡಪ್ಪ ಉಪಹೋಮಕ್ಕೆ ಕುಳಿತುಕೊಳ್ಳಲು ಕರೆಯುತ್ತಿದ್ದರು. ನಾನೂ ಮುರಳಿಯಣ್ಣನೊಂದಿಗೆ ಕುಳಿತುಕೊಳ್ಳುತ್ತಿದ್ದೆ. ಚೆರು, ಸಾಸಿವೆ, ಎಳ್ಳು, ಸಮಿಧ, ಅರಳು, ತುಪ್ಪ ಇವಿಷ್ಟು ದ್ರವ್ಯಗಳು. ಉಪಹೋಮದ ಮಂತ್ರ ಪಠಿಸುತ್ತಾ ಒಂದೊಂದೇ ದ್ರವ್ಯಗಳನ್ನು ಉರಿಯುವ ಅಗ್ನಿಗೆ ಆಹುತಿಯಾಗಿ ಹಾಕುವುದು. ಮೊದಮೊದಲು ಬೆಚ್ಚಗೆ ಹಿತವಾಗುತ್ತಿದ್ದ ಹೋಮದ ಶಾಖ ಸ್ವಲ್ಪ ಸಮಯದ ನಂತರ ಬಿಸಿಯೇರಿ, ಹೊಗೆಯೇರಿ ಕಣ್ಣುರಿ, ಮೈಯುರಿ ಶುರುವಾಗುತ್ತಿತ್ತು. ಜೊತೆಗೆ ಹೋಮಕ್ಕೆ ಹಾಕಿದ ಎಳ್ಳು-ಸಾಸಿವೆಗಳು ಪಟಪಟ ಹೊಟ್ಟುತ್ತಾ ಕೈಕಾಲು, ಹೊಟ್ಟೆ, ಮುಖಕ್ಕೊ ಬಿದ್ದಾಗ ಬಿಸಿ ಸೂಜಿ ಚುಚ್ಚಿದ ಅನುಭವ! ಉಪಹೋಮ ಮುಗಿಸಿ ಮೇಲೆದ್ದು ಬೋಟಿನ ಹಿಂದೆ ಬಂದು ತಂಗಾಳಿಗೆ ಮೈಯೊಡ್ಡಿದಾಗ ಹಿತವಾಗುತ್ತಿತ್ತು. ದೊಡ್ಡಪ್ಪ ಅದೆಷ್ಟೋ ವರ್ಷಗಳಿಂದ ಹೀಗೆ ಶಾಖ, ಹೊಗೆಯನ್ನೆದುರಿಸುತ್ತಾ ಹೋಮ ಮಾಡುತ್ತಾರಲ್ಲಾ ಎಂಬ ಯೋಚನೆಯೂ ಕಾಡುತ್ತಿತ್ತು.

ಮಂಗಳಾರತಿ ಎತ್ತಿ, ಪೂರ್ಣಾಹುತಿ ಸಮರ್ಪಿಸಿದ ನಂತರ ಹೋಮ ಪರಿಸಮಾಪ್ತಿಯಾಗುತ್ತಿತ್ತು. ಬೋಟಿನ ಯಂತ್ರಕ್ಕೆ, ನಿಯಂತ್ರಣ ಕೊಠಡಿಯಲ್ಲಿರುವ ’ಸ್ಟೆರಿಂಗ್’ ಗೆ ಪೂಜೆ ಸಲ್ಲಿಸಿದ ನಂತರ ಅಷ್ಟ ದಿಕ್ಪಾಲಕರಿಗೆ ಬಲಿ ಸಮರ್ಪಣೆ. ಬಾಳೆ ಎಲೆಯಲ್ಲಿ ಚೆರು, ಕುಂಬಳಕಾಯಿ, ದೊನ್ನೆಯಲ್ಲಿ ಓಕಳಿ ನೀರು, ನೆಣೆಕೋಲನ್ನು ಹಚ್ಚಿ ಎಂಟು ದಿಕ್ಕುಗಳಿಗೂ, ಕ್ಷೇತ್ರಪಾಲನಿಗೂ ಬಲಿ ಸಮರ್ಪಿಸುವುದು. ನಂತರ ಪ್ರಸಾದ ವಿತರಣೆ. ಬೋಟಿನ ಮಾಲಕರಿಗೆ, ಮೀನುಗಾರಿಕೆಗೆ ತೆರಳುವ ಸಿಬ್ಬಂದಿಗಳಿಗೆಲ್ಲಾ ಪ್ರಸಾದ, ಪಂಚಕಜ್ಜಾಯ ಹಂಚಿದ ನಂತರ ವಾಪಸ್ಸು ಹೊರಡುವ ಸಮಯ. ದಕ್ಷಿಣೆಯನ್ನು ಸ್ವೀಕರಿಸಿ, ತಂದಿದ್ದ ಸಲಕರಣೆಗಳನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡು, ೧-೨ ಎಳನೀರು ಕುಡಿದು, ಬಾಳೆಹಣ್ಣು ತಿಂದು, ಮಾಲೀಕ-ಸಿಬ್ಬಂದಿಗಳಿಗೆ ಶುಭ ಹರಸಿ, ಇನ್ನೊಂದು ಬೋಟ್ ಹತ್ತಿ ದಡ ಸೇರುತ್ತಿದ್ದೆವು.

ಸಮಯ ಅದಾಗಲೇ ಮಧ್ಯರಾತ್ರಿ ೧೨ ಆಗುತ್ತಿತ್ತು. ದ್ವಿಚಕ್ರವೋ, ಕಾರನ್ನೋ ಏರಿ ಮನೆಗೆ ವಾಪಾಸಾಗಿ, ಕೈಕಾಲು ತೊಳೆದು ಮಲಗಲು ಅಣಿಯಾಗುವಾಗ ೧ ಗಂಟೆ ದಾಟುತ್ತಿತ್ತು. ನಿದ್ದೆಯಲ್ಲೂ ಅದೇ ಭೋರ್ಗರೆವ ಅಲೆಗಳು, ತೇಲುವ ಬೋಟು, ತೆಂಗಿನ ಮರಗಳು, ತಂಗಾಳಿ...!

ಹೀಗೆ ಹಲವಾರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಎಲ್ಲದಕ್ಕಿಂತ ಹೆಚ್ಚು ಖುಶಿ ಕೊಟ್ಟಿದ್ದು ಬೋಟಿನಲ್ಲಿ ಕುಳಿತು ಪೂಜೆ, ಹೋಮದಲ್ಲಿ ಭಾಗವಹಿಸಿದ ಅನುಭವ!

ಚಿತ್ರಗಳು: ನೆಂಪು ಗುರು
--o--