ರಾಜ್ಯಪಾಲರನ್ನೇ ತಡೆದು ನಿಲ್ಲಿಸಿದ ಅರವಿಂದ...
ಸರಿಸುಮಾರು ೨೦ ವರ್ಷಗಳ ಹಿಂದೆ ನಡೆದ ಘಟನೆ. ನಾನಾಗ ನೆಂಪಿನ ಸರಕಾರಿ ಶಾಲೆಯಲ್ಲಿ ೧ನೇ ತರಗತಿಯಲ್ಲಿದ್ದೆ. ರಾಘು ಅಣ್ಣ, ನಾನು, ನಿರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದ ಕಾಲ ಅದು. ನಮ್ಮೊಟ್ಟಿಗೆ ಟೈಮ್ಪಾಸಿಗೆ ನನ್ನ ತಮ್ಮ ಅರವಿಂದ ಕೂಡಾ ಬಾಲವಾಡಿಗೆ ಬರುತ್ತಿದ್ದ. ಅರವಿಂದ ಬಾಲ್ಯದಿಂದಲೂ ತುಂಬಾ ಪೋಕರಿ. ಎಲ್ಲರಿಗೂ ಹೊಡಿಯುವುದು, ಬಡಿಯುವುದು ಮಾಡಿಕೊಂಡೆ ಇದ್ದ. ಯಾರೂ ಸಿಗದೇ ಇದ್ದರೆ ಮನೆ ಗೋಡೆಗೆ, ಬಾಗಿಲಿಗೆ ಹೊಡೆದು ಸಿಟ್ಟು ತೀರಿಸಿಕೊಳ್ಳುತ್ತಿದ್ದ.
ಅದೊಂದು ದಿನ ನಾನು, ರಾಘು ಅಣ್ಣ, ಅರವಿಂದ ಎಂದಿನಂತೆ ಶಾಲೆಯಿಂದ ಮನೆಗೆ ಜೊತೆಯಾಗಿ ಬರುತ್ತಿತ್ತು. ಶಾಲೆಯ ಎದುರಲ್ಲೆ ಕೊಲ್ಲೂರಿಗೆ ಹೋಗುವ ರಾಜ್ಯ ಹೆದ್ದಾರಿ. ಅರವಿಂದನಿಗೆ ರಸ್ತೆ ಕಂಡಕೂಡಲೆ ರಸ್ತೆಯ ಅತ್ತ-ಇತ್ತ ಓಡುವ ಅಭ್ಯಾಸ. ಅದೇ ಸಮಯಕ್ಕೆ ಅಂದಿನ ಕರ್ನಾಟಕ ರಾಜ್ಯಪಾಲರಾದ ಶ್ರೀ ಅಶೋಕ್ ಬ್ಯಾನರ್ಜಿಯವರು ಅವರ ಬೆಂಗಾವಲು ಪಡೆಯ ಇನ್ನಿತರ ಕಾರುಗಳೊಂದಿಗೆ (ಸುಮಾರು ೧೫-೨೦) ನೆಂಪಿನ ದಾರಿಯಾಗಿ ಕೊಲ್ಲೂರಿಗೆ ಹೋಗುತ್ತಿದ್ದರು. ಅರವಿಂದ ರಸ್ತೆಯ ಅತ್ತ-ಇತ್ತ ಓಡುವ ಭರದಲ್ಲಿ ರಾಜ್ಯಪಾಲರು ಕುಳಿತಿದ್ದ ಕಾರಿಗೆ ಅಡ್ಡವಾಗಿ ರಸ್ತೆ ಮಧ್ಯದಲ್ಲಿ ಬಿದ್ದುಬಿಟ್ಟ. ಅವರು ಕುಳಿತದ್ದು ವಿದೇಶಿ ನಿರ್ಮಾಣದ, ಹೈ-ಸ್ಪೀಡ್ ಬ್ರೇಕ್ ಉಳ್ಳ ಕಾರಾದ್ದರಿಂದ, ಜೋರಾಗಿ ಸದ್ದುಮಾಡುತ್ತ ತಟ್ಟನೆ ಅರವಿಂದನಿಂದ ೧-೨ ಅಡಿಗಳ ಅಂತರದಲ್ಲಿ ನಿಂತುಬಿಟ್ಟಿತು. ನನಗೆ, ರಾಘು ಅಣ್ಣನಿಗೆ ಒಂದು ಕಡೆ ಅಷ್ಟೊಂದು ಕಾರುಗಳನ್ನು ಒಮ್ಮೆಲೆ ಕಂಡ ಆಶ್ಚರ್ಯ, ಮತ್ತೊಂದು ಕಡೆ ಅರವಿಂದ ಕಾರಿನಡಿಗೆ ಬಿದ್ದ ಭಯ... ಪೋಲಿಸ್ ಮತ್ತಿತರು ಕಾರಿಂದ ಕೆಳಗೆ ಇಳಿದದ್ದೆ ನಾವಿಬ್ಬರು ಅಲ್ಲಿಂದ ಕಾಲ್ಕಿತ್ತು, ಅಲ್ಲೇ ಹತ್ತಿರದಲ್ಲಿದ್ದ ಕಮ್ಯುನಿಷ್ಟ್ ಹಳುವಿನ ಹಿಂದೆ ಬಚ್ಚಿ ಕುಳಿತು ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡತೊಡಗಿದೆವು.
ಅಷ್ಟರಲ್ಲೆ ಅಲ್ಲಿ ಅಕ್ಕಪಕ್ಕದ ಕೆಲವು ಜನರು, ನಮ್ಮ ಶಾಲೆಯ ಟೀಚರ್ ಮತ್ತಿತರು ನೆರೆದಿದ್ದರು. ಅರವಿಂದನನ್ನು ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ಕರೆತಂದು, ಬೆಂಗಾವಲು ಪಡೆಯಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದ್ದರು. ಸ್ವಯಂ ರಾಜ್ಯಪಾಲರು ಕೂಡಾ ಕಾರಿನಿಂದ ಕೆಳಗಿಳಿದು ಪರಿಸ್ಥಿತಿ ಅವಲೋಕಿಸಲು ಅಲ್ಲಿಗೆ ಬಂದರು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಮಣಿಪಾಲಕ್ಕೆ ಕಳಿಸುವ ವ್ಯವಸ್ಥೆ ಮಾಡುವುದಾಗಿ ನಮ್ಮ ಟೀಚರ್ ಗೆ ಹೇಳಿದರು. ಆದರೆ ತರಚು ಗಾಯ ಬಿಟ್ಟರೆ ಬೇರೇನೂ ಆಗಿರದಿದ್ದರಿಂದ ಅರವಿಂದನಿಗೆ ಬುದ್ಧಿವಾದ ಹೇಳಿ, ಶುಭ ಹಾರೈಸಿ, ಸ್ವಲ್ಪ ಸಮಯ ವಿರಮಿಸಿ ಕೊಲ್ಲೂರಿಗೆ ಪಯಣ ಮುಂದುವರಿಸಿದರು.
ಈ ಘಟನೆ ನಡೆದಾಗ ನನಗೆ ೬ ವರ್ಷ, ರಾಘು ಅಣ್ಣನಿಗೆ ೮ ವರ್ಷ ವಯಸ್ಸಿರಬಹುದು. ಲೋಕಜ್ಞಾನವಿನ್ನೂ ಸರಿಯಾಗಿ ಮೂಡಿರದ ವಯಸ್ಸು ಅದು. ಆ ಸಮಯಕ್ಕೆ ನಮ್ಮಿಬ್ಬರಿಗೂ ಅಲ್ಲಿ ನಡೆದದ್ದೇನು, ಕಾರಿನಲ್ಲಿದ್ದವರು ಯಾರು, ಅಷ್ಟೊಂದು ಕಾರು ಒಟ್ಟಿಗೆ ಏಕೆ ಹೋಗುತ್ತಿದೆ ಎಂಬುದರ ಬಗ್ಗೆ ಕಿಂಚಿತ್ತು ಗೊತ್ತಿರಲಿಲ್ಲ. ಸ್ವಲ್ಪ ಸಮಯ ಹಳುವಿನ ಮರೆಯಲ್ಲಿ ನಿಂತು ನಡೆದ ಘಟನೆಗಳನ್ನು ವೀಕ್ಷಿಸಿದ ನಾವು ಮತ್ತಷ್ಟು ಗಾಬರಿಗೊಂಡು ಮನೆಗೆ ಓಡಿ ಬಂದು, ಅಲ್ಲಿದ್ದವರಿಗೆ ನಡೆದ ಘಟನೆಯನ್ನು ನಮಗೆ ತಿಳಿದಂತೆ ವರ್ಣಿಸಿ, ಎಲ್ಲರಲ್ಲೂ ಗಾಬರಿ ಹುಟ್ಟಿಸಿದ್ದೆವು. ಆದರೆ ಸ್ವಲ್ಪ ಹೊತ್ತಲ್ಲೇ ನಮ್ಮ ಶಾಲೆಯ ಗೀತಾ ಟೀಚರ್ ಅರವಿಂದನನ್ನು ಎತ್ತಿಕೊಂಡು ಮನೆಗೆ ಬಂದು, ಘಟನೆಯ ಸ್ಪಷ್ಟ ವಿವರಣೆ ನೀಡಿದಾಗಲೇ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟದ್ದು.
1 comment:
Officealli kelsa kammi kaanatth
Post a Comment