Click the thumbnail to get the full and better view. (file size: 600 KB)
Courtesy: Wikimapia
Wednesday, May 30, 2007
Sri Ganapati Temple, Nempu – recent snaps
“Sri Ganapati Devaru” Nempu
Sri Ganapati and Parivara Temple
surrounded by thick forest
Temple view from another angle.
“Sri Barbarika Devaru” – new statue
Photo Courtesy: Nempu Harish Bhat
Tuesday, May 29, 2007
Monday, May 28, 2007
Friday, May 25, 2007
Thursday, May 24, 2007
Nenapina Buttiyinda: 03
ನಾನು ಚಿಕ್ಕವನಿದ್ದಾಗ ಅಪ್ಪಯ್ಯನೊಂದಿಗೆ ನೆಂಪಿನ ಹತ್ತಿರದ ವಂಡ್ಸೆ ಸರಕಾರಿ ಎಲಿಮೆಂಟರಿ ಶಾಲೆಯ ಬಾಲವಾಡಿಗೆ ಹೋಗುತ್ತಿದ್ದೆ. ಅಪ್ಪಯ್ಯ ಎಲಿಮೆಂಟರಿ ಶಾಲೆಯಲ್ಲಿ ಟೀಚರ್ ಆಗಿದ್ದರು. ವಂಡ್ಸೆ ನೆಂಪಿಗೆ ಹತ್ತಿರದಲ್ಲೆ, ಚಕ್ರಾ ನದಿ ದಂಡೆಯಲ್ಲಿ ಇರುವ ಹಳ್ಳಿ. ಅಪ್ಪಯ್ಯನೊಂದಿಗೆ ಸೈಕಲ್ಲಿನ ಎದುರಿಗಿದ್ದ "ನನ್ನ ಸೀಟ್"ನಲ್ಲಿ ಕುಳಿತು ಸಾಗುವುದರ ಮೋಜೇ ಬೇರೆ!
ಸಂಜೆ ಶಾಲೆ ಮುಗಿಸಿ ಮನೆಗೆ ಬರುವಾಗ ಅಪ್ಪಯ್ಯನ ನಿತ್ಯಪಾಠ ಶುರುವಾಗುತ್ತಿತ್ತು. ಚಕ್ರಾ ನದಿ ಸೇತುವೆ ದಾಟಿದ ಕೂಡಲೇ ಶುರುವಾಗುವ ದೊಡ್ಡ ಏರಿನಲ್ಲಿ ಸೈಕಲ್ ದೂಡಿಕೊಂಡು ನಡೆಯುವಾಗ "ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ..."ದಿಂದ ನಿತ್ಯಪಾಠ ಆರಂಭವಾಗುತ್ತಿತ್ತು. ಗಣಪತಿ, ಶಾರದೆ, ಲಕ್ಷ್ಮೀ, ದುರ್ಗೆ, ಕೃಷ್ಣ, ನಾರಾಯಣ, ವೆಂಕಟೇಶ, ಮಹೇಶ್ವರ, ರಾಮ, ಆಂಜನೇಯ, ರಾಘವೇಂದ್ರ ದೇವರಿಗೆ ಸಂಬಂಧಿಸಿದ ಸುಮಾರು ೨೦ಕ್ಕೂ ಹೆಚ್ಚು ದೇವರ ಸ್ತುತಿಗಳು. ಅವರು ಹೇಳಿಕೊಟ್ಟಂತೆ ನಾನು ಉಚ್ಛರಿಸುವುದು... "ಬೆನಕ ಬೆನಕ, ಏಕದಂತ, ಪಚ್ಚೆಕಲ್ಲು, ಪಾಣಿಪೀಠ...." ಹೀಗೆ ಸಾಗುತ್ತಾ ಮನೆ ಹತ್ತಿರ ಬರುವಾಗ "ಪೂಜ್ಯಾಯ ರಾಘವೇಂದ್ರಾಯ..." ಸ್ತುತಿಯೊಂದಿಗೆ ನಿತ್ಯಪಾಠ ಅಂತ್ಯವಾಗುತ್ತಿತ್ತು. ಮನೆ ತಲುಪಿದ್ದೆ ತಿಳಿಯುತ್ತಿರಲಿಲ್ಲ.
ಆ ವಯಸ್ಸಿನಲ್ಲಿ ಅಪ್ಪಯ್ಯ ಹೇಳಿಕೊಟ್ಟಂತೆ ಉಚ್ಚರಿಸುವುದು ಬಿಟ್ಟರೆ ಸ್ತುತಿಗಳ ಅರ್ಥ ನನಗೆ ಗೊತ್ತಿರಲಿಲ್ಲ. ಹೀಗೆ ಹಲವು ವರ್ಷಗಳ ಕಾಲ ಪ್ರತಿನಿತ್ಯ ಹೇಳಿದ್ದರ ಫಲವೋ ಏನೋ, ಇಂದಿಗೂ ಎಲ್ಲಾ ಶ್ಲೋಕಗಳು ನನಗೆ ಕಂಠಪಾಠ.
Nenapina Buttiyinda: 02
ಇದು ಇತ್ತೀಚೆಗೆ ನಡೆದ ಘಟನೆ. ಯಾವುದೋ ವಿಶೇಷಕ್ಕೆ ನೆಂಪಿನಲ್ಲಿ ನಮ್ಮ ಗ್ರೂಪ್ ಒಟ್ಟಾಗಿತ್ತು. ಮಾಮೂಲಿಯಂತೆ ಸಂಜೆಯ ಕ್ರಿಕೆಟ್ಟಿಗೆ ಎಲ್ಲರೂ ಸಜ್ಜಾಗಿತ್ತು. ಆಟಗಾರರ ಸಂಖ್ಯೆ ಕಮ್ಮಿ ಇದ್ದುದರಿಂದ ಹೈಸ್ಕೂಲ್ ಗ್ರೌಂಡಿನ ಬದಲು "ಹೊರ್ಲಿ ಮಲ್ ಜಡ್ಡು" ಇಲ್ಲಿ ಆಡಲು ತೀರ್ಮಾನಿಸಲಾಯಿತು. ಆಟ ಶುರುವಾಯಿತು! ಬೌಂಡ್ರಿ, ಸಿಕ್ಸರ್, ವಿಕೆಟ್, ಮಧ್ಯೆ ಮಧ್ಯೆ ತಮಾಷೆ, ಜೋಕ್ಸ್, ಸೋಲು, ಗೆಲುವು ಎಲ್ಲವೂ ನಡೆದಿತ್ತು. ೧೫-೨೦ ವರ್ಷದಿಂದ ಒಟ್ಟಿಗೆ ಆಡುತ್ತಿದ್ದರೂ ಕುಂದದ ಅದೇ ಉತ್ಸಾಹ.
ನಾನಾಗ ಬ್ಯಾಟ್ ಮಾಡುತ್ತಿದ್ದೆ. ಸದಾ ಸಿಕ್ಸರ್ ಗೆ ಹಾತೊರೆಯುವ ನಾನು ಬೀಸಿ ಬಂದ ಎಸೆತಕ್ಕೆ ಅಷ್ಟೇ ವೇಗದಲ್ಲಿ ಬ್ಯಾಟ್ ಬೀಸಿದ್ದೆ. ಗಗನದೆತ್ತರಕ್ಕೆ ಚಿಮ್ಮಿದ ಚೆಂಡು ಕೊಂಚ ಕಾಲ ಮಾಯವಾಗಿ ಕೆಳಗೆ ಬಿತ್ತು. ನನಗೆ ದಕ್ಕಿದ್ದು ಕೇವಲ ಎರಡೇ ರನ್!
ಸಂಜೆ ಆಟ ಮುಗಿಸಿ, ಸಾಮೂಹಿಕ ಸ್ನಾನ ಮುಗಿಸಿ ನಮ್ಮ ಹರಟೆ ಕಟ್ಟೆ "ಜಗಲಿ"ಯಲ್ಲಿ ಎಲ್ಲಾ ಸೇರಿ ಹರಟೆ ಹೊಡೆಯುತ್ತಿದ್ದೆವು. ನಾನಾ ವಿಷಯಗಳ ಬಗ್ಗೆ ರಸವತ್ತಾದ ಚರ್ಚೆ ನಮ್ಮ ಬಳಗದ ವಿಶೇಷ! ವಿಷಯ ಎಲ್ಲಿಂದಲೋ ಆರಂಭವಾಗಿ, ಎಲ್ಲೋ ಅಂತ್ಯವಾಗುತ್ತಿತ್ತು. ಸಮಯ ಕಳೆದದ್ದೆ ತಿಳಿಯುತ್ತಿರಲಿಲ್ಲ.
ರೇಡಿಯೋದಲ್ಲಿ ವಾರ್ತೆ ಬಿತ್ತರವಾಗುತ್ತಿತ್ತು. "ಆಕಾಶವಾಣಿ, ಮಂಗಳೂರು..." ಭೂಕಕ್ಷೆಗೆ ಮರಳುತ್ತಿದ್ದ, ಅನಿವಾಸಿ ಭಾರತೀಯ ಮಹಿಳೆ ಕಲ್ಪನಾ ಚಾವ್ಲಾ ಸಹಿತ ಏಳು ಮಂದಿಯನ್ನು ಹೊತ್ತಿದ್ದ ಗಗನನೌಕೆ ಕೊಲಂಬಿಯಾ ಸ್ಫೋಟಗೊಂಡು ಪತನಗೊಂಡ ವರದಿ ನಮ್ಮಲ್ಲಿ ದಿಘ್ಭ್ರಮೆ ಹುಟ್ಟಿಸಿತ್ತು. ಆ ಶಾಕ್ ನಿಂದ ಹೊರ ಬರುವ ಮೊದಲೇ ಸದಾ ಹಾಸ್ಯ ಚಟಾಕಿ, ವಿತಂಡವಾದ ಮಂಡಿಸುವ ನಮ್ಮ ಕೃಷ್ಣ ಭಟ್ಟರು "ಹೊ! ಬಹುಷಃ ಸಂಜೆ ಕ್ರಿಕೆಟ್ ಆಡುವಾಗ ಗುರು ಗಗನದೆತ್ತರಕ್ಕೆ ಹೊಡೆದ ಚೆಂಡು ಗಗನನೌಕೆ ಕೊಲಂಬಿಯಾಕ್ಕೆ ಬಡಿದು ಅದು ಸ್ಫೋಟಗೊಂಡಿರಬೇಕು!" ಎಂದುಬಿಟ್ಟರು. ಆ ಪರಿಸ್ಥಿತಿಯಲ್ಲಿ ನಗಬೇಕೊ, ಅಳಬೇಕೊ ಎಂದು ತಿಳಿಯದೇ, ಆದರೂ ಅವರ "ಪ್ರೆಸೆನ್ಸ್ ಆಫ್ ಮೈಂಡ್"ಗೆ ತಲೆಬಾಗಿ ಎಲ್ಲರೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿತ್ತು. ನಮಗೆಲ್ಲ ಅದು "ಜೋಕ್ ಆಫ್ ದ ಸೀಸನ್" ಆಗಿತ್ತು.
Nenapina Buttiyinda: 01
ರಾಜ್ಯಪಾಲರನ್ನೇ ತಡೆದು ನಿಲ್ಲಿಸಿದ ಅರವಿಂದ...
ಸರಿಸುಮಾರು ೨೦ ವರ್ಷಗಳ ಹಿಂದೆ ನಡೆದ ಘಟನೆ. ನಾನಾಗ ನೆಂಪಿನ ಸರಕಾರಿ ಶಾಲೆಯಲ್ಲಿ ೧ನೇ ತರಗತಿಯಲ್ಲಿದ್ದೆ. ರಾಘು ಅಣ್ಣ, ನಾನು, ನಿರು ಜೊತೆಯಾಗಿ ಶಾಲೆಗೆ ಹೋಗುತ್ತಿದ್ದ ಕಾಲ ಅದು. ನಮ್ಮೊಟ್ಟಿಗೆ ಟೈಮ್ಪಾಸಿಗೆ ನನ್ನ ತಮ್ಮ ಅರವಿಂದ ಕೂಡಾ ಬಾಲವಾಡಿಗೆ ಬರುತ್ತಿದ್ದ. ಅರವಿಂದ ಬಾಲ್ಯದಿಂದಲೂ ತುಂಬಾ ಪೋಕರಿ. ಎಲ್ಲರಿಗೂ ಹೊಡಿಯುವುದು, ಬಡಿಯುವುದು ಮಾಡಿಕೊಂಡೆ ಇದ್ದ. ಯಾರೂ ಸಿಗದೇ ಇದ್ದರೆ ಮನೆ ಗೋಡೆಗೆ, ಬಾಗಿಲಿಗೆ ಹೊಡೆದು ಸಿಟ್ಟು ತೀರಿಸಿಕೊಳ್ಳುತ್ತಿದ್ದ.
ಅದೊಂದು ದಿನ ನಾನು, ರಾಘು ಅಣ್ಣ, ಅರವಿಂದ ಎಂದಿನಂತೆ ಶಾಲೆಯಿಂದ ಮನೆಗೆ ಜೊತೆಯಾಗಿ ಬರುತ್ತಿತ್ತು. ಶಾಲೆಯ ಎದುರಲ್ಲೆ ಕೊಲ್ಲೂರಿಗೆ ಹೋಗುವ ರಾಜ್ಯ ಹೆದ್ದಾರಿ. ಅರವಿಂದನಿಗೆ ರಸ್ತೆ ಕಂಡಕೂಡಲೆ ರಸ್ತೆಯ ಅತ್ತ-ಇತ್ತ ಓಡುವ ಅಭ್ಯಾಸ. ಅದೇ ಸಮಯಕ್ಕೆ ಅಂದಿನ ಕರ್ನಾಟಕ ರಾಜ್ಯಪಾಲರಾದ ಶ್ರೀ ಅಶೋಕ್ ಬ್ಯಾನರ್ಜಿಯವರು ಅವರ ಬೆಂಗಾವಲು ಪಡೆಯ ಇನ್ನಿತರ ಕಾರುಗಳೊಂದಿಗೆ (ಸುಮಾರು ೧೫-೨೦) ನೆಂಪಿನ ದಾರಿಯಾಗಿ ಕೊಲ್ಲೂರಿಗೆ ಹೋಗುತ್ತಿದ್ದರು. ಅರವಿಂದ ರಸ್ತೆಯ ಅತ್ತ-ಇತ್ತ ಓಡುವ ಭರದಲ್ಲಿ ರಾಜ್ಯಪಾಲರು ಕುಳಿತಿದ್ದ ಕಾರಿಗೆ ಅಡ್ಡವಾಗಿ ರಸ್ತೆ ಮಧ್ಯದಲ್ಲಿ ಬಿದ್ದುಬಿಟ್ಟ. ಅವರು ಕುಳಿತದ್ದು ವಿದೇಶಿ ನಿರ್ಮಾಣದ, ಹೈ-ಸ್ಪೀಡ್ ಬ್ರೇಕ್ ಉಳ್ಳ ಕಾರಾದ್ದರಿಂದ, ಜೋರಾಗಿ ಸದ್ದುಮಾಡುತ್ತ ತಟ್ಟನೆ ಅರವಿಂದನಿಂದ ೧-೨ ಅಡಿಗಳ ಅಂತರದಲ್ಲಿ ನಿಂತುಬಿಟ್ಟಿತು. ನನಗೆ, ರಾಘು ಅಣ್ಣನಿಗೆ ಒಂದು ಕಡೆ ಅಷ್ಟೊಂದು ಕಾರುಗಳನ್ನು ಒಮ್ಮೆಲೆ ಕಂಡ ಆಶ್ಚರ್ಯ, ಮತ್ತೊಂದು ಕಡೆ ಅರವಿಂದ ಕಾರಿನಡಿಗೆ ಬಿದ್ದ ಭಯ... ಪೋಲಿಸ್ ಮತ್ತಿತರು ಕಾರಿಂದ ಕೆಳಗೆ ಇಳಿದದ್ದೆ ನಾವಿಬ್ಬರು ಅಲ್ಲಿಂದ ಕಾಲ್ಕಿತ್ತು, ಅಲ್ಲೇ ಹತ್ತಿರದಲ್ಲಿದ್ದ ಕಮ್ಯುನಿಷ್ಟ್ ಹಳುವಿನ ಹಿಂದೆ ಬಚ್ಚಿ ಕುಳಿತು ನಡೆಯುತ್ತಿದ್ದ ವಿದ್ಯಮಾನಗಳನ್ನು ನೋಡತೊಡಗಿದೆವು.
ಅಷ್ಟರಲ್ಲೆ ಅಲ್ಲಿ ಅಕ್ಕಪಕ್ಕದ ಕೆಲವು ಜನರು, ನಮ್ಮ ಶಾಲೆಯ ಟೀಚರ್ ಮತ್ತಿತರು ನೆರೆದಿದ್ದರು. ಅರವಿಂದನನ್ನು ಹತ್ತಿರದಲ್ಲಿದ್ದ ಬಸ್ ನಿಲ್ದಾಣಕ್ಕೆ ಕರೆತಂದು, ಬೆಂಗಾವಲು ಪಡೆಯಲ್ಲಿದ್ದ ವೈದ್ಯರು ಚಿಕಿತ್ಸೆ ನೀಡಲು ಆರಂಭಿಸಿದ್ದರು. ಸ್ವಯಂ ರಾಜ್ಯಪಾಲರು ಕೂಡಾ ಕಾರಿನಿಂದ ಕೆಳಗಿಳಿದು ಪರಿಸ್ಥಿತಿ ಅವಲೋಕಿಸಲು ಅಲ್ಲಿಗೆ ಬಂದರು. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದಲ್ಲಿ ಮಣಿಪಾಲಕ್ಕೆ ಕಳಿಸುವ ವ್ಯವಸ್ಥೆ ಮಾಡುವುದಾಗಿ ನಮ್ಮ ಟೀಚರ್ ಗೆ ಹೇಳಿದರು. ಆದರೆ ತರಚು ಗಾಯ ಬಿಟ್ಟರೆ ಬೇರೇನೂ ಆಗಿರದಿದ್ದರಿಂದ ಅರವಿಂದನಿಗೆ ಬುದ್ಧಿವಾದ ಹೇಳಿ, ಶುಭ ಹಾರೈಸಿ, ಸ್ವಲ್ಪ ಸಮಯ ವಿರಮಿಸಿ ಕೊಲ್ಲೂರಿಗೆ ಪಯಣ ಮುಂದುವರಿಸಿದರು.
ಈ ಘಟನೆ ನಡೆದಾಗ ನನಗೆ ೬ ವರ್ಷ, ರಾಘು ಅಣ್ಣನಿಗೆ ೮ ವರ್ಷ ವಯಸ್ಸಿರಬಹುದು. ಲೋಕಜ್ಞಾನವಿನ್ನೂ ಸರಿಯಾಗಿ ಮೂಡಿರದ ವಯಸ್ಸು ಅದು. ಆ ಸಮಯಕ್ಕೆ ನಮ್ಮಿಬ್ಬರಿಗೂ ಅಲ್ಲಿ ನಡೆದದ್ದೇನು, ಕಾರಿನಲ್ಲಿದ್ದವರು ಯಾರು, ಅಷ್ಟೊಂದು ಕಾರು ಒಟ್ಟಿಗೆ ಏಕೆ ಹೋಗುತ್ತಿದೆ ಎಂಬುದರ ಬಗ್ಗೆ ಕಿಂಚಿತ್ತು ಗೊತ್ತಿರಲಿಲ್ಲ. ಸ್ವಲ್ಪ ಸಮಯ ಹಳುವಿನ ಮರೆಯಲ್ಲಿ ನಿಂತು ನಡೆದ ಘಟನೆಗಳನ್ನು ವೀಕ್ಷಿಸಿದ ನಾವು ಮತ್ತಷ್ಟು ಗಾಬರಿಗೊಂಡು ಮನೆಗೆ ಓಡಿ ಬಂದು, ಅಲ್ಲಿದ್ದವರಿಗೆ ನಡೆದ ಘಟನೆಯನ್ನು ನಮಗೆ ತಿಳಿದಂತೆ ವರ್ಣಿಸಿ, ಎಲ್ಲರಲ್ಲೂ ಗಾಬರಿ ಹುಟ್ಟಿಸಿದ್ದೆವು. ಆದರೆ ಸ್ವಲ್ಪ ಹೊತ್ತಲ್ಲೇ ನಮ್ಮ ಶಾಲೆಯ ಗೀತಾ ಟೀಚರ್ ಅರವಿಂದನನ್ನು ಎತ್ತಿಕೊಂಡು ಮನೆಗೆ ಬಂದು, ಘಟನೆಯ ಸ್ಪಷ್ಟ ವಿವರಣೆ ನೀಡಿದಾಗಲೇ ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟದ್ದು.
Wednesday, May 23, 2007
Balyada NENAPU...
ನೆಂಪು - ನಾ ಕಂಡಂತೆ
"ಬಾಲ್ಯದ ನೆನಪು ಮುಪ್ಪಾದರೂ ಮಾಸದು" ಎಂಬ ಮಾತು ಎಲ್ಲೋ ಕೇಳಿದ್ದೆ. ಅದರಲ್ಲೂ ನೆನಪು ಎಂಬ ಅರ್ಥವನ್ನೇ ಹೊಂದಿರುವ ನೆಂಪಿನಲ್ಲಿ ಕಳೆದ ನನ್ನ ಬಾಲ್ಯದ ದಿನಗಳ ಆ ಸವಿ ನೆನಪು ಎಂದಿಗೂ ಮರೆಯಲಾಗದು.
ಸುತ್ತಲೂ ದಟ್ಟ ಕಾನನ, ಅಡಿಕೆ-ತೆಂಗು-ಬಾಳೆ ತೋಟ, ಮೈದುಂಬಿಕೊಂಡಿರುವ ಎಕರೆಗಟ್ಟಳೆ ಭತ್ತದ ಗದ್ದೆ, ಗದ್ದೆಯಂಚಿನಲ್ಲಿ ಕಾಡುಪ್ರಾಣಿಗಳನ್ನು ಓಡಿಸಲು ನಿರ್ಮಿಸಿದ ಬೆಲ್ಚಪ್ಪ-ಹಳ್ಳಿ ಮನೆ, ಸದಾ ಜುಳು ಜುಳು ನಿನಾದ ಹೊಮ್ಮಿಸುವ ನೀರಿನ ತೊರೆಗಳು, ಇವೆಲ್ಲದರ ನಡುವೆ ಮಂಗಳೂರು ಹಂಚು ಹೊದಿಸಿದ ಮಣ್ಣಿನ ಗೋಡೆಯ ಮನೆಗಳು...
ಬೇಸಿಗೆಯಲ್ಲಿ ಎಲ್ಲರೂ ಒಟ್ಟಾಗಿ ಆಡುತ್ತಿದ್ದ ಯಕ್ಷಗಾನದ ಆಟ, ಹೋಟೆಲ್ ಆಟ... ನಾವೇ ನಿರ್ಮಿಸಿದ ರಂಗಸ್ಥಳ, ನಮ್ಮದೇ ಪ್ರಸಂಗ, ಮೇಕಪ್, ಹಿಮ್ಮೇಳ, ಮುಮ್ಮೇಳ... ಹೋಟೆಲ್ ಆಟಕ್ಕೆ ಪೂರ್ವಭಾವಿಯಾಗಿ ಕಾಡಿನಿಂದ ತರುತ್ತಿದ್ದ ತರಹೆವಾರಿ ಕಾಡುಹಣ್ಣುಗಳು, ಪ್ರತಿ ಮನೆಯಿಂದ ಅಮ್ಮನ ಕಣ್ಣು ತಪ್ಪಿಸಿ ತರುತ್ತಿದ್ದ ಬೆಲ್ಲ, "ಹೋರ್ಲಿಕ್ಸ್", ಹಪ್ಪಳ, ಸೆಂಡಿಗೆ ಇತ್ಯಾದಿ ಸಾಮಗ್ರಿಗಳು... ಇವೆಲ್ಲದರಿಂದ ನಾವೇ ತಯಾರಿಸುತ್ತಿದ್ದ ಬಗೆ ಬಗೆಯ ರುಚಿಯಾದ ತಿಂಡಿಗಳು... ನಾವೇ ತಯಾರಿಸಿದ ಬ್ಯಾಟ್ ವಿಕೆಟ್ ಇಂದ ದಿನವಿಡೀ ಆಡುತ್ತಿದ್ದ ಮಲ್ಗದ್ದೆಯ ಕ್ರಿಕೆಟ್... ಇತರೆ ಆಟಗಳಾದ ರಥೋತ್ಸವ, ಬಂಡಿ ಓಟ, ಕಣ್ಣಾಮುಚ್ಚಾಲೆ, ಕಳ್ಳಪೋಲಿಸ್, ಲಗೋರಿ... ಸಂಜೆ ಎಲ್ಲರೂ ಒಟ್ಟಾಗಿ ಗೇರುಬೀಜ ಕೊಯ್ಯಲು ದರ್ಕಾಸ್ತಿಗೆ ಹೋಗುವಾಗ ಮಾಡುತ್ತಿದ್ದ ಮಂಗಚೇಷ್ಟೆ, ಜೋಕ್ಸ್, ಕಾಮೆಡಿ ಶೋ... ಹಗಲಲ್ಲಿ ಎಲ್ಲಾ ಸೇರಿ ತಯಾರಿಸುತ್ತಿದ್ದ ಹಲಸಿನ ಕಾಯಿ ಹಪ್ಪಳ, ಮಧ್ಯೆ ಮಧ್ಯೆ ಕದ್ದು ತಿನ್ನುತ್ತಿದ್ದ ಹಪ್ಪಳದ ಹಿಟ್ಟು... ಪದ್ಭಟ್ರ ತೋಟದಿಂದ ಎಗರಿಸಿ ತಿಂದ ರಸಪೂರಿ ಮಾವಿನಹಣ್ಣು... ಮಧ್ಯಾಹ್ನದ ಊಟಕ್ಕೆ ಕುಚ್ಚಿಗೆ ಅನ್ನ, ಗೇರು ಹಣ್ಣಿನ ಹುಳಿ, ಜೊತೆಗೆ ಸಕ್ರೆಭಟ್ಕಳ ಮಾವಿನ ಹಣ್ಣು... ಕೆಲವೊಮ್ಮೆ ಬೆಳಿಗ್ಗೆ ಹೊರಟು ಸಂಜೆ ಹೊತ್ತಿಗೆ ವಾಪಾಸಾಗುತ್ತಿದ್ದ ಗಾಳಿಹೊಲದ ಟ್ರೆಕ್ಕಿಂಗ್... ಅಲ್ಲಿ ತಿಂದ ಗೇರು, ಸಳ್ಳೆ, ಕೀಂಚ್ಲ, ಕಿಸ್ಕಾರ, ಗರ್ಚ, ಕಾಡು ಮಾವು ಇತ್ಯಾದಿ ಕಾಡಿನ ಹಣ್ಣುಗಳು...
ಮಳೆಗಾಲದಲ್ಲಿ ಗುಡುಗು ಮಿಂಚುಗಳ ಆರ್ಭಟದೊಂದಿಗೆ ದಿನವಿಡೀ ಬರುತ್ತಿದ್ದ ಆ ಮುಂಗಾರು ಮಳೆ... ಮಳೆ ಹನಿಗಳ ಜಿಟಿ ಜಿಟಿ ಸದ್ದು... ಹೊರಗೆ ಗದ್ದೆಯಲ್ಲಿ ನೇಗಿಲು ಹಿಡಿದು ಹೋರಿಗಳೊಂದಿಗೆ ಗದ್ದೆ ಉಳುತ್ತಾ ರೈತರು ಹೇಳುತ್ತಿದ್ದ ಹಳ್ಳಿ ಹಾಡುಗಳು, ನಡು ನಡುವೆ "ಹೈ-ಹೊಯ್-ಬಲ್ದಾ-ಬಲ್ದಾ" ಎಂದು ಹೋರಿಗಳಿಗೆ ಬೈಯುತ್ತಾ, ಮಳೆಯಲ್ಲಿ ನೆನೆಯುತ್ತಾ ಬೇಸಾಯ ಮಾಡುತ್ತಿದ್ದ ಅವರ ಪರಿಶ್ರಮ... ಮಳೆ ನೀರಿನಿಂದಾಗಿ ತುಂಬಿತುಳುಕುತ್ತಿದ್ದ ಕೆರೆ, ತೊರೆ, ತೋಡು, "ಅರಿಕಲ್ಕೋಮೆ"... ನೀರು ಹರಿಯುವ ರಭಸಕ್ಕೆ ಅಲ್ಲಲ್ಲಿ ಕಂಡುಬರುತ್ತಿದ್ದ ಮಿನಿ ಜಲಪಾತ... ತೊರೆ, ತೋಡಿನಲ್ಲಿ ಎಲ್ಲಾ ಒಟ್ಟಾಗಿ ಆಡುತ್ತಿದ್ದ ನೀರಾಟ, ಅರ್ಧಂಬರ್ಧ ಈಜು... ನೀರಾಟ ಹೆಚ್ಚಾಗಿ ಬರುತ್ತಿದ್ದ ಜ್ವರ, ನೆಗಡಿ, ಕೆಮ್ಮು... ಅದನ್ನೋಡಿಸಲು ಅಮ್ಮನ ಖಾರ ಕಷಾಯ ಮತ್ತು ಗೋಪಿನಾಥ್ ಡೋಕ್ಟ್ರ ದಿವ್ಯೌಷಧ... ಮಳೆಯ ರಭಸಕ್ಕೆ ಹೊರಾಂಗಣ ಆಟದ ಬದಲು ಮನೆಯೊಳಗೆ ಆಡುತ್ತಿದ್ದ ಹಾವೇಣಿ, ಚನ್ನೆಮಣೆ, ಲೂಡೋ, ರಸಪ್ರಶ್ನೆ ಆಟ, ಕಾಗದದಿಂದ ತಯಾರಿಸುತ್ತಿದ್ದ ವಿಮಾನ, ಹಡಗು, ದೋಣಿ, ಕ್ಯಾಮೆರಾ, ಚೆಂಡು, ಗಿರ್ಗಿಟ್ಲೆ... ಮಳೆಯ ಥಂಡಿಯಿಂದ ತುಸು ಬೆಚ್ಚಗಿರಲು ತಿನ್ನುತ್ತಿದ್ದ ಹಲಸಿನ ಕಾಯಿಯ ಸುಟ್ಟ ಹಪ್ಪಳ... ಮಳೆ ಕಮ್ಮಿಯಾಗಿ, ಗದ್ದೆಯಲ್ಲಿ ಭತ್ತದ ತೆನೆಯರಳಿದ ನಂತರ ನಡೆಯುತ್ತಿದ್ದ ಕೊಯ್ಲಿನ ಸಂಭ್ರಮ... ತೆನೆಯಿಂದ ಭತ್ತ ಬೇರೆ ಮಾಡಲು ಹುಲ್ಲುಕಟ್ಟನ್ನು "ಹೊಡಿಮಂಚ"ಕ್ಕೆ "ಹೊಲಿಯಡ್ಬೊ ಹೊಲಿಯೋ..." ಎನ್ನುತ್ತಾ ಬೀಸುವಾಗ ಬರುತ್ತಿದ್ದ ಸುಂಯ್ ಸುಂಯ್ ನಿನಾದ... ಕಾರ್ತಿಕ ಮಾಸದಲ್ಲಿ ಸಂಜೆ ಎಲ್ಲರೂ ಒಟ್ಟಾಗಿ ಸುಶ್ರಾವ್ಯವಾಗಿ ಹೇಳುತ್ತಿದ್ದ ಭಜನೆ... ... ... ಇತ್ಯಾದಿ ಇತ್ಯಾದಿ ಇತ್ಯಾದಿ...
ನೀವೇ ಹೇಳಿ! ನೆಂಪಿನ ಆ ಬಾಲ್ಯದ ನೆನಪು ಮರೆಯಲು ಸಾಧ್ಯವೇ?
NEMPU - Surroundings
http://wikimapia.org/256718/
Check out the above link. Nempu - online map.
Use the scroll feature to view all the listed locations around Nempu. Don’t forget to view the Nempu Ganapati Temple point, which is surrounded by thick lush green forest.
Horli mal jaddu – Once this place was a playground or dining ground for tigers. Now a days emerging cricketers in this area use this ground for playing cricket. Long back farmers used this ground to cultivate “Hurali” (Horse Gram). So the name “Horli mal jaddu” came for this ground. (In Kundapura Kannada, Horli means horse gram and Jaddu means field).
Check out the above link. Nempu - online map.
Use the scroll feature to view all the listed locations around Nempu. Don’t forget to view the Nempu Ganapati Temple point, which is surrounded by thick lush green forest.
Horli mal jaddu – Once this place was a playground or dining ground for tigers. Now a days emerging cricketers in this area use this ground for playing cricket. Long back farmers used this ground to cultivate “Hurali” (Horse Gram). So the name “Horli mal jaddu” came for this ground. (In Kundapura Kannada, Horli means horse gram and Jaddu means field).
Tuesday, May 22, 2007
NEMPU - brief description
ನೆಂಪು
ಮೂಕಾಂಬಿಕಾ ಅಭಯಾರಣ್ಯದ ತೆಕ್ಕೆಯಲ್ಲಿ ಹುದುಗಿರುವ ಸುಂದರವಾದ, ಚಿಕ್ಕದಾದ ಊರು ನೆಂಪು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕರ್ಕುಂಜೆ ಗ್ರಾಮಕ್ಕೆ ಸೇರಿದ ನೆಂಪಿನ ಮಂದ ಕಂಪು ನಾಡಿನಾದ್ಯಂತ ಪಸರಿಸಿ, ದೂರದ ದೆಹಲಿಗೂ ತಲುಪಿ, ಸಪ್ತಸಾಗರದಾಚೆಯ ಅಮೇರಿಕಾದಲ್ಲೂ ಇಂದು ಬೀರುತ್ತಿದೆ. ಕುಂದಾಪುರದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ನೆಂಪು ಸಿಗುತ್ತದೆ.
ನೆಂಪಿನಲ್ಲಿ ಏನಿದೆ? ನಾನು ನನ್ನ ಗೆಳೆಯರಲ್ಲಿ ನೆಂಪಿನ ಬಗ್ಗೆ ಹೇಳುವಾಗ ಅವರಿಂದ ಸರ್ವೇಸಾಮಾನ್ಯವಾಗಿ ಬರುತ್ತಿದ್ದ ಪ್ರಶ್ನೆ "ನೆಂಪಿನಲ್ಲಿ ಅಂತದ್ದೇನಿದೆ???" ನಿಜ! ಮೇಲ್ನೋಟಕ್ಕೆ ಇಂದಿನ ಆಧುನಿಕ "ಬ್ಯುಸಿ" ಯುಗಕ್ಕೆ ಬೇಕಾಗುವಂತ ಸವಲತ್ತು ನೆಂಪಿನಲ್ಲಿ ಏನೂ ಇಲ್ಲ! ಆದರೆ, ಜೀವಿಸಲು ಅತ್ಯಮೂಲ್ಯವಾದ, ಇಂದಿನ ದಿನಗಳಲ್ಲಿ ಮರೀಚಿಕೆಯಾಗುತ್ತಿರುವ ಸ್ವಚ್ಛ ಗಾಳಿ, ನೀರು, ಸುಂದರವಾದ ಕಾನನ ಪರಿಸರ ನೆಂಪಿನಲ್ಲಿ ಹೇರಳವಾಗಿದೆ. ಶ್ರೀ ಗಣಪತಿ ಮತ್ತು ಪರಿವಾರ ದೇವರ ದೇವಸ್ಥಾನ ಇಲ್ಲಿದೆ. ಕಾನನದ ಮಧ್ಯದಲ್ಲಿರುವ, ತಿಳಿನೀರ ಸರೋವರದಿಂದ ಸುತ್ತುವರಿದಿರುವ ಈ ದೇವಾಲಯದ ಶಾಂತ ಪರಿಸರ ಬೇರ್ಯಾವ ದೇವಾಲಯದಲ್ಲೂ ಸಿಗದು ಎಂದರೆ ಅತಿಶಯೋಕ್ತಿಯಲ್ಲ! ಕನ್ನಡ ಮಾಧ್ಯಮದಲ್ಲಿ ೧ನೇ ತರಗತಿಯಿಂದ ಪಿ.ಯು.ಸಿ. ವರೆಗಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಸರ್ಕಾರಿ ಶಾಲೆ, ಕಾಲೇಜು ಇಲ್ಲಿದೆ. ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ, ಧರ್ಮಸ್ಥಳ, ಶಿವಮೊಗ್ಗ, ಬೆಂಗಳೂರು, ಕೇರಳದ ಗುರುವಾಯೂರಿನಿಂದ ಕೊಲ್ಲೂರಿಗೆ ಹೋಗುವ ಬಸ್ಸು ಮತ್ತು ಇತರ ವಾಹನಗಳು ಇಲ್ಲಿಂದಲೇ ಹಾದು ಹೋಗುವುದರಿಂದ ನೆಂಪು ಬೇರೆ ಪಟ್ಟಣಗಳೊಂದಿಗೆ ನೇರ ಸಂಪರ್ಕದಲ್ಲಿದೆ.
Subscribe to:
Posts (Atom)