ಇದು ಇತ್ತೀಚೆಗೆ ನಡೆದ ಘಟನೆ. ಯಾವುದೋ ವಿಶೇಷಕ್ಕೆ ನೆಂಪಿನಲ್ಲಿ ನಮ್ಮ ಗ್ರೂಪ್ ಒಟ್ಟಾಗಿತ್ತು. ಮಾಮೂಲಿಯಂತೆ ಸಂಜೆಯ ಕ್ರಿಕೆಟ್ಟಿಗೆ ಎಲ್ಲರೂ ಸಜ್ಜಾಗಿತ್ತು. ಆಟಗಾರರ ಸಂಖ್ಯೆ ಕಮ್ಮಿ ಇದ್ದುದರಿಂದ ಹೈಸ್ಕೂಲ್ ಗ್ರೌಂಡಿನ ಬದಲು "ಹೊರ್ಲಿ ಮಲ್ ಜಡ್ಡು" ಇಲ್ಲಿ ಆಡಲು ತೀರ್ಮಾನಿಸಲಾಯಿತು. ಆಟ ಶುರುವಾಯಿತು! ಬೌಂಡ್ರಿ, ಸಿಕ್ಸರ್, ವಿಕೆಟ್, ಮಧ್ಯೆ ಮಧ್ಯೆ ತಮಾಷೆ, ಜೋಕ್ಸ್, ಸೋಲು, ಗೆಲುವು ಎಲ್ಲವೂ ನಡೆದಿತ್ತು. ೧೫-೨೦ ವರ್ಷದಿಂದ ಒಟ್ಟಿಗೆ ಆಡುತ್ತಿದ್ದರೂ ಕುಂದದ ಅದೇ ಉತ್ಸಾಹ.
ನಾನಾಗ ಬ್ಯಾಟ್ ಮಾಡುತ್ತಿದ್ದೆ. ಸದಾ ಸಿಕ್ಸರ್ ಗೆ ಹಾತೊರೆಯುವ ನಾನು ಬೀಸಿ ಬಂದ ಎಸೆತಕ್ಕೆ ಅಷ್ಟೇ ವೇಗದಲ್ಲಿ ಬ್ಯಾಟ್ ಬೀಸಿದ್ದೆ. ಗಗನದೆತ್ತರಕ್ಕೆ ಚಿಮ್ಮಿದ ಚೆಂಡು ಕೊಂಚ ಕಾಲ ಮಾಯವಾಗಿ ಕೆಳಗೆ ಬಿತ್ತು. ನನಗೆ ದಕ್ಕಿದ್ದು ಕೇವಲ ಎರಡೇ ರನ್!
ಸಂಜೆ ಆಟ ಮುಗಿಸಿ, ಸಾಮೂಹಿಕ ಸ್ನಾನ ಮುಗಿಸಿ ನಮ್ಮ ಹರಟೆ ಕಟ್ಟೆ "ಜಗಲಿ"ಯಲ್ಲಿ ಎಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದೆವು. ನಾನಾ ವಿಷಯಗಳ ಬಗ್ಗೆ ರಸವತ್ತಾದ ಚರ್ಚೆ ನಮ್ಮ ಬಳಗದ ವಿಶೇಷ! ವಿಷಯ ಎಲ್ಲಿಂದಲೋ ಆರಂಭವಾಗಿ, ಎಲ್ಲೋ ಅಂತ್ಯವಾಗುತ್ತಿತ್ತು. ಸಮಯ ಕಳೆದದ್ದೆ ತಿಳಿಯುತ್ತಿರಲಿಲ್ಲ.
ರೇಡಿಯೋದಲ್ಲಿ ವಾರ್ತೆ ಬಿತ್ತರವಾಗುತ್ತಿತ್ತು. "ಆಕಾಶವಾಣಿ, ಮಂಗಳೂರು..." ಭೂಕಕ್ಷೆಗೆ ಮರಳುತ್ತಿದ್ದ, ಅನಿವಾಸಿ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಸಹಿತ ಏಳು ಮಂದಿಯನ್ನು ಹೊತ್ತಿದ್ದ ಗಗನನೌಕೆ ಕೊಲಂಬಿಯಾ ಸ್ಫೋಟಗೊಂಡು ಪತನಗೊಂಡ ವರದಿ ನಮ್ಮಲ್ಲಿ ದಿಘ್ಭ್ರಮೆ ಹುಟ್ಟಿಸಿತ್ತು. ಆ ಶಾಕ್ ನಿಂದ ಹೊರ ಬರುವ ಮೊದಲೇ ಸದಾ ಹಾಸ್ಯ ಚಟಾಕಿ, ವಿತಂಡವಾದ ಮಂಡಿಸುವ ನಮ್ಮ ಕೃಷ್ಣ ಭಟ್ಟರು "ಹೊ! ಬಹುಷಃ ಸಂಜೆ ಕ್ರಿಕೆಟ್ ಆಡುವಾಗ ಗುರು ಗಗನದೆತ್ತರಕ್ಕೆ ಹೊಡೆದ ಚೆಂಡು ಗಗನನೌಕೆ ಕೊಲಂಬಿಯಾಕ್ಕೆ ಬಡಿದು ಅದು ಸ್ಫೋಟಗೊಂಡಿರಬೇಕು!" ಎಂದುಬಿಟ್ಟರು. ಆ ಪರಿಸ್ಥಿತಿಯಲ್ಲಿ ನಗಬೇಕೊ, ಅಳಬೇಕೊ ಎಂದು ತಿಳಿಯದೇ, ಆದರೂ ಅವರ "ಪ್ರೆಸೆನ್ಸ್ ಆಫ್ ಮೈಂಡ್"ಗೆ ತಲೆಬಾಗಿ ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿತ್ತು. ನಮಗೆಲ್ಲ ಅದು "ಜೋಕ್ ಆಫ್ ದ ಸೀಸನ್" ಆಗಿತ್ತು.
No comments:
Post a Comment