ಹೈಸ್ಕೂಲು ದಿನಗಳಲ್ಲಿ ಬಿಡುವಿನ ವೇಳೆಗಳನ್ನು ಹೆಚ್ಚಾಗಿ ನಾನು ಕೆಮ್ಮಣ್ಣು ಪಡುಕುದ್ರುವಿನಲ್ಲಿದ್ದ ದೊಡ್ಡಪ್ಪನ ಮನೆಯಲ್ಲಿ ಕಳೆಯುತ್ತಿದ್ದೆ. ಸಮುದ್ರ ತೀರಕ್ಕೆ ಸನಿಹ, ಸುವರ್ಣಾ ನದಿ ಸುತ್ತುವರಿದಿರುವ ದ್ವೀಪ ಸದೃಶ ಪಡುಕುದ್ರುವಿನ ನಡುವೆ ಇರುವ ಶ್ರೀ ಗಣಪತಿ ಮಠದ ಪರಿಸರ ನನಗೆ ತುಂಬಾ ಅಚ್ಚುಮೆಚ್ಚು.
ನನ್ನ ದೊಡ್ಡಪ್ಪ ನೆಂಪು ಶ್ರೀಧರ ಭಟ್ಟರು ಅರ್ಚಕರು, ಪುರೋಹಿತರು, ಜ್ಯೋತಿಷಿಗಳು. ಉಡುಪಿ ಸುತ್ತಮುತ್ತಲ ಪರಿಸರದಲ್ಲಿ ತಮ್ಮ ವಿದ್ವತ್ತಿನಿಂದಾಗಿ ಪ್ರಸಿದ್ಧರು, ಚಿರಪರಿಚಿತರು.
ನನಗೆ ಬ್ರಹ್ಮೋಪದೇಶವಾದನಂತರ ೩-೪ ವರ್ಷ ರಜಾ ದಿನಗಳಲ್ಲಿ ದೊಡ್ಡಪ್ಪನ ಸಹಾಯಕನಾಗಿ ಪೌರೋಹಿತ್ಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಸತ್ಯನಾರಾಯಣ ಪೂಜೆ, ಗಣಹೋಮ, ಗೃಹಪ್ರವೇಶ, ಅಂಗಡಿ ಪೂಜೆ, ಸುದರ್ಶನ ಹೋಮ, ವಾಸ್ತು ಹೋಮ, ನಾಗಪ್ರತಿಷ್ಠೆ, ಗಣೇಶೋತ್ಸವ ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹಾಯಕನಾಗಿರುವುದು ನನ್ನ ಕೆಲಸ. ಇದರಿಂದ ಚಿಕ್ಕಂದಿನಿಂದಲೇ ನಾಲ್ಕಾರು ಜನರ ಸಂಪರ್ಕ, ಹೊರಜಗತ್ತನ್ನು ಎದುರಿಸಲು ಧೈರ್ಯ, ಮಂತ್ರಗಳನ್ನು ಕಲಿಯಲು ಅವಕಾಶ ಸಿಗುತ್ತಿತ್ತು, ನನ್ನ ಖರ್ಚಿಗೆ ಬೇಕಾದ ದುಡ್ಡೂ ದೊರೆಯುತ್ತಿತ್ತು.
ರಾತ್ರಿ ನಿದ್ದೆ ಬಿಟ್ಟೊ, ಬೆಳಿಗ್ಗೆ ಬೇಗನೆ ಎದ್ದೊ, ಸೆಖೆಗಾಲದಲ್ಲಿ ಧಗ-ಧಗ ಉರಿಯುವ ಹೋಮ-ಹೊಗೆಯ ಮುಂದೆ ಕುಳಿತೊ ಭಾಗವಹಿಸಿದ ಕಾರ್ಯಕ್ರಮಗಳು ಹಲವಾರು. ಬರೆಯುತ್ತಾ ಹೋದರೆ ಅದೆಷ್ಟೋ ಸಿಹಿ-ಕಹಿ, ವಿನೋದ ಮಿಶ್ರಿತ ಪ್ರಸಂಗಗಳು ನೆನಪಾಗುತ್ತವೆ. ಆದರೆ ಎಲ್ಲದಕ್ಕಿಂತ ಭಿನ್ನವಾದ, ಖುಶಿಯಾದ ಅನುಭವ ಸಿಗುತ್ತಿದ್ದುದು ಮಲ್ಪೆ, ಬೆಂಗ್ರೆ ಅಳಿವೆಗಳಲ್ಲಿ ಬೋಟ್ ನಲ್ಲಿ ನಡೆಯುತ್ತಿದ್ದ ಸುದರ್ಶನ ಹೋಮ!
ಮಳೆಗಾಲದ ಬಿಡುವು ಕಳೆದು, ಆಳ ಸಮುದ್ರ ಮೀನುಗಾರಿಕೆ ತೆರಳುವ ಮುನ್ನ ಸಮುದ್ರ ತೀರದ ಅಳಿವೆಗಳಲ್ಲಿ ಲಂಗರು ಹಾಕಿದ ಮೀನುಗಾರಿಕಾ ಬೋಟ್ ಗಳಿಗೆ ಅದರ ಮಾಲೀಕರು ಹೋಮ, ಪೂಜೆಗಳನ್ನು ಸಲ್ಲಿಸುವುದು ಸಂಪ್ರದಾಯ. ಮೀನುಗಾರಿಕೆಗೆ ತೆರಳಿದವರ ಸುರಕ್ಷತೆ, ಹೆಚ್ಚು ಹೆಚ್ಚು ಮೀನುಗಳು ದೊರೆಯುತ್ತವೆ ಎಂಬ ನಂಬಿಕೆಯಿಂದ ಈ ಪೂಜೆ-ಪುನಸ್ಕಾರ.
ಪೂಜೆಗೆ ಮುನ್ನ ಬೋಟನ್ನು ಚೆನ್ನಾಗಿ ತೊಳೆದು, ಅಲಂಕರಿಸಿ ಅಳಿವೆಯ ನೀರಿನ ಮಧ್ಯೆ ನಿಲ್ಲಿಸಿರುತ್ತಾರೆ. ಹೆಚ್ಚಾಗಿ ಪೂಜೆ ನಡೆಯುವುದು ರಾತ್ರಿ ೭ ಗಂಟೆಯ ನಂತರ. ನಾವೊಂದು ಐದಾರು ಜನ ಅಳಿವೆಯ ತೀರ ತಲುಪಿದ ನಂತರ ಪೂಜೆ ನಡೆಸುವ ಕಡೆಯವರು ನಮ್ಮನ್ನು ಇನ್ನೊಂದು ಬೋಟಿನಲ್ಲಿ ಕರೆದೊಯ್ಯುತ್ತಿದ್ದರು. ಜೋರಾಗಿ ಬೀಸುವ ಗಾಳಿ, ಸಮೀಪದಲ್ಲೇ ಭೋರ್ಗರೆಯುತ್ತಿರುವ ಸಮುದ್ರ, ಅಲೆಗಳ ಭಾರಿ ಸದ್ದು, ಆರಂಭದಲ್ಲಿ ಉಸಿರಾಡಲು ಪರದಾಡುವಂತೆ ಮಾಡುವ ಮೀನಿನ ವಾಸನೆ, ಅಳಿವೆಯ ಅಲೆಗಳ ಮಧ್ಯೆ ತೇಲುತ್ತಿರುವ ಬೋಟ್ ನಲ್ಲಿ ನಾವು ಮಡಿಯುಟ್ಟು ಪೂಜೆಗೆ ಸಿದ್ಧರಾಗುತ್ತಿದ್ದೆವು.
ಅಗಲಕಿರಿದಾದ ಬೋಟಿನಲ್ಲಿ ಸಿಕ್ಕಷ್ಟು ಜಾಗದಲ್ಲೇ ಸುದರ್ಶನ ಮಂಡಲ, ಹೋಮ ಕುಂಡದ ತಯಾರಿ. ಬತ್ತಿ ದೀಪ ಹಚ್ಚಿಡುವುದು ಒಂದು ಸಾಹಸವೇ. ಬೀಸುವ ಗಾಳಿಗೆ ದೀಪ ಆರಿ ಹೋಗುತ್ತಿತ್ತು. ಬೋಟಿನವರು ಟಾರ್ಪಾಲು ಕಟ್ಟಿ ಗಾಳಿಯ ರಭಸ ತಡೆಯಲು ಪ್ರಯತ್ನಿಸುತ್ತಿದ್ದರೂ ಗಾಳಿ ಬೇರೆ ಬೇರೆ ದಿಕ್ಕಿನಿಂದ ಬೀಸುತ್ತಿತ್ತು. ಕೊನೆಗೆ ಉದ್ದನೆಯ ಪಾತ್ರೆಯ ಒಳಗೆ ದೀಪದ ಸ್ಥಾಪನೆ! ಅಲೆಗಳ ಹೊಡೆತಕ್ಕೆ ಬೋಟ್ ಅತ್ತಿತ್ತ ಸರಿಯುವಾಗ ಪೂಜೆಗೆ ಇಟ್ಟ ತೆಂಗಿನಕಾಯಿ, ಸೇಬು, ಕಿತ್ತಳೆ, ನಿಂಬೆ ಇನ್ನಿತರ ಫಲ ವಸ್ತುಗಳು ಗುಡು ಗುಡು ಓಡಿಹೋಗುತ್ತಿತ್ತು. ಎಲ್ಲಾ ತಯಾರಿ ಮುಗಿದ ನಂತರ ದೊಡ್ಡಪ್ಪ ಹೋಮಕ್ಕೆ ಕುಳಿತುಕೊಳ್ಳುತ್ತಿದ್ದರು. ಇನ್ನೊಬ್ಬರು ಮಂಡಲ ಪೂಜೆಗೆ ಕುಳಿತುಕೊಳ್ಳುತ್ತಿದ್ದರು. ಮುರಳಿ ಅಣ್ಣ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಡುತ್ತಿದ್ದ. ನಾನು ಬೋಟಿನ ಹಿಂಬದಿಯ ಜಾಗದಲ್ಲಿ ಪಂಚಕಜ್ಜಾಯ, ಚೆರು (ಅನ್ನ, ಹೋಮಕ್ಕೆ ಆಹುತಿ ಹಾಕಲು), ಓಕುಳಿ-ಬಲಿಗೆ ಬೇಕಾಗುವ ಸಾಹಿತ್ಯಗಳ ಸಿದ್ಧತೆಯಲ್ಲಿ ತೊಡಗಿರುವ ಸೋಮಯಾಜಿಯವರ ಸಹಾಯಕ್ಕೆ ಹೋಗುತ್ತಿದ್ದೆ.
ಚಂದ್ರನ ಬೆಳಕಿನಲ್ಲಿ ಹೊಳೆಯುವ ಸಮುದ್ರದಲೆಗಳನ್ನು ನೋಡುವುದೇ ಒಂದು ಸೊಬಗು. ಆ ಕಾಲದಲ್ಲಿ ಕ್ಯಾಮರಾದ ಬಗ್ಗೆ ಕಲ್ಪನೆಯೇ ನನ್ನಲ್ಲಿ ಇರಲಿಲ್ಲ ಆ ಸುಂದರ ನೆನಪುಗಳನ್ನು ಸೆರೆಹಿಡಿದಿಟ್ಟುಕೊಳ್ಳಲು! ತಣ್ಣನೆ ಮೈಕೊರೆವ ಗಾಳಿ ಸೆಖೆಯನ್ನು ಹೊಡೆದೋಡಿಸುತ್ತಿತ್ತು. ಇಡೀ ಪರಿಸರದಲ್ಲಿ ದೊಡ್ಡಪ್ಪನ ಮಂತ್ರಘೋಷ, ಅಲೆಗಳ ಭೋರ್ಗರೆತದ ಸದ್ದು, ಉಳಿದಂತೆ ನೀರವ ಮೌನ. ಮೀನಿನ ವಾಸನೆ ಒಂದು ಬಿಟ್ಟರೆ ಉಳಿದಂತೆ ರೋಮಾಂಚಕ ಅನುಭವ.
ಹೋಮದ ಬಿಸಿ ಏರಿದಂತೆ ಚಳಿ ಓಡಿಹೋಗಿ ಮೈಬೆಚ್ಚಗಾಗುತ್ತಿತ್ತು. ತುಪ್ಪ ಮಿಶ್ರಿತ ಹೋಮದ ಹೊಗೆ ಮೀನಿನ ದುರ್ಗಂಧವನ್ನ ಹೊಡೆದೋಡಿಸುತ್ತಿತ್ತು. ದೊಡ್ಡಪ್ಪ ಉಪಹೋಮಕ್ಕೆ ಕುಳಿತುಕೊಳ್ಳಲು ಕರೆಯುತ್ತಿದ್ದರು. ನಾನೂ ಮುರಳಿಯಣ್ಣನೊಂದಿಗೆ ಕುಳಿತುಕೊಳ್ಳುತ್ತಿದ್ದೆ. ಚೆರು, ಸಾಸಿವೆ, ಎಳ್ಳು, ಸಮಿಧ, ಅರಳು, ತುಪ್ಪ ಇವಿಷ್ಟು ದ್ರವ್ಯಗಳು. ಉಪಹೋಮದ ಮಂತ್ರ ಪಠಿಸುತ್ತಾ ಒಂದೊಂದೇ ದ್ರವ್ಯಗಳನ್ನು ಉರಿಯುವ ಅಗ್ನಿಗೆ ಆಹುತಿಯಾಗಿ ಹಾಕುವುದು. ಮೊದಮೊದಲು ಬೆಚ್ಚಗೆ ಹಿತವಾಗುತ್ತಿದ್ದ ಹೋಮದ ಶಾಖ ಸ್ವಲ್ಪ ಸಮಯದ ನಂತರ ಬಿಸಿಯೇರಿ, ಹೊಗೆಯೇರಿ ಕಣ್ಣುರಿ, ಮೈಯುರಿ ಶುರುವಾಗುತ್ತಿತ್ತು. ಜೊತೆಗೆ ಹೋಮಕ್ಕೆ ಹಾಕಿದ ಎಳ್ಳು-ಸಾಸಿವೆಗಳು ಪಟಪಟ ಹೊಟ್ಟುತ್ತಾ ಕೈಕಾಲು, ಹೊಟ್ಟೆ, ಮುಖಕ್ಕೊ ಬಿದ್ದಾಗ ಬಿಸಿ ಸೂಜಿ ಚುಚ್ಚಿದ ಅನುಭವ! ಉಪಹೋಮ ಮುಗಿಸಿ ಮೇಲೆದ್ದು ಬೋಟಿನ ಹಿಂದೆ ಬಂದು ತಂಗಾಳಿಗೆ ಮೈಯೊಡ್ಡಿದಾಗ ಹಿತವಾಗುತ್ತಿತ್ತು. ದೊಡ್ಡಪ್ಪ ಅದೆಷ್ಟೋ ವರ್ಷಗಳಿಂದ ಹೀಗೆ ಶಾಖ, ಹೊಗೆಯನ್ನೆದುರಿಸುತ್ತಾ ಹೋಮ ಮಾಡುತ್ತಾರಲ್ಲಾ ಎಂಬ ಯೋಚನೆಯೂ ಕಾಡುತ್ತಿತ್ತು.
ಮಂಗಳಾರತಿ ಎತ್ತಿ, ಪೂರ್ಣಾಹುತಿ ಸಮರ್ಪಿಸಿದ ನಂತರ ಹೋಮ ಪರಿಸಮಾಪ್ತಿಯಾಗುತ್ತಿತ್ತು. ಬೋಟಿನ ಯಂತ್ರಕ್ಕೆ, ನಿಯಂತ್ರಣ ಕೊಠಡಿಯಲ್ಲಿರುವ ’ಸ್ಟೆರಿಂಗ್’ ಗೆ ಪೂಜೆ ಸಲ್ಲಿಸಿದ ನಂತರ ಅಷ್ಟ ದಿಕ್ಪಾಲಕರಿಗೆ ಬಲಿ ಸಮರ್ಪಣೆ. ಬಾಳೆ ಎಲೆಯಲ್ಲಿ ಚೆರು, ಕುಂಬಳಕಾಯಿ, ದೊನ್ನೆಯಲ್ಲಿ ಓಕಳಿ ನೀರು, ನೆಣೆಕೋಲನ್ನು ಹಚ್ಚಿ ಎಂಟು ದಿಕ್ಕುಗಳಿಗೂ, ಕ್ಷೇತ್ರಪಾಲನಿಗೂ ಬಲಿ ಸಮರ್ಪಿಸುವುದು. ನಂತರ ಪ್ರಸಾದ ವಿತರಣೆ. ಬೋಟಿನ ಮಾಲಕರಿಗೆ, ಮೀನುಗಾರಿಕೆಗೆ ತೆರಳುವ ಸಿಬ್ಬಂದಿಗಳಿಗೆಲ್ಲಾ ಪ್ರಸಾದ, ಪಂಚಕಜ್ಜಾಯ ಹಂಚಿದ ನಂತರ ವಾಪಸ್ಸು ಹೊರಡುವ ಸಮಯ. ದಕ್ಷಿಣೆಯನ್ನು ಸ್ವೀಕರಿಸಿ, ತಂದಿದ್ದ ಸಲಕರಣೆಗಳನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡು, ೧-೨ ಎಳನೀರು ಕುಡಿದು, ಬಾಳೆಹಣ್ಣು ತಿಂದು, ಮಾಲೀಕ-ಸಿಬ್ಬಂದಿಗಳಿಗೆ ಶುಭ ಹರಸಿ, ಇನ್ನೊಂದು ಬೋಟ್ ಹತ್ತಿ ದಡ ಸೇರುತ್ತಿದ್ದೆವು.
ಸಮಯ ಅದಾಗಲೇ ಮಧ್ಯರಾತ್ರಿ ೧೨ ಆಗುತ್ತಿತ್ತು. ದ್ವಿಚಕ್ರವೋ, ಕಾರನ್ನೋ ಏರಿ ಮನೆಗೆ ವಾಪಾಸಾಗಿ, ಕೈಕಾಲು ತೊಳೆದು ಮಲಗಲು ಅಣಿಯಾಗುವಾಗ ೧ ಗಂಟೆ ದಾಟುತ್ತಿತ್ತು. ನಿದ್ದೆಯಲ್ಲೂ ಅದೇ ಭೋರ್ಗರೆವ ಅಲೆಗಳು, ತೇಲುವ ಬೋಟು, ತೆಂಗಿನ ಮರಗಳು, ತಂಗಾಳಿ...!
ಹೀಗೆ ಹಲವಾರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಎಲ್ಲದಕ್ಕಿಂತ ಹೆಚ್ಚು ಖುಶಿ ಕೊಟ್ಟಿದ್ದು ಬೋಟಿನಲ್ಲಿ ಕುಳಿತು ಪೂಜೆ, ಹೋಮದಲ್ಲಿ ಭಾಗವಹಿಸಿದ ಅನುಭವ!
ಚಿತ್ರಗಳು: ನೆಂಪು ಗುರು
--o--
4 comments:
ತುಂಬಾ ಲಾಯ್ಕಿತ್ತ್ ಲೇಖನ ಗುರು, ನಂಗೆ ನೀವ್ ಬೋಟ್ ಪೂಜೆಗೆ ಹೋತಿದ್ದಿದ್ದು ಮಾತ್ರ ಗೊತ್ತಿದ್ದಿತ್. ಅದ್ರ ಹಿಂದೆ ಇಷ್ಟೊಳ್ಳೆ ಅನುಭವ ಇದ್ದಿಪ್ಕೂ ಸಾಕ್ ಅಂತ ನಾನ್ ಎಣ್ಸಿಯೇ ಇರ್ಲಿಲ್ಲ. :-)
ನಿಮ್ಮ ಸೋಮಯಾಜಿ ನಾಮ ಪ್ರಸಂಗಕ್ಕೆ ಬಹಳ ಕಾಕತಾಳೀಯವೋ ಎಂಬಂತೆ ಮೂಡಿಬಂದಿದೆ. ಸೋಮಯಾಜಿ ಬಹುಶ: ಸೋಮಯಾಗಿ ಎಂಬ ಪದದಿಂದ ಬಂದಿರಬೇಕು. ಯಾರು ಯಾಗ ಯಜ್ನದಲ್ಲಿ ಭಗವಹಿಸುವರೋ ಅವರೇ ಸೋಮಯಾಗಿಗಳು!
ನನ್ನ ಬಾಲ್ಯದ ನೆನಪು ನಿಮ್ಮ ಲೇಕನ ಕಲಕಿ ಹಾಕಿತು. ನಾನು ತೀರ್ಥ ಕೊಡುವಾಗ ಸಿಕ್ಕಿದ ಚಿಲ್ಲರೆ ದುಡ್ಡನ್ನ ಕೂಡಿಡುತ್ತಿದ್ದ ಪ್ರಸಂಗ ನಗು ತಂತು.
ಶಣ್ಮುಖ ಅವರೆ, ಸೋಮಯಾಜಿ ಪದ ಸರಿಯೇ ಆಗಿದೆ, ಯಜ್ಞ ಮಾಡುವವನು ಯಾಜಿ... ಯಾಗಿ ಅಲ್ಲ. ಸಂಸ್ಕೃತದಲ್ಲಿ ಈ ಶಬ್ದ ಇದೆ.
ನಿಮ್ಮ ಬ್ಲಾಗ್ ಚೆನ್ನಾಗಿದೆ. ನಿಮ್ಮ ಅನುಭವಗಳನ್ನು ನಮ್ಮ ಬಳಗದೊಂದಿಗೂ ಹಂಚಿಕೊಳ್ಳಬಹುದು. www.ekanasu.com ಗೆ ನಿಮ್ಮ ಬರಹಗಳನ್ನು ಕಳುಹಿಸಿ. editor@ekanasu.com. ವಂದನೆಗಳು
Post a Comment