ವಾರಾಂತ್ಯದ ರಜೆಯಲ್ಲಿ "ಏರೋ ಇಂಡಿಯಾ ಶೋ"ಗೆ ಹೋಗುವ ಅವಕಾಶ ತಪ್ಪಿಹೋಗಿದಕ್ಕಾಗಿ ಚಡಪಡಿಸುತ್ತಿದ್ದೆ. ಟಿಕೆಟ್ ಸಿಕ್ಕಿರಲಿಲ್ಲ, ಬಿಸಿಲು-ಧೂಳಿಂದಾಗಿ ಬೆಟರ್ ಹಾಫ್ ಅನುಮತಿ ಸಿಕ್ಕಿರಲಿಲ್ಲ :-), ಹೀಗೆ ಹಲವಾರು ಕಾರಣಗಳು... ...
ನಾವಿರುವ ಮಾರತಹಳ್ಳಿ ಸಮೀಪದ ಮನೆಯ ಮೇಲೆ ದಿನನಿತ್ಯ ಹಾರಾಡುವ ಮಿಲಿಟರಿ ವಿಮಾನಗಳನ್ನು ಪ್ರಮುಖವಾಗಿ ’ತೇಜಸ್’, ಸಮೀಪದಿಂದ ನೋಡಿ ನೋಡಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಿತ್ತು. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಏರ್ ಶೋ ಆರಂಭವಾಗುವುದನ್ನು ಕಾಯುತ್ತಿದ್ದುದರಿಂದ ಭಾಗವಹಿಸಲಾಗದೆ ನಿರಾಸೆ ಉಂಟಾಗಿತ್ತು. ಶನಿವಾರ ಏರ್ ಶೋ ನೋಡಿ ಬಂದವರ ಮುಖಚರ್ಯೆಯಲ್ಲಿ ಬಿಸಿಲ ಝಳಕ್ಕೆ, ಧೂಳಿಗೆ ಉಂಟಾದ ಬದಲಾವಣೆ ನೋಡಿ ಸ್ವಲ್ಪ ಮಟ್ಟಿನ ಸಮಾಧಾನವೂ ಆಗಿತ್ತು!
ನಿನ್ನೆ, ಆದಿತ್ಯವಾರ ಮಧ್ಯಾಹ್ನ ಮನೆಯವರೆಲ್ಲಾ ಒಟ್ಟಾಗಿ ಯಲಹಂಕದಲ್ಲಿರುವ ಪರಿಚಯದವರ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಏರ್ ಶೋ ಅಬ್ಬರದಿಂದಾಗಿ ಟ್ರಾಫಿಕ್ ಒತ್ತಡ ತುಂಬಾ ಇರುವುದರಿಂದ ನಮ್ಮ ವಾಹನಗಳಿಗೆ ರೆಸ್ಟ್ ಕೊಟ್ಟು ಕ್ಯಾಬ್ ಬಾಡಿಗೆಗೆ ಪಡಕೊಂಡು ಯಲಹಂಕಕ್ಕೆ ಹೊರಟಿತ್ತು. ಎಣಿಸಿದ ಹಾಗೆ ಟ್ರಾಫಿಕ್ ಬಿಸಿ ಸ್ವಲ್ಪ ಮಟ್ಟಿಗೆ ತಟ್ಟಲಾರಂಭಿಸಿತು. ಆದರೆ ಬಿಟ್ಟಿಯಾಗಿ ಏರ್ ಶೋ ಕಾಣಿಸಿಗುವುದೆಂದು ನಾವ್ಯಾರೂ ಊಹಿಸಿರಲಿಲ್ಲ. ಅದೂ ಯಾವ ನೂಕುನುಗ್ಗಲು, ಧೂಳು ಇಲ್ಲದೆ! ಊರಿಂದ ಬಂದಿದ್ದ ಅಪ್ಪ ಅಮ್ಮ, ನಾವೆಲ್ಲ ಫುಲ್ ಖುಷ್!
ಹಾರೋಹಳ್ಳಿ ಸಮೀಪದಲ್ಲಿರುವ ಲೇಯೌಟ್ ಒಂದನ್ನು ನೋಡಲು ಸಂಜೆ 4 ರ ಸುಮಾರಿಗೆ ಹೋಗಿದ್ದೆವು. ಅದು ವಿಶಾಲವಾದ ಬಯಲು ಪ್ರದೇಶ. ಸಮೀಪ ಜನ ವಸತಿಯೂ ಇಲ್ಲ. ನೋಡ ನೋಡುತ್ತಿದ್ದಂತೆ ಆಗಸದಲ್ಲಿ ಬಣ್ಣ ಬಣ್ಣದ ಹೊಗೆಯುಗುಳುತ್ತಾ ಸೂರ್ಯ ಕಿರಣ್ ವಿಮಾನಗಳ ನುರಿತ ಪೈಲಟ್ ಗಳು ಏರೋಬಿಕ್ ಪ್ರದರ್ಶನ ಆರಂಭಿಸಿದರು. ಸುಮಾರು 1 ಘಂಟೆ ಕಾಲ ಇದು ಮುಂದುವರಿಯಿತು. ಕೊನೆಯಲ್ಲಿ ಕೇಸರಿ ಬಿಳಿ ಹಸಿರು ಬಣ್ಣ ಉಗುಳುತ್ತಾ ಮೂರು ಸೂರ್ಯಕಿರಣ್ ವಿಮಾನಗಳು ಜೊತೆಯಾಗಿ ವೇಗವಾಗಿ ಹೋಗುವ ಮೂಲಕ ಏರ್ ಶೋ ಗೆ ಮಂಗಳ ಹಾಡಲಾಯಿತು.
ಭಾರತೀಯ ವಾಯು ಸೇನೆಯ ’ಸೂರ್ಯ ಕಿರಣ್’ ತಂಡ ಏರೋಬ್ಯಾಟಿಕ್ ಪ್ರದರ್ಶನದಿಂದಾಗಿ ಸಾಕಷ್ಟು ಜನಮೆಚ್ಚುಗೆಯನ್ನ, ಪ್ರಸಿದ್ಧಿಯನ್ನ ಪಡೆದಿದೆ, ಅಂತರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. 1996 ರಲ್ಲಿ ರಚಿಸಲ್ಪಟ್ಟ ಈ ತಂಡ ’HAL ಕಿರಣ್ M2’ ಮಿಲಿಟರಿ ಟ್ರೈನರ್ ವಿಮಾನಗಳ ಅಲಭ್ಯತೆಯಿಂದಾಗಿ ಈಗ ನಿವೃತ್ತಿಯಂಚಿನಲ್ಲಿದೆ. ಹೊಸ ಮಾದರಿಯ ಏರ್ ಕ್ರಾಫ್ಟ್ ಸೇರ್ಪಡೆಯೊಂದಿಗೆ ತಂಡವನ್ನು ಪುನ: ರಚಿಸಲಾಗುವುದು ಎಂಬ ಆಶಾದಾಯಕ ವರದಿಗಳೂ ಕೇಳಿ ಬರುತ್ತಿದೆ.
ನೀಲಾಗಸದಲ್ಲಿ ಮೈನವಿರೇಳಿಸುವ ಏರೋಬ್ಯಾಟಿಕ್ ಕಲೆಯನ್ನು ಪ್ರದರ್ಶಿಸಿದ ’ಸೂರ್ಯ ಕಿರಣ್’ ತಂಡಕ್ಕೆ ಹಾರ್ದಿಕ ಧನ್ಯವಾದಗಳು!
ಕೆಲ ಚಿತ್ರಗಳು...
-o-
ನೆಂಪು ಗುರು
No comments:
Post a Comment