Showing posts with label Hot springs. Show all posts
Showing posts with label Hot springs. Show all posts

Tuesday, April 20, 2010

ಸಂಚಾರ: ಮಣಿಕರ್ಣ ಬಿಸಿನೀರ ಬುಗ್ಗೆ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿರುವ ಮಣಿಕರಣ್ (ಮಣಿಕರ್ಣ) ನಿಸರ್ಗ ನಿರ್ಮಿತ ಬಿಸಿ ನೀರ ಬುಗ್ಗೆಗೆ ಪ್ರಸಿದ್ಧ. ಹಿಂದುಗಳಿಗೆ, ಸಿಖ್ ಧರ್ಮೀಯರಿಗೆ ಪ್ರಸಿದ್ಧ ಯಾತ್ರಾಸ್ಥಳ. ಇಲ್ಲಿನ ಪ್ರಕೃತಿ ಸೌಂದರ್ಯವೂ ವರ್ಣಿಸಲಸಾಧ್ಯ.


ಕುಲುವಿನಿಂದ ಸುಮಾರು ೪೫ ಕಿ.ಮೀ ದೂರದಲ್ಲಿದೆ ಮಣಿಕರಣ್. ದಾರಿಯುದ್ದಕ್ಕೂ ಕಾಣಸಿಗುವುದು ಮುಗಿಲೆತ್ತರಕ್ಕೆ ಚಾಚಿಕೊಂಡಿರುವ ಬೆಟ್ಟಗಳ ಸಾಲು, ಕೆಳಗೆ ಪ್ರಪಾತದಲ್ಲಿ ಹರಿಯುತ್ತಿರುವ ಪಾರ್ವತಿ ನದಿ, ಇವೆರಡರ ಮಧ್ಯೆ ಹಾವಿನಂತೆ ತೆವಳುತ್ತಾ ಸಾಗುವ ರಸ್ತೆ, ಬೆಟ್ಟಗಳ ನಡುವೆ ಚುಕ್ಕೆಯಂತೆ ಹುದುಗಿರುವ ಮನೆಗಳು, ಅಲ್ಲಲ್ಲಿ ಕಂಡುಬರುವ ದೇವಧರ್ ವೃಕ್ಷಗಳು. ನಿಜಕ್ಕೂ ಒಮ್ಮೆ ಇಂಥಾ ರಸ್ತೆಯಲ್ಲಿ ಸಂಚರಿಸಿಯೇ ಆಸ್ವಾದಿಸಬೇಕು ಇಲ್ಲಿಯ ಸೊಬಗನ್ನು.


ಮಣಿಕರ್ಣದ ಉಲ್ಲೇಖ ಹಲವಾರು ಪುರಾಣಗಳಲ್ಲಿವೆ. ಶಿವ ಪಾರ್ವತಿ ಇಲ್ಲಿ ವಾಸಿಸಿದ್ದರಂತೆ. ಒಮ್ಮೆ ಪಾರ್ವತಿ ಧರಿಸಿದ್ದ ಸರದ ಅಮೂಲ್ಯ ಮಣಿಯೊಂದು ಇಲ್ಲಿನ ಕಾಡು-ಗುಡ್ಡಗಳ ನಡುವೆ ಹರಿಯುವ ಝರಿಯಲ್ಲಿ ಕಳೆದುಹೋಯಿತು. ಬೇಸರಗೊಂಡ ಪಾರ್ವತಿಯನ್ನು ಸಂತುಷ್ಟಗೊಳಿಸಲು ಶಿವ ತನ್ನ ಗಣಗಳಿಗೆ ಮಣಿಯನ್ನು ಹುಡುಕಿತರುವಂತೆ ಆಜ್ಞಾಪಿಸಿದ. ಎಷ್ಟುಹುಡುಕಿದರೂ ಕಳೆದುಹೋದ ಮಣಿ ಸಿಗದಿದ್ದಾಗ ಕೋಪಗೊಂಡ ಶಿವ ತನ್ನ ಮೂರನೇ ಕಣ್ಣನ್ನು ತೆರೆದು ತಾಂಡವ ನೃತ್ಯಗೈದ. ಶಿವಪಾರ್ವತಿಯನ್ನು ಸಂತುಷ್ಟಗೊಳಿಸಲು ಪಾತಾಳದಲ್ಲಿದ್ದ ಶೇಷನಾಗನ ಮೊರೆಹೋಗಲಾಯಿತು. ಶೇಷನಾಗ ಬುಸುಗುಟ್ಟಿದಾಗ ಪಾತಾಳದಿಂದ ಬಿಸಿನೀರ ಬುಗ್ಗೆ ಇಲ್ಲಿ ಉಕ್ಕೇರತೊಡಗಿತು. ಕುದಿಯುವ ನೀರಿನ ಬಿಂದುಗಳು ಭೂಮಿಯ ಮೇಲೆ ಬಿದ್ದು ತಣಿದಾಗ ಮಣಿಗಳಾಗಿ ಮಾರ್ಪಟ್ಟವು. ಇವು ಕಳೆದು ಹೋದ ಮಣಿಯನ್ನು ಹೋಲುತ್ತಿದ್ದವು. ಹೀಗೆ ಶಿವಪಾರ್ವತಿಯರು ಸಂತುಷ್ಟರಾದರು ಎಂಬ ಕಥೆ ಇಲ್ಲಿ ಪ್ರಚಲಿತದಲ್ಲಿದೆ.


ಇಂತಹಾ ಚಿಮ್ಮುವ ಝರಿಗಳು ೧೯೦೫ರ ವರೆಗೆ ಇಲ್ಲಿ ಇತ್ತಂತೆ. ಭೂಕಂಪದಿಂದಾಗಿ ನೀರು ಚಿಮ್ಮುವುದು ನಿಂತುಹೋಯಿತು. ಆದರೆ ಬಿಸಿನೀರ ಬುಗ್ಗೆಗಳನ್ನು ಈಗಲೂ ಇಲ್ಲಿ ಹಲವಾರು ಕಡೆ ಕಾಣಬಹುದು. ಕೈ ಇಟ್ಟರೆ ಸುಡುವಷ್ಟು ಬಿಸಿ, ಅಕ್ಕಿಯ ತುಂಬಿದ ಪಾತ್ರೆಯನ್ನು ನೀರೊಳಗಿಟ್ಟರೆ ೧೦-೧೫ ನಿಮಿಷದಲ್ಲಿ ಅನ್ನವಾಗುವಷ್ಟು ಬಿಸಿ! ಇಲ್ಲಿನ ಬಿಸಿನೀರಿನ ಸ್ನಾನ ಅತ್ಯಂತ ಶ್ರೇಷ್ಠವಂತೆ. ಅಷ್ಟೇ ಅಲ್ಲ, ಮೈ-ಕೈ ನೋವು, ಚರ್ಮ ಸಂಬಂಧಿತ ರೋಗಗಳೂ ವಾಸಿಯಾಗುತ್ತವೆ ಎಂಬ ನಂಬಿಕೆಯಿದೆ.

ಶಿವ ದೇವಸ್ಥಾನ, ಶ್ರೀರಾಮ ದೇವಸ್ಥಾನ, ಗುರುನಾನಕ್ ಜಿ ಗುರುದ್ವಾರಗಳು ಇಲ್ಲಿವೆ. ಯಾತ್ರಾರ್ಥಿಗಳಿಗೆ ಮೂಲಸೌಕರ್ಯ ಒದಗಿಸುವ ಛತ್ರಗಳು ಸಾಕಷ್ಟಿವೆ.


ನಾನು ಮಣಿಕರ್ಣಕ್ಕೆ ಭೇಟಿಕೊಟ್ಟಿದ್ದು ನವೆಂಬರ್ ತಿಂಗಳಲ್ಲಿ. ಮಧುಚಂದ್ರಕ್ಕಾಗಿ ಮನಾಲಿಗೆ ಹೋಗಿದ್ದಾಗ ಮಣಿಕರ್ಣಕ್ಕೂ ಹೋಗುವ ಅವಕಾಶ ಸಿಕ್ಕಿತು. ಹಗಲು ಹೊತ್ತಲ್ಲೂ ತಂಪಾದ, ಸಣ್ಣಗೆ ಮೈ ಕೊರೆಯುವ ಚಳಿ. ಬೃಹತ್ ಬೆಟ್ಟಗಳಿಂದಾವೃತವಾದುದರಿಂದ ನೇರ ಬಿಸಿಲು ಬೀಳುವುದು ಅಪರೂಪಕ್ಕೆ. ಹಲವಾರು ಕಡೆ ಹೊಗೆ ಮೇಲೇರುತ್ತಿರುವುದನ್ನು ನೋಡಿದಾಗ ಎಲ್ಲೋ ಚಳಿಕಾಯಿಸಲು ಬೆಂಕಿಹಾಕಿರಬಹುದು ಎಂದುಕೊಂಡಿದ್ದೆ. ಆದರೆ ಸ್ವಲ್ಪ ದೂರ ನಡೆದು ಮುಂದೆಹೋದಾಗ ಪಾರ್ವತಿ ನದಿಯ ದಡದ ಕಲ್ಲುಗಳ ಸಂದಿನಿಂದ ಹೊಗೆ ಮೇಲೇಳುತ್ತಿದೆ!


ಶಿವ ದೇವಾಲಯದ ಸನಿಹದಲ್ಲಿದ್ದ ಚಿಕ್ಕ ಕೊಳದ ಸುತ್ತಲೂ ಹೊಗೆಯಾಡುತ್ತಿತ್ತು. ಕೊಳದ ನೀರಿಗೆ ಕೈಬೆರಳು ಮುಳುಗಿಸಿದಾಗ ಕೆಲಕ್ಷಣ ಬೆಚ್ಚಗೆ ಹಿತವಾಯಿತು. ಸ್ವಲ್ಪಹೊತ್ತು ಅಷ್ಟೇ! ಬಿಸಿಯಿಂದ ಕೈ ಬೆರಳು ಕೆಂಪಗಾಗಿತ್ತು. ಕೊಳದಲ್ಲಿ ಹಲವಾರು ಪಾತ್ರೆಗಳನ್ನು ಮುಳುಗಿಸಿಟ್ಟಿದ್ದರು. ಅಲ್ಲಿದ್ದ ಗಾರ್ಡನ್ನು ಕೇಳಿದಾಗ ಅಕ್ಕಿ ತುಂಬಿದ ಪಾತ್ರೆ, ಬೇಯಲು ಇಟ್ಟದ್ದು ಎಂದ.

ಚಿಕ್ಕ ಚಿಕ್ಕ ಗಲ್ಲಿಗಳಲ್ಲಿ ಸುತ್ತಾಡಿ ದೇಗುಲ, ಗುರುದ್ವಾರಗಳನ್ನು ನೋಡಿ ವಾಪಸು ಬರುವಾಗ ಸಸ್ಯಾಹಾರಿ ಡಾಬಾ ಒಂದರಲ್ಲಿ ರುದ್ರ ರಮಣೀಯ ಬೆಟ್ಟಗಳ ಸಾಲನ್ನು ವೀಕ್ಷಿಸುತ್ತಾ ಬಿಸಿ ಬಿಸಿ ರೋಟಿ-ದಾಲ್ ತಿಂದಾಗ ಹಿತವೆನಿಸಿತು.




ಪುರಾಣಗಳ ಪ್ರಕಾರ ಮಣಿಕರಣ್ ದೇವತೆಗಳು ಓಡಾಡುವ ಸ್ಥಳವಂತೆ. ಇಲ್ಲಿನ ಝರಿ-ತೊರೆಗಳು, ಬೃಹದಾಕಾರದ ಪರ್ವತ ಶ್ರೇಣಿಗಳು, ಕಾಡುಗಳು, ಬಿಸಿನೀರ ಬುಗ್ಗೆ, ತಂಪಾದ ಹವೆ, ಸ್ವಚ್ಚ-ಶಾಂತ ಪರಿಸರ... ಹೀಗೆ ಆಸ್ವಾದಿಸುತ್ತಿದ್ದಂತೆ ನಮ್ಮನ್ನು ನಾವು ಮರೆತು ಸ್ವರ್ಗದಲ್ಲಿದ್ದಂತೆ ಭಾಸವಾಗುತ್ತದೆ!

ಚಿತ್ರಗಳು: ನೆಂಪು ಗುರು

-o-