ನಿನ್ನೆ, 30 ಜನವರಿ ರವಿವಾರ ನಗರದ ಪ್ರತಿಷ್ಠಿತ ರಸ್ತೆಗಳಲ್ಲೊಂದಾದ ಕುಮಾರಕೃಪಾ ರಸ್ತೆ ಅಕ್ಷರಶ: ಸಂತೆಯಾಗಿತ್ತು. ಎಲ್ಲಿ ನೋಡಿದರೂ ಜನ ಜನ! ಅದು ಅಂತಿಂಥಾ ಸಂತೆಯಲ್ಲ. ದೇಶದ ಹಲವೆಡೆಯಿಂದ ಬಂದಿದ್ದ ಕಲಾವಿದರು, ಕಲಾಪ್ರೇಮಿಗಳು, ಕಲಾರಸಿಕರು, ವಿದೇಶೀಯರು ಒಂದೆಡೆ ಕಲೆತಿದ್ದ ಚಿತ್ರಸಂತೆ!
ಮುಖ್ಯಮಂತ್ರಿಗಳ ಅಧಿಕೃತ ನಿವಾಸ, ಪ್ರತಿಷ್ಠಿತ ಅಶೋಕಾ ಹೋಟೆಲ್, ಕುಮಾರಕೃಪಾ ಗೆಸ್ಟ್ ಹೌಸ್, ಚಿತ್ರಕಲಾ ಪರಿಷತ್, ಇನ್ನಿತರ ಕಟ್ಟಡಗಳ ಆವರಣದ ಗೋಡೆಗಳ ಮೇಲೆ, ಬಸ್ ನಿಲ್ದಾಣ, ಗಾಲ್ಫ್ ಕೋರ್ಸ್ ಆವರಣ, ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳ ಗೆಲ್ಲುಗಳಿಗೆಲ್ಲಾ ಬಗೆ ಬಗೆಯ ಕಲಾಕೃತಿಗಳನ್ನು ತೂಗುಹಾಕಲಾಗಿತ್ತು. ಶಿವಾನಂದ ಸರ್ಕಲ್ಲಿನಿಂದ ವಿಂಡ್ಸರ್ ಮ್ಯಾನರ್ ಸರ್ಕಲ್ಲಿನ ವರೆಗೂ ನಾನಾ ಕಲಾವಿದರ, ವಿಭಿನ್ನ ಪ್ರಕಾರಗಳ ಚಿತ್ರಗಳು, ಮ್ಯೂರಲ್, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ನಡೆದ ೮ನೇ ಚಿತ್ರಸಂತೆಗೆ ಜನ ಸಾಗರೋಪಾದಿಯಲ್ಲಿ ಬಂದುಹೋದರು. ಪತ್ರಿಕಾ ವರದಿಯ ಪ್ರಕಾರ ಅಂದಾಜು 3 ಲಕ್ಷ! ಚಿತ್ರಗಳು, ಕರಕುಶಲ ವಸ್ತುಗಳು, ಆರ್ಟ್ ಮೆಟೀರಿಯಲ್ ಗಳ ವ್ಯಾಪಾರವೂ ಭರ್ಜರಿಯಾಗಿಯೇ ನಡೆಯಿತು. ಯುವಕಲಾವಿದರಿಗೆ ಸಿಕ್ಕಿದ ಪ್ರೋತ್ಸಾಹ ಪ್ರಶಂಸನೀಯ. ನಮ್ಮ ಬ್ಯುಸಿ ಬೆಂಗಳೂರಿನಲ್ಲಿ ಕಲೆಗೆ ಈ ಮಟ್ಟದಲ್ಲಿ ಪ್ರೋತ್ಸಾಹ ದೊರೆಯುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.
ಇಂತಹ ಬೃಹತ್ ಚಿತ್ರಮೇಳವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಚಿತ್ರಕಲಾ ಪರಿಷತ್ತಿಗೆ, ಚಿತ್ರಸಂತೆಯ ಸಂಘಟಕರಿಗೆ, ಪ್ರಾಯೋಜಕರಿಗೆ, ಯಶಸ್ಸಿಗಾಗಿ ಹಗಲಿರುಳು ಶ್ರಮವಹಿಸಿದ ಕಾರ್ಯಕರ್ತರಿಗೆ ಹ್ಯಾಟ್ಸಾಫ್!
ಕೆಲ ಚಿತ್ರಗಳು...
-o-
ನೆಂಪು ಗುರು