Friday, February 29, 2008

Sanchara:: Delhi - Agra - Mathura

ದೆಹಲಿಯ ವಿಜ್ಞಾನ ಭವನದಲ್ಲೊಂದು ದಿನ...

ನಮ್ಮ ನ.ಭ.ನೆಂಪು ರವರು 2003ರಲ್ಲಿ "ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ"ಯ ಮನ್ನಣೆಗೆ ಭಾಜನರಾಗಿ, ಆಗಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ರಿಂದ ರಾಜಧಾನಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದು ನೆಂಪು ಬಳಗಕ್ಕೆ ಒಂದು ಹೆಮ್ಮೆಯ ವಿಷಯ.


ಆ ಅಪೂರ್ವ ಕ್ಷಣಗಳನ್ನು ಮೆಲುಕು ಹಾಕುತ್ತಾ, ಪ್ರವಾಸದ ಸವಿನೆನಪುಗಳನ್ನು ನ.ಭ.ನೆಂಪು ರವರ ಜೊತೆಯಲ್ಲಿ ದೆಹಲಿಗೆ ತೆರಳಿದ್ದ ಅವರ ಸಹೋದರ ಶ್ರೀ ಗಜಾನನ ಭಟ್ಟರು ಇಲ್ಲಿ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

ರಾಷ್ಟ್ರದ ಉತ್ತಮ ಶಿಕ್ಷಕರಲ್ಲೊಬ್ಬರೆಂಬ ಪ್ರಶಸ್ತಿ ಪಡೆದು ಅದನ್ನು ಸ್ವೀಕರಿಸಲು ನರಸಿಂಹಣ್ಣ ದಂಪತಿಗಳು ದೆಹಲಿಗೆ ಹೊರಟಾಗ ಅವರೊಂದಿಗೆ ನನಗೂ ದೆಹಲಿ ಪಯಣದ ಆಸೆ ಮೂಡಿತ್ತು. ಇಂತಹ ಒಂದು ಸಂದರ್ಭ ಸಿಕ್ಕುವುದೇ ದುರ್ಲಭ. ಅಲ್ಲದೆ ಅಂತಹ ಒಂದು ಸಮಾರಂಭದಲ್ಲಿ ಭಾಗವಹಿಸುವುದೂ ಕೂಡ ಒಂದು ಭಾಗ್ಯ ಎಂದು ನಾನೂ ಅವರೊಂದಿಗೆ ಪಯಣ ಬೆಳೆಸಿದೆ, ದೆಹಲಿಗೆ.

ಪ್ರಶಸ್ತಿ ಪಡೆಯಲು ದೂರದೂರಿನಿಂದ ಬರುವ ಶಿಕ್ಷಕರಿಗಾಗಿ 2 ದಿನ ಮುಂಚಿತವಾಗಿಯೇ ಅಶೋಕ ಹೋಟೆಲ್ ಜನಪಥದಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು. ಮಾರ್ಗದರ್ಶನಕ್ಕಾಗಿ ಅವರಿಗೆ ಅಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯವರು ತಾತ್ಕಾಲಿಕ ಕಚೇರಿಯನ್ನೂ ತೆರೆದಿದ್ದರು. ನಾವು ಅಲ್ಲಿ ತಲುಪಿದಾಗ ದೇಶದ ನಾನಾ ಭಾಗದಿಂದ ಬಂದಿದ್ದ ಶಿಕ್ಷಕರು, ಅವರ ಆಪ್ತರಿಂದ ಇಡೀ ಮೊಗಸಾಲೆ ತುಂಬಿಹೋಗಿತ್ತು. ನಮ್ಮನ್ನೂ ಆತ್ಮೀಯವಾಗಿ ಸ್ವಾಗತಿಸಿದ ಆಗಿನ ಮಾಹಿತಿ ಸಂಪನ್ಮೂಲ ಸಚಿವರ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ಹಾಗೂ ತಂಡದವರ ಸೌಜನ್ಯ, ನಮಗೆ ತೋರುವ ಗೌರವಾದರಗಳನ್ನು ನೋಡಿದಾಗ ಇಂತಹ ಆತಿಥ್ಯ ನಮ್ಮ ಕರ್ನಾಟಕದ ಅಧಿಕಾರಿಗಳಲ್ಲಿ ಲಭ್ಯವಿರಲಾರದು ಎಂದೆನಿಸಿತು. ಸಹಜವಾಗಿಯೇ ಕೇಂದ್ರ ಸರಕಾರದ ಘನ ಇಲಾಖೆಯ ಕುರಿತು ಗೌರವ ಮೂಡಿತು.

ತಾ. 5-9-2003 ರಂದು ಶಿಕ್ಷಕ ದಿನಾಚರಣೆಯ ಕಾರ್ಯಕ್ರಮಗಳು ಬೆಳಿಗ್ಗೆ 10.30ಕ್ಕೆ ಭವ್ಯ ವಿಜ್ಞಾನ ಭವನದಲ್ಲಿ ಆಯೋಜಿತವಾಗಿದ್ದವು. ನಾವೆಲ್ಲ ಅಂದು ನರಸಿಂಹಣ್ಣನೊಂದಿಗೆ ಅಲ್ಲಿಗೆ ತಲುಪಿ ಭದ್ರತಾ ತಪಾಸಣೆಗಳನ್ನು ದಾಟಿ ಹವಾನಿಯಂತ್ರಿತ ವಿಶಾಲ ಸಭಾಭವನವನ್ನು ಪ್ರವೇಶಿಸಿದೆವು. ರಾಷ್ಟ್ರದ ವಿವಿಧ ಭಾಗಗಳಿಂದ ಬಂದ ಸುಮಾರು 300 ಶಿಕ್ಷಕ ಹಾಗೂ ಸಾವಿರಕ್ಕೂ ಮಿಕ್ಕಿ ಅವರ ಸಂಗಡಿಗರಿಂದ ತುಂಬಿತ್ತು ಆ ಸಭಾಭವನ. ದೇಶದ ಮುಂದಿನ ಸಭ್ಯ ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳ ತಂಡವೇ ಅಲ್ಲಿ ನೆರೆದಂತಿತ್ತು. ಸಭಾಭವನದ ಆಸನದ ವ್ಯವಸ್ಥೆ, ಸುಮಧುರ ಧ್ವನಿವ್ಯವಸ್ಥೆಗಳೆಲ್ಲ ಅಚ್ಚುಕಟ್ಟಾಗಿದ್ದು ದೇಶದ ರಾಜಧಾನಿಯ ಪ್ರತಿಷ್ಠೆಗೆ ತಕ್ಕಂತಿತ್ತು.


ಶಿಕ್ಷಕರ ಸ್ಥಾನಮಾನ ಹಾಗೂ ಪ್ರಾಮುಖ್ಯತೆಯ ಕುರಿತು ಮಾತನಾಡಿದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು "ಉತ್ತಮ ಶಿಕ್ಷಕರೇ ದೇಶದ ಆಸ್ತಿ" ಎಂದು ಶ್ಲೋಕಗಳನ್ನಾಧರಿಸಿ ಮಾಡಿದ ಭಾಷಣ ಅವರ ಪಾಂಡಿತ್ಯವನ್ನು ಸಾರುತ್ತಿತ್ತು. ನಂತರ ಮಾತನಾಡಿ, "ಶಿಕ್ಷಕರು ಸಾಮಾಜಿಕ ಅಭಿವೃದ್ಧಿಯ ಅವಿಭಾಜ್ಯ ಅಂಗ; ಅವರ ಶ್ರೇಷ್ಠತೆ ಅವರಲ್ಲೇ ಉಳಿಯದೇ ಶಿಕ್ಷಣದ ಮೂಲಕ ದೇಶದೆಲ್ಲೆಡೆ ಪ್ರಸಾರವಾಗಬೇಕು" ಎಂದು ಸಾರಿದ ಆಗಿನ ನಮ್ಮ ಹೆಮ್ಮೆಯ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಎಲ್ಲ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಭದ್ರತಾ ಸಿಬ್ಬಂದಿಗಳ ಸೂಚನೆಯ ಹೊರತಾಗಿಯೂ ಎಲ್ಲ ಶಿಕ್ಷಕರಿಗೆ ಹಸ್ತಲಾಘವ ನೀಡಿ, ಆದರದಿಂದ ಮಾತನಾಡಿಸಿದ ಅವರ ಸೌಜನ್ಯ, ಸರಳತೆ ಎಲ್ಲರ ಮನ ಮುಟ್ಟುವಂತಿತ್ತು.

ದೂರದರ್ಶನದ ನಿರೂಪಕಿ ಶ್ರೀಮತಿ ಸರಳಾ ಮಹೇಶ್ವರಿಯವರಿಂದ ಕಾರ್ಯಕ್ರಮ ನಿರೂಪಣೆ ಇಡೀ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತ್ತು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಇದಲ್ಲದೆ ಹಿಂದಿನ ದಿನ ಸಂಜೆ, ಶಿಕ್ಷಕರಿಗೆ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ಸತ್ಕಾರ ಕೂಟವನ್ನು ಏರ್ಪಡಿಸಲಾಗಿತ್ತು. ಪ್ರಧಾನ ಮಂತ್ರಿಗಳ ಮನೆಯ ಆವರಣದಲ್ಲಿ ನಡೆದ ಈ ಕೂಟದಲ್ಲಿ ಕವಿ ವಾಜಪೇಯಿ ಅವರು ತಮ್ಮ ಕವನವೊಂದನ್ನು ವಾಚಿಸಿ ಎಲ್ಲರ ಮನರಂಜಿಸಿದರು.

ಈ ಶ್ರೇಷ್ಠ ಪ್ರಶಸ್ತಿಯ ಹಿಂದೆ ನರಸಿಂಹಣ್ಣನ ಕಠಿಣ ಪರಿಶ್ರಮ, ಅಪಾರ ಸಾಧನೆ, ಕರ್ತವ್ಯಪರತೆ ಇತ್ತು. ಪ್ರಶಸ್ತಿ ಸತ್ಪಾತ್ರರಿಗೆ ದೊರಕಿದೆ ಎನಿಸಿತು. ಇಂತಹ ಸಾಧಕರನ್ನು ಅಣ್ಣನಾಗಿ ಪಡೆದ ನನಗೆ, ನಮ್ಮೂರಿಗೆ ಇದು ಹೆಮ್ಮೆಯ ವಿಷಯ.


ನಮ್ಮ ಈ ದೆಹಲಿ ಭೇಟಿಯ ಸಂದರ್ಭದಲ್ಲಿ ನಾವು ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಉತ್ತರಾಂಚಲ ರಾಜ್ಯದ ಹೃಷಿಕೇಶ ಮತ್ತು ಹರಿದ್ವಾರಗಳಿಗೆ ಭೇಟಿಯಿತ್ತು, ಗಂಗಾನದಿಯಲ್ಲಿ ಮಿಂದು, ರಾಮಜುಲಾ - ಲಕ್ಷ್ಮಣಜುಲಾ ಹಾಗೂ ಮಾನಸಾದೇವಿ ದೇವಸ್ಥಾನಗಳಿಗೆ ಭೇಟಿಯಿತ್ತೆವು. ನಂತರ, ಆಗ್ರಾ ಮತ್ತು ಮಥುರಾಗಳಿಗೆ ಭೇಟಿಯಿತ್ತು, ಆಗ್ರಾದ ತಾಜಮಹಲ್ ಹಾಗೂ ಮಥುರಾದ ಕೃಷ್ಣಜನ್ಮಸ್ಥಾನವನ್ನು ನೋಡಿದೆವು. ಇವುಗಳಲ್ಲದೆ ದೆಹಲಿಯ ಪ್ರೇಕ್ಷಣೀಯ ಸ್ಥಳಗಳಾದ ಕುತುಬ್ ಮಿನಾರ್, ಬಿರ್ಲಾ ಮಂದಿರ, ಕಮಲ ಮಂದಿರ, ಕೆಂಪುಕೋಟೆ, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ, ಸಂಸತ್ ಭವನ, ತ್ರಿಮೂರ್ತಿ ಭವನ, ರಾಜ್ ಘಾಟ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ವೀಕ್ಷಿಸಿದೆವು.


ನಮಗೆ ದೆಹಲಿಯಲ್ಲಿ ಉಳಿದುಕೊಳ್ಳಲು, ಮಹರ್ಷಿ ಅರಬಿಂದೋ ಆಶ್ರಮದ ಅತಿಥಿಗೃಹದಲ್ಲಿ, ಅಲ್ಲಿ ಆಗ ಉದ್ಯೋಗದಲ್ಲಿದ್ದ ಉಡುಪಿಯ ಹೆರ್ಗದ ಶ್ರೀ ವಿವೇಕ್ ತಂತ್ರಿ ವ್ಯವಸ್ಥೆ ಮಾಡಿದ್ದರು. ಷಟ್ಕೋನಾಕೃತಿಯ ನವೀನ ಮಾದರಿಯಲ್ಲಿ ನಿರ್ಮಿತವಾದ ಆಶ್ರಮ ಸಕಲ ಸೌಲಭ್ಯಗಳನ್ನೂ ಹೊಂದಿ ಸುಂದರವಾಗಿದೆ. ಆರ್ಥಿಕವಾಗಿ, ಬೌದ್ಧಿಕವಾಗಿ ಹಿಂದುಳಿದು ಅಶಕ್ತರಾದವರಿಗೆ ಆಶ್ರಯ ನೀಡಿ ಅವರಿಗೆ ಹಲವು ವಿಷಯಗಳಲ್ಲಿ ಪರಿಣತಿ ನೀಡಿ, ವೃತ್ತಿಪರರನ್ನಾಗಿ ಮಾಡುವ ಶ್ಲಾಘನೀಯ ಕೆಲಸವನ್ನು ಇಲ್ಲಿ ಮಾಡಲಾಗುತ್ತಿದೆ. ಇದಲ್ಲದೆ ಯಾಂತ್ರಿಕ ಜೀವನದ ಜಂಜಾಟದಿಂದ ಬಳಲಿ, ಮನಃಶಾಂತಿಗಾಗಿ ಹಾತೊರೆದು ಬರುವವರಿಗೆ ಆಧ್ಯಾತ್ಮಿಕ ಬೋಧನೆಗಳ ಜೊತೆಗೆ ಯೋಗ ಶಿಕ್ಷಣವೂ ಇಲ್ಲಿ ಲಭ್ಯ. ಇಲ್ಲಿನ ಶಾಂತ ಪರಿಸರ, ಬೇವಿನ ಮರಗಳಿಂದ ಸುತ್ತುವರೆದಿರುವ ಆವರಣ ಅದಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಇಲ್ಲಿನ ಸಿಬ್ಬಂದಿಗಳ ವಿನಯವೂ ಪ್ರಶಂಸನೀಯ.


ಹೀಗೆ ನಮ್ಮ ದೆಹಲಿ ಭೇಟಿಯು ನರಸಿಂಹಣ್ಣ ಪ್ರಶಸ್ತಿ ಪಡೆಯುವುದನ್ನು ನೋಡುವ ಭಾಗ್ಯವನ್ನು ಹಾಗೂ ಉತ್ತರ ಭಾರತದ ಪುಣ್ಯಕ್ಷೇತ್ರ ದರ್ಶನ ಭಾಗ್ಯವನ್ನೂ ಒದಗಿಸಿಕೊಟ್ಟಿತ್ತು.

-- ನೆಂಪು ಗಜಾನನ ಭಟ್

Monday, February 25, 2008

Nempu Credit Union

ನೆಂಪು ಕ್ರೆಡಿಟ್ ಯೂನಿಯನ್

ಸಂಬಂಧಗಳ ಬೆಸುಗೆ

ನಾವೊಂದಿಷ್ಟು ಜನ ನೆಂಪಿನ ಹುಡುಗರು 2002ರ ಜನವರಿಯಲ್ಲಿ ಹುಟ್ಟುಹಾಕಿದ "ನೆಂಪು ಕ್ರೆಡಿಟ್ ಯೂನಿಯನ್" ಈಗ 6 ಯಶಸ್ವೀ ವರ್ಷಗಳನ್ನು ಮುಗಿಸಿ ಮುನ್ನುಗ್ಗುತ್ತಿದೆ. ಆರಂಭದಲ್ಲಿ ನಮ್ಮಲ್ಲೇ ಕೆಲವರಿಗೆ ಬರಿಯ ಮಕ್ಕಳಾಟದಂತೆ ಕಂಡರೂ, ಸಂಸ್ಥೆಯ ಪ್ರಗತಿಯನ್ನು ಕಂಡು ಅವರೂ ಸದಸ್ಯರಾಗಿದ್ದಾರೆ. ಈ ಯಶಸ್ಸಿನ ಹಿಂದೆ ನಮ್ಮ ಕೆಲವು ಸದಸ್ಯರ ಅಪಾರ, ಅವಿರತ ಪರಿಶ್ರಮವಿದೆ.

ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿ, ಸಲಹೆ-ಸೂಚನೆ-ಮಾರ್ಗದರ್ಶನ ನೀಡಿ, ಇಂದಿಗೂ ಸಂಸ್ಥೆಯ ಏಳಿಗೆಗೆ ಎಲೆಮರೆಯ ಕಾಯಿಯಂತೆ ದಣಿವಿಲ್ಲದೆ ದುಡಿಯುತ್ತಿರುವ ನೆಂಪು ಕೃಷ್ಣ ಭಟ್ಟರು "ನೆಂಪು ಕ್ರೆಡಿಟ್ ಯೂನಿಯನ್" ಬಗ್ಗೆ ಇಲ್ಲಿ ವಿವರಿಸಿದ್ದಾರೆ.

ಸುಮಾರು ಆರೇಳು ವರ್ಷಗಳ ಹಿಂದೆ ನಮ್ಮ ರಾಘು ನನ್ನ ಹತ್ತಿರ ಒಂದು ವಿಷಯ ಪ್ರಸ್ತಾಪಿಸಿದ. "ನಾವು ನಾಲ್ಕೈದು ಜನ ಅಣ್ಣ-ತಮ್ಮ ಸೇರಿ ಒಂದು ’ಉಳಿತಾಯ ಯೋಜನೆ’ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೇವೆ. ನೀನೂ ಸೇರುವುದಾದರೆ ನಿನ್ನನ್ನು ಅದರ "ಚೇರ್ಮನ್" (ನನ್ನ ಬೋಳು ಮಂಡೆಗೆ ಅನ್ವರ್ಥ!?) ಮಾಡುತ್ತೇವೆ" ಎಂದಾಗ, ಅಧ್ಯಕ್ಷ ಪದವಿಯ ಆಸೆಯೂ ಮೊಳಕೆಯೊಡೆದು ಸರಿ ಎಂದೆ. ಸಮಾನಮನಸ್ಕ ಬಂಧುಗಳು-ಗೆಳೆಯರು ಸೇರಿ ಆ ಯೋಜನೆಗೊಂದು ರೂಪುರೇಷೆ ನೀಡಲು ಮುಂದಾದೆವು. ನಮ್ಮ ಮೊದಲ ಷರತ್ತು ಏನೆಂದರೆ ಈ ಯೋಜನೆ ಯಾವುದೇ ಲಾಭದ ದೃಷ್ಟಿ ಹೊಂದಿರಬಾರದು, ಇಲ್ಲಿ ಉಳಿತಾಯ ಹಾಗೂ ಆಪತ್ಕಾಲಕ್ಕೆ ಅನುಕೂಲವಾಗುವಂತಹ ನಿಯಮಾವಳಿಗಳು ಮಾತ್ರ ಇರಬೇಕು ಎಂಬುದು ಎಲ್ಲರ ಅಭಿಪ್ರಾಯ.

ಆ ದಿನಗಳಲ್ಲಿ ದಿನಕ್ಕೊಂದು ಸ್ವಸಹಾಯ ಗುಂಪು ಉದಯವಾಗುತ್ತಿದ್ದವು. "ಸ್ವಸಹಾಯ ಗುಂಪು" ಬಹಳ ಚಾಲ್ತಿಯಲ್ಲಿದ್ದ ಹೆಸರು. ನಾವೂ ಕೂಡ ಅದನ್ನೇ ಆಶ್ರಯಿಸಿ "ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" (Bhat Brothers Self Help Group) ಎಂದು ನಮ್ಮ ಯೋಜನೆಗೆ ನಾಮಕರಣ ಮಾಡಿದೆವು. ಯಾವುದೇ ಲಾಭದ ದೃಷ್ಟಿಕೋನ ಇಲ್ಲದಿದ್ದರೂ ಮೊದಲ ವರ್ಷವೇ ನಮ್ಮ ಯೋಜನೆಗೆ 16 ಮಂದಿ ನಾಮುಂದು ತಾಮುಂದು ಎಂದು ಸದಸ್ಯರಾದರು! (ಇಷ್ಟೊಂದು ಜನರನ್ನು ನಾವು ಖಂಡಿತಾ ನಿರೀಕ್ಷಿಸಿರಲಿಲ್ಲ).

ಉಳಿತಾಯ ಹಣವನ್ನು ಬ್ಯಾಂಕಿನಲ್ಲಿ ವಿನಿಯೋಗಿಸುವುದು, ಪ್ರತೀ ತಿಂಗಳು ಹಣ ಸಂಗ್ರಹಣೆ ಇತ್ಯಾದಿ ಕೆಲಸಗಳಿಗಾಗಿ ಒಂದು ಕಾರ್ಯಕಾರೀ ಸಮಿತಿಯನ್ನು ಕೂಡ ಮಾಡಿಕೊಂಡೆವು. ಸಂದರ್ಭ ಸಿಕ್ಕಾಗಲೆಲ್ಲ ಈ ಕಾರ್ಯಕಾರೀ ಸಮಿತಿಯವರು ಒಟ್ಟುಕುಳಿತು ಈ ಯೋಜನೆಯ ಅಭಿವೃದ್ಧಿಗೆ ಏನೇನು ಮಾಡಬಹುದು ಎನ್ನುವ ಕುರಿತು ಚರ್ಚಿಸಲಾರಂಭಿಸಿದರು. ಇದರರ್ಥ, ನಮ್ಮ ಬಂಧುಬಾಂಧವರ ಹಿತಾಸಕ್ತಿಗಳನ್ನು ಯಾವ ರೀತಿ ಕಾಪಾಡಬಹುದು, ಅವರ ಸಂಕಷ್ಟಗಳಲ್ಲಿ ಹೇಗೆ ಭಾಗಿಯಾಗಬಹುದು ಎಂಬೆಲ್ಲ ವಿಷಯಗಳು ನಿಧಾನವಾಗಿ ಪ್ರಸ್ತಾವನೆಗೆ ಬಂತು.

"ಭಟ್ ಬ್ರದರ್ಸ್ ಸೆಲ್ಫ್ ಹೆಲ್ಪ್ ಗ್ರೂಪ್" ಹೆಸರು ಸೀಮಿತ ಅರ್ಥವನ್ನು ನೀಡಬಹುದೆಂದು 2004 ರಲ್ಲಿ ನಮ್ಮ ಸಂಸ್ಥೆಗೆ "ನೆಂಪು ಕ್ರೆಡಿಟ್ ಯೂನಿಯನ್" ಎಂದು ಮರುನಾಮಕರಣ ಮಾಡಲಾಯಿತು. ಆರಂಭಿಕ ಎಡರು-ತೊಡರುಗಳನ್ನು ದಾಟಿ, ಪ್ರಗತಿಪಥದಲ್ಲಿ ಆಗಲೇ ದಾಪುಗಾಲು ಹಾಕುತ್ತಿದ್ದ ನೆಂಪು ಕ್ರೆಡಿಟ್ ಯೂನಿಯನ್ ಎಲ್ಲರ ಆಕರ್ಷಣೆಯಾಗಿತ್ತು. ಇಲ್ಲಿ ಪರಸ್ಪರ ವಿಶ್ವಾಸ, ನಂಬಿಕೆಗಳೇ ಆಧಾರಸ್ತಂಭವಾಗಿದೆ. ಸದಸ್ಯರು ಕ್ಲಪ್ತಕಾಲದಲ್ಲಿ ತಮ್ಮ ತಿಂಗಳ ಉಳಿತಾಯ ಹಣವನ್ನು ನೀಡಿ ಸಹಕರಿಸುತ್ತಿದ್ದಾರೆ.

ಸದಸ್ಯತನಕ್ಕಾಗಿ ನಾವು ಯಾರನ್ನೂ ವಿನಂತಿಸಿಕೊಳ್ಳಲಿಲ್ಲ, ಸದಸ್ಯತ್ವ ಅಭಿಯಾನವನ್ನೂ ಕೈಗೊಳ್ಳಲಿಲ್ಲ. ಆದರೂ ನಮ್ಮ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ, ಅಂತೆಯೇ ಠೇವಣಿ ಸಂಗ್ರಹಣೆಯೂ ಏರಿಕೆಯಾಗುತ್ತಿದೆ. ಸ್ವಯಂಪ್ರೇರಿತರಾಗಿ ಬರುತ್ತಿರುವ ನಮ್ಮ ಬಂಧು-ಬಾಂಧವರಿಗೆ ಇಲ್ಲ ಎನ್ನಲಾಗುತ್ತಿಲ್ಲ.

ನಮ್ಮ ಈ ಸಂಸ್ಥೆಯ ಇನ್ನೊಂದು ಯೋಜನೆ ಎಂದರೆ ನಮ್ಮ ಸದಸ್ಯರ ಅಗತ್ಯಗಳನ್ನು ಪೂರೈಸುವುದು. ಯಾವುದೇ ಸದಸ್ಯರಿಗೆ ಹಣದ ಅಡಚಣೆ ಉಂಟಾದರೆ, ಮದುವೆ-ಮುಂಜಿಗಳಿಗೆ, ಮನೆ ಕಟ್ಟಲು, ಉನ್ನತ ವಿದ್ಯಾಭ್ಯಾಸಕ್ಕೆ ಹಾಗೂ ಇತರ ಅಗತ್ಯಗಳಿಗೆ ನಮ್ಮ ಉಳಿತಾಯದ ಹಣವನ್ನು ಸಾಲರೂಪದಲ್ಲಿ ನೀಡುವುದು. ಇದಕ್ಕೆ ನಾವು ವಿಧಿಸುವ ಬಡ್ಡಿ ಅತೀ ಕನಿಷ್ಠ ದರದ್ದಾಗಿದೆ. ಈ ಸಾಲಕ್ಕೆ ವಸ್ತುರೂಪದ "ಆಧಾರ" (security) ಗಳು ಏನೂ ತೆಗೆದುಕೊಳ್ಳುವುದಿಲ್ಲ. ಬದಲಿಗೆ ನಂಬಿಕೆ, ವಿಶ್ವಾಸ ಎಂಬೆರಡು "ಆಧಾರ"ಗಳಷ್ಟೆ ಬೇಕು. ಹಾಗಾಗಿ ಇವತ್ತಿಗೂ ನಮ್ಮ ಸಾಲಮರುಪಾವತಿ ಯಾವುದೇ ವಿತ್ತ ಸಂಸ್ಥೆಗಿಂತ ಚೆನ್ನಾಗಿ ನಡೆಯುತ್ತಿದೆ. ರಾತ್ರಿ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆಯಿಟ್ಟರೆ ಮರುದಿನ ಬೆಳಿಗ್ಗೆ ಆ ಸದಸ್ಯರ ಕೈಯಲ್ಲಿ ಹಣ ಇರಿಸುವಂತಹ ವ್ಯವಸ್ಥೆ ನಮ್ಮದಾಗಿದೆ. ಇಂತಹ ವ್ಯವಸ್ಥೆ ಇರುವಾಗ ಯಾರಿಗೆ ತಾನೇ ನಮ್ಮ ಸಂಸ್ಥೆ ಬಗ್ಗೆ ವಿಶ್ವಾಸ ಬಾರದು ಹೇಳಿ?

"ನೆಂಪು ಕ್ರೆಡಿಟ್ ಯೂನಿಯನ್" ಎಂದರೆ ಹಣಕಾಸಿನ ವ್ಯವಹಾರದ ಒಂದು ಸಂಸ್ಥೆ ಎಂದು ನೀವು ತಿಳಿದಿದ್ದರೆ ಅದು ತಪ್ಪು. ಹಣಕಾಸಿನ ವ್ಯವಹಾರ ಒಂದು ನೆಪವಷ್ಟೆ. ಇದು ನಮ್ಮ ಬಂಧು-ಬಾಂಧವರನ್ನು ಬೆಸೆಯುವ ಕೊಂಡಿ. ಹೂವಿನ ಮೊಗ್ಗುಗಳು ಹೇಗೆ ದಾರಕ್ಕೆ ಪೋಣಿಸಿಕೊಂಡಿರುತ್ತವೆಯೋ ಅಂತೆಯೇ ನೆಂಪು ಕ್ರೆಡಿಟ್ ಯೂನಿಯನ್ ಎಂಬ ’ದಾರ’ಕ್ಕೆ ನಮ್ಮೆಲ್ಲ ಸದಸ್ಯರು ಹೂವಿನೋಪರಿಯಾಗಿ ಬೆಸೆದುಕೊಂಡಿದ್ದಾರೆ. ಹಾಗಾದಾಗಲೇ ಹೂವಿನ ಮಾಲೆ ಪರಿಮಳ ಸೂಸಿ, ಸುಂದರವಾಗಿ ಕಾಣಿಸಿಕೊಳ್ಳುವುದು ಅಲ್ಲವೆ? ಅಂತೆಯೇ ನಮ್ಮೆಲ್ಲರ ಸಂಬಂಧಗಳು ಮಧುರವಾಗಿ ಹೆಣೆದುಕೊಂಡು ಕಂಗೊಳಿಸುತ್ತಿದೆ.

ಈ ಹಿಂದೆ, ವರ್ಷಕ್ಕೊಂದೆರಡು ಸಾರಿ ಮದುವೆ-ಮುಂಜಿಗಳಾದಲ್ಲಿ ಮಾತ್ರ ಒಟ್ಟು ಸೇರುತ್ತಿದ್ದ ನಮ್ಮ ಬಂಧುಗಳು, ಇಂದು ಕ್ರೆಡಿಟ್ ಯೂನಿಯನ್ ಮೀಟಿಂಗ್ ಎಂಬ ನೆಪದಲ್ಲಿ ತಿಂಗಳಿಗೊಮ್ಮೆ ಒಟ್ಟು ಸೇರುತ್ತಾರೆ. ಪರಸ್ಪರರ ಕುರಿತು ಹೆಚ್ಚು ಆಳವಾಗಿ ತಿಳಿದುಕೊಳ್ಳುವ ಅವಕಾಶ ಲಭಿಸುತ್ತಿದೆ. ಹೀಗೆ ಹೆಚ್ಚು ತಿಳಿದಂತೆ ಆತ್ಮೀಯತೆ, ಸಂಬಂಧಗಳೂ ಗಾಢವಾಗುತ್ತವೆ, ಹಾಗೂ ಗಟ್ಟಿಯಾಗುತ್ತವೆ. ಅದಕ್ಕೇ ಹೇಳುತ್ತಿದ್ದೇನೆ "ನೆಂಪು ಕ್ರೆಡಿಟ್ ಯೂನಿಯನ್" ಅರ್ಥಾತ್ "ಸಂಬಂಧಗಳ ಬೆಸುಗೆ" ಅಂತ... ನಮ್ಮ ಯಾವುದೇ ಬಂಧುಗಳ ಮನೆಯಲ್ಲಿ ಶುಭ ಅಥವಾ ಅಶುಭ ಘಟನೆಗಳು ನಡೆದಲ್ಲಿ ನಾವೆಲ್ಲ ಸ್ವಯಂಪ್ರೇರಿತರಾಗಿ ನಮ್ಮೆಲ್ಲ "ತಾಪತ್ರಯ"ಗಳನ್ನು ಅಲ್ಲೇ ಬಿಟ್ಟು ಧಾವಿಸುವಷ್ಟು ನಮ್ಮ ಸಂಬಂಧಗಳು ಬೆಸೆದುಕೊಂಡಿವೆ. ಇದೇ ಅಲ್ಲವೇ "ಸಂಘ ಜೀವನ"!

ಆರು ವರ್ಷಗಳ ಹಿಂದೆ ನಮ್ಮ ಪೂಜ್ಯರಾದ, ಸಂಸ್ಕೃತ-ಕನ್ನಡ ಪಂಡಿತರೂ ಆದ ನೆಂಪು ಶಿವರಾಮ ಭಟ್ಟರ ದಿವ್ಯಹಸ್ತದಿಂದ ಚಾಲನೆಗೊಂಡ "ನೆಂಪು ಕ್ರೆಡಿಟ್ ಯೂನಿಯನ್" ಯಾವುದೇ ಅಡೆತಡೆ ಇಲ್ಲದೆ ಪ್ರಗತಿಪಥದಲ್ಲಿ ಮುನ್ನುಗ್ಗುತ್ತಿದೆ. ಅಂದು "ಸಂಹತಿಃ ಕಾರ್ಯಸಾಧಿಕಾ" ಎಂಬ ಧ್ಯೇಯವಾಕ್ಯವನ್ನು ನೀಡಿ, ಮನಸಾರೆ ನಮ್ಮನ್ನು ಹರಸಿದ ಪೂಜ್ಯರು ಈಗಿಲ್ಲವಾದರೂ ಅವರ ಕಾಣದ ಕೈ ನಮ್ಮೆಲ್ಲರನ್ನು ಮುನ್ನಡೆಸುತ್ತಿದೆ.

ವಿಸ್ತಾರವಾಗಿ ಬೆಳೆದಿರುವ ನಮ್ಮ ಸಂಸ್ಥೆ ಹಲವರಿಗೆ ನೆರಳು ನೀಡಿದೆ. ಇಂತಹ ಸಂಸ್ಥೆಯನ್ನು ಮುನ್ನಡೆಸುವಲ್ಲಿ ನಮ್ಮ ಸದಸ್ಯರ ಸಹಕಾರ ಮರೆಯುವಂತಿಲ್ಲ. ಎಲೆಮರೆಯ ಕಾಯಿಗಳಂತೆ ಕೆಲವು ಸದಸ್ಯರು ಈ ಸಂಸ್ಥೆ ಹಳಿಬಿಟ್ಟು ಕದಲದಂತೆ ನೋಡಿಕೊಳ್ಳುತ್ತಿದ್ದಾರೆ. ನಮ್ಮ ಸಂಸ್ಥೆ ಯಾವುದೇ ಕಚೇರಿ ಹೊಂದಿಲ್ಲ, ಕೆಲಸ ಕಾರ್ಯಗಳಿಗಾಗಿ ಯಾರನ್ನೂ ನೇಮಿಸಿಕೊಂಡಿಲ್ಲ. ಬದಲಿಗೆ ತಮ್ಮ ವೃತ್ತಿ ಜೀವನದ ಒತ್ತಡಗಳ ಮಧ್ಯೆಯೇ ಅಷ್ಟೇ ಪ್ರಾಮುಖ್ಯತೆ ನೀಡಿ ನಮ್ಮ ಸಂಸ್ಥೆಗಾಗಿಯೂ ದುಡಿಯುವ ಛಲ ಹೊಂದಿದ್ದಾರೆ ನಮ್ಮ ಕೆಲ ಸದಸ್ಯರು. ಇವರಿಗೆ ಪ್ರತಿಫಲ ಏನೂ ನೀಡುವುದಿಲ್ಲ, "ಇದು ನಮ್ಮ ಸಂಸ್ಥೆ" ಎಂಬ ಹೆಗ್ಗಳಿಕೆಯಿಂದ ದುಡಿಯುತ್ತಾರೆ!

ವರ್ಷಕ್ಕೆ ಸುಮಾರು ಹತ್ತು ಲಕ್ಷದಷ್ಟು ವ್ಯವಹಾರ ನಡೆಸುವ ನಮ್ಮ ಸಂಸ್ಥೆಯ ವಾರ್ಷಿಕ ಖರ್ಚು ಹೆಚ್ಚೆಂದರೆ ರೂ. 400/- (ನಂಬಿದರೆ ನಂಬಿ, ಬಿಟ್ಟರೆ ಬಿಡಿ!). ಖಂಡಿತಾ ಇದಕ್ಕಿಂತ ಸ್ವಲ್ಪವಾದರೂ ಹೆಚ್ಚಿಗೆ ಖರ್ಚಾಗಿರುತ್ತದೆ. ಆದರೆ ಅದನ್ನೆಲ್ಲ ನಮ್ಮ ಸದಸ್ಯರೇ ಸ್ವಯಂ ಪ್ರೇರಿತರಾಗಿ ಭರಿಸುತ್ತಿದ್ದಾರೆ (ಇಂತಹ ವ್ಯವಸ್ಥೆ ಎಲ್ಲಾದರೂ ಉಂಟೆ?). ನಮ್ಮ ಸಂಸ್ಥೆಯ ವಾರ್ಷಿಕ ಲೆಕ್ಕಪತ್ರವನ್ನು ಕೂಡ "ಆಡಿಟ್" (audit) ಮಾಡಿಯೇ ಪ್ರಕಟಿಸುತ್ತಿದ್ದೇವೆ. ನಮ್ಮ ಹಣಕಾಸು ವ್ಯವಹಾರ ಪಾರದರ್ಶಕವಾಗಿರಬೇಕೆಂಬುದು ನಮ್ಮ ಉದ್ದೇಶ.

ಇಂದು ನಮ್ಮ ಸಂಸ್ಥೆ 62 ಸದಸ್ಯಬಲವನ್ನು ಹೊಂದಿದ್ದು, ವಾರ್ಷಿಕ ರೂ. 10 ಲಕ್ಷ ವಹಿವಾಟು ನಡೆಸುವ ಅಂದಾಜಿದೆ. ಕ್ರಮೇಣ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಯೋಚಿಸುತ್ತಿದ್ದೇವೆ. ಕಳೆದ ವರ್ಷ ನೆಂಪಿನ ಶ್ರೀ ಗಣಪತಿ ದೇವಳದ ಮಾರ್ಗದಲ್ಲಿ ಎರಡು ಮಾರ್ಗಸೂಚಿ ಫಲಕಗಳನ್ನು ಕೊಡುಗೆಯಾಗಿ ನೀಡಿದೆ ಈ ಸಂಸ್ಥೆ. ಕೆಲವು ಸದಸ್ಯರು ಸೇರಿ ಪ್ರತಿವರ್ಷ ಸ್ಥಳೀಯ ಪ್ರಾಥಮಿಕ ಶಾಲೆಯಲ್ಲಿ ಉತ್ತಮ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಾ ಪ್ರೋತ್ಸಾಹ ನೀಡುತ್ತಿದ್ದೇವೆ.

ಹೀಗೆ ನಮ್ಮ ಸದಸ್ಯರೇನಕರು ಉತ್ತಮ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಉತ್ತಮ ಹಿನ್ನೆಲೆ, ಚಾರಿತ್ರ್ಯ ಹೊಂದಿದ ಸದಸ್ಯರಿರುವುದರಿಂದಲೇ "ನೆಂಪು ಕ್ರೆಡಿಟ್ ಯೂನಿಯನ್" ಭರದಿಂದ ಯಶಸ್ಸು ಕಾಣುತ್ತಿದೆ. ಮುಂದೊಮ್ಮೆ ಬಹುದೊಡ್ಡ ಸಾಧನೆ ಮಾಡಲಿರುವ ಈ ಸಂಸ್ಥೆ ಶತಮಾನಗಳ ಕಾಲ ನಡೆಯಲಿ ಎಂಬುದೇ ನನ್ನ ಆಶಯ.

-- ನೆಂಪು ಕೃಷ್ಣ ಭಟ್

Friday, February 15, 2008

Sanchaara:: Kodachadri

ಕೊಡಚಾದ್ರಿಗೆ ಕಾಲ್ನಡಿಗೆ...

2003ರ ಡಿಸೆಂಬರ್ ತಿಂಗಳಲ್ಲಿ ನಾವೆಲ್ಲ ಒಟ್ಟಾಗಿ ನೆಂಪಿಗೆ ಸಮೀಪದಲ್ಲೇ ಇರುವ "ಕೊಡಚಾದ್ರಿ"ಗೆ ಚಾರಣ ಹೋಗಿತ್ತು. ನಾವೇನು ಟ್ರೆಕ್ಕಿಂಗ್ ಮಾಡಬೇಕು ಎಂಬ ಯೋಜನೆ ಹಾಕಿ ಹೊರಟಿರಲಿಲ್ಲ. ಟ್ರ್ಯಾಕ್ಸ್ ವಾಹನದಲ್ಲಿ ಕೊಡಚಾದ್ರಿಯ ಭಟ್ಟರ ಮನೆಯವರೆಗೆ ತಲುಪಿ, ಅಲ್ಲಿಂದ ನಡೆದುಕೊಂಡು ಮುಂದುವರಿಯುವ ಯೋಜನೆ ಹಾಕಿತ್ತು. ಆದರೆ ಮಳೆಯಿಂದ ಜರ್ಝರಿತಗೊಂಡಿದ್ದ ಕೊಡಚಾದ್ರಿಯ ಧೂಳು ತುಂಬಿದ ಕಲ್ಲು-ಮಣ್ಣಿನ ದಾರಿಯನ್ನು ಏರಲು ಆರಂಭದಲ್ಲೇ ವಿಫಲಗೊಂಡ ನಮ್ಮ ವಾಹನದ ದೆಸೆಯಿಂದ ಪ್ರವಾಸ ಚಾರಣವಾಗಿ ಮಾರ್ಪಟ್ಟಿತ್ತು

ನೆಂಪು ಕೃಷ್ಣ ಭಟ್ಟರು ತಿಳಿಹಾಸ್ಯ ಮಿಶ್ರಿತ ಶೈಲಿಯಲ್ಲಿ ನಮ್ಮ "ನೆನಪು" ಪತ್ರಿಕೆಗೆ ವರ್ಷಗಳ ಹಿಂದೆ ಬರೆದಿದ್ದ ಚಾರಣ ಪ್ರಸಂಗ ಈ ಸಂಚಾರ ಮಾಲಿಕೆಯಲ್ಲಿದೆ. ಬನ್ನಿ "ಕುಟಚಾದ್ರಿಗೆ.....!"


ಹಾಗೆಂದು ನಾವೇನೂ ನಡೆದೇ ಹೋದವರಲ್ಲ. ಹೆಸರಿಗೆ ವಾಹನವೊಂದಿತ್ತು. ಅದು ಮೇಲೆ ಹತ್ತಲು ಒಲ್ಲೆ ಅಂದದ್ದಕ್ಕೆ ನಾವು ಕಾಲಿಗೆ ಶರಣು ಹೇಳಿದೆವು. ಇಷ್ಟೊಂದು ಮಜಾ ಇರ್ತದೆ ಅಂತ ಮೊದಲೇ ತಿಳಿದಿದ್ದರೆ ಬಹುಶಃ ಇನ್ನೂ ಹಿಂದೆಯೇ ನಮ್ಮ ವಾಹನ ನಿಲ್ಲಿಸಬಹುದಿತ್ತು ಅಂತ ಅಂದ್ಕೊಂಡಿದ್ದು ಖಂಡಿತಾ ಸುಳ್ಳಲ್ಲ! ಇದು ನಡೆದದ್ದು 2003ರ ಕ್ರಿಸಮಸ್ ದಿನದಂದು.

ಅಂದು ಬೆಳಗಿನ ಜಾವದಲ್ಲೇ ಎದ್ದ ನಮ್ಮ ’ದಂಡು’ ಸ್ನಾನಾಹ್ನಿಕ ಮುಗಿಸಿ, ರಜಾಕನ ವಾಹನದಲ್ಲಿ ಸರ್ವಜ್ಞನ ಪೀಠ ನೋಡಲು ಕೊಡಚಾದ್ರಿಯತ್ತ ಹೊರಟಿತು. ಮೊದಲು ನಮ್ಮ ಭೇಟಿ ಕೊಡಚಾದ್ರಿ ಕಾಲ ಬುಡದಲ್ಲಿರುವ ಕೊಲ್ಲೂರಿಗೆ, ಅಲ್ಲೇ ಇದ್ದರು ನಮ್ಮ ಬಳಗದ ಪ್ರೆಸಿಡೆಂಟ್ರು......! ಐತಾಳರ ಮನೆಯಲ್ಲಿ ಬಿಸಿಬಿಸಿ ಚಪಾತಿ, ಮೊಸರನ್ನ ನಮ್ಮನ್ನೇ ಕಾದಿತ್ತು. ಅದನ್ನು ಹಾಗೂ ಅಧ್ಯಕ್ಷರನ್ನು ವಾಹನಕ್ಕೆ ಹಾಕಿಕೊಂಡು ಕೊಲ್ಲೂರು ಬಿಟ್ಟಾಗ ಗಂಟೆಯಾಗಿತ್ತು ಎಂಟು!

ಇನ್ನೇನು ನಿಟ್ಟೂರು ಬಂತು ಎನ್ನುವಾಗ ಕೆಲವರಿಗೆ ವಾಂತಿಯಾಗಬೇಕೆ! ಖಾಲಿ ಹೊಟ್ಟೆ ಪ್ರಭಾವ ಎಂದರು ನಮ್ಮ ಕೆಲವು ಪಂಡಿತರು! ಇರಬಹುದೇನೋ ಅಂದ್ರು ಉಳಿದವರು. ಒಟ್ಟಾರೆ ಈಗ ತಿಂಡಿ ಬೇಕು ಎಂಬ ಸೂಚನೆ ಎಲ್ಲರದು. ಯಾರಿಗೆ ಬೇಕಾದ್ರೂ ಇಲ್ಲ ಎನ್ನಬಹುದು, ಆದರೆ ಹೊಟ್ಟೆಗೆ ಮಾತ್ರ ಇಲ್ಲ ಎನ್ನಲು ಸಾಧ್ಯವಿಲ್ಲ ಅಲ್ಲವೆ? ಹಾಗೆಯೇ ನಿಟ್ಟೂರಿನ ಹೋಟೆಲೊಂದಕ್ಕೆ ನುಗ್ಗಿದೆವು. ಆ ಹೋಟೆಲಿನಲ್ಲಾದರೋ ಇದ್ದಿದ್ದೇ ಮೂರು ಮತ್ತೊಂದು ತಿಂಡಿ! ಪಾಲಿಗೆ ಬಂದದ್ದು ಪಂಚಾಮೃತ ಅಂತ ಗಬ ಗಬ ತಿಂದಾಗ ಹೋಟೆಲಿನ ಇಡ್ಲಿ, ಬನ್ಸ್ ಖಾಲಿಯಾಗಿದ್ದು ಮಾತ್ರ ನಿಜ ಎಂಬುದು ಎಲ್ಲರ ಅಂಬೋಣ. "ತಿಂದದ್ದು ಲೆಕ್ಕ ಇಡಬಾರದು" ಎಂಬ ಮಾತಿದ್ದರೂ ಕೂಡ ಆ ದಿನ ತಿಂದದ್ದನ್ನು ನಾವೇ ಲೆಕ್ಕಹಾಕಿ ಹಣಕೊಡಬೇಕಾಗಿ ಬಂದದ್ದು ಮಾತ್ರ ವಿಪರ್ಯಾಸ ಅಲ್ವೆ?

ನೋಡಿ, ಅಲ್ಲಿಯೇ ಮುಂದೆ ಇತ್ತು ಫಾರೆಸ್ಟ್ ಗೇಟು. ಇಲ್ಲೊಬ್ಬ ಸರಕಾರಿ ನೌಕರ ಕೂಡ ಇದ್ದ. ನಿಮ್ಮ ವಾಹನ ಮೇಲೆ ಹತ್ತೋದಿಲ್ಲ ಎಂದವನು "ಕೈ ಬೆಚ್ಚ"ಗಾದೊಡನೆ "ಹೋಗಿ ಹೋಗಿ" ಅಂದಿದ್ದು ನಮ್ಮ ಸರಕಾರೀ ಇಲಾಖೆಗಳ "ಕರ್ತವ್ಯ ಪರತೆ"ಗೆ ಸಾಕ್ಷಿಯಾಗಿತ್ತು. ಆದರೆ ನಮಗೆ ಬೇಕಾಗಿದ್ದೂ ಅದೇ. ಇಲ್ದೇ ಹೋಗಿದ್ರೆ ಅಲ್ಲೇ ತಿರುಗಿ ವಾಪಾಸು ಬರಬೇಕಿತ್ತು, ಮನೆಗೆ!


ಅಂಕು ಡೊಂಕು ರಸ್ತೆಯಲ್ಲಿ ಧೂಳು ರಾಶಿ ಮಧ್ಯದಲ್ಲಿ ಡಿಸ್ಕೋ ನಾಟ್ಯ ಮಾಡುತ್ತಾ ವಾಹನ ಸಾಗಿದಾಗ ಕೆಲವರ ಕೈ ಎದೆ ಮೇಲಿತ್ತು. ಹೀಗೆಯೇ ಪಯಣ ಸಾಗಿತ್ತು ಬಹಳ ದೂರ. ಹಲವಾರು ಅಪಾಯಕಾರೀ ತಿರುವುಗಳನ್ನು ದಾಟುವಾಗ ಮೈ ಜುಂ ಎಂದಿದ್ದು ನಿಜ ಅಂತ ಎಲ್ಲರೂ ಅನ್ನುತ್ತಿದ್ದರು. ಇದಕ್ಕಿಂತ ಕಾಲ್ನಡಿಗೆಯೇ ಒಳ್ಳೆದಿತ್ತೇನೋ ಅಂದ್ರು ಒಬ್ಬರು. ಅದಕ್ಕೆ ಕೂಡಲೇ ಎಲ್ಲರ ಒಪ್ಪಿಗೆಯೂ ಸಿಕ್ಕಿತು! ವಾಹನವನ್ನು ಅಲ್ಲೇ ರಸ್ತೆ(!?) ಬದಿಯಲ್ಲಿ ನಿಲ್ಲಿಸಿ ಎಲ್ಲರೂ ಕಾಲ್ನಡಿಗೆ ಆರಂಭಿಸಿದೆವು ಲಗ್ಗೇಜು (ಚಪಾತಿ, ಮೊಸರನ್ನ) ಹೊತ್ತು. ನಮ್ಮ ತಂಡದಲ್ಲಿ ಮೂವರು ಮಹಿಳಾಮಣಿಗಳು ಇದ್ದರೂ ಕೂಡ ನಡೆಯಲು ಹಿಂದೇಟು ಹಾಕಲಿಲ್ಲ. ಇನ್ನೇನು ಹತ್ತು ಹೆಜ್ಜೆ ನಡೆದಿಲ್ಲ, ಆಗಲೇ ಒಬ್ಬರು ಅಂದ್ರು "ಬಾಳೆಹಣ್ಣು ಕೊಡ್ರೋ, ಕಿತ್ತಳೆಹಣ್ಣು ಕೊಡ್ರೋ" ಅಂತ! "ಹೌದಪ್ಪಾ, ಲಗ್ಗೇಜಾದ್ರೂ ಕಡಿಮೆಯಾಗ್ತದೆ, ತಿಂದೇಬಿಡೋಣ" ಅಂದ್ರು ಇನ್ನುಳಿದವರು. ಆದ್ರೆ ಲಗ್ಗೇಜು ಎಲ್ಲಿ ಹೋಯ್ತು? ಚೀಲದಿಂದ ಹೊಟ್ಟೆಗೆ! ಚೀಲದ ಭಾರ ಹೋಗಿ ಹೊಟ್ಟೆ ಭಾರ ಆಯ್ತು ಅಷ್ಟೆ!

ಆಚೀಚೆ ಗುಡ್ಡ, ಕಾಡು, ತೊರೆಗಳ ಸೌಂದರ್ಯ ಸವಿಯುತ್ತಾ, ತಿಂಡಿ ತೀರ್ಥ ಹೀರುತ್ತಾ ಸರ್ವಜ್ಞ ಪೀಠ ತಲುಪಿದಾಗ ಗಂಟೆ ಹೊಡೆದಿತ್ತು ಹನ್ನೆರಡು. ಆಶ್ಚರ್ಯ ಅಂದ್ರೆ ಇಲ್ಲಿಯೂ ಮೊಬೈಲ್ ಮಾತನಾಡಿದ್ದು. ಆದ್ರೆ ನಮ್ಮ ಗುರಿ ಇದ್ದದ್ದು "ಚಿತ್ರಮೂಲ". ಸರ್ವಜ್ಞ ಪೀಠದಿಂದ ನೆಟ್ಟಗೆ ಕೆಳಗುರುಳಿದರೆ ಸಿಗುತ್ತದೆ ಚಿತ್ರಮೂಲ. ಹಾಗೆಂದು ಉರುಳುವ ಹಾಗಿಲ್ಲ! ಆ ಕಡೆ ನೋಡ್ತಾ ಇದ್ರೆ ಈ ಕಡೆ ಕಾಲು ಜಾರುತ್ತೆ. ಆಧಾರಕ್ಕೆ ಬಳ್ಳಿ ಹಿಡಿದಿರೋ, ಅದರಲ್ಲೆಲ್ಲ ಮುಳ್ಳುಗಳೇ ಇದ್ದವು. ಇಲ್ಲಿ ನಡೆದಿದ್ದೇ ಕಮ್ಮಿ, ಜಾರಿದ್ದೇ ಜಾಸ್ತಿ. ಜಾರುತ್ತ, ಹಾರುತ್ತಾ, ಸ್ವಲ್ಪ ಸ್ವಲ್ಪ ನಡೆಯುತ್ತಾ ಕೆಳಕೆಳಗೆ ಸರಿಯುತ್ತ ಕೊನೆಗೆ ತಲುಪಿದ್ದೇ ಚಿತ್ರಮೂಲ.


ಇಲ್ಲಿ ನಿಂತು ಸುತ್ತಮುತ್ತ ನೋಡಿದರೆ ದಿಗಿಲು ಹುಟ್ಟುತ್ತದೆ. ಕೆಳಗೆ ನೋಡಿದರೆ ತಲೆ ತಿರುಗುತ್ತದೆ. ಆದರೆ ಇಲ್ಲಿಯ ನೀರು ಮಾತ್ರ ಪ್ರಕೃತಿ ನಿರ್ಮಿತ ರೆಫ್ರಿಜರೇಟರಿನಲ್ಲಿಟ್ಟಂತಿತ್ತು. ಆಗಲೇ ಹೊಟ್ಟೆ ಚುರುಗುಟ್ಟುತ್ತಿತ್ತು. ಮೊಸರನ್ನದ ಪರಿಮಳವೂ ಎಚ್ಚರಿಸುತ್ತಿತ್ತು. ತಡವೇಕೆ ಇನ್ನು ಎಂದು ಸಾಲು ಹಿಡಿದು ಕುಳಿತೇ ಬಿಟ್ಟರು ನಮ್ಮ ತಂಡದ ಸದಸ್ಯರು. ನಾಲ್ಕು ದಿನಕ್ಕಾಗುವಷ್ಟು ತಿಂದರೋ ಏನೋ, ಯಾರಿಗೂ ಗೊತ್ತೇ ಆಗಲಿಲ್ಲ. ರುಚಿರುಚಿಯಾದ ಮೊಸರನ್ನ, ಚಪಾತಿ ಕೂರ್ಮ ವ್ಯವಸ್ಥೆಗೊಳಿಸಿದ ಕೊಲ್ಲೂರು ಶ್ರೀನಿವಾಸ ಭಟ್ಟರಿಗೂ, ಐತಾಳರಿಗೂ ಮನಸಾರೆ ವಂದಿಸಿದೆವು. ತಣ್ಣಗಿನ ನೀರಲ್ಲಿ ಲಿಂಬೆ ಶರಬತ್ತು ಮಾಡಿ ಕುಡಿದಾಗ ಅಮೃತಪಾನ ಸವಿದಂತಾಯ್ತು.

ಈಗ ಶುರುವಾಯ್ತು ನೋಡಿ ಗುಡ್ಡ ಹತ್ತುವ ಚಿಂತೆ! ಒಂದು ಕಡೆ ಹೊಟ್ಟೆ ಭಾರ, ಇನ್ನೊಂದು ಕಡೆ ಸುಸ್ತಾದ ಅನುಭವ. ಆದ್ರೆ ವಾಪಾಸ್ ಹೋಗ್ಲೇ ಬೇಕಲ್ಲ. ಹೊರಟೇ ಬಿಟ್ಟೆವು. ಅಂತೂ ವಾಪಾಸು ಸರ್ವಜ್ಞ ಪೀಠ ತಲುಪಿದಾಗ ಎಲ್ಲರಿಗೂ ಪುನರ್ಜನ್ಮ ಪಡೆದಂತಾಗಿತ್ತು. ಸೂರ್ಯನಿಗೂ ಸುಸ್ತಾಗಿದೆ... ಬಿಸಿಲ ಝಳ ತಗ್ಗಿದೆ... ತಣ್ಣನೆ ಗಾಳಿ ಹೊಂಚು ಹಾಕಿದೆ... ನಾವೆಲ್ಲ ಸರ್ವಜ್ಞ ಪೀಠದಲ್ಲಿ ಒಂಧ್ಹತ್ತು ನಿಮಿಷ ವಿಶ್ರಾಂತಿ ಬಯಸಿದೆವು. ವಿರಳ ಮೋಡಗಳ ಸಂಧಿಯಿಂದ ಸೂರ್ಯ ಕಿರಣ ಭೂಮಿಗೆ ಬರುವ ದೃಶ್ಯ ಮನೋಹರವಾಗಿತ್ತು. ನೆರಳು ಬೆಳಕಿನಾಟ ಮನಮೋಹಕವಾಗಿತ್ತು. ಕೆಲೆವೆಡೆ ಹಸಿರು, ಉಳಿದೆಡೆ ಬೋಳು ಗುಡ್ಡಗಳು ಭತ್ತದ ರಾಶಿಯಂತೆ ಕಂಗೊಳಿಸುತ್ತಿದ್ದವು. ಸಾಟಿಯುಂಟೇ ಪ್ರಕೃತಿ ಸೌಂದರ್ಯಕ್ಕೆ? ಮನಸಾರೇ ಸವಿದೆವು.

ಇಳಿಯುತ್ತಿಳಿಯುತ್ತಾ ತಲುಪಿದ್ದು "ಅಗಸ್ತ್ಯ ತೀರ್ಥ"ಕ್ಕೆ. ಅಂಜುತ್ತಂಜುತ್ತಲೇ ತಲೆಕೊಟ್ಟಾಗ ಮೈ ಜುಂ ಎಂದಿತು. ಅಷ್ಟೊಂದು ತಣ್ಣಗಿತ್ತು ಆ ನೀರು! ಒಬ್ಬೊಬ್ಬರಂತೆ ಎಲ್ಲರೂ ನೀರಲ್ಲಿ ಹೊರಳಾಡಿ ಎದ್ದಾಗ ನಡೆದ ಸುಸ್ತು ಕ್ಷಣಾರ್ಧದಲ್ಲಿ ಮಾಯವಾಗಿತ್ತು. ಹೊಸ ಹುರುಪಿನೊಂದಿಗೆ ಹೆಜ್ಜೆ ಹಾಕುತ್ತಾ ನಡೆದೆವು ನಮ್ಮ ವಾಹನವಿದ್ದಲ್ಲಿಗೆ (ಸುಮಾರು 4-5 ಕಿ.ಮೀ).

ಕೊಲ್ಲೂರಲ್ಲಿ ಐಸ್ ಕ್ರೀಂ ತಿಂದು ಪ್ರವಾಸಕ್ಕೆ ಮಂಗಳಹಾಡಿದಾಗ ರಾತ್ರಿ ಗಂಟೆ ಏಳಾಗಿತ್ತು. ಇಡೀ ಹನ್ನೆರಡು ಗಂಟೆ ಪ್ರವಾಸದಲ್ಲಿ ನಾವು ನೋಡಿದ್ದಾದ್ರೂ ಏನು? ಗುಡ್ಡ ಹತ್ತಿ-ಇಳಿದು ಸಾಧಿಸಿದ್ದಾದ್ರೂ ಏನು? ಸರ್ವಜ್ಞ ಪೀಠ, ಚಿತ್ರಮೂಲದಲ್ಲಿ ನೋಡುವಂಥಾದ್ದೇನಿದೆ? ಅಂತೆಲ್ಲ ಕೇಳಿದ್ರೆ ಖಂಡಿತಾ ಉತ್ತರ ನಮ್ಮ ಬಳಿ ಇಲ್ಲ. ಗಾಡಿ ಹಳೇದಾದಾಗ ’ಸರ್ವಿಸ್’ ಮಾಡಬೇಕು. ಹಾಗೇ ಜಡ ಮನಸ್ಸು ಉಲ್ಲಸಿತವಾಗಲು ಇಂತಹ ಪ್ರಕೃತಿ ಸೌಂದರ್ಯದ ಸವಿಯುಣ್ಣಬೇಕಾಗುತ್ತದೆ. ನಮ್ಮ ಯಾಂತ್ರಿಕ ಜೀವನದಲ್ಲಿನ ಬೇಸರ ನೀಗಿಸಲು, ಜೀವನೋತ್ಸಾಹ ಮೂಡಿಸಲು ಇಂಥದ್ದೆಲ್ಲ ಅಗತ್ಯ ಬೇಕಾಗುತ್ತದೆ.

-- ನೆಂಪು ಕೃಷ್ಣ ಭಟ್

Monday, February 11, 2008

Nenapina Buttiyinda:: Halasina happala

ಹಪ್ಪಳಪ್ಪಳಪ್ಪಳೋ... ...

ನಾನು ಚಿಕ್ಕವನಿದ್ದಾಗ ಅಪ್ಪಯ್ಯ ನನ್ನನ್ನುದ್ದೇಶಿಸಿ ತಾವೇ ರಚಿಸಿದ ಶಿಶುಗೀತೆಯನ್ನ ಯಾವತ್ತೂ ಹೇಳುತ್ತಿದ್ದರು (ತಿಂಡಿಪೋತನಾಗಿದ್ದ ನಾನು ಹಪ್ಪಳದ ಹಿಟ್ಟು, ಹಸಿ ಹಪ್ಪಳ ಕದ್ದು ತಿನ್ನುತ್ತಿದ್ದುದರಿಂದ ಇರಬೇಕು). ಕುಂದಾಪುರ ಕನ್ನಡದ ಸೊಗಡನ್ನು ಹೊಂದಿರುವ, ಅಲ್ಲಿನ ವಿಶೇಷವಾದ ಹಲಸಿನ ಕಾಯಿ ಹಪ್ಪಳಕ್ಕೆ ಸಂಬಂಧಿಸಿದ ಈ ಪದ್ಯ ಈಗಲೂ ನೆನಪಾಗಿ ಮುದ ನೀಡುತ್ತಿರುತ್ತದೆ. ಹಪ್ಪಳದ ರುಚಿ ಹೊತ್ತಿರುವ ಪದ್ಯದ ರುಚಿಯನ್ನ ನೀವೂ ಆಸ್ವಾದಿಸಿ!

ಹಪ್ಪಳಪ್ಪಳಪ್ಪಳೋ

ಹಲ್ಸಿನ್ ಕಾಯ್ ಹಪ್ಪಳೋ

ತಿಂದದ್ಯಾಕೆ ಹಪ್ಪಳೋ

ಪೆಟ್ ಕೊಡ್ತೀನ್ ತಾಳೋ...!

ಪ್ರಾಸಬದ್ಧವಾಗಿರುವ ಈ ಪದ್ಯ ವಿಶೇಷವಾದ ಅರ್ಥವನ್ನು ಹೊಂದಿರದಿದ್ದರೂ ಚಿಕ್ಕ ಮಕ್ಕಳ ತೊದಲ್ನುಡಿಯಲ್ಲಿ ಹೊರಬಂದಾಗ ಪದ್ಯದ ಎಫೆಕ್ಟೇ ಬೇರೆ! ಅಪ್ಪಯ್ಯ ಮಕ್ಕಳ ತೊದಲ್ನುಡಿಯ ಅನುಕರಣೆಯಲ್ಲಿ ಹೇಳಿಕೊಡುತ್ತಿದ್ದ ’ಹಪ್ಪಳಪ್ಪಳಪ್ಪಳೋ...’ ಈಗಲೂ ಕಿವಿಯಲ್ಲಿ ಗುನುಗುನಿಸುತ್ತಿರುತ್ತದೆ! ಫೆಬ್ರವರಿ - ಮಾರ್ಚ್ ತಿಂಗಳ ಅಂತ್ಯಕ್ಕೆ ನೆಂಪಿನಲ್ಲಿ ಆರಂಭವಾಗುತ್ತಿದ್ದ ಸೂರ್ಯ ಬಕ್ಕೆ, ಚಂದ್ರ ಬಕ್ಕೆ ಹಲಸಿನಕಾಯಿ ಹಪ್ಪಳ ತಯಾರಿಕೆಯ ಸಂಭ್ರಮದ ನೆನಪು ಕಾಡಲಾರಂಭಿಸುತ್ತದೆ!