ಉಡುಪಿಯಿಂದ ಸುಮಾರು ೧೨ ಕಿ.ಮೀ., ಮಂಗಳೂರಿನಿಂದ ಸುಮಾರು ೪೫ ಕಿ.ಮೀ. ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿಯ ಸನಿಹದಲ್ಲಿ ಇರುವ ಕಾಪು ಸುಂದರ ಸಮುದ್ರ ತೀರ, ದೀಪಸ್ತಂಭದಿಂದಾಗಿ ಪ್ರಸಿದ್ಧಿಯನ್ನು ಪಡೆದಿದೆ.
೧೯೦೧ರಲ್ಲಿ ನಿರ್ಮಿಸಲ್ಪಟ್ಟ ಸುಮಾರು ೨೭ ಮೀ ಎತ್ತರವಿರುವ ದೀಪಸ್ತಂಭ ಇಲ್ಲಿಯ ವಿಶೇಷ ಆಕರ್ಷಣೆ. ಸಮುದ್ರ ತೀರದಲ್ಲಿರುವ ಬಂಡೆಯೊಂದರ ಮೇಲೆ ನಿಂತಿರುವ ದೀಪಸ್ತಂಭದ ತುದಿಯಲ್ಲಿ ಬೃಹತ್ ದೀಪವೊಂದಿದೆ. ಸಾಗರದಲ್ಲಿ ೨೬ ಕಿ.ಮೀ ದೂರದ ವರೆಗೂ ಇದರ ಬೆಳಕು ಕಾಣುತ್ತದೆ. ಇದರಿಂದ ಹಡಗು, ಬೋಟ್ ಗಳಲ್ಲಿ ಸಂಚರಿಸುವ ನಾವಿಕರು ರಾತ್ರಿಯ ವೇಳೆಯಲ್ಲಿ ದಿಕ್ಕು ತಪ್ಪದೆ ಸುಗಮವಾಗಿ ತಮ್ಮ ಗಮ್ಯ ಸೇರಲು ನೆರವಾಗುತ್ತದೆ. ಹಲವು ವರ್ಷಗಳ ಹಿಂದೆ ಬೆಳಕಿಗಾಗಿ ಪೆಟ್ರೋಮ್ಯಾಕ್ಸ್ ಬಳಕೆಯಾಗುತ್ತಿತ್ತು, ಈಗ ವಿದ್ಯುತ್ ಚಾಲಿತ ಬೆಳಕಿನ ವ್ಯವಸ್ಥೆಯಿದೆ. ಕರೆಂಟ್ ಕೈಕೊಟ್ಟಾಗ ಜನರೇಟರ್ ವ್ಯವಸ್ಥೆಯೂ ಇದೆ. ಸಂಜೆ ೬ ರಿಂದ ಬೆಳಿಗ್ಗೆ ಬೆಳಕು ಹರಿಯುವವರೆಗೂ ಪ್ರಕಾಶಮಾನವಾದ ದೀಪ ಬೆಳಗುತ್ತಿರುತ್ತದೆ.
ಪ್ರವಾಸಿಗರು, ಸಾರ್ವಜನಿಕರು ದೀಪಸ್ತಂಭದ ಒಳಗಿರುವ ವಿಶಿಷ್ಟವಾದ, ಕಡಿದಾದ ಮೆಟ್ಟಿಲುಗಳನ್ನು ಬಳಸಿ ತುದಿ ತಲುಪಬಹುದು. ಮೇಲಿನಿಂದ ಕಾಣುವ ದೃಶ್ಯ ರಮಣೀಯ. ಮೈಲುಗಟ್ಟಲೆ ಚಾಚಿಕೊಂಡಿರುವ ಅರಬ್ಬೀ ಸಮುದ್ರ ಒಂದುಕಡೆ. ಎಕರೆಗಟ್ಟಲೆ ತೆಂಗಿನಮರಗಳ ಸಾಲು ಇನ್ನೊಂದು ಕಡೆ. ಮಧ್ಯೆ ಸುಂದರವಾದ ಬೀಚ್.
ಸಂಜೆಯ ಹೊತ್ತು ತಂಗಾಳಿಯೊಂದಿಗೆ ಸುಂದರ ಸೂರ್ಯಾಸ್ತ ವೀಕ್ಷಿಸಲು, ಆಗಸದಲ್ಲಿ ಕಾಣುವ ರಂಗಿನ ಚಿತ್ತಾರ ಸವಿಯಲು, ತೆರೆಗಳು ಬಂಡೆಗಪ್ಪಳಿಸಿ ಆಳೆತ್ತರಕ್ಕೆ ಚಿಮ್ಮುವ ದೃಶ್ಯ ನೋಡಲು ಹೇಳಿಮಾಡಿಸಿದ ಜಾಗ.