Monday, December 27, 2010

ಹೊಸ ವರ್ಷಕ್ಕೆ ಹೀಗೊಂದು ಸಂದೇಶ...


ದೈನಂದಿನ ಜೀವನಕ್ಕೆ ಅಗತ್ಯವಾದದ್ದು, ಅತ್ಯಮೂಲ್ಯವಾದದ್ದು ಯಾವುದು ಎಂಬುದನ್ನು ಗುರುತಿಸುವುದು ಇತ್ತೀಚಿನ ವರ್ಷಗಳಲ್ಲಿ, ಇಂದಿನ ಪೀಳಿಗೆಯಲ್ಲಿ ಕಷ್ಟವಾಗುತ್ತಿದೆ. ಮನುಕುಲಕ್ಕೆ ತೀರಾ ಅವಶ್ಯವಲ್ಲದ ಮೊಬೈಲ್, ಕಾರ್, ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು, ವಾಹನಗಳು ಸುಲಭವಾಗಿ ಸಿಗುತ್ತವೆ. ಆದರೆ ಶುದ್ಧ ನೀರು, ಸ್ವಚ್ಛ ಗಾಳಿ, ಪೌಷ್ಠಿಕ ಆಹಾರ, ಸುಂದರ ಪರಿಸರ ಬರಬರುತ್ತಾ ಮರೀಚಿಕೆಯಾಗುತ್ತಿದೆ. ತರಕಾರಿ, ಹಣ್ಣುಹಂಪಲು, ಬೇಳೆ-ಕಾಳುಗಳಿಗಿಂತ ಮೊಬೈಲ್ ಅಗ್ಗವಾಗಿ, ಸುಲಭವಾಗಿ ಸಿಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ದಿನಪತ್ರಿಕೆಯೊಂದರಲ್ಲಿ ಬಿತ್ತರವಾಗಿತ್ತು. ಹಾಗಾದರೆ ಮನುಷ್ಯನಿಗೆ ನಿಜವಾಗಿಯೂ ಅವಶ್ಯವಾಗಿರುವುದು ಏನು?


ಇಷ್ಟೇ ಅಲ್ಲ, ಕೂಡು ಕುಟುಂಬಗಳ ಬಗ್ಗೆಯೂ ಒಲವಿಲ್ಲ, ಅದರ ಮಹತ್ವದ ಅರಿವಿಲ್ಲ. ತಂದೆ-ತಾಯಿ, ಅಜ್ಜ-ಅಜ್ಜಿಯವರ ಮೇಲಿದ್ದ ಪ್ರೀತಿ, ಗೌರವ ಬರಿದಾಗುತ್ತಿದೆ. ಮೊದಲೆಲ್ಲ ಭಯ ಮಿಶ್ರಿತ ಗೌರವವಿರುತ್ತಿತ್ತು, ಪ್ರೀತ್ಯಾದರವಿರುತ್ತಿತ್ತು. ಯಾಕೆ ಹೀಗೆ?
~0~ ~0~ ~0~ ~0~ ~0~

ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ, ಕವಿ, ಸಾಹಿತಿ ನ. ಭ. ನೆಂಪು ಅವರು ಕೆಲ ವರ್ಷಗಳ ಹಿಂದೆ ಬರೆದಿರುವ ಕವನ ಹೊಸ ವರ್ಷದ ಸಂದೇಶದ ರೂಪದಲ್ಲಿ ಇಲ್ಲಿದೆ. ಕೇವಲ ಮಕ್ಕಳಿಗೆ ಮಾತ್ರವಲ್ಲ, ಎಲ್ಲರಿಗೂ ಮಾದರಿಯಾಗಬಲ್ಲ, ಉತ್ತಮ ತಾತ್ಪರ್ಯ ಹೊಂದಿರುವ ಈ ಗೀತೆ ಹಲವಾರು ಶಾಲೆಗಳಲ್ಲಿ ಆಶಯ ಗೀತೆಯಾಗಿ ಪ್ರಸಿದ್ಧಿ ಪಡೆದಿದೆ.



ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 



ನನ್ನ ದೇವರು

ನಿತ್ಯ ನಮಗೆ ಬೆಳಕು ಕೊಡುವ
ಸೂರ್ಯ ನನ್ನ ದೇವರು
ರಾತ್ರಿ ಹಾಲುಬೆಳಕು ಕೊಡುವ
ಚಂದ್ರ ನನ್ನ ದೇವರು

ಕೋಟಿ ತಾರೆ, ಬೆಳ್ಳಿ ಚುಕ್ಕಿ,
ಉಲ್ಕೆ ನನ್ನ ದೇವರು
ಬೆಂಕಿ ಗಾಳಿ ನೀರು ಗಗನ-
ವೆಲ್ಲ ನನ್ನ ದೇವರು

ಹಚ್ಚ ಹಸುರು ಹೊದ್ದು ನಿಂತ
ಭೂಮಿ ನನ್ನ ದೇವರು
ಗುಡ್ಡ ಬೆಟ್ಟ-ಕಾಡು ಮೇಡು
ಹೊಳೆಗಳೆನ್ನ ದೇವರು

ಹೊಲದಿ ಬೆವರು ಸುರಿಸಿ ದುಡಿವ
ರೈತ ನನ್ನ ದೇವರು
ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು

ತಂದೆ, ತಾಯಿ, ಬಂಧು ಬಳಗ-
ವೆಲ್ಲ ನನ್ನ ದೇವರು
ವಿದ್ಯೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು

ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು
ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು

- ನ.ಭ.ನೆಂಪು

Monday, December 20, 2010

ಲಘು ಬರಹ: ಬೆಂಗಳೂರೆಂಬ ಮಾಯಾನಗರಿಯಲ್ಲಿ...

ಧೋ... ಎಂದು ಸುರಿಯುತ್ತಿರುವ ಮಳೆ (ತುಳುವಿನ ಬೊಳ್ಳ)... ... ಮಳೆ ಅಲ್ಲ...!!
ಧುಮ್ಮಿಕ್ಕುತ್ತಿರುವ, ಭೋರ್ಗರೆಯುತ್ತಿರುವ ಜಲಪಾತ... ... ಜಲಪಾತವೂ ಅಲ್ಲ...!!
ಕೃಷಿ ಭೂಮಿಗೊ, ತೋಟಕ್ಕೋ ಪಂಪ್ ಸೆಟ್ ನಿಂದ ಬಿಟ್ಟ ನೀರು... ... ಇದೂ ಅಲ್ಲ...!!
Atleast, ನಮ್ಮ ನೆಂಪಿನ ಗೊರ್ ಗೊರ್ ಗುಂಡಿ ತೋಡಿನಲ್ಲಿ ನೀರಿನ ಝುಳು ಝುಳು ನಿನಾದ... ... ಛೆ... ಇದೂ ಅಲ್ಲ...!!

ಮತ್ತೆಲ್ಲಿಂದ ನೀರು ಹರಿಯುವ ಸದ್ದು!

ವಾಸ್ತವಕ್ಕೆ ಬಂದು ಅತ್ತಿತ್ತ ತಡಕಾಡಿದಾಗ, ನಾನು ಮಲಗಿರುವುದು ಬೆಂಗಳೂರಿನ ನಮ್ಮನೆಯ ಮಂಚದ ಮೇಲೆ, ಹೆಂಡತಿಯೂ ಪಕ್ಕದಲ್ಲೇ ಗಾಢ ನಿದ್ರೆಯಲ್ಲಿದ್ದಾಳೆ. ಎಲ್ಲಾ ನಾರ್ಮಲ್ ಆಗಿಯೇ ಇದೆ. ಹಾಗಾದರೆ ನೀರು ಬೀಳುತ್ತಿರುವ ಶಬ್ದ ಬರುತ್ತಿರುವುದಾದರೂ ಎಲ್ಲಿಂದ!

ಮೇಲ್ಮಹಡಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ತುಂಬಿ ನೀರು ಬೀಳುತ್ತಿರಬಹುದೇ? ಈ ಹೊತ್ತಿನಲ್ಲಿ ಸಾಧ್ಯವಿಲ್ಲ, ಬಿದ್ದರೂ ಇಷ್ಟು ಸ್ಪಷ್ಟವಾಗಿ ಕೇಳಲು ಸಾಧ್ಯವಿಲ್ಲ. ಮನೆಯೊಳಗಿರುವ ಟ್ಯಾಪ್ ಯಾವುದಾದರೂ ಲೀಕ್ ಆಗಿ ನೀರು ಸೋರಿಹೋಗುತ್ತಿರಬಹುದೇ? ಈ ಒಂದು ಯೋಚನೆ ಬಂದಿದ್ದೆ ದಡ-ಬಡ ಎದ್ದು ಮಂಚದಿಂದ ಕಾಲು ನೆಲಕ್ಕಿಡುತ್ತೇನೆ, ಪಾದ ಮುಳುಗುವಷ್ಟು ನೀರು! ಮೂಲ ಅರಸುತ್ತಾ ಹಾಲ್ ಗೆ ಬಂದಾಗ ಅಲ್ಲೂ ನೀರು, ದೇವರಕೋಣೆ, ತಮ್ಮನ ರೂಮ್, ಅಡುಗೆಮನೆಯಲ್ಲೂ ನೀರು! ಅಡುಗೆಮನೆಯಲ್ಲಿರುವ ವಾಟರ್ ಪ್ಯುರಿಫಯರ್ ಪ್ರೊವಿಶನ್ ಗೆಂದು ಇಟ್ಟಿರುವ ಟ್ಯಾಪ್ ತುಂಡಾಗಿ ನೀರು ರಭಸದಿಂದ ಹೊರಬರುತ್ತಿದೆ. ಈ ಟ್ಯಾಪ್ ಅನ್ನು ನಾವು ಇಷ್ಟರತನಕ ಬಳಸಿಲ್ಲ. ಕಳಪೆ ದರ್ಜೆಯ ಟ್ಯಾಪ್ ಅಥವಾ ಬೆಂಗಳೂರು ಬೊರ್ವೆಲ್ಲಿನ ಗಡಸು ನೀರಿನ ಪ್ರಭಾವವೋ, ತ್ರೆಡ್ ತುಂಡಾಗಿ ಟ್ಯಾಪ್ ಕೆಳಗೆ ಬಿದ್ದಿತ್ತು.

ಸಮಯ ಬೆಳಗಿನ ಜಾವ 5 ಗಂಟೆ. 

2 ಗಂಟೆಗೆ, ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದು ಎದ್ದು, ನೀರು ಕುಡಿದು, ಸ್ವಲ್ಪ ಹೊತ್ತು ಮನೆಯೊಳಗೆ ಅತ್ತಿತ್ತ ಅಡ್ಡಾಡಿ, ಆದಿತ್ಯವಾರವಾದ್ದರಿಂದ ಬೆಳಗ್ಗೆ 8 ಗಂಟೆಯವರೆಗಾದರೂ ನಿದ್ರೆಹೊಡೆಯಬೇಕೆಂದು ಪುನ: ಮಲಗಿದ್ದೆ. ಆಗ ಎಲ್ಲಾ ಸರಿಯಾಗಿಯೇ ಇತ್ತು, ನಂತರ ನನಗೆ ಗಾಢ ನಿದ್ರೆ ಆವರಿಸಿತ್ತು.

ಬಾಲ್ಯದಲ್ಲಿ ಸ್ಕೌಟ್ ಟ್ರೈನಿಂಗಿಗೆ ಸೇರಿದ್ದಾಗ ’ಸದಾ ಸಿದ್ಧನಾಗಿರು’ ಎಂಬ ಧ್ಯೇಯವಾಕ್ಯ ಬೋಧಿಸಿದ್ದರು, ಮಾತ್ರವಲ್ಲ ಅದರಂತೆ ನಡೆಯಲು ತರಬೇತಿ ಕೊಡುತ್ತಿದ್ದರು. ಅದು ನನಗೆ ಹಲವಾರು ಸಂದರ್ಭದಲ್ಲಿ ಉಪಯೋಗಕ್ಕೆ ಬಂದಿದೆ. ಈಗಿನ ಸನ್ನಿವೇಶದಲ್ಲಿ ಮನೆ ಓನರ್, ಪ್ಲಂಬರ್, ಬೆಂಗಳೂರಿನ ನೀರನ್ನು ದೂಷಿಸುತ್ತಾ ಕಾಲಕಳೆಯುವುದು ವೇಸ್ಟ್. ಈ ಹೊತ್ತಲ್ಲಿ ಕೆಲಸದವರು ಸಿಗುತ್ತಾರಾ ಕ್ಲೀನ್ ಮಾಡಲು ಎಂದು ಯೋಚಿಸುವುದೂ ವ್ಯರ್ಥವೇ. ಮೊದಲ ಆದ್ಯತೆ ಸೋರುತ್ತಿರುವ ನೀರು ನಿಲ್ಲಿಸುವುದು. ನೀರಿನ ಫೋರ್ಸ್ ನಿಂದಾಗಿ ನೀರು ನಿಲ್ಲಿಸುವುದು ಅಸಾಧ್ಯವಾಗಿತ್ತು. ಸಣ್ಣಗೆ ಮೈಕೊರೆವ ಚಳಿಯಲ್ಲಿ ಅಡಿಯಿಂದ ಮುಡಿಯವರೆಗೂ ಸಂಪೂರ್ಣ ಒದ್ದೆಯಾಗಿದ್ದು ಮಾತ್ರ ಬಂತು.

ತಮ್ಮ, ಅರವಿಂದ ಅವನ ಕೋಣೆಯಲ್ಲಿ ನೆಲದ ಮೇಲೆಯೆ ಹಾಸಿಗೆ ಹಾಸಿ ಮಲಗಿದ್ದ. ಅವನ ಸುತ್ತಲೂ ನೀರು. ಅವನನ್ನು ಏಳಿಸಿದೆ, ದಡಬಡ ಎದ್ದು ಬಂದ. ನೀರು ನಿಲ್ಲಿಸಲು ಪ್ರಯತ್ನ ಪಟ್ಟ, ಪರಿಣಾಮ ಅವನೂ ಒದ್ದೆ. ಹೆಂಡತಿಗೆ ಮಂಚ ಬಿಟ್ಟು ಕೆಳಗಿಳಿಯಬಾರದು ಎಂದು ತಾಕೀತು ಮಾಡಿದೆ (for good reason). ನಾನು ಒಂದು ದಪ್ಪದ ಬಟ್ಟೆ ತಂದು ನೀರು ಬೀಳುತ್ತಿರುವಲ್ಲಿ ಗೋಡೆಗೆ ಒತ್ತಿ ಹಿಡಿದೆ. ನೀರಿನ ಹರಿವು ಸ್ವಲ್ಪ ಹೊತ್ತು ನಿಂತಿತು. ಬಿಟ್ಟು ಬಿಟ್ಟು ಬರುತ್ತಿತ್ತು. ಅರವಿಂದನಿಗೆ ನೆಲಮಹಡಿಯಲ್ಲಿರುವ ಓನರ್ ಗೆ ಫೋನ್ ಮಾಡಲು ಹೇಳಿದೆ. ಓನರ್ ನಿದ್ದೆಕಣ್ಣಲ್ಲೇ ಮಾತಾಡುತ್ತಾ ಮೂರನೇ ಮಹಡಿಯಲ್ಲಿ ವಾಲ್ವ್ ಇದೆ, ಕ್ಲೋಸ್ ಮಾಡಿ, ಬೆಳಗ್ಗೆ ಬಂದು ನೋಡುತ್ತೇನೆ ಎಂದು ಪುನ: ಮಲಗಿದ. ಅರವಿಂದ ವಾಲ್ವ್ ಕ್ಲೋಸ್ ಮಾಡಿದ, ನೀರಿನ ಹರಿವು ಸಂಪೂರ್ಣ ನಿಂತಿತು. ಅವನು ಮನೆಯೊಳಗೆ ಬರುವಾಗ ನೆಲದ ಮೇಲಿರುವ ನೀರಿನ ಮಟ್ಟ ತಿಳಿಯದೆ ಕಾಲು ಜಾರಿ ಬಿದ್ದ. ಪರಿಣಾಮ ಸಂಪೂರ್ಣ ಒದ್ದೆ. ಹೊರಗೆ ಮಂಜು ಮುಸುಕಿತ್ತು, ಚಳಿಯೇರುತ್ತಿತ್ತು.

ಸಮಯ ಬೆಳಗಿನ ಜಾವ 5.15

ನಮ್ಮನೆಯಲ್ಲಿ ಬಟ್ಟೆಬರೆ, ಇನ್ನಿತರ ವಸ್ತುಗಳನ್ನು ನೆಲದ ಮೇಲೆ ಇಡುವ ಪದ್ಧತಿ ಇಲ್ಲ. ಹಾಗಾಗಿ ಯಾವ ವಸ್ತುವೂ ಒದ್ದೆಯಾಗಿರಲಿಲ್ಲ ಪುಣ್ಯಕ್ಕೆ. ಅರವಿಂದನ ಹಾಸಿಗೆ ಪ್ಲಾಸ್ಟಿಕ್ ಚಾಪೆಯ ಮೇಲಿತ್ತು, ಅದೊಂದು ಸ್ವಲ್ಪ ಒದ್ದೆಯಾಗಿತ್ತು. ಅದು ಬಿಟ್ಟರೆ ಡೋರ್ ಮ್ಯಾಟ್ ಗಳು ಒದ್ದೆಯಾಗಿದ್ದವು ಅಷ್ಟೆ. ಈಗ ಶುರುವಾಯಿತು ನೀರು ಹೊರಚೆಲ್ಲಿ, ಕ್ಲೀನ್ ಮಾಡುವ ಕೆಲಸ. ನಾನು ಬಕೆಟ್, ಚೊಂಬು, ಒರಸುವ ಬಟ್ಟೆ, ಸಣ್ಣ-ಪುಟ್ಟ ಕ್ಲೀನ್ ಮಾಡುವ ಆಯುಧ ಹಿಡಿದು ಸಜ್ಜಾದೆ. ಅರವಿಂದ ಪೈಪ್ ತುಂಡಾದ ಜಾಗವನ್ನು ಬಟ್ಟೆಯಿಂದ ಮುಚ್ಚಿ ಭದ್ರ ಪಡಿಸಿ, ಕ್ಲೀನ್ ಮಾಡಲು ಸಜ್ಜಾದ. ಮೊದಲ 6-8 ಬಕೆಟ್ ನೀರು ಚೊಂಬಿನಲ್ಲಿ ಸಲೀಸಾಗಿ ಬಂತು. ಮತ್ತೂ 10-12 ಬಕೆಟ್ ನೀರು ಹಾಗೂ ಹೀಗೂ ತೆಗೆದು ಹೊರಚೆಲ್ಲಿದೆವು. ಒಟ್ಟು 20 ಬಕೆಟ್ ನೀರು! ಅಂದಾಜು ೩೦ ನಿಮಿಷ ನೀರು ಸೋರಿರಬಹುದು. ರೂಮಿನಲ್ಲಿ ಮಲಗಿದ್ದರಿಂದ, ಗಾಢ ನಿದ್ರೆ ಆವರಿಸಿದ್ದರಿಂದ ಪಕ್ಕನೆ ಎಚ್ಚರವಾಗಿರಲಿಲ್ಲ.

ಬಟ್ಟೆ, ವೈಪರ್, ವರಸುವ ಕೊಳವೆಯಿಂದ ಮೂಲೆ ಮೂಲೆಯಲ್ಲಿರುವ ನೀರು, ನೀರಿನ ಪಸೆ ಎಲ್ಲಾ ತೆಗೆದು, ಕ್ಲೀನ್ ಮಾಡಿದಾಗ ಮನೆ ಚೊಕ್ಕವಾಗಿತ್ತು, ಮನಸ್ಸಿಗೂ ತೃಪ್ತಿಯಾಗಿತ್ತು, ದೇಹ ದಣಿದಿತ್ತು. ಸಮಯ ಬೆಳಗ್ಗೆ 7 ಗಂಟೆ ತೋರಿಸುತ್ತಿತ್ತು. 8 ಗಂಟೆಗೆ ಒನರ್ ಬಂದು ಕ್ಲೀನ್ ಆಗಿಯೇ ಇದ್ದ ಮನೆ ನೋಡಿದಾಗ "ಇಷ್ಟೆಯಾ, ಏನೂ ಆಗಿಲ್ಲ" ಎಂಬ ಮುಖಭಾವ!?!

ಕ್ಲೀನ್ ಮಾಡುವ ಭರದ ಮಧ್ಯೆ ಸ್ವಲ್ಪ ಹೊತ್ತು ಕ್ಯಾಮರಾ ಹಿಡಿದು... ಕೆಲವು ಚಿತ್ರಗಳು... :) 




ಹೊರಗಡೆ ಕಂಡುಬಂದ ಮುಂಜಾನೆಯ ಚಿತ್ರ...



- o -
ಚಿತ್ರ - ಲೇಖನ: ನೆಂಪು ಗುರು

Thursday, November 4, 2010

ದೀಪಾವಳಿಯ ಶುಭಾಶಯಗಳು


-o-
ನೆಂಪು ಗುರು

Wednesday, October 6, 2010

ಕ್ಯಾಮರಾ ಕಣ್ಣು: ಹೊಟ್ಟೆಪಾಡು...!


ರಸ್ತೆಬದಿಯಲ್ಲಿ ಊಟ ಮಾಡುತ್ತಿರುವ ಪುಟ್ಟ ಹುಡುಗಿ.

-o-
ಚಿತ್ರ: ಅರವಿಂದ

Thursday, September 16, 2010

ಕ್ಯಾಮರಾ ಕಣ್ಣು: ಗಣಪತಿಗೆ ಬಿಸ್ಕೇಟ್ ಅಲಂಕಾರ?

ಬೆಂಗಳೂರಿನ ಮಾಲ್ ಒಂದಕ್ಕೆ ಚೌತಿಯ ಸಂದರ್ಭದಲ್ಲಿ ಹೊಕ್ಕಾಗ ಪ್ರವೇಶ ದ್ವಾರದಲ್ಲೇ ಸ್ಥಾಪಿಸಲ್ಪಟ್ಟಿದ್ದ ಶ್ರೀ ಗಣಪತಿಯ ವಿಗ್ರಹ ವಿಶಿಷ್ಟವಾಗಿತ್ತು. ಇಡೀ ವಿಗ್ರಹ ಪಾರ್ಲೆ ಕಂಪೆನಿಯ ಬಿಸ್ಕೇಟ್, ಕುಕ್ಕೀಸ್, ಚಾಕಲೇಟ್, ಪಾಪಿನ್ಸ್ ಗಳಿಂದ ಅಲಂಕೃತವಾಗಿತ್ತು.

ಸಾರ್ವಜನಿಕ ಗಣೇಶೋತ್ಸವವೊಂದರಲ್ಲಿ ಕಣ್ಮನ ಸೆಳೆಯುತ್ತಿದ್ದ ಶ್ರೀ ಗಣಪತಿಯ ವಿಗ್ರಹ...


- ನೆಂಪು ಗುರು

Wednesday, August 18, 2010

ಸಂಚಾರ: ಕಾಪು ಬೀಚ್, ದೀಪಸ್ತಂಭ

ಉಡುಪಿಯಿಂದ ಸುಮಾರು ೧೨ ಕಿ.ಮೀ., ಮಂಗಳೂರಿನಿಂದ ಸುಮಾರು ೪೫ ಕಿ.ಮೀ. ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿ ಇರುವ ಕಾಪು ಸುಂದರ ಸಮುದ್ರ ತೀರ, ದೀಪಸ್ತಂಭದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.

೧೯೦೧ರಲ್ಲಿ ನಿರ್ಮಿಸಲ್ಪಟ್ಟ ಸುಮಾರು ೨೭ ಮೀ ಎತ್ತರವಿರುವ ದೀಪಸ್ತಂಭ ಇಲ್ಲಿಯ ವಿಶೇಷ ಆಕರ್ಷಣೆ. ಸಮುದ್ರ ತೀರದಲ್ಲಿರುವ ಬಂಡೆಯೊಂದರ ಮೇಲೆ ನಿಂತಿರುವ ದೀಪಸ್ತಂಭದ ತುದಿಯಲ್ಲಿ ಬೃಹತ್ ದೀಪವೊಂದಿದೆ. ಸಾಗರದಲ್ಲಿ ೨೬ ಕಿ.ಮೀ ದೂರದ ವರೆಗೂ ಇದರ ಬೆಳಕು ಕಾಣುತ್ತದೆ. ಇದರಿಂದ ಹಡಗು, ಬೋಟ್ ಗಳಲ್ಲಿ ಸಂಚರಿಸುವ ನಾವಿಕರು ರಾತ್ರಿಯ ವೇಳೆಯಲ್ಲಿ ದಿಕ್ಕು ತಪ್ಪದೆ ಸುಗಮವಾಗಿ ತಮ್ಮ ಗಮ್ಯ ಸೇರಲು ನೆರವಾಗುತ್ತದೆ. ಹಲವು ವರ್ಷಗಳ ಹಿಂದೆ ಬೆಳಕಿಗಾಗಿ ಪೆಟ್ರೋಮ್ಯಾಕ್ಸ್ ಬಳಕೆಯಾಗುತ್ತಿತ್ತು, ಈಗ ವಿದ್ಯುತ್ ಚಾಲಿತ ಬೆಳಕಿನ ವ್ಯವಸ್ಥೆಯಿದೆ. ಕರೆಂಟ್ ಕೈಕೊಟ್ಟಾಗ ಜನರೇಟರ್ ವ್ಯವಸ್ಥೆಯೂ ಇದೆ. ಸಂಜೆ ೬ ರಿಂದ ಬೆಳಿಗ್ಗೆ ಬೆಳಕು ಹರಿಯುವವರೆಗೂ ಪ್ರಕಾಶಮಾನವಾದ ದೀಪ ಬೆಳಗುತ್ತಿರುತ್ತದೆ.






ಪ್ರವಾಸಿಗರು, ಸಾರ್ವಜನಿಕರು ದೀಪಸ್ತಂಭದ ಒಳಗಿರುವ ವಿಶಿಷ್ಟವಾದ, ಕಡಿದಾದ ಮೆಟ್ಟಿಲುಗಳನ್ನು ಬಳಸಿ ತುದಿ ತಲುಪಬಹುದು. ಮೇಲಿನಿಂದ ಕಾಣುವ ದೃಶ್ಯ ರಮಣೀಯ. ಮೈಲುಗಟ್ಟಲೆ ಚಾಚಿಕೊಂಡಿರುವ ಅರಬ್ಬೀ ಸಮುದ್ರ ಒಂದುಕಡೆ. ಎಕರೆಗಟ್ಟಲೆ ತೆಂಗಿನಮರಗಳ ಸಾಲು ಇನ್ನೊಂದು ಕಡೆ. ಮಧ್ಯೆ ಸುಂದರವಾದ ಬೀಚ್.

ಸಂಜೆಯ ಹೊತ್ತು ತಂಗಾಳಿಯೊಂದಿಗೆ ಸುಂದರ ಸೂರ್ಯಾಸ್ತ ವೀಕ್ಷಿಸಲು, ಆಗಸದಲ್ಲಿ ಕಾಣುವ ರಂಗಿನ ಚಿತ್ತಾರ ಸವಿಯಲು, ತೆರೆಗಳು ಬಂಡೆಗಪ್ಪಳಿಸಿ ಆಳೆತ್ತರಕ್ಕೆ ಚಿಮ್ಮುವ ದೃಶ್ಯ ನೋಡಲು ಹೇಳಿಮಾಡಿಸಿದ ಜಾಗ.






ಹಲವಾರು ಚಲನಚಿತ್ರಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಉಡುಪಿ, ಮಂಗಳೂರು ಸುತ್ತಮುತ್ತಲ ಪ್ರೇಕ್ಷಣೀಯ ಸ್ಥಳಗಳ ಪಟ್ಟಿಯಲ್ಲಿ ಕಾಪು ಸಮುದ್ರ ತೀರ, ದೀಪಸ್ತಂಭವೂ ಪ್ರಮುಖವಾದದ್ದು.

--o--
ನೆಂಪು ಗುರು

Wednesday, August 4, 2010

ನಮ್ಮೂರ ಮಳೆಗಾಲದ ಸೊಬಗು...











-o-
ನೆಂಪು ಗುರು

Tuesday, July 27, 2010

ಸಂಚಾರ: ಊಟಿ, ಕುನ್ನೂರು, ಮುದುಮಲೈ

ಇತ್ತೀಚೆಗೆ ಊಟಿ, ಮುದುಮಲೈ ಸುತ್ತಮುತ್ತ ಸಂಚಾರ ಹೋಗಿದ್ದಾಗ ಕ್ಯಾಮರಾ ಕಣ್ಣಿಗೆ ದಕ್ಕಿದ ದೃಶ್ಯವೈಭವ. ತುಂತುರು ಮಳೆ, ಮೋಡಗಳ ನಡುವೆ, ಹಚ್ಚ ಹಸಿರ ಪರಿಸರದಲ್ಲಿ ೨-೩ ದಿನ ಸುತ್ತಾಡಿ ಬಂದ ಅನುಭವ ಅವರ್ಣನೀಯ!












-o-
ನೆಂಪು ಗುರು

Tuesday, April 20, 2010

ಸಂಚಾರ: ಮಣಿಕರ್ಣ ಬಿಸಿನೀರ ಬುಗ್ಗೆ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿರುವ ಮಣಿಕರಣ್ (ಮಣಿಕರ್ಣ) ನಿಸರ್ಗ ನಿರ್ಮಿತ ಬಿಸಿ ನೀರ ಬುಗ್ಗೆಗೆ ಪ್ರಸಿದ್ಧ. ಹಿಂದುಗಳಿಗೆ, ಸಿಖ್ ಧರ್ಮೀಯರಿಗೆ ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯವೂ ವರ್ಣಿಸಲಸಾಧ್ಯ.


ಕುಲುವಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ ಮಣಿಕರಣ್. ದಾರಿಯುದ್ದಕ್ಕೂ ಕಾಣಸಿಗುವುದು ಮುಗಿಲೆತ್ತರಕ್ಕೆ ಚಾಚಿಕೊಂಡಿರುವ ಬೆಟ್ಟಗಳ ಸಾಲು, ಕೆಳಗೆ ಪ್ರಪಾತದಲ್ಲಿ ಹರಿಯುತ್ತಿರುವ ಪಾರ್ವತಿ ನದಿ, ಇವೆರಡರ ಮಧ್ಯೆ ಹಾವಿನಂತೆ ತೆವಳುತ್ತಾ ಸಾಗುವ ರಸ್ತೆ, ಬೆಟ್ಟಗಳ ನಡುವೆ ಚುಕ್ಕೆಯಂತೆ ಹುದುಗಿರುವ ಮನೆಗಳು, ಅಲ್ಲಲ್ಲಿ ಕಂಡುಬರುವ ದೇವಧರ್ ವೃಕ್ಷಗಳು. ನಿಜಕ್ಕೂ ಒಮ್ಮೆ ಇಂಥಾ ರಸ್ತೆಯಲ್ಲಿ ಸಂಚರಿಸಿಯೇ ಆಸ್ವಾದಿಸಬೇಕು ಇಲ್ಲಿಯ ಸೊಬಗನ್ನು.


ಮಣಿಕರ್ಣದ ಉಲ್ಲೇಖ ಹಲವಾರು ಪುರಾಣಗಳಲ್ಲಿವೆ. ಶಿವ ಪಾರ್ವತಿ ಇಲ್ಲಿ ವಾಸಿಸಿದ್ದರಂತೆ. ಒಮ್ಮೆ ಪಾರ್ವತಿ ಧರಿಸಿದ್ದ ಸರದ ಅಮೂಲ್ಯ ಮಣಿಯೊಂದು ಇಲ್ಲಿನ ಕಾಡು-ಗುಡ್ಡಗಳ ನಡುವೆ ಹರಿಯುವ ಝರಿಯಲ್ಲಿ ಕಳೆದುಹೋಯಿತು. ಬೇಸರಗೊಂಡ ಪಾರ್ವತಿಯನ್ನು ಸಂತುಷ್ಟಗೊಳಿಸಲು ಶಿವ ತನ್ನ ಗಣಗಳಿಗೆ ಮಣಿಯನ್ನು ಹುಡುಕಿತರುವಂತೆ ಆಜ್ಞಾಪಿಸಿದ. ಎಷ್ಟುಹುಡುಕಿದರೂ ಕಳೆದುಹೋದ ಮಣಿ ಸಿಗದಿದ್ದಾಗ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣನ್ನು ತೆರೆದು ತಾಂಡವ ನೃತ್ಯಗೈದ. ಶಿವಪಾರ್ವತಿಯನ್ನು ಸಂತುಷ್ಟಗೊಳಿಸಲು ಪಾತಾಳದಲ್ಲಿದ್ದ ಶೇಷನಾಗನ ಮೊರೆಹೋಗಲಾಯಿತು. ಶೇಷನಾಗ ಬುಸುಗುಟ್ಟಿದಾಗ ಪಾತಾಳದಿಂದ ಬಿಸಿನೀರ ಬುಗ್ಗೆ ಇಲ್ಲಿ ಉಕ್ಕೇರತೊಡಗಿತು. ಕುದಿಯುವ ನೀರಿನ ಬಿಂದುಗಳು ಭೂಮಿಯ ಮೇಲೆ ಬಿದ್ದು ತಣಿದಾಗ ಮಣಿಗಳಾಗಿ ಮಾರ್ಪಟ್ಟವು. ಇವು ಕಳೆದು ಹೋದ ಮಣಿಯನ್ನು ಹೋಲುತ್ತಿದ್ದವು. ಹೀಗೆ ಶಿವಪಾರ್ವತಿಯರು ಸಂತುಷ್ಟರಾದರು ಎಂಬ ಕಥೆ ಇಲ್ಲಿ ಪ್ರಚಲಿತದಲ್ಲಿದೆ.


ಇಂತಹಾ ಚಿಮ್ಮುವ ಝರಿಗಳು ೧೯೦೫ರ ವರೆಗೆ ಇಲ್ಲಿ ಇತ್ತಂತೆ. ಭೂಕಂಪದಿಂದಾಗಿ ನೀರು ಚಿಮ್ಮುವುದು ನಿಂತುಹೋಯಿತು. ಆದರೆ ಬಿಸಿನೀರ ಬುಗ್ಗೆಗಳನ್ನು ಈಗಲೂ ಇಲ್ಲಿ ಹಲವಾರು ಕಡೆ ಕಾಣಬಹುದು. ಕೈ ಇಟ್ಟರೆ ಸುಡುವಷ್ಟು ಬಿಸಿ, ಅಕ್ಕಿಯ ತುಂಬಿದ ಪಾತ್ರೆಯನ್ನು ನೀರೊಳಗಿಟ್ಟರೆ ೧೦-೧೫ ನಿಮಿಷದಲ್ಲಿ ಅನ್ನವಾಗುವಷ್ಟು ಬಿಸಿ! ಇಲ್ಲಿನ ಬಿಸಿನೀರಿನ ಸ್ನಾನ ಅತ್ಯಂತ ಶ್ರೇಷ್ಠವಂತೆ. ಅಷ್ಟೇ ಅಲ್ಲ, ಮೈ-ಕೈ ನೋವು, ಚರ್ಮ ಸಂಬಂಧಿತ ರೋಗಗಳೂ ವಾಸಿಯಾಗುತ್ತವೆ ಎಂಬ ನಂಬಿಕೆಯಿದೆ.

ಶಿವ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಗುರುನಾನಕ್ ಜಿ ಗುರುದ್ವಾರಗಳು ಇಲ್ಲಿವೆ. ಯಾತ್ರಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ಛತ್ರಗಳು ಸಾಕಷ್ಟಿವೆ.


ನಾನು ಮಣಿಕರ್ಣಕ್ಕೆ ಭೇಟಿಕೊಟ್ಟಿದ್ದು ನವೆಂಬರ್ ತಿಂಗಳಲ್ಲಿ. ಮಧುಚಂದ್ರಕ್ಕಾಗಿ ಮನಾಲಿಗೆ ಹೋಗಿದ್ದಾಗ ಮಣಿಕರ್ಣಕ್ಕೂ ಹೋಗುವ ಅವಕಾಶ ಸಿಕ್ಕಿತು. ಹಗಲು ಹೊತ್ತಲ್ಲೂ ತಂಪಾದ, ಸಣ್ಣಗೆ ಮೈ ಕೊರೆಯುವ ಚಳಿ. ಬೃಹತ್ ಬೆಟ್ಟಗಳಿಂದಾವೃತವಾದುದರಿಂದ ನೇರ ಬಿಸಿಲು ಬೀಳುವುದು ಅಪರೂಪಕ್ಕೆ. ಹಲವಾರು ಕಡೆ ಹೊಗೆ ಮೇಲೇರುತ್ತಿರುವುದನ್ನು ನೋಡಿದಾಗ ಎಲ್ಲೋ ಚಳಿಕಾಯಿಸಲು ಬೆಂಕಿಹಾಕಿರಬಹುದು ಎಂದುಕೊಂಡಿದ್ದೆ. ಆದರೆ ಸ್ವಲ್ಪ ದೂರ ನಡೆದು ಮುಂದೆಹೋದಾಗ ಪಾರ್ವತಿ ನದಿಯ ದಡದ ಕಲ್ಲುಗಳ ಸಂದಿನಿಂದ ಹೊಗೆ ಮೇಲೇಳುತ್ತಿದೆ!


ಶಿವ ದೇವಾಲಯದ ಸನಿಹದಲ್ಲಿದ್ದ ಚಿಕ್ಕ ಕೊಳದ ಸುತ್ತಲೂ ಹೊಗೆಯಾಡುತ್ತಿತ್ತು. ಕೊಳದ ನೀರಿಗೆ ಕೈಬೆರಳು ಮುಳುಗಿಸಿದಾಗ ಕೆಲಕ್ಷಣ ಬೆಚ್ಚಗೆ ಹಿತವಾಯಿತು. ಸ್ವಲ್ಪಹೊತ್ತು ಅಷ್ಟೇ! ಬಿಸಿಯಿಂದ ಕೈ ಬೆರಳು ಕೆಂಪಗಾಗಿತ್ತು. ಕೊಳದಲ್ಲಿ ಹಲವಾರು ಪಾತ್ರೆಗಳನ್ನು ಮುಳುಗಿಸಿಟ್ಟಿದ್ದರು. ಅಲ್ಲಿದ್ದ ಗಾರ್ಡನ್ನು ಕೇಳಿದಾಗ ಅಕ್ಕಿ ತುಂಬಿದ ಪಾತ್ರೆ, ಬೇಯಲು ಇಟ್ಟದ್ದು ಎಂದ.

ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ಸುತ್ತಾಡಿ ದೇಗುಲ, ಗುರುದ್ವಾರಗಳನ್ನು ನೋಡಿ ವಾಪಸು ಬರುವಾಗ ಸಸ್ಯಾಹಾರಿ ಡಾಬಾ ಒಂದರಲ್ಲಿ ರುದ್ರ ರಮಣೀಯ ಬೆಟ್ಟಗಳ ಸಾಲನ್ನು ವೀಕ್ಷಿಸುತ್ತಾ ಬಿಸಿ ಬಿಸಿ ರೋಟಿ-ದಾಲ್ ತಿಂದಾಗ ಹಿತವೆನಿಸಿತು.




ಪುರಾಣಗಳ ಪ್ರಕಾರ ಮಣಿಕರಣ್ ದೇವತೆಗಳು ಓಡಾಡುವ ಸ್ಥಳವಂತೆ. ಇಲ್ಲಿನ ಝರಿ-ತೊರೆಗಳು, ಬೃಹದಾಕಾರದ ಪರ್ವತ ಶ್ರೇಣಿಗಳು, ಕಾಡುಗಳು, ಬಿಸಿನೀರ ಬುಗ್ಗೆ, ತಂಪಾದ ಹವೆ, ಸ್ವಚ್ಚ-ಶಾಂತ ಪರಿಸರ... ಹೀಗೆ ಆಸ್ವಾದಿಸುತ್ತಿದ್ದಂತೆ ನಮ್ಮನ್ನು ನಾವು ಮರೆತು ಸ್ವರ್ಗದಲ್ಲಿದ್ದಂತೆ ಭಾಸವಾಗುತ್ತದೆ!

ಚಿತ್ರಗಳು: ನೆಂಪು ಗುರು

-o-

Tuesday, April 6, 2010

ಸಂಚಾರ: ದೆಹಲಿಯ ಇಂಡಿಯಾ ಗೇಟ್

ಇಂಡಿಯಾ ಗೇಟ್ ಭಾರತದ ರಾಷ್ಟ್ರೀಯ ಸ್ಮಾರಕ. ಯುದ್ಧದಲ್ಲಿ ಮಡಿದ ಸಹಸ್ರಾರು ಯೋಧರ ಬಲಿದಾನವನ್ನು ಸ್ಮರಿಸಲು ನಿರ್ಮಿಸಿದ ಸ್ಮಾರಕ.





ದೆಹಲಿಯ ಹೃದಯ ಭಾಗದಲ್ಲಿರುವ ೪೨ ಮೀ ಎತ್ತರದ ಇಂಡಿಯಾ ಗೇಟ್ ನ ಮೂಲಕ ಪ್ರಮುಖ ರಸ್ತೆಗಳು ಹಾದುಹೋಗುತ್ತವೆ. ಇದರಲ್ಲಿ ಮುಖ್ಯವಾದದ್ದು ರಾಜ್ ಪಥ್ - ಗಣರಾಜ್ಯೋತ್ಸವದ ಪೆರೇಡ್ ನಡೆಯುವ ಸ್ಥಳ.


ಇಂಡಿಯಾ ಗೇಟ್ ಮೂಲತಃ ಬ್ರಿಟಿಷ್ ವಸಾಹತು ಶಾಹಿಯ ಕಾಲದಲ್ಲಿ ೧ನೇ ಮಹಾಯುದ್ಧ, ಇನ್ನಿತರ ಯುದ್ಧಗಳಲ್ಲಿ ಮಡಿದ ೯೦,೦೦೦ ಸೈನಿಕರ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ಇದರ ಮೂಲ ನಿರ್ಮಾತೃ ಸರ್ ಎಡ್ವಿನ್ ಲುತ್ಯೆನ್ಸ್.


೧೯೭೧ ರಲ್ಲಿ ಭಾರತ ಸರಕಾರ ಇಂಡೋ-ಪಾಕ್ ಯುದ್ಧದಲ್ಲಿ ಹುತಾತ್ಮರಾದ ಸಹಸ್ರಾರು ಯೋಧರ ನೆನಪಿಗಾಗಿ ’ಅಮರ್ ಜವಾನ್ ಜ್ಯೋತಿ’ಯನ್ನು ಪ್ರತಿಷ್ಠಾಪಿಸಿ ಇಂಡಿಯಾ ಗೇಟನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿತು.


ಪರಮವೀರಚಕ್ರ ಪಡೆದ, ದೇಶಕ್ಕಾಗಿ ಹೋರಾಡಿ ಪ್ರಾಣತೆತ್ತ ಯೋಧರ ಹೆಸರನ್ನು ಇಂಡಿಯಾ ಗೇಟಿನ ಗೋಡೆಗಳಲ್ಲಿ ಕಾಣಬಹುದು.


ಚಿತ್ರಗಳು: ನೆಂಪು ಗುರು
-o-