Monday, February 14, 2011

ಏರೋ ಇಂಡಿಯಾ 2011 - ’ಸೂರ್ಯ ಕಿರಣ್’ ಚಮತ್ಕಾರ

ವಾರಾಂತ್ಯದ ರಜೆಯಲ್ಲಿ "ಏರೋ ಇಂಡಿಯಾ ಶೋ"ಗೆ ಹೋಗುವ ಅವಕಾಶ ತಪ್ಪಿಹೋಗಿದಕ್ಕಾಗಿ ಚಡಪಡಿಸುತ್ತಿದ್ದೆ. ಟಿಕೆಟ್ ಸಿಕ್ಕಿರಲಿಲ್ಲ, ಬಿಸಿಲು-ಧೂಳಿಂದಾಗಿ ಬೆಟರ್ ಹಾಫ್ ಅನುಮತಿ ಸಿಕ್ಕಿರಲಿಲ್ಲ :-), ಹೀಗೆ ಹಲವಾರು ಕಾರಣಗಳು... ... 

ನಾವಿರುವ ಮಾರತಹಳ್ಳಿ ಸಮೀಪದ ಮನೆಯ ಮೇಲೆ ದಿನನಿತ್ಯ ಹಾರಾಡುವ ಮಿಲಿಟರಿ ವಿಮಾನಗಳನ್ನು ಪ್ರಮುಖವಾಗಿ ’ತೇಜಸ್’, ಸಮೀಪದಿಂದ ನೋಡಿ ನೋಡಿ ಅವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಿತ್ತು. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಏರ್ ಶೋ ಆರಂಭವಾಗುವುದನ್ನು ಕಾಯುತ್ತಿದ್ದುದರಿಂದ ಭಾಗವಹಿಸಲಾಗದೆ ನಿರಾಸೆ ಉಂಟಾಗಿತ್ತು. ಶನಿವಾರ ಏರ್ ಶೋ ನೋಡಿ ಬಂದವರ ಮುಖಚರ್ಯೆಯಲ್ಲಿ ಬಿಸಿಲ ಝಳಕ್ಕೆ, ಧೂಳಿಗೆ ಉಂಟಾದ ಬದಲಾವಣೆ ನೋಡಿ ಸ್ವಲ್ಪ ಮಟ್ಟಿನ ಸಮಾಧಾನವೂ ಆಗಿತ್ತು!

ನಿನ್ನೆ, ಆದಿತ್ಯವಾರ ಮಧ್ಯಾಹ್ನ ಮನೆಯವರೆಲ್ಲಾ ಒಟ್ಟಾಗಿ ಯಲಹಂಕದಲ್ಲಿರುವ ಪರಿಚಯದವರ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಏರ್ ಶೋ ಅಬ್ಬರದಿಂದಾಗಿ ಟ್ರಾಫಿಕ್ ಒತ್ತಡ ತುಂಬಾ ಇರುವುದರಿಂದ ನಮ್ಮ ವಾಹನಗಳಿಗೆ ರೆಸ್ಟ್ ಕೊಟ್ಟು ಕ್ಯಾಬ್ ಬಾಡಿಗೆಗೆ ಪಡಕೊಂಡು ಯಲಹಂಕಕ್ಕೆ ಹೊರಟಿತ್ತು. ಎಣಿಸಿದ ಹಾಗೆ ಟ್ರಾಫಿಕ್ ಬಿಸಿ ಸ್ವಲ್ಪ ಮಟ್ಟಿಗೆ ತಟ್ಟಲಾರಂಭಿಸಿತು. ಆದರೆ ಬಿಟ್ಟಿಯಾಗಿ ಏರ್ ಶೋ ಕಾಣಿಸಿಗುವುದೆಂದು ನಾವ್ಯಾರೂ ಊಹಿಸಿರಲಿಲ್ಲ. ಅದೂ ಯಾವ ನೂಕುನುಗ್ಗಲು, ಧೂಳು ಇಲ್ಲದೆ!  ಊರಿಂದ ಬಂದಿದ್ದ ಅಪ್ಪ ಅಮ್ಮ, ನಾವೆಲ್ಲ ಫುಲ್ ಖುಷ್!

ಹಾರೋಹಳ್ಳಿ ಸಮೀಪದಲ್ಲಿರುವ ಲೇಯೌಟ್ ಒಂದನ್ನು ನೋಡಲು ಸಂಜೆ 4 ರ ಸುಮಾರಿಗೆ ಹೋಗಿದ್ದೆವು. ಅದು ವಿಶಾಲವಾದ ಬಯಲು ಪ್ರದೇಶ. ಸಮೀಪ ಜನ ವಸತಿಯೂ ಇಲ್ಲ. ನೋಡ ನೋಡುತ್ತಿದ್ದಂತೆ ಆಗಸದಲ್ಲಿ ಬಣ್ಣ ಬಣ್ಣದ ಹೊಗೆಯುಗುಳುತ್ತಾ ಸೂರ್ಯ ಕಿರಣ್ ವಿಮಾನಗಳ ನುರಿತ ಪೈಲಟ್ ಗಳು ಏರೋಬಿಕ್ ಪ್ರದರ್ಶನ ಆರಂಭಿಸಿದರು. ಸುಮಾರು 1 ಘಂಟೆ ಕಾಲ ಇದು ಮುಂದುವರಿಯಿತು. ಕೊನೆಯಲ್ಲಿ ಕೇಸರಿ ಬಿಳಿ ಹಸಿರು ಬಣ್ಣ ಉಗುಳುತ್ತಾ ಮೂರು ಸೂರ್ಯಕಿರಣ್ ವಿಮಾನಗಳು ಜೊತೆಯಾಗಿ ವೇಗವಾಗಿ ಹೋಗುವ ಮೂಲಕ ಏರ್ ಶೋ ಗೆ ಮಂಗಳ ಹಾಡಲಾಯಿತು.

ಭಾರತೀಯ ವಾಯು ಸೇನೆಯ ’ಸೂರ್ಯ ಕಿರಣ್’ ತಂಡ ಏರೋಬ್ಯಾಟಿಕ್ ಪ್ರದರ್ಶನದಿಂದಾಗಿ ಸಾಕಷ್ಟು ಜನಮೆಚ್ಚುಗೆಯನ್ನ, ಪ್ರಸಿದ್ಧಿಯನ್ನ ಪಡೆದಿದೆ, ಅಂತರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿದೆ. 1996 ರಲ್ಲಿ ರಚಿಸಲ್ಪಟ್ಟ ಈ ತಂಡ ’HAL ಕಿರಣ್ M2’ ಮಿಲಿಟರಿ ಟ್ರೈನರ್ ವಿಮಾನಗಳ ಅಲಭ್ಯತೆಯಿಂದಾಗಿ ಈಗ ನಿವೃತ್ತಿಯಂಚಿನಲ್ಲಿದೆ. ಹೊಸ ಮಾದರಿಯ ಏರ್ ಕ್ರಾಫ್ಟ್ ಸೇರ್ಪಡೆಯೊಂದಿಗೆ ತಂಡವನ್ನು ಪುನ: ರಚಿಸಲಾಗುವುದು ಎಂಬ ಆಶಾದಾಯಕ ವರದಿಗಳೂ ಕೇಳಿ ಬರುತ್ತಿದೆ.

ನೀಲಾಗಸದಲ್ಲಿ ಮೈನವಿರೇಳಿಸುವ ಏರೋಬ್ಯಾಟಿಕ್ ಕಲೆಯನ್ನು ಪ್ರದರ್ಶಿಸಿದ ’ಸೂರ್ಯ ಕಿರಣ್’ ತಂಡಕ್ಕೆ ಹಾರ್ದಿಕ ಧನ್ಯವಾದಗಳು!

ಕೆಲ ಚಿತ್ರಗಳು...










-o-
ನೆಂಪು ಗುರು

Monday, February 7, 2011

ಕನ್ನಡ ಸಾಹಿತ್ಯ ಸಮ್ಮೇಳನ - ಕನ್ನಡ ಜಾತ್ರೆ

ಬೆಂಗಳೂರು ಬಸವನಗುಡಿಯ ನ್ಯಾಶನಲ್ ಕಾಲೇಜು ಕ್ರೀಡಾಂಗಣದಲ್ಲಿ ಫೆಬ್ರವರಿ ೪ರಿಂದ ೬ನೇ ತಾರೀಕಿನ ವರೆಗೆ ಅದ್ದೂರಿಯಾಗಿ ನಡೆದ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಯಿಂದ ಜನ ಸಾಗರವೇ ಹರಿದು ಬಂದಿರುವುದು ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ರಾಜಕೀಯೇತರವಾಗಿ, ಬಿನ್ನಾಭಿಪ್ರಾಯಗಳನ್ನೆಲ್ಲ ಬದಿಗೊತ್ತಿ ಸಾಹಿತಿಗಳು, ಕವಿಗಳು, ರಾಜಕೀಯ ಮುಖಂಡರು, ಸಿನಿಮಾ ರಂಗದವರು, ಉದ್ಯಮಿಗಳು, ಸಾಹಿತ್ಯಾಸಕ್ತರು ಕನ್ನಡಕ್ಕಾಗಿ ಒಗ್ಗೂಡಿದ್ದಾರೆ. ಹೆಸರಾಂತ ಸಾಹಿತಿ, ೯೮ ರ ಚಿರಯುವಕ ಜಿ. ವೆಂಕಟಸುಬ್ಬಯ್ಯನವರು ಸಮ್ಮೇಳನಾಧ್ಯಕ್ಷರು. ತಮ್ಮ ಅಧ್ಯಕ್ಷ ಭಾಷಣದಲ್ಲಿ ಕನ್ನಡದ ಉಳಿವಿಗಾಗಿ, ಒಳಿತಿಗಾಗಿ, ಪ್ರಗತಿಗಾಗಿ ಮುಖ್ಯಮಂತ್ರಿಯಾದಿಯಾಗಿ ಕನ್ನಡ ಮಂದಿಗೆಲ್ಲಾ ಮಾತಿನಲ್ಲೇ ಚಾಟಿಯೇಟು ನೀಡಿ ಎಚ್ಚರಿಸಿದ್ದಾರೆ.


ಸಮ್ಮೇಳನ ಯಶಸ್ವಿಯಾಗಿ ಸಂಪನ್ನವಾಯಿತು ಎಂದು ಕೇಳಿಬರುತ್ತಿದೆ. ಆದರೆ ನಿಜಕ್ಕೂ ಯಶಸ್ವಿಯಾಗಿದ್ದು ಕನ್ನಡಿಗರೆಲ್ಲಾ ಬೃಹತ್ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಿದ್ದು! ಇಂಟರ್ನೆಟ್ ಯುಗದಲ್ಲೂ ಸುಮಾರು ೩ - ೪ ಕೋಟಿ ರೂಪಾಯಿಗಳಷ್ಟು ಕನ್ನಡ ಪುಸ್ತಕಗಳು ಮಾರಾಟವಾಗಿದ್ದು! ಮೊದಲ ದಿನ ಊಟೋಪಚಾರದಲ್ಲಿ ಗೊಂದಲ ಕಂಡುಬಂದರೂ, ಉಳಿದೆರಡು ದಿನ ಅಲ್ಲೂ ಸುಧಾರಣೆ ಕಂಡುಬಂದು ಬಹಳಷ್ಟು ಜನ ಊಟ, ಉಪಹಾರ ಸ್ವೀಕರಿಸಿದರು.



ಬೆಂಗಳೂರಿನಲ್ಲಿ ತುಂಬಿಕೊಂಡಿರುವ ಪರಭಾಷಿಕರಿಗೆ ಕನ್ನಡ ಕಲಿಯುವ ಬಗ್ಗೆ ಯಾವಾಗಲೋ ಬಿಸಿಮುಟ್ಟಿಸಬೇಕಿತ್ತು. ೪೦ ವರ್ಷಗಳ ನಂತರ ಬೆಂಗಳೂರಿನಲ್ಲಿ ನಡೆದ ಸಮ್ಮೇಳನ ಆ ಮಟ್ಟಿಗೆ ಸ್ವಲ್ಪ  ಯಶಸ್ವಿಯಾಗಿದೆ.

ನಾನು ನಿನ್ನೆ ಸಮ್ಮೇಳನದ ಕಡೆಯ ದಿನ ಭಾಗವಹಿಸಿ ಬಂದೆ (ಕೆಲಸದ ಒತ್ತಡದಿಂದಾಗಿ ಶನಿವಾರ ರಜಾದಿನವಾದರೂ ಹೋಗಲಾಗಲಿಲ್ಲ). ಕಿರಿದಾದ ಪ್ರವೇಶದ್ವಾರದ ಸುತ್ತಮುತ್ತ ಒಳಹೋಗುವವರು, ಹೊರ ಬರುವವರು ತುಂಬಿತುಳುಕುತ್ತಿದ್ದುದರಿಂದ ಅಲ್ಲಿ ನುಗ್ಗಲಾಗದೆ ಕಂಪೌಂಡ್ ಹತ್ತಿ ಒಳಹೋದೆ! ಜನ ಸಾಗರ ಕಂಡು ಒಮ್ಮೆ ದಂಗಾದರೂ, ಸಾವಕಾಶವಾಗಿ ಕ್ರೀಡಾಂಗಣದ ಉದ್ದಗಲ ಅಲೆಯುತ್ತಾ ಗೋಷ್ಠಿಗಳು, ಸನ್ಮಾನ ಸಮಾರಂಭ ಇನ್ನಿತರ ಕಾರ್ಯಕ್ರಮಗಳನ್ನು ನೋಡಿದೆ.


ನನ್ನ ಅಪ್ಪಯ್ಯ ಈ ವರೆಗೆ ನಡೆದ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳಲ್ಲಿ ಹಲವಾರು ಬಾರಿ ಭಾಗವಹಿಸಿದ್ದಾರೆ, ಕವಿತೆ ಮಂಡಿಸಿದ್ದಾರೆ, ಪುಸ್ತಕವೂ ಬಿಡುಗಡೆಗೊಂಡಿದೆ, ಉಡುಪಿ-ಮೂಡಬಿದ್ರೆಯ ಸಮ್ಮೇಳನಗಳಲ್ಲಿ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಈ ಬಾರಿ ಸಮ್ಮೇಳನ ವೀಕ್ಷಿಸಲೆಂದೇ ಊರಿಂದ ಬಂದು, ಉತ್ಸಾಹದಿಂದಲೇ ಭಾಗವಹಿಸಿದರು.

ಸಭಾಂಗಣ ತುಂಬಾ ವಿ.ಐ.ಪಿಗಳು, ವಿ.ವಿ.ಐ.ಪಿಗಳು, ಸಾಹಿತಿಗಳು, ಅತಿಥಿ ಅಭ್ಯಾಗತರು, ಸನ್ಮಾನ ಸ್ವೀಕರಿಸುವವರು, ಸ್ಟೇಜಿನ ಹಿಂಬದಿಯಲ್ಲಿ ಸುಮ್ಮನೆ ಫೋಸು ಕೊಡುವವರು, ಕೆಳಗೆ ಪ್ರೇಕ್ಷಕ ವರ್ಗದಲ್ಲಿ ಕುರ್ಚಿ ಸಿಕ್ಕಿದವರು, ಕುರ್ಚಿ ಸಿಕ್ಕರೂ ಕ್ಯಾಮರಾ ಹಿಡಿದು ಅಡ್ಡಾಡುತ್ತಿದ್ದವರಿಂದ ಸಭೆಯ ನೋಟ ದಕ್ಕದವರು, ಅದರಿಂದಾಗಿ ಸಿಟ್ಟಾದವರು, ಕುರ್ಚಿ ಸಿಗದವರು, ತಿರುಗಿ ತಿರುಗಿ ಸುಸ್ತಾದವರು, ಊಟ ಉಪಹಾರ ಸಿಗದವರು, ರಾತ್ರಿ ನಿದ್ರೆಯಿಂದ ವಂಚಿತರಾಗಿ ಕೂತೇ ತೂಕಾಡಿಸುತ್ತಿದ್ದವರು, ಚಿಕ್ಕಪುಟ್ಟ ವಿಷಯಗಳಿಗೆ ಗಲಾಟೆ ಮಾಡುವವರು, ಜನ ಪ್ರವಾಹದ ಸುಪರ್ದಿಗಾಗಿ ರಾತ್ರಿ ಹಗಲು ದುಡಿದ ಪೋಲಿಸ್ ಸಿಬ್ಬಂದಿ - ಸ್ವಯಂಸೇವಕರು, ಕ್ಯಾಮರಾ ಹಿಡಿದು ಓಡಾಡುತ್ತಿರುವ ಮಾಧ್ಯಮದವರು, ಕನ್ನಡ ಬಾವುಟ-ಫಲಕ ಹಿಡಿದು ಬ್ಯಾಂಡ್ ವಾದನದೊಂದಿಗೆ ಮೆರವಣಿಗೆಯಲ್ಲಿ ಶಿಸ್ತಾಗಿ ಬಂದ ನೂರಾರು ಮಕ್ಕಳು, ಕಳ್ಳೆಪುರಿ - ಸೌತೆಕಾಯಿ - ನೀರು - ಮಜ್ಜಿಗೆ-  ವಾಚ್ -ಪುಸ್ತಕ ಇತ್ಯಾದಿಗಳನ್ನು ಕುಳಿತಲ್ಲಿಗೇ ತಂದು ಮಾರುತ್ತಿದ್ದ ವ್ಯಾಪಾರಿಗಳು ಹೀಗೆ ನಾನಾ ಬಗೆಯವರು.





ಪುಸ್ತಕ ಪ್ರದರ್ಶನ ಮತ್ತು ಮಾರಾಟದ ಅಂಗಣಕ್ಕೆ ಪ್ರಯಾಸಪಟ್ಟು ಹೊಕ್ಕಿದ್ದಾಯಿತು. ಸಾಕಷ್ಟು ಪ್ರಕಾಶಕರು ಉತ್ಸಾಹದಿಂದಲೇ ಈ ಸಲ ಪುಸ್ತಕ ಮಾರಾಟಕ್ಕಿಳಿದಿದ್ದರು. ಜನಪ್ರಿಯ ಕೃತಿಗಳಿಗೆ ಹೆಚ್ಚಿನ ಸ್ಟಾಲ್ ಗಳಲ್ಲಿ ’ಸ್ಟಾಕ್ ಕಾಲಿಯಾಯ್ತು’ ಎಂಬ ಉತ್ತರ ಸಾಮಾನ್ಯವಾಗಿತ್ತು. ಸಮ್ಮೇಳನಾಧ್ಯಕ್ಷರ ಕೃತಿಗಳು, ಭಾಷಣದ ಪ್ರತಿಗಳೂ ಅಷ್ಟೆ ಬಿಸಿ ದೋಸೆಯಂತೆ ಖರ್ಚಾಗಿತ್ತು. ಒಳ್ಳೆಯ ಪುಸ್ತಕಗಳನ್ನೊಂದಿಷ್ಟು ಖರೀದಿಸಿದೆ. ಸಾಹಿತಿಗಳಾದ ಚಂಪಾ, ವಸುಧೇಂದ್ರ, ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಇನ್ನಿತರ ಗಣ್ಯರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತು.





ಸಂಸ್ಕೃತೋತ್ಸವ, ಚಿತ್ರಸಂತೆ, ಕನ್ನಡ ಸಾಹಿತ್ಯ ಸಮ್ಮೇಳನ ಹೀಗೆ ಕೆಲವೇ ದಿನಗಳ ಅಂತರದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ವೀಕ್ಷಿಸಿದ್ದು ಸ್ಮರಣೀಯ ಅನುಭವ.

ಕೆಲ ಚಿತ್ರಗಳು...



ಮುಗಿಲೆತ್ತರಕ್ಕೇರಿದ ಕೀರ್ತಿ ಪತಾಕೆ





ಮುಖ್ಯ ಸಭಾಂಗಣ, ಪ್ರವೇಶದ್ವಾರ




ಧೂಳಬ್ಬರ

ಧೂಳನ್ನು ನಿಯಂತ್ರಿಸಲು ಮುಂಚಿತವಾಗಿ ವ್ಯವಸ್ಥೆ ಮಾಡಿದ್ದರೂ ಜನಸಾಗರದಿಂದಾಗಿ ಧೂಳೇಳುತ್ತಲೇ ಇತ್ತು.

-o-

ಚಿತ್ರ-ಬರಹ: ನೆಂಪುಗುರು