ಇತ್ತೀಚೆಗೆ (೨೩ ಜನವರಿ, ೨೦೧೦) ನಮ್ಮ ಯುವ ಪಡೆ ಕೊಲ್ಲೂರು ಸಮೀಪದ ಬೆಣಗಲ್ ತೀರ್ಥಕ್ಕೆ ಚಾರಣ ಹಮ್ಮಿಕೊಂಡಿತ್ತು. ಹೆಚ್ಚಿನ ಪೂರ್ವ ಸಿದ್ಧತೆಗಳಿಲ್ಲದೆ, ಧಿಡೀರನೆ ನಿರ್ಧರಿಸಿದ ಈ ಪ್ರವಾಸ ಹೊಸ ಹುಮ್ಮಸ್ಸು, ಚೈತನ್ಯವನ್ನ ನಮ್ಮೆಲ್ಲರಿಗೂ ನೀಡಿತ್ತು. ವಾಪಸ್ಸು ನಮ್ಮ ನಮ್ಮ ಕಾರ್ಯಕ್ಷೇತ್ರಗಳಿಗೆ ಮರಳಿದಾಗ ನಿಸರ್ಗದ ಮಡಿಲಲ್ಲಿ ಕಳೆದ ಆ ಒಂದು ದಿನದ ನೆನಪು ನವೋಲ್ಲಾಸವನ್ನುಂಟುಮಾಡಿತ್ತು.

ನಮ್ಮ ಪ್ರವಾಸ ಆರಂಭವಾಗಿದ್ದು ನೆಂಪುವಿನಿಂದ. ಮುಂಜಾನೆ ೫.೩೦ ಕ್ಕೆ ಎಲ್ಲರೂ ಎದ್ದು ಮಧ್ಯಾಹ್ನದ ಊಟಕ್ಕೆಂದು ಚಪಾತಿ, ಚನ್ನಾ ಮಸಾಲ, ಮೊಸರವಲಕ್ಕಿ, ಲಿಂಬೆ ಶರಬತ್ ತಯಾರಿಯಲ್ಲಿ ತೊಡಗಿಕೊಂಡೆವು. ಹಣ್ಣು, ದಾರಿ ಖರ್ಚಿಗೆ ಬೇಕಾದ ತಿಂಡಿಗಳು, ಚಪಾತಿ, ಮೊಸರವಲಕ್ಕಿ, ನೀರು, ಶರಬತ್ ಎಲ್ಲವನ್ನೂ ಬ್ಯಾಕ್-ಪ್ಯಾಕ್ ಗೆ ತುಂಬಿಕೊಂಡು ೯.೦೦ ಸುಮಾರಿಗೆ ಸ್ನಾನಾಹ್ನಿಕ, ತಿಂಡಿ ಮುಗಿಸಿ ನಮ್ಮ ತಂಡ ರೆಡಿಯಾಗಿತ್ತು. ನಮ್ಮ ಟ್ರೆಕ್ಕಿಂಗ್ ಗೆ ಶುಭ ಹಾರೈಸಿದ್ದು ಊರೂರು ತಿರುಗುತ್ತಾ, ದೇವರ ನಾಮ ಹಾಡುವವರು. ಸುಶ್ರಾವ್ಯವಾಗಿ ಹಾಡಿದ ಹಿಂದುಸ್ಥಾನಿ ಭಜನ್ ಗಳು ಕಿವಿಗಿಂಪಾಗಿತ್ತು.

೯.೩೦ ಗೆ ಪ್ರಸಾದರ ಕ್ವಾಲಿಸ್ ವಾಹನವನ್ನೇರಿ ನಾವೆಲ್ಲಾ ಮೂಡುಗಲ್ಲು ಕೇಶವನಾಥೇಶ್ವರ ದೇವಸ್ಥಾನದ ಕಡೆಗೆ ಪ್ರಯಾಣ ಆರಂಭಿಸಿದೆವು. ವಂಡ್ಸೆಯ ಶಾಲಾ ಮಾರ್ಗದಲ್ಲಿ ಮುಂದುವರಿದು ೧೦-೧೨ ಕಿ.ಮೀ ಬಂದಂತೆ ಟಾರ್ ರಸ್ತೆ ಮಾಯವಾಗಿ ಹೊಂಡ-ಗುಂಡಿಗಳಿಂದ ತುಂಬಿದ ಮಣ್ಣಿನ ರಸ್ತೆ ನಮ್ಮನ್ನು ಸ್ವಾಗತಿಸಿತು. ಅಲ್ಲೊಂದು ಇಲ್ಲೊಂದು ಮನೆ ಬಿಟ್ಟರೆ ನಿರ್ಜನ ಕಾನನ ಪರಿಸರ. ಇಂಥಾ ರಸ್ತೆಗಳಿಗೆ ಮಹಿಂದ್ರಾ ಜೀಪ್ ಇಲ್ಲವೇ ಜಿಪ್ಸಿ ಸೂಕ್ತ. ಆದರೆ ನಮ್ಮ ಪ್ರಸಾದ್ ಇಂಥಾ ಪರಿಸ್ಥಿತಿಯಲ್ಲು ಕ್ವಾಲಿಸನ್ನು ಲೀಲಾಜಾಲವಾಗಿ ಚಲಾಯಿಸುತ್ತಿದ್ದರು. ದಾರಿಯಲ್ಲಿ ಸಿಕ್ಕ ಹಳ್ಳಿಯವರಿಂದ ಸರಿಯಾದ ದಾರಿ ಕೇಳುತ್ತಾ ಶ್ರೀ ಕೇಶವನಾಥೇಶ್ವರನ ದೇವಸ್ಥಾನ ತಲುಪಿದೆವು.

ಮೂಡುಗಲ್ಲು, ಹೆಸರೇ ಹೇಳುವಂತೆ ನೈಸರ್ಗಿಕ ಗುಹೆಯ ಒಳಗೆ ಶ್ರೀ ಕೇಶವನಾಥೇಶ್ವರ ಪೂಜಿಸಲ್ಪಡುತ್ತಿದ್ದಾನೆ. ಸುತ್ತಲೂ ತಿಳಿನೀರಿನ ಚಿಕ್ಕ ಸರೋವರ (ಒಂದಡಿ ನೀರಿರಬಹುದು ಅಷ್ಟೆ). ನೀರಿನಲ್ಲಿ ನಡೆಯುತ್ತಾ ದೇವರ ಸನ್ನಿಧಿಯ ಬಳಿ ಬಂದೆವು. ನೀರಿನಲ್ಲಿ ನೂರಾರು ಮೀನುಗಳಿವೆ. ಅಲ್ಲದೆ ಬೇರೆ ಬೇರೆ ಜಾತಿಯ ಹಾವುಗಳೂ ಇವೆ ಎಂದು ಇಲ್ಲಿಯ ಅರ್ಚಕರು ತಿಳಿಸಿದರು. ನಮ್ಮೆಲ್ಲರಿಗೂ ಒಳಗೊಳಗೆ ಸಣ್ಣ ಭಯ! ಆದರೆ ೧-೨ ಒಳ್ಳೆ ಹಾವು ಬಿಟ್ಟರೆ ಬೇರೆ ಯವುದೂ ಕಾಣಸಿಗಲಿಲ್ಲ. ಕಾಲುಗಳಿಗೆ ಮೀನುಗಳು ತಾಗಿಕೊಂಡೆ ಹರಿದಾಡುತ್ತಿದ್ದವು. ನಾವಿಷ್ಟೂ ಜನ ಒಮ್ಮೆಲೆ ನೀರಿನಲ್ಲಿ ಸಾಗಿದ್ದರಿಂದ ಸಹಜವಾಗಿಯೇ ಜಲಚರಗಳಲ್ಲಿ ಆತಂಕ ಮೂಡಿ ಅವು ಅತ್ತಿಂದಿತ್ತ ಹರಿದಾಡುತ್ತಿದ್ದವು.

ಅರ್ಚಕರು ಪೂಜೆ ಆರಂಭಿಸಿದರು. ನಾವೆಲ್ಲಾ ನೀರಿನಲ್ಲೆ ನಿಂತು ಶ್ರೀ ದೇವರಿಗೆ ನಮಿಸಿ, ಮಂಗಳಾರತಿ, ಪ್ರಸಾದ ಸ್ವೀಕರಿಸಿದೆವು. ವಾಪಸ್ಸು ಬರುವಾಗ ದೇವರ ನೈವೇದ್ಯಕ್ಕಾಗಿ ಅರ್ಪಿಸಿದ ಅಕ್ಕಿಯನ್ನು ಅರ್ಚಕರು ನಮಗೆ ನೀಡುತ್ತಾ ಮೀನುಗಳಿಗೆ ಹಾಕಿ ಎಂದು ಸೂಚಿಸಿದರು. ಅಕ್ಕಿ ಹಾಕುತ್ತಿದ್ದಂತೆ ಮೀನುಗಳು ಅದಕ್ಕೆ ಮುಗಿಬೀಳುತ್ತಿದ್ದವು.
ಪರಿವಾರ ದೇವರುಗಳು, ವೀರಭದ್ರ, ಹುಲಿ ದೇವರುಗಳಿಗೂ ನಮಿಸಿ ಹೊರಬಂದೆವು. ಮೂಡುಗಲ್ಲು ದೇಗುಲ ಪರಿಸರ ಕಾನನದ ನಡುವೆ ಇದೆ. ಅರ್ಚಕರ ಮನೆ ಬಿಟ್ಟರೆ ಬೇರೆ ಯಾವುದೇ ಮನೆ ನಮಗೆ ಕಾಣಲಿಲ್ಲ. ಅರ್ಚಕರು ದೇವಳದ ಮಹತ್ವವನ್ನು ವಿವರಿಸುತ್ತಾ, ಪೂಜಾಕೈಂಕರ್ಯದಲ್ಲಿ ಏನಾದರೂ ಲೋಪವಾದರೆ ದೇವರ ಹಾವು ನೀರಿನಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದಾಗ ಮಾಯವಾಗುತ್ತದೆ. ಪರಿಸರದಲ್ಲಿ ಹುಲಿ, ಚಿರತೆಗಳೂ ಸಾಮಾನ್ಯ. ದನಕರುಗಳನ್ನು ಅವುಗಳಿಂದ ರಕ್ಷಿಸಲು ಹುಲಿದೇವರನ್ನೂ ಇಲ್ಲಿ ಪೂಜಿಸಲಾಗುತ್ತದೆ ಎಂದರು. ಎಳ್ಳಮವಾಸ್ಯೆಗೆ ಇಲ್ಲಿ ನೂರಾರು ಜನ ಸೇರಿ ವಿಶೇಷ ಪೂಜೆ, ಉತ್ಸವಗಳನ್ನೂ ಆಯೋಜಿಸಲಾಗುತ್ತಿದೆ. ಹೀಗೆ ಹಲವಾರು ವೈಶಿಷ್ಠ್ಯಗಳನ್ನು ಒಳಗೊಂಡಿರುವ ಈ ದೇಗುಲ, ದೇಗುಲದ ನಿರ್ಜನ ಪರಿಸರ ಭಯ-ಭಕ್ತಿಯನ್ನ ಮೂಡಿಸುತ್ತದೆ. ಆದರೆ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ, ಮಾಹಿತಿಯ ಕೊರತೆಯಿಂದಾಗಿ ಹೆಚ್ಚಿನವರಿಗೆ ಇಲ್ಲಿರುವ ಗುಹಾಂತರ ದೇಗುಲದ ಬಗ್ಗೆ ಅರಿವಿಲ್ಲ.
ಅರ್ಚಕರಿಂದ ಮುದೂರಿಗೆ ಹೋಗುವ ಒಳದಾರಿಯ ಮಾಹಿತಿ ಪಡೆದು, ಅವರಿಗೆ ವಂದಿಸಿ ಬೆಣಗಲ್ ತೀರ್ಥದತ್ತ ಮುಂದುವರಿದೆವು.
ಕಾನನದ ದಾರಿಯಿಂದ ಹೊರಬಂದಂತೆ ಅಲ್ಲಲ್ಲಿ ಮನೆಗಳು, ರಬ್ಬರ್-ಅಡಿಕೆ ತೋಟಗಳು ಕಾಣಿಸತೊಡಗಿತು. ದಾರಿಹೋಕರಿಂದ ಸರಿ ದಾರಿ ಕೇಳುತ್ತಾ ಮುದೂರಿನ ಕಡೆ ಪ್ರಯಾಣಿಸಿದೆವು. ಕೇರಳದಲ್ಲಿ ಮಧೂರು ಎಂಬ ಊರಿದೆ. ನಮ್ಮ ಈ ಮುದೂರು ಕೂಡಾ ಕೇರಳದಲ್ಲಿದೆಯೇ ಎಂದೆಣಿಸಿದ್ದು ಸುಳ್ಳಲ್ಲ! ಮಲ್ಲುಗಳೇ ಜಾಸ್ತಿ ಇರುವ ಇಲ್ಲಿ ಎಕರೆಗಟ್ಟಲೆ ಜಾಗಗಳನ್ನು ರಬ್ಬರ್, ಅಡಿಕೆ, ಬಾಳೆ ಇನ್ನಿತರ ತೋಟಗಳನ್ನಾಗಿ ಪರಿವರ್ತಿಸಿದ್ದಾರೆ. ಮುದೂರಿಗೆ ಕುಂದಾಪುರದಿಂದ ಬಸ್ ಸೌಕರ್ಯವಿದೆ. ಕೊಲ್ಲೂರಿಗೆ ಸಾಗುವಾಗ ಸಿಗುವ ಜಡ್ಕಲ್ ನಲ್ಲಿ ಬಲಕ್ಕೆ ತಿರುಗಿ ಮುದೂರು ತಲುಪಬಹುದು. ನಾವು ವಂಡ್ಸೆ, ಬೆಳ್ಳಾಲ, ಮೂಡುಗಲ್ಲು, ಮುದೂರು ಕಾನನ ಮಾರ್ಗವನ್ನು ಆಯ್ದುಕೊಂಡೆವು.
ಊರವರಿಂದ ಬೆಣಗಲ್ ತೀರ್ಥ (ಗೋವಿಂದ ತೀರ್ಥವೆಂದೂ ಕರೆಯುತ್ತಾರೆ) ಕ್ಕೆ ಹೋಗುವ ದಾರಿಯ ಮಾಹಿತಿ ಪಡೆದು, ಊರಿನಂಚಿನಲ್ಲಿ ಸಿಗುವ ನಾಯ್ಕರ ಮನೆಯ ಬಳಿ ಕ್ವಾಲಿಸ್ ನಿಲ್ಲಿಸಿ, ಬ್ಯಾಕ್-ಪ್ಯಾಕ್, ಶರಬತ್ ಕ್ಯಾನ್ ಬೆನ್ನಿಗೇರಿಸಿ ಚಾರಣಕ್ಕೆ ಸಿದ್ಧರಾದೆವು. ಡ್ರೈವರ್ ಪ್ರಸಾದ್ ಕೂಡ ನಮ್ಮ ಜೊತೆ ಚಾರಣಕ್ಕೆ ಅಣಿಯಾದರು.

ಕೊಡಚಾದ್ರಿ ಪರ್ವತ ಶ್ರೇಣಿಗಳ ನಡುವೆ ಹುದುಗಿದೆ ಬೆಣಗಲ್ ತೀರ್ಥ. ಜಲಪಾತದ ಬುಡ ತಲುಪಲು ಸರಿಯಾದ ದಾರಿಯಿಲ್ಲ. ೧ ಗಂಟೆ ದಟ್ಟ ಕಾನನದ ನಡುವಿನ ಚಾರಣದ ನಂತರ ಜಲಪಾತದ ಸನಿಹ ತಲುಪಬಹುದು. ಮಳೆಗಾಲದಲ್ಲಿ ಹಲವಾರು ತೊರೆಗಳು, ಇಂಬಳಗಳಿಂದಾಗಿ ಚಾರಣ ಅಸಾಧ್ಯ.

ಊರರವರ ಮಾಹಿತಿಯಂತೆ ಕಾನನದ ಪ್ರವೇಶದಲ್ಲಿ ಸಿಗುವ ಕಾಲ್ದಾರಿ ಹಿಡಿದು ಗೋವಿಂದ ತೀರ್ಥದತ್ತ ಮುಂದುವರಿದೆವು. ಹೆಚ್ಚಿನವರು ಊರುಗೋಲು ಹಿಡಿದಿದ್ದರು. ಸುತ್ತಲೂ ದೊಡ್ಡ ದೊಡ್ಡ ಮರಗಳು ಸುತ್ತುವರಿದಿದ್ದರಿಂದ ಬಿಸಿಲು ನಮ್ಮ ಚಾರಣಕ್ಕೆ ಅಡ್ಡಿಯಾಗಲಿಲ್ಲ! ಬೇರೆ ಬೇರೆ ವಿಷಯಗಳನ್ನು ಹರಟುತ್ತಾ, ಏದುಸಿರು ಬಿಡುತ್ತಾ, ಮಧ್ಯೆ ಮಧ್ಯೆ ವಿರಮಿಸುತ್ತಾ, ತಿಂಡಿ-ತೀರ್ಥಗಳನ್ನು ಸೇವಿಸುತ್ತಾ ಒಂದು ಗಂಟೆಯ ಚಾರಣದ ನಂತರ ಜಲಪಾತದ ತಳ ತಲುಪಿದೆವು. ಗುಡ್ಡ ಏರುತ್ತಾ ಏರುತ್ತಾ ಸಾಗಿದ್ದರಿಂದ ಎಲ್ಲರೂ ದಣಿದಿದ್ದರು.

ಬೆಣಗಲ್ ತೀರ್ಥದ ತಳ ತಲುಪುತ್ತಿದ್ದಂತೆ ಅಲ್ಲಿಯ ಸುಂದರ ನೀರವ ಪರಿಸರ, ಶುದ್ಧ ಗಾಳಿ ದಣಿವನ್ನು ಹೊಡೆದೋಡಿಸಿತ್ತು. ಮೋಡ ಕವಿದಿದ್ದರಿಂದ ಬಿಸಿಲ ಜಳವೂ ಇರಲಿಲ್ಲ. ಆದರೆ ಬೇಸಿಗೆ ಸಮೀಪಿಸುತ್ತಿದ್ದುದರಿಂದ ೬೦೦-೭೦೦ ಅಡಿ ಎತ್ತರದಿಂದ ಬೀಳುತ್ತಿದ್ದ ನೀರಿನ ರಭಸ ಅಷ್ಟಾಗಿ ಇರಲಿಲ್ಲ, ಇಂಬಳಗಳೂ ಇರಲಿಲ್ಲ. ತೀರ್ಥ ಸ್ನಾನ ಮಾಡಲು ಅನುಕೂಲಕರವಾಗಿತ್ತು. ನಮ್ಮ ತಂಡದಲ್ಲಿದ್ದ ಏಕೈಕ ಲೇಡಿ ಮೆಂಬರ್ ಕೈಗೆ ಕ್ಯಾಮರಾ ನೀಡಿ ನಾವೆಲ್ಲಾ ಸ್ನಾನ ಮಾಡಲು ಜಲಪಾತದ ಬುಡದಲ್ಲಿ ನಿಂತೆವು.

ನೂರಾರು ಅಡಿ ಎತ್ತರದಿಂದ ಬೀಳುತ್ತಿದ್ದ ನೀರು ಆರಂಭದಲ್ಲಿ ಚಳಿಯಿಂದ ನಡುಕವನ್ನುಂಟುಮಾಡಿದರೂ, ಸಮಯ ಕಳೆದಂತೆ ಮೈ-ಮನಸ್ಸಿಗೆ ಆಹ್ಲಾದವನ್ನುಂಟುಮಾಡತೊಡಗಿತು. ಮಾಘ ಮಾಸದ ತೀರ್ಥ ಸ್ನಾನ ಅತ್ಯಂತ ಶ್ರೇಷ್ಠವಂತೆ. ಎಲ್ಲರೂ ಮನಸೋಇಚ್ಛೆ ನೀರಲ್ಲಿ ಕುಣಿದಾಡಿದೆವು. ಗಾಳಿಯ ರಭಸಕ್ಕೆ ನೀರು ಒಮ್ಮೆ ನಮ್ಮ ಮೇಲೆ, ಮತ್ತೊಮ್ಮೆ ಬೇರೆ ಕಡೆ ಬೀಳುತ್ತಾ ಮಧ್ಯೆ ಮಧ್ಯೆ "ಬ್ರೇಕ್" ನೀಡುತ್ತಿತ್ತು. ನಮ್ಮ ತಂಡ ಬಿಟ್ಟರೆ ಬೇರಾವ ನರಜೀವಿಯೂ ಆ ಪರಿಸರದಲ್ಲಿ ಇರಲಿಲ್ಲ. ಈ ಏಕಾಂತತೆಯೂ ನಮ್ಮೆಲ್ಲರ ಹುರುಪನ್ನು ಇಮ್ಮಡಿಗೊಳಿಸಿತ್ತು. ೧.೩೦ ಗಂಟೆಯ ಧೀರ್ಘ ಸ್ನಾನದ ನಂತರ ಎಲ್ಲರೂ ಊಟಕ್ಕೆ ಅಣಿಯಾದೆವು. ಬಂಡೆಗಳ ಮೇಲೆ ಜೊತೆಯಾಗಿ ಕುಳಿತು ಸೇವಿಸಿದ ಚಪಾತಿ-ಮೊಸರವಲಕ್ಕಿ-ಶರಬತ್ ಹೊಟ್ಟೆಯನ್ನು ತಂಪಾಗಿಸಿತ್ತು.
ಹೊಟ್ಟೆ ಭಾರವಾಗಿತ್ತು, ತೀರ್ಥ ಸ್ನಾನದಿಂದ ದಣಿವೆಲ್ಲಾ ಮಾಯವಾಗಿ ಮನಸ್ಸು ಜಡತ್ವ ಕಳಕೊಂಡು ಹಗುರಾಗಿತ್ತು. ಎಲ್ಲರೂ ಬಂಡೆಗಳ ಮೇಲೆ ಮೈಚಾಚಿ ವಿರಮಿಸತೊಡಗಿದೆವು. ಸುತ್ತಲೂ ಸಣ್ಣ ಸಣ್ಣ ಬಂಡೆಗಳ ರಾಶಿ, ಎದುರಿಗೆ ಹಚ್ಚ ಹಸಿರ ಪರಿಸರ, ಹಿಂದುಗಡೆ ಬ್ರಹತ್ ಕೋಟೆಯಂತಿರುವ ಕಲ್ಲುಗುಡ್ಡ, ಅದರ ಮಧ್ಯದಿಂದ ಬೀಳುತ್ತಿರುವ ಗೋವಿಂದ ತೀರ್ಥ. ನಯನಮನೋಹರ!

ಸ್ವಲ್ಪ ಸಮಯ ವಿರಮಿಸಿ, ಪುನಃ ಜಲಪಾತದ ಬುಡಕ್ಕೆ ಬಂದು ನೀರಿನಡಿಗೆ ನಿಂತೆವು. ಅರ್ಧ ಗಂಟೆ ನೀರಿನಲ್ಲಿ ತೊಯ್ದಾಡಿ, ಹೊರ ಬಂದು, ಬಟ್ಟೆ ಬದಲಿಸಿ, ತಂದಿದ್ದ ಸಾಮಗ್ರಿಗಳನ್ನು ಚೀಲಗಳಿಗೆ ತುಂಬಿಕೊಂಡು ವಾಪಸ್ಸು ಹೊರಡಲು ಅಣಿಯಾದೆವು.

ಇಳಿಯುತ್ತಾ ಇಳಿಯುತ್ತಾ ಸಾಗಬೇಕಾದುದರಿಂದ ಕಾಲುಗಳ ಮೇಲೆ ಭಾರ ಹೆಚ್ಚಾಗಿ ಕಾಲು ಸಣ್ಣದಾಗಿ ನೋಯುತ್ತಿತ್ತು. ಸರಿಯಾಗಿ ಗ್ರಿಪ್ ಕೂಡಾ ಸಿಗುತ್ತಿರಲಿಲ್ಲ. ಮಧ್ಯೆ ಮಧ್ಯೆ ಕುಳಿತು, ಸ್ವಲ್ಪ ಹೊತ್ತು ಮಿರಮಿಸಿ ಕ್ವಾಲಿಸ್ ಇದ್ದ ಜಾಗ ತಲುಪಿದೆವು. ಮುದೂರಿನಿಂದ ಜಡ್ಕಲ್ ಮಾರ್ಗವಾಗಿ ಸಂಜೆ ೫.೩೦ ಗೆ ನೆಂಪು ತಲುಪಿದೆವು.
ನಿಸರ್ಗದ ಮಡಿಲಲ್ಲಿ ಕಳೆದ ಸ್ವಲ್ಪ ಸಮಯ ಪುನಃ ಯಾಂತ್ರಿಕ, ಬ್ಯುಸಿ ಶೆಡ್ಯೂಲ್ ಗಳನ್ನು ಎದುರಿಸಲು ಮೈಮನಸ್ಸನ್ನು ಸಜ್ಜುಗೊಳಿಸಿತ್ತು!
ಚಿತ್ರಗಳು: ನೆಂಪು ಗುರು
-o-