ನಾನು ಚಿಕ್ಕವನಿದ್ದಾಗ ಅಪ್ಪಯ್ಯನೊಂದಿಗೆ ನೆಂಪಿನ ಹತ್ತಿರದ ವಂಡ್ಸೆ ಸರಕಾರಿ ಎಲಿಮೆಂಟರಿ ಶಾಲೆಯ ಬಾಲವಾಡಿಗೆ ಹೋಗುತ್ತಿದ್ದೆ. ಅಪ್ಪಯ್ಯ ಎಲಿಮೆಂಟರಿ ಶಾಲೆಯಲ್ಲಿ ಟೀಚರ್ ಆಗಿದ್ದರು. ವಂಡ್ಸೆ ನೆಂಪಿಗೆ ಹತ್ತಿರದಲ್ಲೆ, ಚಕ್ರಾ ನದಿ ದಂಡೆಯಲ್ಲಿ ಇರುವ ಹಳ್ಳಿ. ಅಪ್ಪಯ್ಯನೊಂದಿಗೆ ಸೈಕಲ್ಲಿನ ಎದುರಿಗಿದ್ದ "ನನ್ನ ಸೀಟ್"ನಲ್ಲಿ ಕುಳಿತು ಸಾಗುವುದರ ಮೋಜೇ ಬೇರೆ!
ಸಂಜೆ ಶಾಲೆ ಮುಗಿಸಿ ಮನೆಗೆ ಬರುವಾಗ ಅಪ್ಪಯ್ಯನ ನಿತ್ಯಪಾಠ ಶುರುವಾಗುತ್ತಿತ್ತು. ಚಕ್ರಾ ನದಿ ಸೇತುವೆ ದಾಟಿದ ಕೂಡಲೇ ಶುರುವಾಗುವ ದೊಡ್ಡ ಏರಿನಲ್ಲಿ ಸೈಕಲ್ ದೂಡಿಕೊಂಡು ನಡೆಯುವಾಗ "ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ..."ದಿಂದ ನಿತ್ಯಪಾಠ ಆರಂಭವಾಗುತ್ತಿತ್ತು. ಗಣಪತಿ, ಶಾರದೆ, ಲಕ್ಷ್ಮೀ, ದುರ್ಗೆ, ಕೃಷ್ಣ, ನಾರಾಯಣ, ವೆಂಕಟೇಶ, ಮಹೇಶ್ವರ, ರಾಮ, ಆಂಜನೇಯ, ರಾಘವೇಂದ್ರ ದೇವರಿಗೆ ಸಂಬಂಧಿಸಿದ ಸುಮಾರು ೨೦ಕ್ಕೂ ಹೆಚ್ಚು ದೇವರ ಸ್ತುತಿಗಳು. ಅವರು ಹೇಳಿಕೊಟ್ಟಂತೆ ನಾನು ಉಚ್ಛರಿಸುವುದು... "ಬೆನಕ ಬೆನಕ, ಏಕದಂತ, ಪಚ್ಚೆಕಲ್ಲು, ಪಾಣಿಪೀಠ...." ಹೀಗೆ ಸಾಗುತ್ತಾ ಮನೆ ಹತ್ತಿರ ಬರುವಾಗ "ಪೂಜ್ಯಾಯ ರಾಘವೇಂದ್ರಾಯ..." ಸ್ತುತಿಯೊಂದಿಗೆ ನಿತ್ಯಪಾಠ ಅಂತ್ಯವಾಗುತ್ತಿತ್ತು. ಮನೆ ತಲುಪಿದ್ದೆ ತಿಳಿಯುತ್ತಿರಲಿಲ್ಲ.
ಆ ವಯಸ್ಸಿನಲ್ಲಿ ಅಪ್ಪಯ್ಯ ಹೇಳಿಕೊಟ್ಟಂತೆ ಉಚ್ಚರಿಸುವುದು ಬಿಟ್ಟರೆ ಸ್ತುತಿಗಳ ಅರ್ಥ ನನಗೆ ಗೊತ್ತಿರಲಿಲ್ಲ. ಹೀಗೆ ಹಲವು ವರ್ಷಗಳ ಕಾಲ ಪ್ರತಿನಿತ್ಯ ಹೇಳಿದ್ದರ ಫಲವೋ ಏನೋ, ಇಂದಿಗೂ ಎಲ್ಲಾ ಶ್ಲೋಕಗಳು ನನಗೆ ಕಂಠಪಾಠ.
2 comments:
bHale guru..
savi savi nenapu.. saavira nenapugaLu suruLi suruLiyaagi bichchikoLLuttive..
:)
Super aagi idhe..........
innu jaasti bari
Post a Comment