ಧೋ... ಎಂದು ಸುರಿಯುತ್ತಿರುವ ಮಳೆ (ತುಳುವಿನ ಬೊಳ್ಳ)... ... ಮಳೆ ಅಲ್ಲ...!!
ಧುಮ್ಮಿಕ್ಕುತ್ತಿರುವ, ಭೋರ್ಗರೆಯುತ್ತಿರುವ ಜಲಪಾತ... ... ಜಲಪಾತವೂ ಅಲ್ಲ...!!
ಕೃಷಿ ಭೂಮಿಗೊ, ತೋಟಕ್ಕೋ ಪಂಪ್ ಸೆಟ್ ನಿಂದ ಬಿಟ್ಟ ನೀರು... ... ಇದೂ ಅಲ್ಲ...!!
Atleast, ನಮ್ಮ ನೆಂಪಿನ ಗೊರ್ ಗೊರ್ ಗುಂಡಿ ತೋಡಿನಲ್ಲಿ ನೀರಿನ ಝುಳು ಝುಳು ನಿನಾದ... ... ಛೆ... ಇದೂ ಅಲ್ಲ...!!
ಮತ್ತೆಲ್ಲಿಂದ ನೀರು ಹರಿಯುವ ಸದ್ದು!
ವಾಸ್ತವಕ್ಕೆ ಬಂದು ಅತ್ತಿತ್ತ ತಡಕಾಡಿದಾಗ, ನಾನು ಮಲಗಿರುವುದು ಬೆಂಗಳೂರಿನ ನಮ್ಮನೆಯ ಮಂಚದ ಮೇಲೆ, ಹೆಂಡತಿಯೂ ಪಕ್ಕದಲ್ಲೇ ಗಾಢ ನಿದ್ರೆಯಲ್ಲಿದ್ದಾಳೆ. ಎಲ್ಲಾ ನಾರ್ಮಲ್ ಆಗಿಯೇ ಇದೆ. ಹಾಗಾದರೆ ನೀರು ಬೀಳುತ್ತಿರುವ ಶಬ್ದ ಬರುತ್ತಿರುವುದಾದರೂ ಎಲ್ಲಿಂದ!
ಮೇಲ್ಮಹಡಿಯಲ್ಲಿರುವ ಓವರ್ ಹೆಡ್ ಟ್ಯಾಂಕ್ ತುಂಬಿ ನೀರು ಬೀಳುತ್ತಿರಬಹುದೇ? ಈ ಹೊತ್ತಿನಲ್ಲಿ ಸಾಧ್ಯವಿಲ್ಲ, ಬಿದ್ದರೂ ಇಷ್ಟು ಸ್ಪಷ್ಟವಾಗಿ ಕೇಳಲು ಸಾಧ್ಯವಿಲ್ಲ. ಮನೆಯೊಳಗಿರುವ ಟ್ಯಾಪ್ ಯಾವುದಾದರೂ ಲೀಕ್ ಆಗಿ ನೀರು ಸೋರಿಹೋಗುತ್ತಿರಬಹುದೇ? ಈ ಒಂದು ಯೋಚನೆ ಬಂದಿದ್ದೆ ದಡ-ಬಡ ಎದ್ದು ಮಂಚದಿಂದ ಕಾಲು ನೆಲಕ್ಕಿಡುತ್ತೇನೆ, ಪಾದ ಮುಳುಗುವಷ್ಟು ನೀರು! ಮೂಲ ಅರಸುತ್ತಾ ಹಾಲ್ ಗೆ ಬಂದಾಗ ಅಲ್ಲೂ ನೀರು, ದೇವರಕೋಣೆ, ತಮ್ಮನ ರೂಮ್, ಅಡುಗೆಮನೆಯಲ್ಲೂ ನೀರು! ಅಡುಗೆಮನೆಯಲ್ಲಿರುವ ವಾಟರ್ ಪ್ಯುರಿಫಯರ್ ಪ್ರೊವಿಶನ್ ಗೆಂದು ಇಟ್ಟಿರುವ ಟ್ಯಾಪ್ ತುಂಡಾಗಿ ನೀರು ರಭಸದಿಂದ ಹೊರಬರುತ್ತಿದೆ. ಈ ಟ್ಯಾಪ್ ಅನ್ನು ನಾವು ಇಷ್ಟರತನಕ ಬಳಸಿಲ್ಲ. ಕಳಪೆ ದರ್ಜೆಯ ಟ್ಯಾಪ್ ಅಥವಾ ಬೆಂಗಳೂರು ಬೊರ್ವೆಲ್ಲಿನ ಗಡಸು ನೀರಿನ ಪ್ರಭಾವವೋ, ತ್ರೆಡ್ ತುಂಡಾಗಿ ಟ್ಯಾಪ್ ಕೆಳಗೆ ಬಿದ್ದಿತ್ತು.
ಸಮಯ ಬೆಳಗಿನ ಜಾವ 5 ಗಂಟೆ.
2 ಗಂಟೆಗೆ, ಸರಿಯಾಗಿ ನಿದ್ರೆ ಬರುತ್ತಿಲ್ಲ ಎಂದು ಎದ್ದು, ನೀರು ಕುಡಿದು, ಸ್ವಲ್ಪ ಹೊತ್ತು ಮನೆಯೊಳಗೆ ಅತ್ತಿತ್ತ ಅಡ್ಡಾಡಿ, ಆದಿತ್ಯವಾರವಾದ್ದರಿಂದ ಬೆಳಗ್ಗೆ 8 ಗಂಟೆಯವರೆಗಾದರೂ ನಿದ್ರೆಹೊಡೆಯಬೇಕೆಂದು ಪುನ: ಮಲಗಿದ್ದೆ. ಆಗ ಎಲ್ಲಾ ಸರಿಯಾಗಿಯೇ ಇತ್ತು, ನಂತರ ನನಗೆ ಗಾಢ ನಿದ್ರೆ ಆವರಿಸಿತ್ತು.
ಬಾಲ್ಯದಲ್ಲಿ ಸ್ಕೌಟ್ ಟ್ರೈನಿಂಗಿಗೆ ಸೇರಿದ್ದಾಗ ’ಸದಾ ಸಿದ್ಧನಾಗಿರು’ ಎಂಬ ಧ್ಯೇಯವಾಕ್ಯ ಬೋಧಿಸಿದ್ದರು, ಮಾತ್ರವಲ್ಲ ಅದರಂತೆ ನಡೆಯಲು ತರಬೇತಿ ಕೊಡುತ್ತಿದ್ದರು. ಅದು ನನಗೆ ಹಲವಾರು ಸಂದರ್ಭದಲ್ಲಿ ಉಪಯೋಗಕ್ಕೆ ಬಂದಿದೆ. ಈಗಿನ ಸನ್ನಿವೇಶದಲ್ಲಿ ಮನೆ ಓನರ್, ಪ್ಲಂಬರ್, ಬೆಂಗಳೂರಿನ ನೀರನ್ನು ದೂಷಿಸುತ್ತಾ ಕಾಲಕಳೆಯುವುದು ವೇಸ್ಟ್. ಈ ಹೊತ್ತಲ್ಲಿ ಕೆಲಸದವರು ಸಿಗುತ್ತಾರಾ ಕ್ಲೀನ್ ಮಾಡಲು ಎಂದು ಯೋಚಿಸುವುದೂ ವ್ಯರ್ಥವೇ. ಮೊದಲ ಆದ್ಯತೆ ಸೋರುತ್ತಿರುವ ನೀರು ನಿಲ್ಲಿಸುವುದು. ನೀರಿನ ಫೋರ್ಸ್ ನಿಂದಾಗಿ ನೀರು ನಿಲ್ಲಿಸುವುದು ಅಸಾಧ್ಯವಾಗಿತ್ತು. ಸಣ್ಣಗೆ ಮೈಕೊರೆವ ಚಳಿಯಲ್ಲಿ ಅಡಿಯಿಂದ ಮುಡಿಯವರೆಗೂ ಸಂಪೂರ್ಣ ಒದ್ದೆಯಾಗಿದ್ದು ಮಾತ್ರ ಬಂತು.
ತಮ್ಮ, ಅರವಿಂದ ಅವನ ಕೋಣೆಯಲ್ಲಿ ನೆಲದ ಮೇಲೆಯೆ ಹಾಸಿಗೆ ಹಾಸಿ ಮಲಗಿದ್ದ. ಅವನ ಸುತ್ತಲೂ ನೀರು. ಅವನನ್ನು ಏಳಿಸಿದೆ, ದಡಬಡ ಎದ್ದು ಬಂದ. ನೀರು ನಿಲ್ಲಿಸಲು ಪ್ರಯತ್ನ ಪಟ್ಟ, ಪರಿಣಾಮ ಅವನೂ ಒದ್ದೆ. ಹೆಂಡತಿಗೆ ಮಂಚ ಬಿಟ್ಟು ಕೆಳಗಿಳಿಯಬಾರದು ಎಂದು ತಾಕೀತು ಮಾಡಿದೆ (for good reason). ನಾನು ಒಂದು ದಪ್ಪದ ಬಟ್ಟೆ ತಂದು ನೀರು ಬೀಳುತ್ತಿರುವಲ್ಲಿ ಗೋಡೆಗೆ ಒತ್ತಿ ಹಿಡಿದೆ. ನೀರಿನ ಹರಿವು ಸ್ವಲ್ಪ ಹೊತ್ತು ನಿಂತಿತು. ಬಿಟ್ಟು ಬಿಟ್ಟು ಬರುತ್ತಿತ್ತು. ಅರವಿಂದನಿಗೆ ನೆಲಮಹಡಿಯಲ್ಲಿರುವ ಓನರ್ ಗೆ ಫೋನ್ ಮಾಡಲು ಹೇಳಿದೆ. ಓನರ್ ನಿದ್ದೆಕಣ್ಣಲ್ಲೇ ಮಾತಾಡುತ್ತಾ ಮೂರನೇ ಮಹಡಿಯಲ್ಲಿ ವಾಲ್ವ್ ಇದೆ, ಕ್ಲೋಸ್ ಮಾಡಿ, ಬೆಳಗ್ಗೆ ಬಂದು ನೋಡುತ್ತೇನೆ ಎಂದು ಪುನ: ಮಲಗಿದ. ಅರವಿಂದ ವಾಲ್ವ್ ಕ್ಲೋಸ್ ಮಾಡಿದ, ನೀರಿನ ಹರಿವು ಸಂಪೂರ್ಣ ನಿಂತಿತು. ಅವನು ಮನೆಯೊಳಗೆ ಬರುವಾಗ ನೆಲದ ಮೇಲಿರುವ ನೀರಿನ ಮಟ್ಟ ತಿಳಿಯದೆ ಕಾಲು ಜಾರಿ ಬಿದ್ದ. ಪರಿಣಾಮ ಸಂಪೂರ್ಣ ಒದ್ದೆ. ಹೊರಗೆ ಮಂಜು ಮುಸುಕಿತ್ತು, ಚಳಿಯೇರುತ್ತಿತ್ತು.
ಸಮಯ ಬೆಳಗಿನ ಜಾವ 5.15
ನಮ್ಮನೆಯಲ್ಲಿ ಬಟ್ಟೆಬರೆ, ಇನ್ನಿತರ ವಸ್ತುಗಳನ್ನು ನೆಲದ ಮೇಲೆ ಇಡುವ ಪದ್ಧತಿ ಇಲ್ಲ. ಹಾಗಾಗಿ ಯಾವ ವಸ್ತುವೂ ಒದ್ದೆಯಾಗಿರಲಿಲ್ಲ ಪುಣ್ಯಕ್ಕೆ. ಅರವಿಂದನ ಹಾಸಿಗೆ ಪ್ಲಾಸ್ಟಿಕ್ ಚಾಪೆಯ ಮೇಲಿತ್ತು, ಅದೊಂದು ಸ್ವಲ್ಪ ಒದ್ದೆಯಾಗಿತ್ತು. ಅದು ಬಿಟ್ಟರೆ ಡೋರ್ ಮ್ಯಾಟ್ ಗಳು ಒದ್ದೆಯಾಗಿದ್ದವು ಅಷ್ಟೆ. ಈಗ ಶುರುವಾಯಿತು ನೀರು ಹೊರಚೆಲ್ಲಿ, ಕ್ಲೀನ್ ಮಾಡುವ ಕೆಲಸ. ನಾನು ಬಕೆಟ್, ಚೊಂಬು, ಒರಸುವ ಬಟ್ಟೆ, ಸಣ್ಣ-ಪುಟ್ಟ ಕ್ಲೀನ್ ಮಾಡುವ ಆಯುಧ ಹಿಡಿದು ಸಜ್ಜಾದೆ. ಅರವಿಂದ ಪೈಪ್ ತುಂಡಾದ ಜಾಗವನ್ನು ಬಟ್ಟೆಯಿಂದ ಮುಚ್ಚಿ ಭದ್ರ ಪಡಿಸಿ, ಕ್ಲೀನ್ ಮಾಡಲು ಸಜ್ಜಾದ. ಮೊದಲ 6-8 ಬಕೆಟ್ ನೀರು ಚೊಂಬಿನಲ್ಲಿ ಸಲೀಸಾಗಿ ಬಂತು. ಮತ್ತೂ 10-12 ಬಕೆಟ್ ನೀರು ಹಾಗೂ ಹೀಗೂ ತೆಗೆದು ಹೊರಚೆಲ್ಲಿದೆವು. ಒಟ್ಟು 20 ಬಕೆಟ್ ನೀರು! ಅಂದಾಜು ೩೦ ನಿಮಿಷ ನೀರು ಸೋರಿರಬಹುದು. ರೂಮಿನಲ್ಲಿ ಮಲಗಿದ್ದರಿಂದ, ಗಾಢ ನಿದ್ರೆ ಆವರಿಸಿದ್ದರಿಂದ ಪಕ್ಕನೆ ಎಚ್ಚರವಾಗಿರಲಿಲ್ಲ.
ಬಟ್ಟೆ, ವೈಪರ್, ವರಸುವ ಕೊಳವೆಯಿಂದ ಮೂಲೆ ಮೂಲೆಯಲ್ಲಿರುವ ನೀರು, ನೀರಿನ ಪಸೆ ಎಲ್ಲಾ ತೆಗೆದು, ಕ್ಲೀನ್ ಮಾಡಿದಾಗ ಮನೆ ಚೊಕ್ಕವಾಗಿತ್ತು, ಮನಸ್ಸಿಗೂ ತೃಪ್ತಿಯಾಗಿತ್ತು, ದೇಹ ದಣಿದಿತ್ತು. ಸಮಯ ಬೆಳಗ್ಗೆ 7 ಗಂಟೆ ತೋರಿಸುತ್ತಿತ್ತು. 8 ಗಂಟೆಗೆ ಒನರ್ ಬಂದು ಕ್ಲೀನ್ ಆಗಿಯೇ ಇದ್ದ ಮನೆ ನೋಡಿದಾಗ "ಇಷ್ಟೆಯಾ, ಏನೂ ಆಗಿಲ್ಲ" ಎಂಬ ಮುಖಭಾವ!?!
ಕ್ಲೀನ್ ಮಾಡುವ ಭರದ ಮಧ್ಯೆ ಸ್ವಲ್ಪ ಹೊತ್ತು ಕ್ಯಾಮರಾ ಹಿಡಿದು... ಕೆಲವು ಚಿತ್ರಗಳು... :)
- o -
ಚಿತ್ರ - ಲೇಖನ: ನೆಂಪು ಗುರು
8 comments:
ಎಲ್ಲಿ? ನೀರೇ ಕಾಣ್ತಾ ಇಲ್ಲ ಫೋಟೋದಲ್ಲಿ?! ಇಷ್ಟೆಯಾ, ಏನೂ ಆಗಿಲ್ಲ???!! ಹೆ ಹೆ ಹೆ :-D
ಹ್ಮ್.. ಅಂತೂ ಒಂದ್ ಸರ್ತಿ ಅಣ್ಣ ತಮ್ಮ ಸೇರಿ ಮನೆ ಕ್ಲೀನ್ ಮಾಡಿದ್ ಹಾಂಗಾಯ್ತ್..
ಫೊಟೊ ತೆಗೆಯುವಷ್ಟರಲ್ಲಿ 10-15 ಬಕೆಟ್ ನೀರು ಹೊರಗೆ ಕಳ್ಸಿ ಆಯಿತ್ತು. ಮಧ್ಯೆ ಸುಸ್ತಾಯಿ ಸುಧಾರಿಸುಕಂಬಾಗ ಫೊಟೊ ತೆಗೆದದ್ದು. :-)
ಶಬರಿಮಲೆಗೆ ಹೊಪುಕೆ ಮಾಲೆ ಹಾಕ್ಕಂಡವ್ರು ಬೆಳ್ಗಾಮುಂಚೆ ತಣ್ಣೀರು ಸ್ನಾನ ಮಾಡಿ ಪೂಜೆ ಮಾಡ್ತ್ರಲ್ದ... ಹಾಂಗೆ ನಮ್ಗೂ ತಣ್ಣೀರು ಸ್ನಾನ ಆಯ್ತು, at least ಒಂದು ದಿನ... :)
Ninge Upadra Adru manu odudrolge maja takande.
swlpa niru owner ge kalisa bekitu.
neeru enu jasti bandilla bidi
photos chennagive
Nice:)
last but one photo super
ಹ ಹ್ಹಾ.. ಗುರು ತುಂಬಾ ಸುಸ್ತಾಗಿರ್ಬೇಕಲ್ವಾ.
Nice..
Keep posting..
ಓದಿ, ಕಮೆಂಟಿಸಿದ ಎಲ್ಲರಿಗೂ ಧನ್ಯವಾದಗಳು :)
Post a Comment